Home ಅಪರಾಧ “ಹೆಸರು ಹೇಳಲಾಗದ ಗ್ರಾಮ” ಮೂಲದ ವ್ಯಕ್ತಿಯಿಂದ ತಂದೆಯ ಸಾವಿನ ಹಿನ್ನೆಲೆಯಲ್ಲಿ ಕೇರಳದಲ್ಲಿ ದೂರು ದಾಖಲು

“ಹೆಸರು ಹೇಳಲಾಗದ ಗ್ರಾಮ” ಮೂಲದ ವ್ಯಕ್ತಿಯಿಂದ ತಂದೆಯ ಸಾವಿನ ಹಿನ್ನೆಲೆಯಲ್ಲಿ ಕೇರಳದಲ್ಲಿ ದೂರು ದಾಖಲು

0

ಬೆಳ್ತಂಗಡಿ ತಾಲ್ಲೂಕಿನ “ಹೆಸರು ಹೇಳಲಾಗದ ಗ್ರಾಮ”ದ ಮೂಲದವರೊಬ್ಬರು ತನ್ನ ತಂದೆಯನ್ನು ಅಪಘಾತದ ಮೂಲಕ ಕೊಲೆ ಮಾಡಲಾಗಿದೆ ಎಂದು ಕೇರಳದಲ್ಲಿ ದೂರು ದಾಖಲಿಸಿದ್ದಾರೆ. ಪ್ರಸ್ತುತ ಕೇರಳದಲ್ಲಿ ವಾಸವಾಗಿರುವ ಅನೀಶ್ ಜೋಯಿ ಎಂಬವರು ಕೇರಳದ ತಳಿಪರಂಬ ಪೊಲೀಸರಿಗೆ 2018 ರ ಏಪ್ರಿಲ್ 5 ರಂದು ಮೃತಪಟ್ಟ ತನ್ನ ತಂದೆಯ ಸಾವಿನ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ವಾಸಿಸುತ್ತಿದ್ದ ವೇಳೆ ದೂರುದಾರ ಅನೀಶ್ ಅವರ ತಂದೆ ಜೋಯ್ ಅವರು 2018ರ ಎಪ್ರಿಲ್ 5ರಂದು ಮೂಡಬಿದ್ರೆ ಬೆಳುವಾಯಿ ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಮೃತಪಟ್ಟಿದ್ದರು. ಈ ಹಿಂದೆ “ಹೆಸರು ಹೇಳಲಾಗದ ಗ್ರಾಮ”ದಲ್ಲಿನ ಜಾಗಕ್ಕೆ ಸಂಬಂಧಿಸಿದಂತೆ ಜೋಯ್ ಅವರು ವಿವಾದದಲ್ಲಿ ಪ್ರಭಾವಿ ವ್ಯಕ್ತಿಗಳ ವಿರೋಧ ಕಟ್ಟಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿ ಆದ ಅಪಘಾತ ಉದ್ದೇಶಪೂರ್ವಕವಾಗಿ ಸಂಭವಿಸಿದೆ ಎಂದು ದೂರಿನಲ್ಲಿ ಅನೀಶ್ ಜೋಯ್ ಉಲ್ಲೇಖಿಸಿದ್ದಾರೆ.

ಜೋಯ್ ಅವರ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಅಂದೇ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಪೊಲೀಸರು ಯಾವುದೇ ರೀತಿಯ ತನಿಖೆ ನಡೆಸಿರಲಿಲ್ಲ. ಅಪಘಾತ ನಡೆಸಿದ ವಾಹನವನ್ನು ಪತ್ತೆ ಹಚ್ಚುವ ಕಾರ್ಯಕ್ಕೂ ಮುಂದಾಗಲಿಲ್ಲ. ಇದರ ಹಿಂದೆ ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎಂದು ಹೇಳಿ ಪೊಲೀಸರು ವಾಪಸ್ ಕಳುಹಿಸಿದ್ದರು ಎಂದು ಅನೀಶ್ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ತಂದೆಯ ಸಾವಿಗೂ ಮುನ್ನ ಬೆಳ್ತಂಗಡಿ ತಾಲ್ಲೂಕಿನ “ಹೆಸರು ಹೇಳಲಾಗದ ಗ್ರಾಮ”ದಲ್ಲಿ ಜೋಯ್ ಅವರಿಗೆ ಸಂಬಂಧಿಸಿದ ಜಾಗದ ವಿಚಾರದಲ್ಲಿ ಅನೇಕ ಬೆದರಿಕೆ ಕರೆಗಳು ಬಂದಿತ್ತು. ಜೋಯ್ ಅವರ ಒಡೆತನದಲ್ಲಿ ಆ ಗ್ರಾಮದಲ್ಲಿ ಅಂದಾಜು 20 ಎಕರೆ ಜಾಗ ಇತ್ತು, ಹಾಗೂ ಆ ಜಾಗ ಕಬಳಿಸಲು ದೊಡ್ಡ ಸಂಚೂ ನಡೆದಿತ್ತು ಎಂದು ದೂರಿನಲ್ಲಿ ಅನೀಶ್ ತಿಳಿಸಿದ್ದಾರೆ.

ಸಧ್ಯ ದೇಶಾದ್ಯಂತ ಕುತೂಹಲ ಮೂಡಿಸಿರುವ ಆ ಗ್ರಾಮದಲ್ಲಿ ನಡೆದಿರಬಹುದಾದ ಅಸಂಖ್ಯಾತ ಅನುಮಾನಾಸ್ಪದ ಸಾವಿನ ಪ್ರಕರಣಗಳನ್ನು ನೋಡಿ, ಬಹುತೇಕ ಮುಚ್ಚಿ ಹೋಗಬಹುದಾಗಿದ್ದ ಪ್ರಕರಣ ಈಗ ಮರುಜೀವ ಪಡೆದುಕೊಂಡಿದೆ. ತನ್ನ ತಂದೆಯ ಅಸಹಜ ಸಾವಿನ ಬಗ್ಗೆಯೂ ತನಿಖೆ ನಡೆಸಬೇಕು ಹಾಗೂ ತನಗೂ ಜೀವಭಯವಿದ್ದು ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಕೇಳಿಕೊಳ್ಳಲಾಗಿದೆ.

You cannot copy content of this page

Exit mobile version