Home ರಾಜ್ಯ ಯಾದಗಿರಿ ಯಾದಗಿರಿ: ಪಿಎಸ್‌ಐ ಅನುಮಾನಸ್ಪದ ಸಾವು, ಶಾಸಕ ಚೆನ್ನಾರೆಡ್ಡಿ ಮಗನ ವಿರುದ್ಧ ಪಿಎಸ್‌ಐ ಪತ್ನಿ ದೂರು

ಯಾದಗಿರಿ: ಪಿಎಸ್‌ಐ ಅನುಮಾನಸ್ಪದ ಸಾವು, ಶಾಸಕ ಚೆನ್ನಾರೆಡ್ಡಿ ಮಗನ ವಿರುದ್ಧ ಪಿಎಸ್‌ಐ ಪತ್ನಿ ದೂರು

0

ಯಾದಗಿರಿ: ಯಾದಗಿರಿ ನಗರ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ತಿರುವು ದೊರಕಿದೆ. ಈ ಮೊದಲು ಅವರು ಹೃದಾಯಾಘಾತದಿಂದ ಮರಣ ಹೊಂದಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಪರಶುರಾಮ್ ಪತ್ನಿ ಶ್ವೇತಾ ಕಾಂಗ್ರೆಸ್ ಶಾಸಕ ಚೆನ್ನಾ ರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಯಾದಗಿರಿ ಎಸ್ಪಿ ಸಂಗೀತ ಅವರ ಬಳಿ ದೂರು ಸಲ್ಲಿಸಿದ್ದಾರೆ.

ಇತ್ತೀಚೆಗೆ ಸೈಬರ್‌ ಕ್ರೈಮವ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಪರಶುರಾಮ್‌ ಮೊನ್ನೆಯಷ್ಟೇ ತಮ್ಮ ಠಾಣೆಯಿಂದ ಬೀಳ್ಕೊಡುಗೆ ಪಡೆದಿದ್ದರು.

ಪೋಸ್ಟಿಂಗ್‌ ಸಲುವಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್‌ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ಬೇಡಿಕೆ ಇಟ್ಟಿದ್ದರು. ಈಗ ನಿಯಮಬಾಹಿರವಾಗಿ ಅವರನ್ನು ವರ್ಗಾವಣೆ ಮಾಡಿದ್ದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಭಾರೀ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ. ಯಾದಗಿರಿ ಶಾಸಕರಿಗೆ ಹಣದ ಆಸೆ ಬಹಳಷ್ಟಿದೆ. ಪರಶುರಾಮ್‌ ಅವರ ಜಾಗಕ್ಕೆ ಬೇರೊಬ್ಬರು ಬಂದರೂ ವರ್ಗಾವಣೆ ಪಟ್ಟಿಯಲ್ಲಿ ಪರಶುರಾಮ್‌ ಹೆಸರೇ ಇರಲಿಲ್ಲ. ಈಗ ಹೊಸದಾಗಿ ಬಂದವರು ಹಣ ನೀಡಿಯೇ ಬಂದಿದ್ದಾರೆ ಎಂದು ಮಾವ ವೆಂಕಟಸ್ವಾಮಿ ಮತ್ತು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ. 

ಪರಶುರಾಮ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಾಗಿ 30 ಲಕ್ಷ ರೂ. ಲಂಚ ಕೊಟ್ಟಿದ್ದರು. ಈ ಹುದ್ದೆಯನ್ನು ಪಡೆಯುವ ಸಲುವಾಗಿ ಬಹಳ ಸಾಲ ಮಾಡಿದ್ದರು. ಈಗ ಮತ್ತೆ ನಿಯಮಬಾಹಿರವಾಗಿ ಒಂದು ವರ್ಷ ಪೂರೈಸುವ ಮುನ್ನವೇ ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ್ದರಿಂದ ಖಿನ್ನತೆಗೆ ಜಾರಿದ್ದರು. ಈ ಕಾರಣದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಪರಶುರಾಮ ಅವರ ಮಾವನೂ ಅಳಿಯನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರು “ಯಾದಗಿರಿ ಶಾಸಕರಿಗೆ ದುಡ್ಡಿನ ಆಸೆ ವಿಪರೀತವಾಗಿದೆ. ಅವಧಿ ಪೂರ್ವ ವರ್ಗಾವಣೆ ಕಾರಣಕ್ಕೆ ಪರಶುರಾಮ ನೊಂದಿದ್ದರು. 7 ತಿಂಗಳ ಅವಧಿಯಲ್ಲಿ ಶಾಸಕ ಬೇರೆಯವರಿಗೆ ಪಿಎಸ್‌ಐ ಆಗಿ ಪೋಸ್ಟಿಂಗ್‌ ನೀಡಿದ್ದಾರೆ. ಈ ರೀತಿಯ ವರ್ಗಾವಣೆ ನಡೆಯುತ್ತಿರುವುದು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಯ ಗಮನಕ್ಕೆ ಬರುತ್ತಿಲ್ಲವೇ? ದಕ್ಷ ಅಧಿಕಾರಿಗಳೆಂದರೆ ಸಾಯುವುದಕ್ಕೆ ಇರುವುದೇ?” ಎಂದು ಅವರು ಪ್ರಶ್ನಿಸಿದ್ದಾರೆ.

ದಲಿತ ಸಂಘಟನೆಗಳಿಂದ ಪ್ರತಿಭಟನೆ

ಯಾದಗಿರಿಯ ದಲಿತ ಸಂಘಟನೆ ನಿನ್ನೆ ರಾತ್ರಿಯಿಂದಲೇ ಪ್ರತಿಭಟನೆಯಲ್ಲಿ ತೊಡಗಿದ್ದು, ಆಂಬುಲೆನ್ಸ್‌ ತಡೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ ನಗರದ ಖಾಸಗಿ ಆಸ್ಪತ್ರೆ ಬಳಿ ನೆರೆದಿದ್ದ ದಲಿತ ಸಂಘಟನೆಗಳ ಕಾರ್ಯಕರ್ತರು ಹಾಗೂ ನಾಯಕರು ಘೋಷಣೆಗಳನ್ನು ಸಹ ಕೂಗಿ ಪ್ರತಿಭಟಿಸಿದರು.

ಮರಣೋತ್ತರ ಪರೀಕ್ಷೆಗೆಂದು ಶವ ಕೊಂಡೊಯ್ಯುವಾಗ ಆಂಬುಲೆನ್ಸ್‌ ಅಡ್ಡಗಟ್ಟಿದ ಕಾರ್ಯಕರ್ತರು ಪರಶುರಾಮ್‌ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಒಳ್ಳೆಯ ಹೆಸರನ್ನು ಪಡೆದಿದ್ದರು. ಅವರ ಸಾವಿನ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.

You cannot copy content of this page

Exit mobile version