ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಮಾರಾಟಕ್ಕೆ ಒಂದು ವರ್ಷ ಸಂಪೂರ್ಣ ನಿಷೇಧ

ಬೆಂಗಳೂರು: ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ತಂಬಾಕು ಹಾಗೂ ನಿಕೋಟಿನ್‌ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ರಾಜ್ಯಾದ್ಯಂತ ಇಂತಹ ಉತ್ಪನ್ನಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಹಾಗೂ ಮಾರಾಟವನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 30(2)(a) ಹಾಗೂ ಆಹಾರ ಭದ್ರತೆ ಮತ್ತು ಗುಣಮಟ್ಟ ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಅಧಿಸೂಚನೆ ಹೊರಡಿಸಿದ್ದಾರೆ.

ಅಧಿಸೂಚನೆಯಂತೆ, ಯಾವುದೇ ಹೆಸರಿನಲ್ಲಿ ಅಥವಾ ಸ್ಯಾಚೆಟ್, ಪ್ಯಾಕೆಟ್ ಸೇರಿದಂತೆ ಯಾವುದೇ ರೂಪದಲ್ಲಿ ತಂಬಾಕು ಅಥವಾ ನಿಕೋಟಿನ್ ಬೆರೆಸಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳನ್ನು ಮಾರಾಟ ಮಾಡುವುದು, ಸಾಗಣೆ ಮಾಡುವುದು ಹಾಗೂ ವಿತರಿಸುವುದು ನಿಷೇಧಿತವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದರೊಂದಿಗೆ, ತಂಬಾಕು ಅಥವಾ ನಿಕೋಟಿನ್ ಅಂಶವನ್ನು ಪ್ರತ್ಯೇಕ ಪ್ಯಾಕೆಟ್‌ನಲ್ಲಿ ನೀಡಿ, ಗ್ರಾಹಕರು ಅದನ್ನು ಮತ್ತೊಂದು ಉತ್ಪನ್ನದೊಂದಿಗೆ ಸುಲಭವಾಗಿ ಮಿಶ್ರಣ ಮಾಡಿಕೊಂಡು ಸೇವಿಸುವ ರೀತಿಯಲ್ಲಿ ಮಾರಾಟ ಮಾಡುವ ಉತ್ಪನ್ನಗಳಿಗೂ ನಿಷೇಧ ಅನ್ವಯವಾಗಲಿದೆ.

ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಿರುವ ಈ ನಿಷೇಧವು ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಜಾರಿಗೆ ಬಂದಿದೆ. ರಾಜ್ಯದಲ್ಲಿ ನಿಷೇಧಿತ ಉತ್ಪನ್ನಗಳ ಮಾರಾಟ ಮತ್ತು ಸಾಗಣೆ ನಡೆಯದಂತೆ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಶೀಲನೆ ಮತ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು