Home ಇನ್ನಷ್ಟು ಕೋರ್ಟು - ಕಾನೂನು ಚುನಾವಣೆ ನಡೆಸುವ ಒತ್ತಡದಲ್ಲಿ ಮತದಾರರ ಹಕ್ಕುಗಳಿಗೆ ಧಕ್ಕೆ ಬರಬಾರದು – ಸುಪ್ರೀಂ ಕೋರ್ಟ್‌

ಚುನಾವಣೆ ನಡೆಸುವ ಒತ್ತಡದಲ್ಲಿ ಮತದಾರರ ಹಕ್ಕುಗಳಿಗೆ ಧಕ್ಕೆ ಬರಬಾರದು – ಸುಪ್ರೀಂ ಕೋರ್ಟ್‌

ನವದೆಹಲಿ : ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಮಹತ್ವದ ಕಳವಳ ವ್ಯಕ್ತಪಡಿಸಿದೆ. ಚುನಾವಣೆ ನಡೆಸುವ ಒತ್ತಡದಲ್ಲಿ ಮತದಾರರ ಹಕ್ಕುಗಳಿಗೆ ಧಕ್ಕೆ ಬರಬಾರದು ಎಂದು ಎಚ್ಚರಿಸಿರುವ ನ್ಯಾಯಾಲಯ, ದೇಶದಲ್ಲಿ ಜನಿಸಿದ ವ್ಯಕ್ತಿಗೆ ಮತದಾರರ ಪಟ್ಟಿಯಲ್ಲಿ ಇರುವ ಹಕ್ಕು ಸಂವಿಧಾನಾತ್ಮಕ ಮಾತ್ರವಲ್ಲದೆ ಭಾವನಾತ್ಮಕವಾದುದು ಎಂದು ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟ್‌ ಹೇಳಿದ್ದೇನು?
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿತು. ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಅನೇಕ ಮತದಾರರು ಮೇಲ್ಮನವಿ ಸಲ್ಲಿಸಿದ್ದು, ಅವುಗಳ ವಿಚಾರಣೆ ಇನ್ನೂ ಬಾಕಿ ಇದೆ. ಏಪ್ರಿಲ್ 9ಕ್ಕೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿರುವುದಾಗಿ ಚುನಾವಣಾ ಆಯೋಗ ಹೇಳಿದೆ. ಆದರೆ, ಬಾಕಿ ಇರುವ ಮೇಲ್ಮನವಿಗಳಲ್ಲಿ ಮತದಾರರ ಪರ ತೀರ್ಪು ಬಂದರೆ, ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಚುನಾವಣಾ ಆಯೋಗವನ್ನ ಪ್ರಶ್ನೆ ಮಾಡಿದ ಕೋರ್ಟ್

ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ಇತರ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದಲ್ಲಿ ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ (ತಾರ್ಕಿಕ ವ್ಯತ್ಯಾಸ) ಎಂಬ ಹೊಸ ವರ್ಗವನ್ನು ಆಯೋಗ ಪರಿಚಯಿಸಿರುವುದನ್ನು ನ್ಯಾಯಾಲಯ ಗಮನಿಸಿತು. ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ 2002ರ ಪಟ್ಟಿಯಲ್ಲಿದ್ದವರು ಯಾವುದೇ ಹೊಸ ದಾಖಲೆ ನೀಡುವ ಅಗತ್ಯವಿಲ್ಲ ಎಂದು ಆಯೋಗವೇ ಹೇಳಿತ್ತು. ಆದರೆ ಬಂಗಾಳದಲ್ಲಿ ಹಳೆಯ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ಪೀಠವು ಬೆಟ್ಟು ಮಾಡಿದೆ.

ಅಧಿಕಾರಿಗಳು ಅತಿ ವೇಗದಲ್ಲಿ ಸಾವಿರಾರು ದಾಖಲೆಗಳನ್ನು ಪರಿಶೀಲಿಸುವಾಗ ತಪ್ಪುಗಳು ಸಹಜವಾಗಿ ನಡೆಯುತ್ತವೆ. ಹಾಗಾಗಿ, ಕೈಬಿಡಲಾದ ಮತದಾರರ ಕುಂದುಕೊರತೆಗಳನ್ನು ಆಲಿಸಲು ಬಲವಾದ ಮೇಲ್ಮನವಿ ವ್ಯವಸ್ಥೆ ಇರಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಒತ್ತಿ ಹೇಳಿದರು. ಚುನಾವಣಾ ಆಯೋಗವು ಮೇಲ್ಮನವಿ ವಿಚಾರಣೆಗೆ ಸರಿಯಾದ ದಾಖಲೆಗಳನ್ನು ಒದಗಿಸುತ್ತಿಲ್ಲ ಎಂಬ ಅರ್ಜಿದಾರರ ಪರ ವಕೀಲರ ಆರೋಪದ ಬಗ್ಗೆಯೂ ನ್ಯಾಯಾಲಯ ಗಮನ ಹರಿಸಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಮತದಾರರ ಹಕ್ಕುಗಳ ರಕ್ಷಣೆಗೆ ನ್ಯಾಯಾಲಯ ಹೆಚ್ಚಿನ ಆದ್ಯತೆ ನೀಡಿದೆ.

You cannot copy content of this page

Exit mobile version