ಬೆಂಗಳೂರು : ವಾಹನ ಚಾಲಕರಿಂದ ಅಕ್ರಮವಾಗಿ ಹಣ (Bribe) ವಸೂಲಿ (Corruption) ಮಾಡುತ್ತಿದ್ದ ಬೆಂಗಳೂರು ಹೊರವಲಯದ ನೆಲಮಂಗಲದ ಇಬ್ಬರು ಆರ್‌ಟಿಓ (RTO) ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಡಾ. ಕೋನ ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ನೆಲಮಂಗಲ ಆರ್‌ಟಿಓ ಇನ್ಸ್‌ಪೆಕ್ಟರ್‌ಗಳಾದ ದಿನೇಶ್ ಮತ್ತು ಕಿರಣ್ ಎಂಬುವವರನ್ನು ಚಾಲಕರಿಂದ ಹಣ ವಸೂಲಿ ಮಾಡುತ್ತಿರುವ ಆರೋಪದ ಅಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?
ಈ ಇಬ್ಬರು ಅಧಿಕಾರಿಗಳು ಪ್ರತಿನಿತ್ಯ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುವ ನೆಪದಲ್ಲಿ, ಚಾಲಕರಿಂದ ಹಣಕ್ಕಾಗಿ ಪೀಡಿಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದವು. ದಾಖಲೆಗಳು ಸರಿಯಿದ್ದರೂ ಅಥವಾ ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಲಂಚ ಪಡೆದು ವಾಹನಗಳನ್ನು ಬಿಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭ್ಯವಾಗಿತ್ತು.
ಅಧಿಕಾರಿಗಳ ಮೇಲೆ ಸಾಲು ಸಾಲು ದೂರು
ಈ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ತಂಡ, ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಮಾಡಿದೆ. ಸದ್ಯ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಲಂಚದ ಹಾವಳಿಗೆ ಬ್ರೇಕ್ ಹಾಕಲು ಲೋಕಾಯುಕ್ತರು ನಡೆಸಿದ ಈ ದಿಢೀರ್ ಕಾರ್ಯಾಚರಣೆ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ – ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಲೋಕಾ
ಈ-ಖಾತೆ ಮಾಡಿಕೊಡಲು ಲಂಚ (Bribe) ಪಡೆಯುತ್ತಿದ್ದ ರಾಯಚೂರು ಜಿಲ್ಲೆಯ (Raichur) ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಅವರು ಲೋಕಾಯುಕ್ತ (Lokayukta Raid) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ರಾಘವೇಂದ್ರ ರೆಡ್ಡಿ ಎಂಬವರಿಂದ ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಸಿರವಾರ ನಿವಾಸಿ ರಾಘವೇಂದ್ರ ರೆಡ್ಡಿ ಎಂಬವರು ತಮ್ಮ ಈ-ಖಾತೆ ಕೆಲಸಕ್ಕಾಗಿ ಪಟ್ಟಣ ಪಂಚಾಯತಿಗೆ ಅಲೆದಾಡುತ್ತಿದ್ದರು. ಈ ಕೆಲಸ ಮಾಡಿಕೊಡಲು ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಅವರು ಎರಡು ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ರಾಘವೇಂದ್ರ ರೆಡ್ಡಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಯೋಜನೆಯಂತೆ ಇಂದು ಮುಂಗಡವಾಗಿ ಒಂದು ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ಬರುತ್ತಿರುವುದನ್ನು ಗಮನಿಸಿದ ಸುರೇಶ್ ಶೆಟ್ಟಿ, ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ತಕ್ಷಣವೇ ತಮ್ಮ ಕಾರು ಹತ್ತಿದ ಅಧಿಕಾರಿ ಸಿರವಾರದಿಂದ ಕವಿತಾಳ ಪಟ್ಟಣದ ಕಡೆಗೆ ಅತಿ ವೇಗವಾಗಿ ಪರಾರಿಯಾಗಲು ನೋಡಿದ್ದಾರೆ. ಆದರೆ ಬಿಡದ ಲೋಕಾಯುಕ್ತ ತಂಡ, ಸಿನಿಮೀಯ ಮಾದರಿಯಲ್ಲಿ ಕಾರನ್ನು ಬೆನ್ನಟ್ಟಿ ಕವಿತಾಳದ ಬಳಿ ಮುಖ್ಯಾಧಿಕಾರಿಯನ್ನು ತಡೆದು ಹಿಡಿಯುವಲ್ಲಿ ಯಶಸ್ವಿಯಾಗಿದೆ.
