Friday, June 14, 2024

ಸತ್ಯ | ನ್ಯಾಯ |ಧರ್ಮ

ವಿವಿಗಳು ಸಾಲದಲ್ಲಿ… ಶಿಕ್ಷಣಕ್ಕೆ ಖರ್ಚು ಕಮ್ಮಿ… ಮೋದಿ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆಯ ಕಥೆ!

ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದು ಒಂದು ದಶಕವಾಗುತ್ತಾ ಬಂತು. 2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಸದ್ಯ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ.

ಶಿಕ್ಷಣದ ಮೇಲೆ ಮಾಡಿದ ಹೂಡಿಕೆ ಹೆಚ್ಚಿನ ಲಾಭಾಂಶವನ್ನು ತರುತ್ತದೆ ಎಂದು ಬಿಜೆಪಿ ತನ್ನ 2014 ರ  ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವನ್ನು ಒಟ್ಟು ದೇಶೀಯ ಉತ್ಪನ್ನದ 6% ಗೆ ಹೆಚ್ಚಿಸುವುದಾಗಿ ಭರವಸೆ ನೀಡಿತು. ಬಿಜೆಪಿ ಸರಕಾರದ ಭರವಸೆಯ ಹೊರತಾಗಿಯೂ, 2014 ಮತ್ತು 2024 ರ ನಡುವೆ, ಪ್ರತಿ ವರ್ಷ ವಾರ್ಷಿಕ GDP ಯ ಸರಾಸರಿ 0.44% ಅನ್ನು ಶಿಕ್ಷಣಕ್ಕೆ ಮೀಸಲಿಟ್ಟಿತು.

ಇದಕ್ಕೆ ಹೋಲಿಸಿದರೆ, 2004 ಮತ್ತು 2014 ರ ನಡುವೆ, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣದ ಮೇಲೆ ಜಿಡಿಪಿಯ ಸರಾಸರಿ 0.61% ಅನ್ನು ಮೀಸಲಿಟ್ಟಿತು.

ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಅನುಮೋದಿಸಿದ್ದು ತಮ್ಮ ಸರ್ಕಾರದ ಒಂದು ಪ್ರಮುಖ ಸಾಧನೆ ಎಂದು ಸರ್ಕಾರವು ಹೇಳಿಕೊಂಡಿದೆ. ಈ ನೀತಿ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಯ್ತು. ಈ ಟೀಕೆಗಳ ಮತ್ತು ವಿರೋಧಗಳ ಹೊರತಾಗಿಯೂ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಮತ್ತು ತರಗತಿಗಳ ಡಿಜಿಟಲ್ ವರ್ಧನೆಗೆ ಉತ್ತೇಜನ ನೀಡಲಾಯ್ತು.  ಆದರೂ ಶಿಕ್ಷಣ ವಲಯ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ವಿದ್ಯಾರ್ಥಿಗಳಿಗಾಗಿ ಹಲವಾರು “ಎಕ್ಸಿಟ್” ಆಯ್ಕೆಗಳನ್ನು ನೀಡಿದರಿಂದ ಡ್ರಾಪ್‌ಔಟ್‌ ಕೂಡ ಹೆಚ್ಚಾಗುವ ಸಾಧ್ಯತೆಗಳಿವೆ.

ಕಳೆದ ಒಂದು ದಶಕದಲ್ಲಿ ಶಾಲಾ ದಾಖಲಾತಿಯಲ್ಲಿ 2014 ರಲ್ಲಿ 96.7%, 2018 ರಲ್ಲಿ 97.2% ಮತ್ತು 2022 ರಲ್ಲಿ 98.4% ಸ್ಥಿರವಾದ ಹೆಚ್ಚಳವನ್ನು ಕಂಡಿದೆ. ಮಹಿಳಾ ದಾಖಲಾತಿಯೂ ಹೆಚ್ಚಾಗಿದೆ. 2006 ರಲ್ಲಿ 10%  ಇದ್ದ ಶಾಲೆಗೆ ದಾಖಲಾಗದ 11 ಮತ್ತು 14 ರ ನಡುವಿನ ವಯಸ್ಸಿನ ಹುಡುಗಿಯರ ಪ್ರಮಾಣ 2022 ರಲ್ಲಿ 2% ರಷ್ಟು ಕಡಿಮೆಯಾಗಿದೆ.

ಸುಮಾರು 75% ಶಾಲೆಗಳು ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ಹೊಂದಿವೆ ಮತ್ತು ಸುಮಾರು 40% ರಷ್ಟು ಗ್ರಂಥಾಲಯ ಪುಸ್ತಕಗಳನ್ನು ಹೊಂದಿವೆ. ಶೇ.7ರಷ್ಟು ಶಾಲೆಗಳು ಮಾತ್ರ ಕಂಪ್ಯೂಟರ್ ಹೊಂದಿದ್ದಾರೆ. (ನೋಡಿ)

ದೇಶದಾದ್ಯಂತ, ಕಡಿಮೆ ದಾಖಲಾತಿ ಹೊಂದಿರುವ ಒಬ್ಬರೇ ಶಿಕ್ಷಕರನ್ನು ಹೋಂದಿರುವ ಶಾಲೆಗಳನ್ನು ಮುಚ್ಚಲಾಯಿತು. ಇದು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಿತು. ಸದ್ಯ, ಏಳು ಶಾಲೆಗಳಲ್ಲಿ ಒಂದನ್ನು ಒಬ್ಬ ಶಿಕ್ಷಕರೇ ನಡೆಸುತ್ತಿದ್ದಾರೆ.

ಶಾಲಾ ಮಕ್ಕಳಲ್ಲಿ ಪೌಷ್ಠಿಕಾಂಶದ ಮಟ್ಟವನ್ನು ಹೆಚ್ಚಿಸಲು ಜಾರಿಗೆ ತಂದ ಮಧ್ಯಾಹ್ನದ ಊಟದ ಯೋಜನೆಯಾದ ಪಿಎಂ-ಪೋಷನ್‌ ಯೋಜನೆಯಲ್ಲಿ ಹಣವನ್ನು ಸಮರ್ಪಕವಾಗಿ ಬಳಸಲಾಗಿಲ್ಲ. ತನ್ನ ಇತ್ತೀಚಿನ ವರದಿಯಲ್ಲಿ ಕೇಂದ್ರ ಸರ್ಕಾರದ ಮಧ್ಯಾಹ್ನದ ಊಟ ಯೋಜನೆ ಪಿಎಂ-ಪೋಶನ್ ಮತ್ತು ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ ಸಮಗ್ರ ಶಿಕ್ಷಾ ಅಭಿಯಾನಕ್ಕೆ ನಿಗದಿಪಡಿಸಿದಕ್ಕಿಂತ ಹಣವನ್ನು ಕಡಿಮೆ ಬಳಸಲಾಗುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.

ಬಿಜೆಪಿ ರಾಜ್ಯಸಭಾ ಸಂಸದ ವಿನಯ್ ಪಿ ಸಹಸ್ರಬುದ್ಧೆ ಅಧ್ಯಕ್ಷತೆಯ ಈ ಸಮಿತಿಯು ಜನವರಿ 31, 2022 ರ ಹೊತ್ತಿಗೆ ಸಮಗ್ರ ಶಿಕ್ಷಾ ಅಭಿಯಾನಕ್ಕಾಗಿ ಆ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ 37,383.36 ಕೋಟಿ ರುಪಾಯಿಯಲ್ಲಿ ಕೇವಲ 16,821.70 ಕೋಟಿ (55%) ರುಪಾಯಿ ಬಳಸಲಾಗಿದೆ ಎಂದು ವರದಿ ಮಾಡಿದೆ. ಪಿಎಂ-ಪೋಷನ್ ಯೋಜನೆಗಾಗಿ,ಒಟ್ಟು 11,500 ಕೋಟಿ ರುಪಾಯಿಯಲ್ಲಿ ಜನವರಿ 31 ರವರೆಗೆ ಕೇವಲ 6,660.54 ಕೋಟಿ (57.91%) ಮಾತ್ರ ಬಳಸಲಾಗಿದೆ.

The National Initiative for Proficiency in Reading with Understanding and Numeracy – ನಿಪುಣ್‌ ಭಾರತ್‌ ಮಿಷನನ್ನು 2021 ರಲ್ಲಿ ಸ್ಥಾಪಿಸಲಾಯಿತು ಮತ್ತು 2025 ರ ವೇಳೆಗೆ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಸಂಖ್ಯೆಗಳ ಬಳಕೆ ಹಾಗೂ ಸಾಕ್ಷರತೆಯಲ್ಲಿ ಹಿಡಿತ ಸಾಧಿಸಿಲು ಈ ಮಿಷನ್‌ ಜಾರಿ ಮಾಡಲಾಗಿದೆ. 2022 ರಲ್ಲಿ, 3 ನೇ ತರಗತಿಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಕ್ಕಳು ಮಾತ್ರ ಗಣಿತದಲ್ಲಿ ಮತ್ತು  20% ಮಕ್ಕಳು ಓದುವಿಕೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಒಳ್ಳೆಯ ಫಲಿತಾಂಶ ನೀಡಿದ್ದಾರೆ ಎಂದು Annual Status of Education Report 2022  ಡೇಟಾ ತೋರಿಸುತ್ತದೆ.

2017 ರಿಂದ, NCERTಯ ಶಾಲಾ ಪಠ್ಯಪುಸ್ತಕಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. 2022 ರಲ್ಲಿ, ಅಂದರೆ ತೀರ ಇತ್ತೀಚಿಗೆ ಕೂಡ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ: ಮೊಘಲ್ ಯುಗ ಮತ್ತು ಜಾತಿ ವ್ಯವಸ್ಥೆಯ ಉಲ್ಲೇಖಗಳನ್ನು ಡಿಲಿಟ್‌ ಮಾಡಲಾಗಿದೆ. ಸಾಮಾಜಿಕ ಚಳುವಳಿಗಳ ಅಧ್ಯಾಯಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲಿನ ನಿಷೇಧದ ಬಗೆಗಿನ ಪಠ್ಯ ಮತ್ತು ಹಿಂದುತ್ವ ಮತ್ತು ಗಾಂಧಿ ಹತ್ಯೆಯ ಮಾಹಿತಿಗಳನ್ನು ತೆಗೆದುಹಾಕಲಾಗಿದೆ. 2023 ರಲ್ಲಿ, ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದದ ಅಧ್ಯಾಯವನ್ನು ಸಹ ತೆಗೆದುಹಾಕಲಾಯಿತು. ಹಿಂದುತ್ವಕ್ಕೆ ಸವಾಲಾಗುವ ಎಲ್ಲಾ ಮಾಹಿತಿಗಳನ್ನು ಕೇಂದ್ರ ಸರ್ಕಾರ ಪಠ್ಯ ಪುಸ್ತಕಗಳಿಂದ ಕಿತ್ತುಹಾಕಿದೆ

ಕೇಂದ್ರ ಸರ್ಕಾರವು 2017 ರಲ್ಲಿ ಸ್ಥಾಪಿಸಿದ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯು (Higher Education Financing Agency) UGC ಯ ಧನಸಹಾಯಕ್ಕೆ ಸಂಬಂಧಿಸಿದ ಹಲವಾರು ಕೆಲಸಗಳನ್ನು ತಾನು ವಹಿಸಿಕೊಂಡಿದೆ. ಸರ್ಕಾರವು ಹಣಕಾಸಿನ ವಿಧಾನವನ್ನು ಅನುದಾನದಿಂದ ಸಾಲಕ್ಕೆ ಬದಲಾಯಿಸಿತು. ಇದರಿಂದಾಗಿ ಅನೇಕ ಕೇಂದ್ರೀಯ ಸಂಸ್ಥೆಗಳು ಸಾಲಗಳನ್ನು  ಮರುಪಾವತಿಸಲು ಹೆಣಗಾಡುವಂತೆ ಮಾಡಿತು. ಸಂಸ್ಥೆಗಳ ಆಡಳಿತ ಮಂಡಳಿ ಶುಲ್ಕವನ್ನು ಹೆಚ್ಚಿಸಲು ಅಥವಾ ಶಿಕ್ಷಣದ ಇತರ ಅಂಶಗಳಲ್ಲಿ ರಾಜಿ ಮಾಡಿಕೊಳ್ಳುವಂತೆ ಮಾಡಿತು.

ಸರ್ಕಾರವು “ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್” ಅನ್ನು ಗುರುತಿಸಿ, ಅವುಗಳನ್ನು ವಿಶ್ವ ದರ್ಜೆಯ ವಿಶ್ವವಿದ್ಯಾನಿಲಯಗಳಾಗಿ ಅಭಿವೃದ್ಧಿ ಪಡಿಸಲು ಯೋಜನೆಯನ್ನು ಹಾಕಿಕೊಂಡಿತು. ನಿಮಗೆ ನೆನಪಿರಬಹುದು, ಮುಕೇಶ್‌ ಅಂಬಾನಿ, ನೀತಾ ಅಂಬಾನಿ ಒಡೆತನದ ಜಿಯೋ ಯುನಿವರ್ಸಿಟಿ ಕೋರ್ಸ್‌ ಆರಂಭಿಸುವ ಮೊದಲೇ, ಹುಟ್ಟುವ ಮೊದಲೇ ಮೋದಿ ಸರ್ಕಾರದಿಂದ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಎಂದು ಪರಿಗಣಿಸಲ್ಪಟ್ಟಿತು.

ಆದರೆ ಅನೇಕ ಟೀಕೆ- ದೂರುಗಳಿಂದಾಗಿ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಯೋಜನೆ ನನೆಗುದಿಗೆ ಬಿದ್ದಿದೆ. 2019 ರಲ್ಲಿ, ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ 2024 ರ ವೇಳೆಗೆ 50 ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಅನ್ನು ಗುರುತಿಸುವುದಾಗಿ ಹೇಳಿತ್ತು. ಆದರೆ ಇದುವರೆಗೆ ಆಗಿದ್ದು 20 ಶಿಕ್ಷಣ ಸಂಸ್ಥೆಗಳು ಮಾತ್ರ.

ತನ್ನ 2014 ರ ಪ್ರಣಾಳಿಕೆಯಲ್ಲಿ, ಭಾರತೀಯ ವಿಶ್ವವಿದ್ಯಾನಿಲಯಗಳನ್ನು “ಜಾಗತಿಕ ವಿಶ್ವವಿದ್ಯಾನಿಲಯಗಳಿಗೆ ಸಮಾನವಾಗಿ” ಬೆಳೆಸಲು ಶೈಕ್ಷಣಿಕ ಮತ್ತು ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದಾಗಿ ಸರ್ಕಾರ ಹೇಳಿದೆ. ಹಾಗಿದ್ದೂ ವಿಜ್ಞಾನ ಸಂಸ್ಥೆಗಳು ಮೋದಿ ಆಡಳಿತದ ಅಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ಗೆ ಫಂಡ್‌ನಲ್ಲಿ 50% ಭಾಗವನ್ನು ಸ್ವತಃ ಸಂಗ್ರಹಿಸಲು, ಉದ್ಯಮಿಗಳಿಂದ ಮತ್ತು ಕೈಗಾರಿಕೆಗಳಿಂದ ಸಂಗ್ರಹಿಸಲು ಹೇಳಲಾಯ್ತು. ಇದು ಬೃಹತ್ ಪ್ರಮಾಣದ ಫಂಡ್‌ನ ಕೊರತೆಗೆ ಕಾರಣವಾಯಿತು. 

ಸರ್ಕಾರವು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 10% ಮೀಸಲಾತಿಯನ್ನು ನೀಡಿತು. ಈ ಸಂಸ್ಥೆಗಳಿಗೆ ಹೆಚ್ಚಿನ ಸೀಟುಗಳನ್ನು ಸೃಷ್ಟಿಸಲು ಹೇಳಲಾಯ್ತು. ಆದರೆ, EWS ಕೋಟಾದ ಸೀಟುಗಳನ್ನು ಹೆಚ್ಚಿಸಲು ಹಣವನ್ನೇ ಸರ್ಕಾರ ಕೊಡಲಿಲ್ಲ.

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ ಹೆಚ್ಚಾಗುತ್ತಲೇ ಇದೆ. ಶಿಕ್ಷಣ ಸಚಿವರು ಲೋಕಸಭೆಯಲ್ಲಿ ಡಿಸೆಂಬರ್ 2023 ರಲ್ಲಿ ನೀಡಿದ ಉತ್ತರದ ಪ್ರಕಾರ, ಹಿಂದಿನ ಐದು ವರ್ಷಗಳಲ್ಲಿ, 2,622 ಪರಿಶಿಷ್ಟ ಪಂಗಡ, 2,424 ಪರಿಶಿಷ್ಟ ಜಾತಿ ಮತ್ತು 4,596 ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಿಂದ ಡ್ರಾಪ್‌ಔಟ್‌ ಆಗಿದ್ದಾರೆ. (ನೋಡಿ)

ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೌಲಾನಾ ಆಜಾದ್ ಫೆಲೋಶಿಪ್ ಅನ್ನು ಸಹ ಕೇಂದ್ರ ಸರ್ಕಾರ ನಿಲ್ಲಿಸಿದೆ. ಇದಲ್ಲದೆ, ಇದು ರಾಷ್ಟ್ರೀಯ ಸಾಗರೋತ್ತರ ಸ್ಕಾಲರ್‌ಶಿಪ್‌ನಿಂದ ಮಾನವಿಕ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಹೊರಗಿಟ್ಟಿದೆ. ಅಂದರೆ ವಿದೇಶಗಳಲ್ಲಿ ಹೋಗಿ ಓದಲು ಕನಸು ಕಂಡ ಬಡ ವಿದ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ಚಪ್ಪಡಿಕಲ್ಲು ಹಾಕಿದೆ. ಇದು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿ ಮಾಡಲಾಗಿದೆ.

ಕಳೆದ ಒಂದು ದಶಕದಲ್ಲಿ ಖಾಸಗೀಕರಣ, ಫೆಲೋಶಿಪ್‌ಗಳ ರದ್ದತಿ, ಸ್ಟೈಫಂಡ್‌ಗಳಲ್ಲಿ ವಿಳಂಬ , ಸಂಶೋಧನೆಗಳಿಗೆ ಫಂಡ್‌ ಕೊಡದೇ ಇರುವುದು, ಮೂಲಸೌಕರ್ಯಗಳ ಕೊರತೆ ಮತ್ತು ಕ್ಯಾಂಪಸ್‌ಗಳಲ್ಲಿ ಕೇಸರಿಕರಣದಂತಹ ಅನೇಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಆದರೆ ಎಮ್ಮೆ ಚರ್ಮದ ಮೋದಿ ಸರ್ಕಾರಕ್ಕೆ ಯಾವುದೂ ನಾಟುತ್ತಿಲ್ಲ.

Related Articles

ಇತ್ತೀಚಿನ ಸುದ್ದಿಗಳು