Home LGBTQ+ LGBTQ+ ಮಕ್ಕಳ ತೊಳಲಾಟಗಳು!

LGBTQ+ ಮಕ್ಕಳ ತೊಳಲಾಟಗಳು!

0
LGBTQIA+ ಮಕ್ಕಳು ತಮ್ಮ ಲೈಂಗಿಕ ಭಾವನೆಗಳಿಗೆ ವಿರುದ್ಧವಾಗಿ ಮದುವೆಯಾಗಿ ತಾವು ಸಹಜವಾಗಿ ಇದ್ದೇವೆ ಎಂದು ಸಮಾಜಕ್ಕೆ ತೋರಿಸಿಕೊಳ್ಳಲು ಒತ್ತಡಕ್ಕೆ ಒಳಗಾಗಿ ಇಂತಹ ಬದುಕನ್ನು ಸ್ವೀಕರಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಗೇ ಹುಡುಗನೊಬ್ಬ ಕುಟುಂಬದ ಮತ್ತು ಸಮಾಜದ ಒತ್ತಡಕ್ಕೆ ಒಳಗಾಗಿ ಹೆಣ್ಣನ್ನು ಮದುವೆಯಾದರೆ, ಇದರಿಂದ ಅವನ ಬದುಕು ಮಾತ್ರವಲ್ಲ, ಆ ಹುಡುಗಿಯ ಬದುಕೂ ನಾಶವಾಗುತ್ತದೆ. ಇದಕ್ಕೆ ಲ್ಯಾವೆಂಡರ್‌ ಮ್ಯಾರೆಜ್‌ ಎಂದು ಕರೆಯುತ್ತಾರೆ.

ಲೇಖನ: ರುಕ್ಮಿಣಿ ಎಸ್ ನಾಯರ್

LGBTQIA+ ಮಕ್ಕಳು ಹುಟ್ಟುವಾಗ ಸಾಮಾನ್ಯವಾಗಿ ಎಲ್ಲಾ ಮಕ್ಕಳಂತೆಯೇ ಇರುತ್ತಾರೆ. ಆದರೆ ಕೆಲವು ಮಕ್ಕಳು ಮಾತ್ರ ಅಪರೂಪಕ್ಕೆ ಭಿನ್ನವಾಗಿ ಹುಟ್ಟುತ್ತಾರೆ. ಆದರೆ ಸಾಮಾನ್ಯವಾಗಿ ನೋಡುವಾಗ ಹೊರನೋಟಕ್ಕೆ ಈ ಮಕ್ಕಳು ಎಲ್ಲರಂತೆ ಇರುತ್ತಾರೆ. ನಮಗೆ ಇವರಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ. ಪುಟ್ಟ ಮಗುವಾಗಿರುವಾಗ ನಾವು ನಮ್ಮ ಇಷ್ಟಕ್ಕೆ ಅನುಗುಣವಾಗಿ ಬಟ್ಟೆಗಳನ್ನು ತೊಡಿಸುತ್ತೇವೆ. ಸಿಂಗರಿಸುತ್ತೇವೆ, ಅದನ್ನು ನೋಡಿ ಖುಷಿಯಿಂದ ಸಂಭ್ರಮಿಸುತ್ತೇವೆ. ಮಕ್ಕಳು ಸ್ವಲ್ಪ ಬೆಳೆದಾಗ ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತಾರೆ.


ತಮ್ಮನ್ನು ತಾವು ಅರಿಯಲು ಪ್ರಾರಂಭಿಸುತ್ತಾರೆ. ತಮ್ಮ ದೇಹದ ಅಂಗಾಂಗಗಳನ್ನು ಕೌತುಕದಿಂದ ಮುಟ್ಟಿ ನೋಡಿಕೊಳ್ಳುತ್ತಾರೆ. ತಾವು ಕೂಡಾ ಇತರರಂತೆಯೇ ಎನ್ನುವುದನ್ನು ಕೂಡಾ ಗಮನಿಸಲು ಪ್ರಾರಂಭಿಸುತ್ತಾರೆ.

ತಮ್ಮ ಲಿಂಗತ್ವದ ಬಗ್ಗೆ ಸಣ್ಣ ವಯಸ್ಸಿನಿಂದಲೇ ಭಾವನಾತ್ಮಕವಾಗಿ ಪೋಷಕರ ಗಮನಕ್ಕೆ ಬಂದೂ ಬಾರದಂತಹ, ಕಣ್ಣಿಗೆ ಕಂಡೂ ಕಾಣದಂತಹ ಹಲವಾರು ಸೂಚನೆಗಳನ್ನು ನೀಡುತ್ತಾರೆ. ಸ್ವತಃ ಆ ಮಕ್ಕಳಿಗೂ ಕೂಡಾ ತಮ್ಮ ಹಾವಭಾವದಲ್ಲಿ ಉಂಟಾಗುವ ವ್ಯತ್ಯಾಸ ತಿಳಿದಿರುವುದಿಲ್ಲ. ಸಹಜವಾಗಿ ತಮಗೆ ಅನಿಸಿದಂತೆ, ತಮ್ಮ ಇಷ್ಟಕ್ಕೆ ಅನುಗುಣವಾಗಿ ಆಟವಾಡುವ ರೀತಿಯಿಂದ, ವಸ್ತ್ರಗಳನ್ನು ತೊಡುವಾಗ ತೋರುವ ಆಸಕ್ತಿಯಿಂದ, ಅವರ ನಡೆನುಡಿ, ಹಾವಭಾವಗಳಿಂದ ತಮ್ಮಲ್ಲಿನ ನಿಜವಾದ ಆಸಕ್ತಿಯನ್ನು ಹೊರಹಾಕುತ್ತಾರೆ. ನಾವು ಪೋಷಕರು ವಯೋಸಹಜವಾಗಿ ಅವರಲ್ಲಿ ಉಂಟಾಗುವ ಬದಲಾವಣೆಗಳನ್ನು ಅಷ್ಟು ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಆದರೆ ನಮ್ಮ ಮಕ್ಕಳು ಇತರರಂತೆ ಅಲ್ಲ ಎನ್ನುವುದು ಕಾಲಕ್ರಮೇಣ ನಮ್ಮ ಅರಿವಿಗೆ ಬಂದಂತೆ ನಾವು ಅಧೀರಾಗುತ್ತೇವೆ. ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾಗಿ ವರ್ತಿಸುವುದು ನಿಧಾನವಾಗಿ ಪೋಷಕರ ಗಮನಕ್ಕೆ ಬರುತ್ತದೆ. ಆಗ ಆ ಮಕ್ಕಳನ್ನು ಗದರಿ, ಮೂದಲಿಸಿ ʼನೀನು ಹೀಗೆ ಆಡಬೇಡ, ಮಾತನಾಡಬೇಡ, ವರ್ತಿಸಬೇಡ,ʼ ಎಂದೆಲ್ಲಾ ಹೇಳಿ ಮಕ್ಕಳ ಗುಣದಲ್ಲಿ, ನಡತೆಯಲ್ಲಿ ವ್ಯತ್ಯಾಸವನ್ನು ತರಲು ಪೋಷಕರು ಪ್ರಯತ್ನಿಸುತ್ತಾರೆ. ಮಕ್ಕಳ ಮೇಲೆ ಮಾನಸಿಕವಾಗಿ ಒತ್ತಡ ಹೇರುತ್ತೇವೆ.

ಆದರೆ ಆ ಮಕ್ಕಳು ತಾವು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಗೊಂದಲಕ್ಕೆ ಒಳಗಾಗಿ ಮಂಕಾಗುತ್ತಾರೆ. ಆದರೆ ಎಷ್ಟು ಪ್ರಯತ್ನ ಪಟ್ಟರೂ ತಮ್ಮಲ್ಲಿ ಅಡಗಿರುವ ಸಹಜ ಭಾವನೆಯನ್ನು, ಗುಣವನ್ನು ಆ ಮಕ್ಕಳು ತೋರಿಸುತ್ತಾರೆ. ಮತ್ತೂ ಪೋಷಕರು ಗದರಿ ನಿಂದಿಸಿದಾಗ ಪೋಷಕರ ಮುಂದೆ ನಟಿಸಲು ಅಭ್ಯಾಸ ಮಾಡಿಕೊಳ್ಳುತ್ತಾರೆ. ತಮ್ಮ ಸಹಜ ನಡವಳಿಕೆಯನ್ನು ಬಚ್ಚಿಡಲು ಕಲಿಯುತ್ತಾರೆ. ಹಾಗೂ ಮಾನಸಿಕವಾಗಿ ಒಳಗೊಳಗೇ ಕೊರಗಲು ಪ್ರಾರಂಭಿಸುತ್ತಾರೆ. ತಾನು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಗೊಂದಲದ ನಡುವೆ ಸಿಲುಕಿ ತೊಳಲಾಡುತ್ತಾರೆ. ಆದರೂ ತನ್ನಲ್ಲಿ ಅಡಗಿರುವ ಸಹಜ ಗುಣಗಳನ್ನು ಭಾವಗಳನ್ನು ಭಾವನೆಗಳನ್ನು ಬಚ್ಚಿಡಲು ವಿಫಲ ಪ್ರಯತ್ನ ಮಾಡಿ ಸೋಲುತ್ತಾರೆ. ತಾವು ಒಂಟಿಯಾಗಿರುವಾಗ, ಪೋಷಕರು ಜೊತೆ ಇಲ್ಲದ ಸಮಯದಲ್ಲಿ ಯಾರಿಗೂ ತಿಳಿಯದಂತೆ ತನ್ನಿಷ್ಟದಂತೆ ಇದ್ದು ಖುಷಿ ಪಡುತ್ತಾರೆ. ಕೃತಕವಾಗಿ ನಡವಳಿಕೆಯನ್ನು, ಗುಣವನ್ನು ಪೋಷಕರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ತನ್ನ ಸಹಜ ನಡವಳಿಕೆಯನ್ನು, ಗುಣವನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಇದರಿಂದ ಮಕ್ಕಳು ಮಾನಸಿಕವಾಗಿ ಬಲಹೀನವಾಗುತ್ತಾ ಹೋಗುತ್ತಾರೆ. ಆಟ ಪಾಠಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾ ಮೌನಕ್ಕೆ ಶರಣಾಗುತ್ತಾರೆ. ಪೋಷಕರು ಇತರೇ ಮಕ್ಕಳಿಗೆ ತಮ್ಮ ಮಕ್ಕಳನ್ನು ಹೋಲಿಸುತ್ತಾ ಹೋದಂತೆ ಈ ಮಕ್ಕಳು ಇತರ ಮಕ್ಕಳಿಂದಲೂ ದೂರವಿರಲು ಪ್ರಯತ್ನಿಸುತ್ತಾರೆ. ಬೆಳೆದಂತೆ ಅವರಲ್ಲಿ ಮೌನವೂ ಹೆಚ್ಚಾಗುತ್ತಾ ಹೋಗುತ್ತದೆ. ಆದಷ್ಟೂ ತಮ್ಮಷ್ಟಕ್ಕೆ ತಾನು ಇರಲು ಬಯಸುತ್ತಾರೆ. ಕಾಲಕ್ರಮೇಣ ಹದಿ ಹರೆಯವನ್ನು ತಲುಪಿದಾಗ ಆ ಮಕ್ಕಳ ಸಂಕಷ್ಟ ಇನ್ನೂ ಹೆಚ್ಚಾಗುತ್ತದೆ. ಹದಿ ಹರೆಯದಲ್ಲಿ ತಮ್ಮ ದೇಹದಲ್ಲಿ ಆಗುವ ಮಾರ್ಪಾಡಿನಿಂದಾಗಿ ಗಲಿಬಿಲಿಗೆ ಒಳಗಾಗುತ್ತಾರೆ. ತಮ್ಮ ಓರಗೆಯ ಮಕ್ಕಳ ಜೊತೆ ಬೆರೆತರೂ ತಾವು ಅವರಂತೆ ಇಲ್ಲ ತಾವು ಇವರೆಲ್ಲರಿಗಿಂತ ಭಿನ್ನ ಎನ್ನುವುದನ್ನು ಅರಿತುಕೊಳ್ಳುತ್ತಾರೆ. ಕೆಲವು ಮಕ್ಕಳು ಪೋಷಕರನ್ನು ಕೇಳಿ ತಿಳಿದುಕೊಳ್ಳಲು ಧೈರ್ಯ ಮಾಡುತ್ತಾರೆ. ಆಗ ಪೋಷಕರು ಕೂಡಾ ಅದನ್ನು ಅಷ್ಟು ಮುಖ್ಯ ವಿಷಯವಾಗಿ ತೆಗೆದುಕೊಳ್ಳದೇ, ಆ ಮಕ್ಕಳಿಗೆ ಸಮರ್ಪಕವಾದ ಉತ್ತರ ದೊರೆಯದೇ ತೊಳಲಾಡುತ್ತಾರೆ.

ತಮ್ಮ ಓರಗೆಯವರೊಂದಿಗೆ ಮುಜುಗರದಿಂದ ತಮ್ಮ ಮನಸ್ಸಿನ ಸಂದೇಹವನ್ನು ಹಂಚಿಕೊಂಡಾಗ ನಗೆಪಾಟಲಿಗೆ ಗುರಿಯಾಗುತ್ತಾರೆ. ಶಾಲೆಯಲ್ಲಿ ಶಿಕ್ಷಕರೊಂದಿಗೆ ಕೇಳಿ ತಿಳಿದುಕೊಳ್ಳಲು ಅಂಜಿಕೆಯಾದ ಕಾರಣ ಅವರೊಂದಿಗೂ ಕೇಳಿ ತಿಳಿದುಕೊಳ್ಳಲು ಈ ಮಕ್ಕಳು ಹಿಂಜರಿಯುತ್ತಾರೆ. ತಾವು ನಿಜಕ್ಕೂ ಏನು? ಹೆಣ್ಣೇ, ಗಂಡೇ ಅಥವಾ ಎರಡೂ ಅಲ್ಲವೇ ಎನ್ನುವ ಸಂಶಯ LGBTQIA+ ಮಕ್ಕಳಲ್ಲಿ ತಲೆದೋರುತ್ತದೆ. ತಮ್ಮ ದೈಹಿಕ ಬದಲಾವಣೆಗೂ ಮಾನಸಿಕ ಬದಲಾವಣೆಗೂ, ತಮ್ಮಲ್ಲಿ ಉದ್ಭವಿಸುವ ಭಾವನೆಗಳ ಬದಲಾವಣೆಗೂ ತಾಳೆಯಾಗದೇ ಇರುವುದನ್ನು ಅರಿತ ಮಕ್ಕಳು ತಮಗೇನೋ ಆಗಿದೆ ಎಂದು ಹೆದರುತ್ತಾರೆ. ತಮ್ಮ ಲೈಂಗಿಕತೆಯ ಬಗೆಗಿನ ಗೊಂದಲ ಹೆಚ್ಚಾಗಿ ಅವರಿಗೇ ಅರಿವಿಲ್ಲದಂತೆ ಖಿನ್ನತೆಗೆ ಒಳಗಾಗುತ್ತಾರೆ. ಈ ಸಮಾಜದಲ್ಲಿ ತಾವು ಹೇಗೆ ಬದುಕಿದರೆ ಸರಿ ಮತ್ತು ತಾವು ಹೇಗೆ ಬದುಕಿದರೆ ತೊಂದರೆಗೆ ಒಳಗಾಗುತ್ತೇವೆ ಎನ್ನುವ ಪ್ರಶ್ನೆ ಮನಸ್ಸಲ್ಲಿ ಮೂಡಿ, ಆತಂಕಕ್ಕೆ ಒಳಗಾಗುತ್ತಾರೆ. ಅವರು ತಮ್ಮ ಭಾವನೆಗಳನ್ನು ಹೊರಗೆ ತೋರಿಸಿಕೊಳ್ಳಲಾರದೇ ತಮ್ಮಲ್ಲಿಯೇ ಹತ್ತಿಕ್ಕಿಕೊಳ್ಳುತ್ತಾರೆ.

ಪೋಷಕರಿಗೆ ತಮ್ಮಲ್ಲಿ ಉಂಟಾಗುವ ವಿಭಿನ್ನ ಭಾವನೆಗಳ ಬಗ್ಗೆ ಹೇಳಿಕೊಂಡರೆ ಎಲ್ಲಿ ನಿಂದನೆಗೆ ಒಳಗಾಗುತ್ತೇವೆಯೋ ಎಂದು ಹೆದರಿ ತಮ್ಮಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಗಳನ್ನು ಹೇಳದೆ ಮನಸ್ಸಿನಲ್ಲಿಟ್ಟು ಕೊರಗುತ್ತಾರೆ. ಕೆಲವು ಮಕ್ಕಳು ಸಹಜವಾಗಿ ತಮ್ಮ ವಿರುದ್ಧ ಲಿಂಗಿಗಳ ಕಡೆಗೆ ಆಕರ್ಷಿತರಾಗದೆ, ತಮ್ಮದೇ ಲಿಂಗದವರ ಕಡೆಗೆ ಆಕರ್ಷಿತರಾಗುತ್ತಾರೆ ( ಗೇ ಮತ್ತು ಲೆಸ್ಬಿಯನ್‌) . ಕೆಲವು ಮಕ್ಕಳು ಗಂಡು ಮತ್ತು ಹೆಣ್ಣು ಇಬ್ಬರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾಗುತ್ತಾರೆ (ಬೈ-ಸೆಕ್ಷಿವಲ್). ಇನ್ನು ಕೆಲವರು ತಾವು ಹೆಣ್ಣೋ ಅಥವಾ ಗಂಡೋ ಎಂದು ಅರ್ಥ ಆಗದೇ ಸಂದೇಹಕ್ಕೆ ಒಳಗಾಗುತ್ತಾರೆ‌ (ಟ್ರಾನ್ಸ್‌ಜೆಂಡರ್). ಅಪರೂಪಕ್ಕೆ ಕೆಲವು ಮಕ್ಕಳಲ್ಲಿ ಲೈಂಗಿಕ ಭಾವನೆಗಳು ಉಂಟಾಗುವುದೇ ಇಲ್ಲ‌ (ಅಸೆಕ್ಷುವಲ್). ಹೊರಗಿನ ಸಮಾಜದಲ್ಲಿ ಕಂಡು ಬರುವ ಸಹಜವಾದ ಲೈಂಗಿಕ ಜೀವನ ಹಾಗೂ ತಮ್ಮಲ್ಲಿ ಉದ್ಭವವಾಗಿರುವ ಭಾವನೆಗಳು ಅಸಹಜವಾಗಿ ಕಂಡಾಗ ಅಧೀರರಾಗುತ್ತಾರೆ. ಇದಕ್ಕೆಲ್ಲಾ ಕಾರಣ ಲೈಂಗಿಕತೆಯ ಬಗ್ಗೆ ತಿಳುವಳಿಕೆ ಇಲ್ಲದೇ ಇರುವುದೇ ಆಗಿದೆ. ‌

ಲೈಂಗಿಕತೆಯ ಬಗ್ಗೆ ತೆರೆದು ಮಾತನಾಡುವುದನ್ನು ಕೆಟ್ಟದಾಗಿ ಹಾಗೂ ತಪ್ಪಾಗಿ ಅಶ್ಲೀಲವಾಗಿ ತಿಳಿಯುವುದೇ ಇದಕ್ಕೆ ಕಾರಣವಾಗಿದೆ. ಮಕ್ಕಳಲ್ಲಿ ಉದ್ಭವವಾಗುವ ಲೈಂಗಿಕತೆಯ ಬಗೆಗಿನ ಸಂದೇಹಗಳನ್ನು ಅಳುಕಿಲ್ಲದೆ ಪರಿಹರಿಸುವ ಮಾರ್ಗವು ದೊರೆಯದೇ ಹೋದಾಗ ಮಕ್ಕಳು ಸಾಮಾಜಿಕ ಜಾಲತಾಣಗಳ ಕಡೆಗೆ ತೆರಳುತ್ತಾರೆ ಅಥವಾ ತಮ್ಮ ಇತರ ಕೆಲವು ಸ್ನೇಹಿತರಲ್ಲಿ ಸಂದೇಹಗಳ ಪರಿಹಾರಕ್ಕೆ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಅವರಿಗೆ ಅಲ್ಲಿ ಸರಿಯಾದ ಮಾಹಿತಿ ದೊರೆಯುವ ಬದಲು ಅವರನ್ನು ಇನ್ನೂ ಗೊಂದಲಕ್ಕೆ ಒಳಪಡಿಸುವ ಮಾಹಿತಿ ಸಿಗುತ್ತದೆ. ಇದರಿಂದ ಮಕ್ಕಳು ಅಡ್ಡದಾರಿಗಳನ್ನು ಹಿಡಿಯುವ ಸಾಧ್ಯತೆಯೂ ಇರುತ್ತದೆ. ಅನಿವಾರ್ಯವಾಗಿ ನೋವನ್ನು ಮರೆಯಲು ಕೆಲವರು ಮಾದಕವಸ್ತು, ಧೂಮಪಾನ, ಮದ್ಯಪಾನ ಇಂಥಹಾ ಅನೇಕ ದುಚ್ಚಟಗಳ ವ್ಯಸನಗಳಿಗೆ ದಾಸರಾಗುತ್ತಾರೆ.

ತಮ್ಮಲ್ಲಿ ಉದ್ಭವಿಸುತ್ತಿರುವ ಭಾವನೆಗಳು ತಪ್ಪು ಹಾಗೂ ತಮಗೇನೋ ಮಾನಸಿಕ ಅಥವಾ ದೈಹಿಕ ಖಾಯಿಲೆ ಬಂದಿದೆ ಎಂಬ ತಪ್ಪು ಕಲ್ಪನೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ತಮ್ಮನ್ನು ಸಮಾಜದಿಂದ, ಹೊರಲೋಕದಿಂದ, ಅಪ್ಪ ಅಮ್ಮನಿಂದ, ಹಾಗೂ ಇತರೇ ಸ್ನೇಹಿತರಿಂದ ಪ್ರತ್ಯೇಕಿಸಿಕೊಂಡು ಒಂಟಿಯಾಗಿ ಇದ್ದು ಬಿಡುತ್ತಾರೆ. ತಾವೇನೋ ತಪ್ಪು ಮಾಡುತ್ತಿದ್ದೇವೆ, ತಮ್ಮ ಲೈಂಗಿಕತೆಯ ಬಗ್ಗೆ ಹೊರಲೋಕ ಅರಿತರೆ ಎಲ್ಲಿ ತಮ್ಮನ್ನು ದೂರ ಮಾಡುವರೋ ಎಂಬ ಭಯಕ್ಕೆ ಒಳಗಾಗುತ್ತಾರೆ. ಇದಕ್ಕೆಲ್ಲಾ ಕಾರಣ ಪೋಷಕರು ಹಾಗೂ ಹೊರ ಪ್ರಪಂಚ ಈ ಮಕ್ಕಳನ್ನು ಅಸಹಜ ಗುಣದವರೆಂದು ಹೀಯಾಳಿಸುವುದರಿಂದ, ನಿಂದಿಸುವುದರಿಂದ, ಇವರೊಂದಿಗೆ ಬೆರೆಯದೇ ಇರುವುದರಿಂದ ಹಾಗೂ ಅವರನ್ನು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಇರುವುದರಿಂದ. ಮಕ್ಕಳೊಂದಿಗೆ ಪೋಷಕರು ಸ್ನೇಹಿತರಂತೆ ನಡೆದುಕೊಳ್ಳದೇ ಮಕ್ಕಳು ತಮ್ಮ ಅಧಿಕಾರ ಎಂದು ತಿಳಿದು ತಮ್ಮ ಇಷ್ಟಾನಿಷ್ಟಗಳನ್ನು ಮಕ್ಕಳ ಮೇಲೆ ಹೇರುವುದರಿಂದ, ಹೆದರುವ ಮಕ್ಕಳು ಎಲ್ಲಿ ತಮ್ಮನ್ನು ಮನೆಯಿಂದ ಆಚೆ ತಳ್ಳುವರೋ ಎಂಬ ಭಯದಿಂದ ತಮ್ಮ ಲಿಂಗತ್ವ ಹಾಗೂ ಲೈಂಗಿಕತೆಯನ್ನು ಬಹಿರಂಗ ಪಡಿಸಲು ಅಥವಾ ತಮ್ಮ ಮಾನಸಿಕ ತುಮುಲಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಆಗದೇ ತಮ್ಮಲ್ಲೇ ತಾವು ಕೊರಗುತ್ತಾ ಖಿನ್ನತೆಗೆ ಒಳಗಾಗಿ ಅದು ಕೆಲವೊಮ್ಮೆ ತೀವ್ರವಾದಾಗ ಆತ್ಮಹತ್ಯೆಗೆ ಶರಣಾಗುತ್ತಾರೆ.

ಲೇಖಕರ ಹಿಂದಿನ ಲೇಖನ: ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ

ಮನೆಗೆ ನೆಂಟರು, ಅತಿಥಿಗಳು ಬರುವಾಗಲೂ ತಾವು ಏನೆಂದು ಅರಿಯಬಾರದು ಎನ್ನುವುದನ್ನು ಮನಗಂಡ ಮಕ್ಕಳು ಅವರು ಉಪಯೋಗಿಸುವಂತಹ ವಸ್ತುಗಳನ್ನು ಬಚ್ಚಿಡುತ್ತಾರೆ. ಪೋಷಕರಿಗಾಗಿ ಮತ್ತು ಸಮಾಜಕ್ಕಾಗಿ ಈ ಮಕ್ಕಳು ತಮ್ಮ ಇಚ್ಚೆ, ಆಸೆ, ಕಾಮನೆ, ಆಕಾಂಕ್ಷೆಗಳನ್ನು ತ್ಯಜಿಸಿ ಬಾಳುವೆ ನಡೆಸುವಂತಹ ಸಂದರ್ಭಗಳೇ ಹೆಚ್ಚು. ತಾವು ಯಾರು ಎಂದು ಸಮಾಜಕ್ಕೆ ಗೊತ್ತಾಗದೇ ಇರುವಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ಮಕ್ಕಳು ಹರಸಾಹಸ ಪಡಬೇಕಾಗುತ್ತದೆ. ಹೊರಜಗತ್ತಿಗೆ ಗೊತ್ತಾದರೆ ಕಲಿಯುವ ಶಾಲೆಯಲ್ಲಿ ಇತರೇ ಮಕ್ಕಳಿಂದ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಸಮಾಜದ ಜನ ಇವರನ್ನು ಕಂಡು ನಗುತ್ತಾರೆ. ಈ ಮಕ್ಕಳು ಮಾಡಿದಂತಹ ತಪ್ಪಾದರೂ ಏನು? ಎಲ್ಲಾ ಜೀವಿಗಳಂತೆ ಈ ಪ್ರಪಂಚದಲ್ಲಿ ಜನ್ಮ ತಾಳಿದ್ದು ಇವರ ತಪ್ಪೇ? ತಮಗೆ ಜನ್ಮ ಕೊಡು ಎಂದು ಈ ಮಕ್ಕಳು ಮಾತಾಪಿತರನ್ನು ಕೇಳಿದರೇ? ತಾವು ಲೈಂಗಿಕ ಅಲ್ಪಸಂಖ್ಯಾತರಾಗಿ ಹುಟ್ಟಬೇಕು ಎಂದು ಇವರು ಬಯಸಿದ್ದರೆ?


ಯಾವ ತಪ್ಪಿಗೆ ಸಮಾಜದಲ್ಲಿ ಕುಟುಂಬದಲ್ಲಿ ಬದುಕಲು ಈ ಮಕ್ಕಳು ಅನರ್ಹರಾಗುತ್ತಾರೆ? ಈ ಲೋಕದಲ್ಲಿ ಬದುಕಲು ಇವರಿಗೂ ಹಕ್ಕಿಲ್ಲವೇ? ತಮ್ಮದಲ್ಲದ ತಪ್ಪಿಗೆ ಈ ಮಕ್ಕಳನ್ನು ಏಕೆ ಅಸಹ್ಯ ಭಾವನೆಯಿಂದ ಕಾಣುವುದು? ಈ ಮಕ್ಕಳು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ಸಹಜವಾಗಿ ಇರುವಂತೆ ನಟಿಸಬೇಕಾಗುತ್ತದೆ. ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳ ಭಿನ್ನ ಲೈಂಗಿಕ ಅಭಿವ್ಯಕ್ತಿ ತಿಳಿದಿರುವುದಿಲ್ಲ. ಲಿಂಗತ್ವ ಹಾಗೂ ಲೈಂಗಿಕ ಮನೋಭಾವಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ ಎನ್ನುವ ಬಗ್ಗೆ ಅರಿವು ಮೂಡಿಸಿ ಈ ಮಕ್ಕಳು ನೆಮ್ಮದಿಯ ಬದುಕನ್ನು ಬಾಳಲು ಅನುವು ಮಾಡಿಕೊಡಬೇಕು.

ಯುವಾವಸ್ಥೆಗೆ ಬಂದಾಗ ಈ ಮಕ್ಕಳು ಅನುಭವಿಸುವ ಸಂಕಷ್ಟ ಇಮ್ಮಡಿಯಾಗುತ್ತದೆ. ಪ್ರಾಥಮಿಕ ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಲವಾರು ತ್ಯಾಗಗಳನ್ನು ಮಾಡಿ ಪಡೆದುಕೊಂಡಿರುತ್ತಾರೆ. ಉದ್ಯೋಗ ಗಳಿಸಿ ತಾವು ಸ್ವತಂತ್ರವಾಗಿ ಬದುಕಲು ಕೂಡಾ ಇವರು ತಮ್ಮ ಲೈಂಗಿಕತೆಯನ್ನು ಮರೆಮಾಚಿಕೊಳ್ಳಬೇಕಾಗುತ್ತದೆ. ಇನ್ನು ವೈವಾಹಿಕ ಜೀವನವಂತೂ ದುಸ್ತರವೇ ಸರಿ. ತಮ್ಮ ಲೈಂಗಿಕ ಭಾವನೆಗಳಿಗೆ ವಿರುದ್ಧವಾಗಿ ಮದುವೆಯಾಗಿ ತಾವು ಸಹಜವಾಗಿ ಇದ್ದೇವೆ ಎಂದು ಸಮಾಜಕ್ಕೆ ತೋರಿಸಿಕೊಳ್ಳಲು ಒತ್ತಡಕ್ಕೆ ಒಳಗಾಗಿ ಇಂತಹ ಬದುಕನ್ನು ಸ್ವೀಕರಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಗೇ ಹುಡುಗನೊಬ್ಬ ಕುಟುಂಬದ ಮತ್ತು ಸಮಾಜದ ಒತ್ತಡಕ್ಕೆ ಒಳಗಾಗಿ ಹೆಣ್ಣನ್ನು ಮದುವೆಯಾದರೆ, ಇದರಿಂದ ಅವನ ಬದುಕು ಮಾತ್ರವಲ್ಲ, ಆ ಹುಡುಗಿಯ ಬದುಕೂ ನಾಶವಾಗುತ್ತದೆ. ಇದಕ್ಕೆ ಲ್ಯಾವೆಂಡರ್‌ ಮ್ಯಾರೆಜ್‌ ಎಂದು ಕರೆಯುತ್ತಾರೆ. ಹೊರನೋಟಕ್ಕೆ ಏನೇ ಬದಲಾವಣೆ ಮಾಡಿಕೊಂಡರೂ ಮನೋಸಹಜ ಭಾವನೆಗಳನ್ನು ಮೆಟ್ಟಿನಿಂತು ಬದುಕುವುದು ದುಸ್ತರವಾಗುತ್ತದೆ. ಆಗ ವೈವಾಹಿಕ ಜೀವನದಲ್ಲಿ ಕೂಡಾ ಬಿರುಕು ಮೂಡುತ್ತದೆ. ಒಬ್ಬರ ಲೈಂಗಿಕತೆಯನ್ನು ಮರೆಮಾಚಲು ಹೋಗಿ ಇಬ್ಬರ ಜೀವನವೂ ಹಾಳಾಗುತ್ತದೆ.


ಈ ಮಕ್ಕಳು ಅನುಭವಿಸುವ ನೋವು ಸಂಕಟಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಒಂದು ಉತ್ತಮ ಪರಿಹಾರ. ಎಲ್ಲರಂತೆ ಈ ಮಕ್ಕಳು ಕೂಡಾ ಉತ್ತಮ ರೀತಿಯಲ್ಲಿ ಬದುಕುವ ಅವಕಾಶ, ಹಕ್ಕು ಇವರಿಗೂ ಇದೆ ಎನ್ನುವುದರ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಪ್ರಕೃತಿಯಲ್ಲಿ ಇವೆಲ್ಲವೂ ಸಹಜವೇ ಎನ್ನುವ ಅರಿವು ಜಾಗೃತವಾಗಬೇಕು. ಆಗಲೇ ಈ ಮಕ್ಕಳು ತಮ್ಮತನವನ್ನು ತ್ಯಾಗ ಮಾಡದೇ, ಮುಜುಗರ, ಅವಮಾನ, ಅವಹೇಳನ, ತಿರಸ್ಕಾರಗಳನ್ನು ಸಹಿಸಿಕೊಂಡು ಒಳಗೊಳಗೇ ನೊಂದು ಬದುಕುವುದನ್ನು ತಡೆಗಟ್ಟಿ, ಅವರು ಕೂಡಾ ಎಲ್ಲರಂತೆ ನಗು ನಗುತ್ತಾ ಬಾಳುವೆ ನಡೆಸಲು ಸಾಧ್ಯವಾಗುತ್ತದೆ.

ರುಕ್ಮಿಣಿ ಎಸ್ ನಾಯರ್
ಬೆಂಗಳೂರು.

You cannot copy content of this page

Exit mobile version