LGBTQIA+ ಸಮುದಾಯದ ಮಕ್ಕಳು ಕುಟುಂಬ ವ್ಯವಸ್ಥೆಯಲ್ಲಿ ಅನುಭವಿಸುವ ನೋವು, ತೊಳಲಾಟಗಳು ಅವರ ಮಾನಸಿಕ ಆರೋಗ್ಯದ ಮೇಲೆ ಗಾಢ ಪರಿಣಾಮವನ್ನು ಬೀಡುತ್ತವೆ. ಹೆತ್ತವರಿಗೆ ತಮ್ಮ ಮಗು ಗೇ, ಲೆಸ್ಟಬಿಯನ್, ಟ್ರಾನ್ಸ್ ಜೆಂಡರ್, ಬೈಸೆಕ್ಷುವಲ್, ಇಂಟರ್‌ಸೆಕ್ಷುವಲ್ ಮುಂತಾದ ಪ್ರಕೃತಿ ಸಹಜ ಲೈಂಗಿಕತೆಯ ಜೀವವೆಂದು ತಿಳಿದ ಮೇಲೆ ಅವರಿಗೆ ನೀಡಬೇಕಾದ ಪ್ರೀತಿ-ಅಕ್ಕರೆ, ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯಗಳ ಬಗ್ಗೆ, ಮುಖ್ಯವಾಗಿ ಮಗುವಿನ ಗೊಂದಲ, ತೊಳಲಾಟಗಳಿಗೆ, ಭಯಕ್ಕೆ ಧೈರ್ಯವಾಗುವ ಬಗ್ಗೆ ತಾಯಿ ಪ್ರೀತಿಯಲ್ಲಿ ಸರಣಿ ಲೇಖನಗಳನ್ನು ಬರೆಯುತ್ತಾರೆ ರುಕ್ಮಿಣಿ ಎಸ್.ನಾಯರ್
“ನಮ್ಮ ಪ್ರೈಡ್” ಎಂದರೆ ನಮ್ಮ ಹೆಮ್ಮೆ, ನಮ್ಮ ಆತ್ಮಗೌರವ
2024 ರ ನವಂಬರ್24, ಭಾನುವಾರದಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಆವರಣದಿಂದ ಸಾವಿರಾರು ಲೈಂಗಿಕ ಅಲ್ಪಸಂಖ್ಯಾತರು ಕುಣಿಯುತ್ತಾ, ಹಾಡುತ್ತಾ ಮೆರವಣಿಗೆ ಹೊರಟಿದ್ದರು.
ಈ ಮೆರವಣಿಗೆಯನ್ನು ಬೆಂಗಳೂರಿನ “ಸಿಎಸ್‌ಎಮ್‌ಆರ್” (Coalition for Sex Workers and Sexuality Minority Rights) ಎನ್ನುವ ಸರ್ಕಾರೇತರ ಸಂಸ್ಥೆಯೊಂದು ಆಯೋಜಿಸಿತ್ತು. “LGBTQIA+” ….ನ ಸಮುದಾಯದ ಸಾವಿರಾರು ಜನ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಮುದಾಯವನ್ನು ಬೆಂಬಲಿಸುವ ಇತರರೂ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಿಎಸ್‌ಎಮ್‌ಆರ್ ಸಂಸ್ಥೆಯು ನೀಡಿದ ಬ್ಯಾನರ್, ಪ್ರಕಟಣಾ ಪತ್ರ ಹಾಗೂ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ನಡೆದರು. ಪ್ರತಿಯೊಬ್ಬರಲ್ಲೂ ಶಿಸ್ತು, ಬದ್ಧತೆ ಮನೆಮಾಡಿತ್ತು. ತಮ್ಮ ಮನಸ್ಸಿಗೆ ಹಿಡಿಸಿದ, ತಮ್ಮ ಇಷ್ಟದ ಉಡುಗೆ ತೊಡುಗೆಗಳನ್ನು ಯಾವುದೇ ಅಳುಕಿಲ್ಲದೆ ತೊಟ್ಟಿದ್ದರು. ಎಲ್ಲರೂ ಸುಂದರವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತಿದ್ದರು. ತಾವು ಯಾವುದೋ ಒಂದು ಹೊಸ ಲೋಕದಲ್ಲಿ ವಿಹರಿಸುತ್ತಿದ್ದಂತೆ ಸಂಭ್ರಮಿಸಿದರು.
ಇಲ್ಲಿ ಯಾರೂ ಒಬ್ಬರನ್ನೊಬ್ಬರು ಅವಹೇಳನ ಮಾಡುತ್ತಿರಲಿಲ್ಲ ಹಾಗೂ ಕೆಟ್ಟ ದೃಷ್ಟಿಯಿಂದ ನೋಡುತ್ತಿರಲಿಲ್ಲ. ಅಲ್ಲಿ ಬಂದಿದ್ದ ಅಷ್ಟೂ ಜನರೂ ಇತರರನ್ನು ಗೌರವಿಸುತ್ತಿದ್ದರು. ತಮ್ಮ ಲೈಂಗಿಕತೆಯ ಅಭಿವ್ಯಕ್ತಿಯ ಬಗ್ಗೆ ಯಾರಿಗೂ ಯಾವುದೇ ಹಿಂಜರಿಕೆ ಇರಲಿಲ್ಲ. ತಮ್ಮ ಸ್ನೇಹಿತರಗಳ ಜೊತೆ ಹಾಗೂ ಇತರರ ಜೊತೆ ಸಭ್ಯತೆಯಿಂದ ನಡೆದುಕೊಳ್ಳುತ್ತಿದ್ದರು. ಎಲ್ಲರೂ ನಿರ್ಭೆಡೆಯಿಂದ ಹಾಗೂ ನಿರ್ಭೀತಿಯಿಂದ ಸಂತೋಷವಾಗಿದ್ದರು. ವಾದ್ಯಘೋಷಗಳ ಜೊತೆ ಹೆಜ್ಜೆ ಹಾಕುತ್ತಾ ಕುಣಿಯುತ್ತ ತಮ್ಮ ಪ್ರೈಡ್ ಮೆರವಣಿಗೆಯ ಬಗ್ಗೆ ಹೆಮ್ಮೆಯಿಂದ ತಲೆಯೆತ್ತಿ ನಡೆಯುತ್ತಿದ್ದರು. ಕಂಠೀರವ ಕ್ರೀಡಾಂಗಣದಿಂದ ಸಹಸ್ರಾರು ಜನರು ಸುಮಾರು ಎರಡು ಕಿಲೋಮೀಟರ್ಗಳಷ್ಟು ದೂರ ಕಾಲ್ನಡಿಗೆಯಲ್ಲೇ ಕ್ರಮಿಸಿದರು. ಪರಸ್ಪರ ಖುಷಿಯಿಂದ ಮಾತನಾಡುತ್ತಾ, ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ರಸ್ತೆಯ ಸುತ್ತಮುತ್ತಲಿನ ಜನರಿಗೆ, ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರರಿಗೆ ಯಾವುದೇ ಅಡೆತಡೆಗಳನ್ನು ಮಾಡದೆ ಶಿಸ್ತು ಬದ್ಧವಾಗಿ ನಡೆದುಕೊಂಡರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ರಾಜ್ಯದ ಪೊಲೀಸ್ ಪಡೆ ಇವರಿಗೆ ರಕ್ಷಣೆ ನೀಡಿತು. ಈ ಮೆರವಣಿಗೆಯಲ್ಲಿ ದೇಶದ ಹಲವು ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಲೈಂಗಿಕ ಅಲ್ಪಸಂಖ್ಯಾತರು ಪಾಲ್ಗೊಂಡಿದ್ದರು. ಇಲ್ಲಿ ಮೊದಲು ಗಮನಿಸಬೇಕಾದ ಅಂಶವೆಂದರೆ ತಾವು ಒಂಟಿಯಲ್ಲ, ತಮ್ಮಂತೆ ಈ ಸೃಷ್ಟಿಯಲ್ಲಿ, ಈ ಲೋಕದಲ್ಲಿ ಹಲವರು ಇದ್ದಾರೆ ಎನ್ನುವ ಅರಿವು ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಲ್ಲೂ ಮೂಡಿತ್ತು. ಹಾಗಾಗಿ ಎಲ್ಲರ ಮುಖದಲ್ಲೂ ಅಂಜಿಕೆ, ಹೆದರಿಕೆಯ ಬದಲು ಮಂದಹಾಸ ಮೂಡಿತ್ತು. ಕೆಲವರಂತೂ ತುಂಬಾ ಭಾವುಕರಾದರು. ಮನಬಿಚ್ಚಿ ನಕ್ಕರು ಪರಸ್ಪರ ಹಸ್ತಲಾಘವವನ್ನು ಕೊಡುತ್ತಾ ಹೆಮ್ಮೆಯಿಂದ ಒಬ್ಬರ ಬೆನ್ನು ಇನ್ನೊಬ್ಬರು ತಟ್ಟಿದರು. ಮೆರವಣಿಗೆಯು ರಸ್ತೆಯಲ್ಲಿ ಸಾಗುತ್ತಿದ್ದಾಗ ಅಲ್ಲಲ್ಲಿ ರಸ್ತೆ ದಾಟುವುದಿದ್ದರೂ ಕೂಡ ಯಾವುದೇ ತೊಂದರೆಗಳನ್ನು ಕೊಡದೇ ಸಂಸ್ಥೆಯ ಸ್ವಯಂಸೇವಕರುಗಳು ಎಲ್ಲರನ್ನೂ ಮುನ್ನಡೆಸುತ್ತಿದ್ದರು.
ಈ ಮೆರವಣಿಗೆಯು “ಶ್ರೀ ಪುಟ್ಟಣ್ಣ ಚೆಟ್ಟಿ ಪುರಭವನದ” ವರೆಗೆ ಕೊನೆಗೊಂಡಿತು. ಈ ಸಮುದಾಯಕ್ಕೆ ಸಂಬಂಧಪಟ್ಟ ಸದಸ್ಯರುಗಳು ಪುರಭವನದ ಮುಂದಿನ ಮೆಟ್ಟಿಲುಗಳ ಮೇಲೆ ಕುಳಿತು ತಮ್ಮ ಸಮುದಾಯದ ಧ್ವಜಗಳನ್ನು ಹಿಡಿದು ಕೆಲವು ನಿಮಿಷಗಳ ಕಾಲ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಿತು. ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡವರೆಲ್ಲರೂ ರವೀಂದ್ರ ಕಲಾಕ್ಷೇತ್ರದ ಆವರಣದ “ಸಂಸ ಬಯಲು ರಂಗ ಮಂದಿರ”ದಲ್ಲಿ ಸೇರಿದರು. ಸಂಸ ಬಯಲು ರಂಗಮಂದಿರದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಂಸ ಬಯಲು ರಂಗ ಮಂದಿರದಲ್ಲಿ “ಸಿಎಸ್‌ಎಮ್‌ಆರ್” ಸಂಸ್ಥೆಯ ಸಿಬ್ಬಂದಿಗಳು ತಮ್ಮ ಸಂಸ್ಥೆ ಪ್ರಾರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದರು.
ಬೆಂಗಳೂರು ನಮ್ಮ ಪ್ರೈಡ್ ಮೆರವಣಿಗೆಯು 2008 ರಲ್ಲಿ ಪ್ರಾರಂಭವಾಯಿತು. 16 ವರ್ಷಗಳಿಂದ ಪ್ರತಿ ವರ್ಷದ ಜೂನ್ ತಿಂಗಳನ್ನು ಪ್ರೈಡ್ ತಿಂಗಳಾಗಿ ಪರಿಗಣಿಸಲಾಗಿದೆ. ಆದರೆ ನವೆಂಬರ್ ತಿಂಗಳ ಕೊನೆಯ ವಾರದಂದು ಫ್ರೈಡ್ ಮೆರವಣಿಗೆಯನ್ನು ನಡೆಸಲಾಗುತ್ತಿದೆ.
“ಸಿಎಸ್‌ಎಮ್‌ಆರ್” ಸಂಸ್ಥೆಯ ಪ್ರಮುಖ ಉದ್ದೇಶವೇನೆಂದರೆ, ಭಾಷೆ, ಸಾಮಾಜಿಕ ಆರ್ಥಿಕ ಹಿನ್ನೆಲೆ, ಲಿಂಗತ್ವ ಗುರುತಿಸುವಿಕೆಯ ದೃಷ್ಟಿಕೋನಗಳನ್ನು ಲೆಕ್ಕಿಸದೆ ಎಲ್ಲಾ ಧ್ವನಿಗಳನ್ನು ಗೌರವಿಸುವುದು. LGBTQIA+ ಸಮುದಾಯದ ಎಲ್ಲಾ ಸದಸ್ಯರನ್ನು ಬೆಂಬಲಿಸುವ ಏಕೀಕೃತ ಪ್ರೈಡ್ ನಡೆಸುವುದು ಇವರ ಬದ್ಧತೆಯಾಗಿದೆ. ಪ್ರತಿಯೊಂದು ಪ್ರಶ್ನೆಗಳನ್ನು, ಧ್ವನಿಗಳನ್ನು ಚಿಂತನಾಶೀಲವಾಗಿ ಪರಿಗಣಿಸಲು, ಪರಸ್ಪರ ಗೌರವಿಸಲು, ತಿಳುವಳಿಕೆ ಮೂಡಿಸಲು ಒಗ್ಗಟ್ಟಿನ ಮೇಲೆ ನಿರ್ಮಿಸಲಾದ ಚಳುವಳಿಯ ಕಡೆಗೆ ತಮ್ಮೊಂದಿಗೆ ಕೆಲಸ ಮಾಡಲು ಈ ಸಮುದಾಯವು ಕೇಳಿಕೊಳ್ಳುತ್ತದೆ.
ಅಂದಿನ ಸಂಜೆ ಸಿ ಎಸ್ ಎಂ ಆರ್ ಸಂಸ್ಥೆಯು ಆಯೋಜಿಸಿದ್ದ ಹೆಮ್ಮೆಯ ಸಂಜೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾಮನಬಿಲ್ಲಿನಂತೆ ಒಬ್ಬೊಬ್ಬರ ಪ್ರತಿಭೆಯೂ ಅಷ್ಟೇ ಕಲರ್‌ಫುಲ್!
“LGBTQIA+ ” ಸಮುದಾಯದವರಿಂದ ಮೊದಲಿಗೆ ಒಂದು ಸೊಗಸಾದ ಶಿವನ ನೃತ್ಯದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ನಡೆದ ತಾಯಿ-ಮಗನ ನಡುವಿನ ಸಂಬಂಧದ ಗಾಢತೆಯನ್ನು ತೋರಿಸುವ ನೃತ್ಯವಂತೂ ಅಲ್ಲಿ ನೆರೆದಿದ್ದ ವೀಕ್ಷಕರ ಕಣ್ಣಂಚಲ್ಲಿ ಕಂಬನಿ ತರಿಸಿತು. ಕೆಲವರಂತೂ ಭಾವಕತೆಯಿಂದ ಗದ್ಗದಿತರಾದರು. ಈ ನೃತ್ಯ ರೂಪಕವು ತಾಯಿ ಹಾಗೂ “LGBTQIA+” ಸಂತಾನದ ಮಾನಸಿಕ ತೊಳಲಾಟವನ್ನು ಪ್ರತಿಬಿಂಬಿಸಿ, ಅಂತ್ಯದಲ್ಲಿ ತಾಯಿ ಹಾಗೂ ಸಂತಾನದ ಸಮ್ಮಿಲನವನ್ನು ಮನಮುಟ್ಟುವಂತೆ ಅಭಿನಯಿಸಿದ್ದು ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣುಗಳನ್ನೂ ಒದ್ದೆ ಮಾಡಿತ್ತು. ನಂತರ ಹಲವಾರು ಕಲಾಕಾರರು ತಮ್ಮ ಪ್ರತಿಭೆಗಳ ಅನಾವರಣ ಮಾಡಿದರು. ಪ್ರತಿಯೊಂದು ನೃತ್ಯ ರೂಪಕವೂ ಒಂದು ಸಂದೇಶವನ್ನು ಒಳಗೊಂಡಿತ್ತು. ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಸಮುದಾಯದ ಜನರು ಯಾವುದೇ ಅಂಜಿಕೆ ಇಲ್ಲದೆ ಹಾಡಿನ ತಾಳಕ್ಕೆ ತಕ್ಕಂತೆ ಮನ ಬಿಚ್ಚಿ ಸಂತೋಷದಿಂದ ಕುಣಿದು ಕುಪ್ಪಳಿಸಿದರು. ತಮ್ಮ ಮನದಾಳದಲ್ಲಿ ಅಡಗಿಸಿಟ್ಟಿದ್ದ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಖುಷಿಯಿಂದ ಕೇಕೆ ಹಾಕಿದರು. ಮನಸ್ಪೂರ್ತಿಯಾಗಿ ಒಬ್ಬರನ್ನು ಒಬ್ಬರು ಅಭಿನಂದಿಸಿದರು. “ತಮ್ಮ ಜನ್ಮ ಒಂದು ಶಾಪವಲ್ಲ. ನಮಗೂ ಎಲ್ಲರಂತೆ ಬದುಕುವ ಆಸೆ ಹಾಗೂ ಹಕ್ಕು ಇದೆ” ಎಂಬ ನಂಬಿಕೆಯನ್ನು ಮತ್ತೆ ಮತ್ತೆ ಗಟ್ಟಿಗೊಳಿಸಿಕೊಂಡರು.
ಈ ಪ್ರಕೃತಿಯಲ್ಲಿ ಜೀವಿಸುವಂತಹ ಎಲ್ಲಾ ಜೀವಸಂಕುಲಗಳೂ ಸ್ವಾಭಿಮಾನದಿಂದ ಗೌರವಪೂರ್ವಕವಾಗಿ ಬದುಕುವ ಹಕ್ಕು ಇದೆ . ಮಾನವರಲ್ಲಿ ಮಾನವತೆ ಇರಬೇಕು. ಎಲ್ಲರನ್ನೂ ಗೌರವಪೂರ್ವಕವಾಗಿ ಕಾಣಬೇಕು ಹಾಗೂ ಬೇಧಭಾವಗಳು ಸಲ್ಲದು. ಎಲ್ಲರೂ ಒಂದೇ ಎನ್ನುವ ಮನೋಭಾವವಿರಬೇಕು. ಮಾನವ ಹಕ್ಕುಗಳ ಮೇಲೆ ಬೆಳಕು ಚೆಲ್ಲಿ, ಎಲ್ಲರಿಗೂ ಸಮಾಧಾನಕರವಾದ ಜೀವನ ನಡೆಸುವ ಹಕ್ಕು ಇದೆ ಎನ್ನುವ ಅರಿವನ್ನು ಎಲ್ಲರಲ್ಲೂ ಮೂಡಿಸಲು ಪ್ರತೀ ವರ್ಷವೂ ಈ ಹೆಮ್ಮೆಯ ಮೆರವಣಿಗೆಯನ್ನು ಏರ್ಪಡಿಸಿ ಆಚರಿಸಿಕೊಂಡು ಬರಲಾಗಿದೆ.
“LGBTQIA+” ಎಂದರೆ ಏನು?
ಪ್ರತಿಯೊಂದು ಜೀವಿಗೂ ತನ್ನದಾದ ರೀತಿಯಲ್ಲಿ ಬದುಕುವ ಹಕ್ಕನ್ನು ಈ ಪ್ರಕೃತಿಯು ನೀಡಿದೆ. ಇಲ್ಲದಿದ್ದರೆ ವೈವಿಧ್ಯಮಯ ವಿಭಿನ್ನ ಜೀವರಾಶಿಗಳು, ಕ್ರಿಮಿಕೀಟಗಳು, ಕಣ್ಣಿಗೆ ಕಾಣದಂತಹ ಸೂಕ್ಷ್ಮಾಣು ಜೀವಿಗಳು, ಸಸ್ಯರಾಶಿಗಳು, ಜಲಚರಗಳು, ಬಾನಾಡಿಗಳು, ಇತ್ತ ಪ್ರಾಣಿಯೂ ಪಕ್ಷಿಯೂ ಅಲ್ಲದ ಅನೇಕ ಜೀವಿಗಳು, ಭೂಚರ, ಜಲಚರ, ಎರಡೂ ಅಲ್ಲದ ಉಭಯವಾಸಿಗಳು ಹೀಗೆ ಅನೇಕ ಜೀವಸಂಕುಲಗಳು ಈ ಪ್ರಕೃತಿಯಲ್ಲಿ ವೈವಿಧ್ಯಮಯವಾಗಿ ಜೀವಿಸುತ್ತಿರಲಿಲ್ಲ. ಪ್ರಕೃತಿಯೇ ಕೊಟ್ಟ ಜೀವವನ್ನು ಹಾಗೂ ಆ ಜೀವಿ ಬದುಕುತ್ತಿರುವ ರೀತಿಯು ಪ್ರಕೃತಿಗೆ ಇಷ್ಟವಾಗದಿದ್ದಲ್ಲಿ ಅದುವೇ ಅದನ್ನು ನಾಶಪಡಿಸುವತ್ತ ಹೆಜ್ಜೆ ಇಡುತ್ತಿತ್ತು. ನಾವು ಮಾನವರು ಸಂಘ ಜೀವಿಗಳು, ಸಾಮಾಜ ಜೀವಿಗಳು. ಇಡೀ ಭೂಮಂಡಲದಲ್ಲಿ ಇನ್ನಿತರ ಜೀವಿಗಳ ಜೊತೆಗೆ ಈ ಭೂಮಿಯನ್ನು ಹಂಚಿಕೊಂಡು ನಮ್ಮ ಪ್ರಭುತ್ವವನ್ನು ಈ ಭೂಮಿಯ ಮೇಲೆ ಸ್ಥಾಪಿಸಲು ಹವಣಿಸುವ ಏಕೈಕ ಜೀವಿ ಎಂದರೆ ಅದು ಮಾನವ ಮಾತ್ರ.
ಪ್ರತಿಯೊಂದು ಕಡೆಯೂ ತನ್ನ ಹಕ್ಕು ಸ್ವಾಮ್ಯತೆಯನ್ನು ಸಾಧಿಸುತ್ತಾ, ತನ್ನಿಷ್ಟದಂತೆಯೇ ಇತರ ಜೀವಿಯು ಜೀವಿಸಬೇಕೆಂದು ಬಯಸುವುದು ಮಾನವ ಮಾತ್ರ. ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ಬಳಸುತ್ತಾ ಬದುಕುತ್ತಿರುವುದು ಕೂಡ ಮಾನವನೇ. ಪ್ರಕೃತಿಯಲ್ಲಿ ಜೀವಿಸುವ ಇತರ ಜೀವರಾಶಿಗಳಲ್ಲಿ ಐಕ್ಯತೆಯನ್ನು ಕಾಣುತ್ತೇವೆ. ಪ್ರಾಣಿ ಪಕ್ಷಿಗಳಲ್ಲೂ ವಿಭಿನ್ನ ರೀತಿಯ ಲೈಂಗಿಕತೆಯನ್ನು ಕಾಣುತ್ತೇವೆ. ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಮಾತ್ರ ಇತರೆ ಜೀವಿಗಳನ್ನು ಕೊಲ್ಲುತ್ತದೆ. ಸಸ್ಯಗಳನ್ನು ತಿನ್ನುತ್ತವೆ. ಹಾಗೆಯೇ ತಮ್ಮ ಸಂತಾನಗಳು ಹೇಗೇ ಇದ್ದರೂ ಏನೇ ಆಗಿದ್ದರೂ, ಅವುಗಳನ್ನು ಒಂದು ಹಂತದ ವರೆಗೆ ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲಹಿ ಆರೈಕೆ ಮಾಡಿ, ಅವು ಸ್ವತಃ ತನ್ನ ಆಹಾರ, ವಸತಿ, ಹಾಗೂ ಜೀವನವನ್ನು ರೂಪಿಸಿಕೊಳ್ಳಲು ಸದೃಢರಾದ ಕೂಡಲೇ ಅವುಗಳನ್ನು ಸ್ವತಂತ್ರವಾಗಿ ಬದುಕಲು ಬಿಡುತ್ತವೆ.
ನಾವು ಮಾನವರು ಕೂಡಾ ನಮ್ಮಿಷ್ಟದಂತೆ ಸಂತಾನಗಳನ್ನು ಪಡೆಯುತ್ತೇವೆ. ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲುಹುತ್ತೇವೆ.
ಆಹಾರ, ಉಡುಗೆ ತೊಡುಗೆ ವಸತಿ ವಿಧ್ಯಾಭ್ಯಾಸ, ಐಷಾರಾಮವಾಗಿ ಬದುಕಲು ಬೇಕಾದ ಸಕಲ ಸೌಲಭ್ಯಗಳನ್ನೂ ಮಾಡಿಕೊಡುತ್ತೇವೆ. ಒಳ್ಳೆಯ ಗುಣ ನಡತೆಗಳನ್ನು ಕೂಡಾ ಕಲಿಸುತ್ತೇವೆ. ಆದರೆ ಸಣ್ಣವಯಸ್ಸಿನಿಂದಲೇ ಅವರಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಲವರು ಸೋತು ಹೋಗುತ್ತೇವೆ. ನಮ್ಮ ಸಂತಾನಗಳು ಹದಿಹರೆಯಕ್ಕೆ ಬಂದಾಗ ಅವರಲ್ಲಿ ಉಂಟಾಗುವ ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಬದಲಾವಣೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುವುದರಲ್ಲಿ ಸೋತು ಹೋಗುತ್ತೇವೆ. ಸಹಜವೆನಿಸುವ ಅರಿವನ್ನು ಮಾತ್ರ ಕೊಡುತ್ತೇವೆ. ಅಸಹಜವೆನಿಸುವ ಎಷ್ಟೋ ಸಂಗತಿಗಳು ನಮಗೂ ತಿಳಿದಿರುವುದಿಲ್ಲ ಹಾಗಾಗಿ ನಮ್ಮ ಸಂತಾನಗಳಿಗೆ ಅರಿವನ್ನು ಮೂಡಿಸುವುದು ನಮ್ಮಿಂದ ಸಾಧ್ಯವಾಗುವುದಿಲ್ಲ.
ಹದಿಹರೆಯಕ್ಕೆ ಬಂದಾಗ ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಪ್ರಪಂಚದ ಪ್ರತೀ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಕೌತುಕವಿರುತ್ತದೆ. ತನ್ನ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವ ಕುತೂಹಲವಿರುತ್ತದೆ. ಭಾವನಾತ್ಮಕವಾಗಿ ಗೊಂದಲಕ್ಕೆ ಒಳಗಾಗುತ್ತಾರೆ. ಹಾಗೂ ತಮ್ಮದೇ ಓರಗೆಯ ಮಕ್ಕಳೊಂದಿಗೆ ತಮ್ಮನ್ನು ಹೋಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮ ಗುಣದಲ್ಲಿ, ರೂಪದಲ್ಲಿ, ದೇಹಾಕೃತಿಯಲ್ಲಿ, ಭಾವನೆಗಳಲ್ಲಿ ವ್ಯತ್ಯಾಸಗಳನ್ನು ಕಂಡರೆ ಆ ಮಕ್ಕಳು ಕುಗ್ಗಿ ಹೋಗುತ್ತಾರೆ. ತಮಗೇನೋ ಆಗಿದೆ. ತಾವು ಎಲ್ಲರಂತೆ ಇಲ್ಲ ಎಂಬ ಕೊರಗು ಅವರನ್ನು ಕಾಡುತ್ತದೆ. ಇತ್ತ ತನ್ನ ಓರಗೆಯವರ ಜೊತೆ ಅಥವಾ ತಮ್ಮ ಪೋಷಕರ ಜೊತೆ ಈ ವಿಷಯಗಳನ್ನು ಹಂಚಿಕೊಳ್ಳಲು ಹೆದರಿ ಹಿಂಜರಿಯುತ್ತಾರೆ. ಇವೆಲ್ಲವೂ ತಮ್ಮ ದೇಹದಲ್ಲಿ ಉಂಟಾಗುವ ರಸದೂತಗಳ ಬದಲಾವಣೆಗಳಿಂದ ಎನ್ನುವುದು ಅವರಿಗೆ ತಿಳಿಯದಾಗುತ್ತದೆ.
ಈ ಪ್ರಾಯದಲ್ಲಿ ಇದ್ದಕ್ಕಿದ್ದಂತೆ ಆಗುವ ಬದಲಾವಣೆಗಳಿಂದ ಮಕ್ಕಳು ಕಂಗೆಡುತ್ತಾರೆ. ತಮ್ಮ ದೇಹಾಕೃತಿಗೆ ಹೊಂದದಂತಹ ಭಾವನೆಗಳು ತಮ್ಮಲ್ಲಿ ಉತ್ಪತ್ತಿಯಾಗುತ್ತಿರುವುದನ್ನು ಅರಿತ ಮಕ್ಕಳು ಗೊಂದಲದಿಂದ ಯೋಚನೆಗೆ ಒಳಗಾಗುತ್ತಾರೆ. ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಉಂಟಾಗುವ ಬದಲಾವಣೆಗಳನ್ನು ಅರಿಯದೇ ಪೋಷಕರಲ್ಲಿ ಹಾಗೂ ಸ್ನೇಹಿತ/ ಸ್ನೇಹಿತೆಯರಲ್ಲಿ ಹೇಳಿಕೊಂಡು ತಮ್ಮ ಸಂದೇಹವನ್ನು ಪರಿಹರಿಸಿಕೊಳ್ಳಲು ಸಂಕೋಚಪಡುತ್ತಾರೆ. ಎಲ್ಲರಂತೆ ನಾನು ಅಲ್ಲ. ನಾನೇಕೆ ವಿಭಿನ್ನವಾಗಿದ್ದೇನೆ ಎನ್ನುವ ಪ್ರಶ್ನೆ ಮನಸ್ಸಲ್ಲಿ ಕಾಡತೊಡಗಿದಾಗ ಆದಷ್ಟೂ ಒಂಟಿಯಾಗಿರಲು ಪ್ರಯತ್ನಿಸುತ್ತಾರೆ. ಯಾರಲ್ಲೂ ಹೆಚ್ಚು ಮಾತನಾಡದೇ ಯಾರೊಂದಿಗೂ ಬೆರೆಯದೇ ಆದಷ್ಟೂ ಮೌನವಾಗಿ ಇರಲು ಪ್ರಯತ್ನಿಸುತ್ತಾರೆ.
ಮುಂದುವರಿಯುತ್ತದೆ…
ಲೇಖನ: ರುಕ್ಮಿಣಿ ಎಸ್.ನಾಯರ್