“ಗಲಭೆಯನ್ನೇ ಮಾಡದ ಆರ್.ಎಸ್.ಎಸ್ ತನ್ನ ಬೈಠಕ್ ನಲ್ಲಿ ಹೇಗೆ ಮತ್ತು ಯಾರಿಗಾಗಿ ಗಲಭೆ ರೂಪಿಸುತ್ತೆ? ಮಹೇಂದ್ರ ಕುಮಾರ್ ಆತ್ಮಕತೆ ‘ನಡುಬಗ್ಗಿಸದ ಎದೆಯ ದನಿ’ಯಲ್ಲಿದೆ ಸ್ಪೋಟಕ ಮಾಹಿತಿ!..” ತಪ್ಪದೇ ಓದಿ
ಆರ್.ಎಸ್.ಎಸ್ ಪಥಸಂಚಲನ ಈಗ ರಾಜಕೀಯ ವಿವಾದ ಸೃಷ್ಟಿಸಿದೆ. ‘ಆರ್.ಎಸ್.ಎಸ್ ಒಂದೇ ಒಂದು ಗಲಭೆಯಲ್ಲಿ ಭಾಗಿಯಾಗಿದ್ದನ್ನು ತೋರಿಸಿ’ ಎಂದು ಆರೆಸ್ಸೆಸ್ಸಿಗರು ಸವಾಲು ಹಾಕುತ್ತಿದ್ದಾರೆ. ಆರ್.ಎಸ್.ಎಸ್ ಗಲಭೆಗಳನ್ನು ಯಾರಿಗಾಗಿ, ಹೇಗೆ, ಯಾರಿಂದ ಮಾಡಿಸಲಾಗುತ್ತದೆ ಎಂಬ ಬಗ್ಗೆ ಭಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರ ಆತ್ಮಕತೆ ‘ನಡುಬಗ್ಗಿಸದ ಎದೆಯ ದನಿ’ ಪುಸ್ತಕದಲ್ಲಿ ಬಯಲು ಮಾಡಲಾಗಿದೆ. ಈ ಪುಸ್ತಕವನ್ನು ಹಿರಿಯ ಪತ್ರಕರ್ತ ನವೀನ್ ಸೂರಿಂಜೆಯವರು ಬರೆದಿದ್ದು, ಲಡಾಯಿ ಪ್ರಕಾಶನ ಹೊರತಂದಿದೆ.
‘ಮಹೇಂದ್ರ ಕುಮಾರ್ ನಡು ಬಗ್ಗಿಸದ ಎದೆಯ ದನಿ’
ಅಧ್ಯಾಯ : ಬ್ರಾಹ್ಮಣರ ಉದ್ಯೋಗಕ್ಕಾಗಿ ಏನೆಲ್ಲಾ
ಲೇಖಕರು : ನವೀನ್ ಸೂರಿಂಜೆ
ಪ್ರಕಾಶಕರು : ಬಸೂ, ಲಡಾಯಿ ಪ್ರಕಾಶನ, ಗದಗ
1999 ರಲ್ಲಿ ಮಹತ್ವದ ಬೈಠಕ್ ನಡೆಯಿತು. ನಾನು ಆ ಬೈಠಕ್‌ನ ಉಸ್ತುವಾರಿ ವಹಿಸಿಕೊಳ್ಳುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನಗೆ ಸೂಚಿಸಿತ್ತು. ಸಂಘಪರಿವಾರದ ಕಾರ್ಯಕರ್ತನೊಬ್ಬನೊಬ್ಬನಿಗೆ ಈ ರೀತಿ ಬೈಠಕ್‌ನ ಉಸ್ತುವಾರಿ ವಹಿಸುವುದೆಂದರೆ ಸ್ವರ್ಗಕ್ಕೆ ಮೂರೇ ಗೇಣು.
ಬೈಠಕ್ ಯಾವುದೇ ರೀತಿ ಕುಂದುಕೊರತೆ ಆಗದಂತೆ ವ್ಯವಸ್ಥೆ ಮಾಡಿದ್ದೆ. ಬೈಠಕ್‌ನಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರೀಯ, ರಾಜ್ಯ ಮುಖಂಡರುಗಳಿಗೆ ವಸತಿ, ಊಟ ವ್ಯವಸ್ಥೆಯ ಜೊತೆಗೆ ಅಚ್ಚುಕಟ್ಟಾಗಿ ಸಭೆಗಳಿಗೆ ವ್ಯವಸ್ತೆ ಮಾಡಿದ್ದೆ.
ಈ ಮಹತ್ವದ ಬೈಠಕ್‌ಗೆ ಭಜರಂಗದಳದ ರಾಷ್ಟ್ರೀಯ ಸಂಸ್ಥಾಪಕ ಸಂಚಾಲಕ ವಿನಯ್ ಕಟಿಯಾರ್, ಪ್ರಮೋದ್ ಮುತಾಲಿಕ್, ವಿಶ್ವ ಹಿಂದೂ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶೀ ಕೇಶವ ಹೆಗಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಚಾಲಕ ಡಾ ಶ್ರೀರಾಮ ಜೋಶಿ, ಕಲ್ಲಡ್ಕ ಪ್ರಭಾಕರ ಭಟ್, ಸುನೀಲ್ ಕುಮಾರ್ ಬಂದಿದ್ದರು. ವಿಶೇಷ ಎಂದರೆ ಅಂದಿನ ಬೈಠಕ್‌ನಲ್ಲಿ ನಾನು ಮತ್ತು ವಿನಯ್ ಕಟಿಯಾರ್ ಹೊರತುಪಡಿಸಿದರೆ ಉಳಿದವರಲ್ಲಿ ಹೆಚ್ಚಿನವರು ಬ್ರಾಹ್ಮಣರು. ರಾಷ್ಟ್ರ ಮಟ್ಟದಲ್ಲಿ ಭಜರಂಗದಳದ ಸ್ಥಾಪಕರಾದ ಅಧ್ಯಕ್ಷ ಕಟಿಯಾರ್ ಹಿಂದುಳಿದ ವರ್ಗದ ಕುರ್ಮಿ ಸಮುದಾಯಕ್ಕೆ ಸೇರಿದ್ದರೆ ನಾನು ಒಕ್ಕಲಿಗನಾಗಿದ್ದೆ. ಉಳಿದಂತೆ ಕೇಶವ ಹೆಗಡೆ, ರಾಮ ಜೋಶಿ, ಪ್ರಮೋದ್ ಮುತಾಲಿಕ್, ಪ್ರಭಾಕರ ಭಟ್ ಸೇರಿದಂತೆ ಬಹುತೇಕ ಪ್ರಮುಖರು ಬ್ರಾಹ್ಮಣರಾಗಿದ್ದರು. ಇದು ಯಾಕೆ ಇಷ್ಟೊಂದು ಪ್ರಮಾಣದಲ್ಲಿ ಬ್ರಾಹ್ಮಣ ನಾಯಕರೇ ಬಂದಿದ್ದಾರೆ ಎಂದು ನನಗೂ ಅರ್ಥವಾಗಲಿಲ್ಲ. ಅರ್ಥವಾಗುವಷ್ಟು ವಯಸ್ಸಾಗಲೀ, ಮೆದುಳು ಪ್ರಭುದ್ಧತೆಯನ್ನಾಗಲೀ ನನಗಿರಲಿಲ್ಲ. ಆ ಕುರಿತು ಯೋಚಿಸಲೂ ಆಗ ಮನಸಿರಲಿಲ್ಲ ಎಂಬುದೂ ಸತ್ಯವೇ.
ದತ್ತಪೀಠ ಹೋರಾಟ ಈ ವರೆಗೆ ನಡೆದುಕೊಂಡು ಬಂದ ರೀತಿ, ಭಜರಂಗದಳವನ್ನು ಕಟ್ಟಿದ ರೀತಿ, ಶೋಭಾಯಾತ್ರೆ, ಲಾಠಿಚಾರ್ಜ್ಗಳು, ಕೇಸುಗಳ ಮಧ್ಯೆಯೂ ನಡೆದ ದತ್ತಪೀಠ ಹೋರಾಟವನ್ನು ಕಲ್ಲಡ್ಕ ಪ್ರಭಾಕರ ಭಟ್ಟರು ಬೈಠಕ್ ನಲ್ಲಿ ಮಂಡಿಸಿದರು.
ಆ ಬಳಿಕ ಅಂದಿನ ಬೈಠಕ್ ಅನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಚಾಲಕ ಡಾ ಶ್ರೀರಾಮ ಜೋಶಿಯವರೇ ನಡೆಸಿಕೊಟ್ಟರು. ರಾಮ ಜೋಶಿಯವರು ಮಾತನಾಡುತ್ತಾ ‘ನಾವು ದತ್ತಪೀಠ ಹೋರಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಬೇಕಿದೆ. ಏನೇ ಹೋರಾಟ ಮಾಡಿದರೂ ದತ್ತಪೀಠ ಇನ್ನೂ ಮುಸಲ್ಮಾನರ ಕೈಯ್ಯಲ್ಲೇ ಇದೆ. ಒಮ್ಮೆಲೆ ನಾವು ಮುಸಲ್ಮಾರ ಕೈಯಿಂದ ಪಡೆಯುವುದು ಸಾಧ್ಯವಿಲ್ಲ. ಹಾಗೆ ಏಕಾಏಕಿ ಪಡೆಯುವುದೂ ಬೇಕಾಗಿಲ್ಲ. ಹಂತ ಹಂತವಾಗಿ ದತ್ತಪೀಠವನ್ನು ನಮ್ಮದಾಗಿಸಿಕೊಳ್ಳಬೇಕು’ ಎಂದರು.
ಮುಂದುವರೆದು ಮಾತನಾಡಿದ ಡಾ ಶ್ರೀರಾಮ ಜೋಶಿಯವರು ‘ನೋಡಿ, ಈಗ ದತ್ತಪೀಠದಲ್ಲಿ ದತ್ತ ಇದ್ದ ಎನ್ನುವುದಕ್ಕೆ ಕುರುಹುಗಳೂ ಇಲ್ಲ ಎಂದು ಹೇಳುತ್ತಿದ್ದೀರಿ. ದತ್ತಪೀಠದಲ್ಲಿ ಮುಸಲ್ಮಾನ್ ಮೌಲ್ವಿಗಳೇ ಪೂಜೆ ಮಾಡುತ್ತಿದ್ದಾರೆ. ಹಾಗಾಗಿ ನಾವು ದತ್ತಪೀಠದಲ್ಲಿ ಬ್ರಾಹ್ಮಣ ಅರ್ಚಕರನ್ನೂ ಪೂಜೆಗೆ ನೇಮಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಬೇಕು’ ಎಂದರು.
ಡಾ ಶ್ರೀರಾಮ ಜೋಶಿಯವರ ಮಾತು ಕೇಳಿ ನಮಗೂ ‘ಹೌದಲ್ವಾ?’ ಎಂದು ಅನ್ನಿಸಿತು. ದತ್ತಪೀಠ ನಮ್ಮದಾಗಬೇಕು ಎಂದರೆ ಮೊದಲ ಹಂತವಾಗಿ ಅಲ್ಲಿ ಬ್ರಾಹ್ಮಣ ಅರ್ಚಕರು ಪೂಜೆ ಮಾಡುತ್ತಿರಬೇಕು. ಮೌಲ್ವಿಗಳು ಬಾಬಾಬುಡನ್ ದರ್ಗಾಕ್ಕೆ ಪೂಜೆ ಮಾಡಲಿ, ಬ್ರಾಹ್ಮಣ ಅರ್ಚಕರು ದತ್ತನಿಗೆ ಪೂಜೆ ಮಾಡಲಿ ಎಂದುಕೊಂಡೆವು. ಸಂಘದ ಬಗ್ಗೆ ನಮಗೆ ಹೆಮ್ಮೆ ಅನ್ನಿಸಿತು. ನಾವು ಇನ್ನೂ ದತ್ತಪಾದುಕೆ ಅದೂ ಇದು ಅಂತ ನಕಲಿ ಮಾಡಿಕೊಂಡು ಹೋರಾಟ ಮಾಡುತ್ತಿರುವಾಗ ಸಂಘದ ಮುಖಂಡರು ಎಂಥಹಾ ಒಳ್ಳೆಯ ಸಬ್ಜೆಕ್ಟ್ ಕೊಟ್ಟರು ಎಂದು ಸಂಘದ ಬಗ್ಗೆ ಹೆಮ್ಮೆ ಅನ್ನಿಸಿತು.
‘ಅಲ್ಲಾ.. ಈ ದತ್ತಪೀಠಕ್ಕೆ ಬ್ರಾಹ್ಮಣ ಅರ್ಚಕರನ್ನೇ ಯಾಕೆ ನೇಮಿಸಬೇಕು ? ಅಲ್ಲೇನು ವಂಶಪಾರಂಪರ‍್ಯ ಅರ್ಚಕತನವಿಲ್ಲ. ಹಾಗಾಗಿ ಶೂದ್ರ, ದಲಿತರನ್ನೂ ಅರ್ಚಕರನ್ನಾಗಿ ನೇಮಿಸಬಹುದಲ್ವಾ ?’ ಎಂಬ ಪ್ರಶ್ನೆ ಆಗ ನಮಗ್ಯಾರಿಗೂ ಹೊಳೆದಿರಲಿಲ್ಲ.
ಬೈಠಕ್ ಮುಗಿಯುತ್ತಿದ್ದಂತೆ ದತ್ತಪೀಠಕ್ಕೆ ಬ್ರಾಹ್ಮಣ ಅರ್ಚಕರನ್ನು ನೇಮಿಸಿ ಎಂಬ ಹೋರಾಟವನ್ನು ಕೈಗೆತ್ತಿಕೊಂಡೆ. ತಿಂಗಳುಗಟ್ಟಲೆ ನಿರಂತರ ಹೋರಾಟ ನಡೆಯಿತು. ಹಲವು ಬಾರಿ ಲಾಠಿಚಾರ್ಜ್ ನಡೆಯಿತು. ನನ್ನ ಜೊತೆ ಇದ್ದ ಅವಳ್ಳಿ ಗಿರೀಶ್‌ಗೆ ಚೂರಿ ಇರಿತವಾಯಿತು. ಆ ಚೂರಿ ಇರಿತ ಹೇಗಾಯಿತು ಎಂಬುದೂ ನಮಗೆ ಗೊತ್ತಿರಲಿಲ್ಲ. ಮುಸಲ್ಮಾನರು ಚೂರಿ ಇರಿದರು ಎಂದು ಇನ್ನಷ್ಟೂ ಗದ್ದಲ ಮಾಡಿದೆವು. ಪೊಲೀಸರು ಬಂಧಿಸುವುದು, ಎರಡು ದಿನದಲ್ಲಿ ಜಾಮೀನು ಪಡೆದು ಬರುವುದು, ಮತ್ತೆ ಹೋರಾಟ ಮಾಡುವುದು ಸಾಮಾನ್ಯವಾಯಿತು. ಈ ರೀತಿ ತಿಂಗಳುಗಟ್ಟಲೆ ಲಾಠಿ ಏಟು ತಿಂದು ಹೋರಾಟ ನಡೆಸುತ್ತಿದ್ದೆವು.
ಅದೊಂದು ದಿನ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ನಮ್ಮ ಭಜರಂಗದಳದ ಹುಡುಗರು ಸಿಕ್ಕ ಸಿಕ್ಕ ಗೂಡಂಗಡಿಗಳಿಗೆ ಬೆಂಕಿ ಇಟ್ಟಿದ್ದರು. ಇಡೀ ಚಿಕ್ಕಮಗಳೂರು ಬೆಂಕಿಯಂತಾಗಿತ್ತು.
ಜಾತ್ಯಾತೀತ ಸರಕಾರವೇ ಅಲ್ಲಾಡಿಹೋಗುವಷ್ಟರ ಮಟ್ಟಿಗೆ ನಮ್ಮ ಹೋರಾಟ ಉಗ್ರ ಸ್ವರೂಪವನ್ನು ಪಡೆದಿತ್ತು. ಚಿಕ್ಕಮಗಳೂರಿಗೆ ಬೆಂಕಿ ಇಕ್ಕಿದ್ದ ಈ ಹೋರಾಟದ ನೇತೃತ್ವ ವಹಿಸಿ ನಾನು ಪಿನ್ ಟು ಪಿನ್ ಸಂಘದ ವರಿಷ್ಠರಿಗೆ ಮಾಹಿತಿ ನೀಡುತ್ತಿದ್ದೆನು.
ಭಜರಂಗದಳದ ಹುಡುಗರು ರಸ್ತೆ ಬದಿಯಲ್ಲಿ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸಲ್ಮಾರ ಮೇಲೆ ದಾಳಿ ನಡೆಸಿದರು. ಮುಸಲ್ಮಾನರ ತಳ್ಳು ಗಾಡಿಗಳಿಗೆ ಬೆಂಕಿ ಹಾಕಿದರು. ಇದ್ಯಾಕೋ ನನಗೆ ಸರಿ ಕಾಣಲಿಲ್ಲ. ‘ಬಡ ಮುಸ್ಲೀಮರಿಗೆ ತೊಂದರೆ ಕೊಡಬೇಡಿ. ಪಾಪ ದಿನ ಐವತ್ತು ರೂಪಾಯಿ ದುಡಿದು ಮನೆಗೆ ಕೊಂಡೊಯ್ಯವವರಿಗೆ ಏನೂ ಮಾಡಬೇಡಿ. ನಮ್ಮವರಿಗೆ ಚೂರಿ ಹಾಕಲು ಫಂಡಿಂಗ್ ಮಾಡ್ತಾರಲ್ಲ.. ಅಂತಹ ಮುಸ್ಲೀಮರನ್ನು ಟಾರ್ಗೆಟ್ ಮಾಡಿ’ ಎಂದೆ. ಬಡ ಮುಸ್ಲಿಂ ವ್ಯಾಪಾರಿಗಳ ರಕ್ಷಣೆಗೆಂದು ನಾನು ಅಷ್ಟೇ ಹೇಳಿದ್ದು, ಭಜರಂಗದಳದ ಹುಡುಗರು ಶ್ರೀಮಂತ ಮುಸ್ಲೀಮರನ್ನು ಟಾರ್ಗೆಟ್ ಮಾಡಿದರು. ಮುಸ್ಲೀಮರ ಸಾ ಮಿಲ್‌ಗಳು ಧಗಧಗನೇ ಉರಿಯಲಾರಂಬಿಸಿದವು. ಮರದ ವ್ಯಾಪಾರ ಮಾಡುತ್ತಿದ್ದ ಸಾ ಮಿಲ್‌ಗಳಿಗೆ ತೆರಳಿ ಬೆಂಕಿ ಇಟ್ಟರು. ದೊಡ್ಡ ದೊಡ್ಡ ಮರದ ದಿಮ್ಮಿಗಳು ಬೆಂಕಿ ಹತ್ತಿಸಿಕೊಂಡು ಅದರ ಕೆನ್ನಾಲಿಗೆ ಆಕಾಶ ಮುಟ್ಟಿತ್ತು. ಇಡೀ ಚಿಕ್ಕಮಗಳೂರು ಭಯಭೀತಗೊಂಡಿತ್ತು.
ಪೊಲೀಸರು ನನ್ನನ್ನೂ ಸೇರಿದಂತೆ ನೂರಾರು ಜನರನ್ನು ಬಂಧಿಸಿದರು. ಆಗ ಬಿಜೆಪಿ ಎಂಬುದು ಇರಲೇ ಇಲ್ವೇನೋ ಎಂಬಂತೆ ಇದ್ದ ಕಾಲವದು. ಪೊಲೀಸರು ನನ್ನನ್ನೂ ಸೇರಿದಂತೆ ಹಲವರಿಗೆ ಚಿತ್ರ ಹಿಂಸೆ ನೀಡಿದರು. ಅಂಗಾತ ಮಲಗಿಸಿ ಹೊಡೆದದ್ದಷ್ಟೋ.. ನಮ್ಮನ್ನೆಲ್ಲಾ ಒಂದೇ ಜೈಲಿಗೆ ಹಾಕಲು ಸಾಧ್ಯವಿರಲಿಲ್ಲ. ನನ್ನನ್ನು ಮತ್ತು ಒಟ್ಟು 20 ಮಂದಿ ತರೀಕೆರೆಯ ಭಜರಂಗದಳದ ಹುಡುಗರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ತಿಂಗಳುಗಟ್ಟಲೆ ಸೆರೆಮನೆ ವಾಸ ಅನುಭವಿಸಿದೆವು. ವಿಪರ್ಯಾಸ ಎಂದರೆ ನಾವು ಹೋರಾಟ ಮಾಡಿದ್ದು ದತ್ತಪೀಠದಲ್ಲಿ ಬ್ರಾಹ್ಮಣ ಅರ್ಚಕರನ್ನು ನೇಮಿಸಬೇಕು ಎಂದು ಆಗ್ರಹಿಸಿ ! ಆದರೆ ನಮ್ಮ ಹೋರಾಟದಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಭಾಗಿಯಾಗಿರಲಿಲ್ಲ. ಒಬ್ಬನೇ ಒಬ್ಬ ಬ್ರಾಹ್ಮಣ ಜೈಲು ಸೇರಿರಲಿಲ್ಲ. ಒಬ್ಬನೇ ಒಬ್ಬ ಬ್ರಾಹ್ಮಣನ ಮೇಲೆ ಕೇಸ್ ದಾಖಲಾಗಲಿಲ್ಲ !
ಬ್ರಾಹ್ಮಣ ಅರ್ಚಕರನ್ನು ದತ್ತಪೀಠದಲ್ಲಿ ಪೂಜೆಗೆ ನೇಮಿಸಲು ಹೋರಾಟ ಮಾಡಬೇಕು ಎಂದು ಬೈಠಕ್‌ನಲ್ಲಿ ನಿರ್ಣಯ ನಡೆಸಿದ್ದು ಬ್ರಾಹ್ಮಣ ಮುಖಂಡರು. ಅದನ್ನು ಜಾರಿ ಮಾಡಲು ಚಿಕ್ಕಮಗಳೂರಿಗೆ ಬೆಂಕಿ ಇಟ್ಟು ಕೋಮುಗಲಭೆ ಮಾಡಿಸಿದ್ದು ಭಜರಂಗದಳದ ಶೂದ್ರ ಹುಡುಗರು. ಆದರೆ ಕನಿಷ್ಠ ಜೈಲಿನಲ್ಲಿ ತಿಂಗಳುಗಟ್ಟಲೆ ಕೊಳೆಯುತ್ತಿದ್ದ ನಮ್ಮನ್ನು ಬಿಡುಗಡೆ ಮಾಡಿಸಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬ್ರಾಹ್ಮಣ ಮುಖಂಡರು ಓಡಾಡಲಿಲ್ಲ. ಕೊನೆಗೆ ಅಂದು ಯಾವುದೋ ಕಾರಣದಿಂದ ಗಲಭೆಯಿಂದ ಹೊರಗಿದ್ದ ಬೋಜರಾಜ್ ತನ್ನ ಕೈಯ್ಯಲ್ಲಿದ್ದ ಉಂಗುರು, ಮನೆಯ ಮಹಿಳೆಯರ ಮೈಮೇಲಿದ್ದ ಆಭರಣವನ್ನು ಅಡವಿಟ್ಟು ವಕೀಲರಿಗೆ ಫೀಸ್ ನೀಡಿ ನಮ್ಮನ್ನು ಜಾಮೀನಿನ ಮೂಲಕ ಹೊರ ತಂದರು.
ಇಷ್ಟಾದರೂ ನಮ್ಮ ಹಿಂದುತ್ವದ ಅಮಲು ಇಳಿದಿರಲಿಲ್ಲ. ಜೈಲಿನಿಂದ ಹೊರ ಬಂದು ಮತ್ತೆ ‘ದತ್ತ ಪೀಠದಲ್ಲಿ ಪೂಜೆಗೆ ಬ್ರಾಹ್ಮಣ ಅರ್ಚಕರನ್ನು ನೇಮಿಸಬೇಕು’ ಎಂದು ಆಗ್ರಹಿಸಿ ಹೋರಾಟಗಳು ಮುಂದುವರೆದವು.