ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯ ಸದಸ್ಯರಾಗಿ ಇಂದು ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
ಕೈಯಲ್ಲಿ ಭಾರತದ ಸಂವಿಧಾನದ ಪ್ರತಿ ಹಿಡಿದು ಹಿಂದಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ 52 ವರ್ಷದ ಪ್ರಿಯಾಂಕಾ ಗಾಂಧಿ, ಅಧಿಕೃತವಾಗಿ ಲೋಕಸಭೆ ಪ್ರವೇಶಿಸಿದರು. ಪ್ರಿಯಾಂಕಾ ಪ್ರತಿಜ್ಞಾ ವಿಧಿ ಸ್ವೀಕಾರದ ಮೂಲಕ ಗಾಂಧಿ ಕುಟುಂಬದ ಘಟಾನುಘಟಿಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಳಿಕ ಮೂರನೇ ವ್ಯಕ್ತಿ ಪ್ರಸ್ತುತ ಸಂಸತ್ ಸದಸ್ಯರಾದಂತಾಗಿದೆ.
ಪ್ರಿಯಾಂಕಾ ಗಾಂಧಿಯವರು 2019ರಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದರು. ನಂತರ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಐದು ವರ್ಷಗಳ ನಂತರ, ಇದೀಗ ಪ್ರಿಯಾಂಕಾ ಗಾಂಧಿ ಚುನಾಯಿತ ಜನಪ್ರತಿನಿಧಿಯಾಗಿ ರಾಜಕೀಯದ ಹೊಟ ಮೆಟ್ಟಿಲೇರಿದ್ದಾರೆ.
ನವೆಂಬರ್ 23ರಂದು ಪ್ರಕಟಗೊಂಡ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದಲ್ಲಿ ಬರೋಬ್ಬರಿ 4.1 ಲಕ್ಷಕ್ಕೂ ಹೆಚ್ಚು ಮತಗಳ ಭಾರೀ ಅಂತರದಿಂದ ಪ್ರಿಯಾಂಕಾ ಗಾಂಧಿ ಗೆಲುವು ದಾಖಲಿಸಿದ್ದರು. ಈ ಮೂಲಕ ಸಹೋದರ ರಾಹುಲ್ ಗಾಂಧಿಯ ದಾಖಲೆಯನ್ನು ಸರಿಗಟ್ಟಿದ್ದರು.
ರಾಹುಲ್ ಗಾಂಧಿ ಪ್ರಸ್ತುತ ಲೋಕಸಭೆಯ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರ ಜೊತೆ ಸಹೋದರಿಯೂ ಸಂಸತ್ ಪ್ರವೇಶಿಸುರುವುದು ಕಾಂಗ್ರೆಸ್‌ಗೆ ಅಥವಾ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಬಲ ಬಂದಂತಾಗಿದೆ.
ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಚವಾಣ್ ಕೂಡ ಇಂದು ಸಂಸತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ತಂದೆ ವಸಂತರಾವ್ ಚವಾಣ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ರವೀಂದ್ರ ಚವಾಣ್ ಸ್ಪರ್ಧಿಸಿ ಗೆದ್ದಿದ್ದಾರೆ.