ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್, ಮಂಗಳೂರು, ಸುರತ್ಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಶಾಂತಿಯುತ ಧರಣಿ ನಡೆಸಿದ್ದು ಅಪರಾಧ ಅಂತ ಹೇಳಿ ಮೊಕದ್ದಮೆ ಹೂಡಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ “ಮುನೀರ್ ಕಾಟಿಪಳ್ಳ” ಎಂದು ಒಂದು ಹೆಸರನ್ನು ಮಾತ್ರ ಉಲ್ಲೇಖಿಸಿ ಸ್ವಯಂಪ್ರೇರಿತ FIR ಹಾಕಿದ್ದಾರೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಅವರು ಆರೋಪಿಸಿದ್ದಾರೆ.
ಮುನೀರ್ ಕಾಟಿಪಳ್ಳ ಈಗ ಮಂಗಳೂರು ಕಮೀಷನರ್ ಅವರಿಗೆ ಟಾರ್ಗೆಟ್, ಆ ಮೂಲಕ ಮಂಗಳೂರಿನ ಜನಪರ ಚಳವಳಿಗಳನ್ನು ಬೆದರಿಸುವ, ಬಾಯಿ ಮುಚ್ಚಿಸುವ ಯತ್ನ ನಡೆಸುತ್ತಿದ್ದಾರೆ. ಇದು ಬಿಜೆಪಿ ಶಾಸಕರುಗಳ ನಿರ್ದೇಶನದಂತೆ ನಡೆಯುತ್ತಿದೆ ಎಂಬುದರಲ್ಲಿ ಅನುಮಾನ ಇಲ್ಲ ಎಂದು ಅವರು ಆರೋಪ ಮಾಡಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಹೆದ್ದಾರಿ ಸಮಸ್ಯೆಗಳ ಕುರಿತು ಸಾಮೂಹಿಕ ಧರಣಿಯಲ್ಲಿ ಧ್ಚನಿವರ್ಧಕ ಬಳಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ರೀತಿ ತಿರಸ್ಕರಿಸಲು ಪೊಲೀಸರಿಗೆ ಯಾವುದೇ ಅಧಿಕಾರ ಇಲ್ಲ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸುವುದು ನಾಗರಿಕರ ಸಂವಿಧಾನ ಬದ್ದ ಹಕ್ಕು. ಅದನ್ನು ನಿರಾಕರಿಸುವುದು ಅಪರಾಧವೇ ಹೊರತು, ಧರಣಿ ನಡೆಸುವುದಲ್ಲ. ವಿನಾ ಕಾರಣ ಅನುಮತಿ ನಿರಾಕರಿಸುವ ಮೂಲಕ ಕಮೀಷನರ್ ತಪ್ಪೆಸಗಿದ್ದಾರೆ ಎಂದು ಪೊಲೀಸ್ ಕಮೀಷನರ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಅನುಮತಿ ನಿರಾಕರಿಸಿದ ಕಾರಣ ನಾವು ಧ್ವನಿ ವರ್ಧಕ ಬಳಸುತ್ತಿಲ್ಲ, ಶಾಮಿಯಾನ ಹಾಕಲಿಲ್ಲ. ಪೊಲೀಸರಿಗೆ ತಿಳಿಸಿಯೇ ಹೆದ್ದಾರಿ ಬದಿಯ ವಿಶಾಲವಾದ ಖಾಲಿ ಜಾಗದಲ್ಲಿ ಉರಿ ಬಿಸಿಲಿನಲ್ಲಿ ಕೂತು ಧರಣಿ ನಡೆಸಿದ್ದೇವೆ. ಅದು ಹೇಗೆ ಅಪರಾಧ ಆಗುತ್ತದೆ ? ಸ್ಥಳದಲ್ಲಿ ನಿಷೇಧಾಜ್ಞೆ ಇರಲಿಲ್ಲ, ಪ್ರತಿಭಟನೆಗಳಿಗೆ ನಿಷೇಧಿಸಲ್ಪಟ್ಟ ಸ್ಥಳಗಳ ಪಟ್ಟಿಯಲ್ಲೂ ಧರಣಿ ನಡೆಸಿದ ಪ್ರದೇಶ ಇರಲಿಲ್ಲ. ಧರಣಿಯಿಂದ ತೊಂದರೆ ಆಗಿದೆ ಅಂತ ಯಾರೂ ಪೊಲೀಸರಲ್ಲಿ ದೂರು ನೀಡಿಲ್ಲ. ಹಾಗಿರುತ್ತಾ FIR ಹಾಕಿರುವುವುದು ಹೇಗೆ ? ನಮ್ಮ ಘೋಷಣೆ, ಬೇಡಿಕೆಗಳನ್ನು ಪೊಲೀಸರು FIR ಹಾಳೆಯಲ್ಲಿ ಹಾಕಿದ್ದಾರೆ. ಅದರಲ್ಲಿ ಅಪರಾಧದ ಅಂಶಗಳು ಯಾವುದಿದೆ ? ಎಂದು ಪ್ರಶ್ನಿಸಿದ್ದಾರೆ.
ಜನ ಸಾಮಾನ್ಯರ ಬದುಕಿನ ಪ್ರಶ್ನೆಗಳ ಮೇಲೆ ಹೋರಾಟ, ಪ್ರತಿಭಟನೆಗಳು ನಡೆಯಲು ಅವಕಾಶ ಕೊಡುವುದಿಲ್ಲ, ಬಿಜೆಪಿ ಶಾಸಕ, ಸಂಸದರ ವಿರುದ್ಧ ಧ್ವನಿ ಎತ್ತಲು ಅವಕಾಶ ಕೊಡುವುದಿಲ್ಲ ಎಂದು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ನಿರ್ಧರಿಸಿದಂತಿದೆ. ಅದಕ್ಕಾಗಿ ಹೋರಾಟ ಸಮಿತಿಯ ಸಂಚಾಲಕನಾದ ನನ್ನೊಬ್ಬನನ್ನು (ಮುನೀರ್ ಕಾಟಿಪಳ್ಳ) ಆರೋಪಿಯಾಗಿಸಿ FIR ಹಾಕಿದ್ದಾರೆ. FIR ಗಳಿಗೆ ಹೆದರುವ ಪ್ರಶ್ನೆ ಇಲ್ಲ. ಜನರ ಪರವಾದ ಹೋರಾಟಗಳು ಮುಂದುವರಿಯುತ್ತದೆ. ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕಾಗಿಯೂ ಹೋರಾಟ ಮುಂದುವರಿಯಲಿದೆ. ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಡ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಮಂಗಳೂರಿನ ಜನ ಚಳವಳಿಗಳ ಇತಿಹಾಸ ಗೊತ್ತಿಲ್ಲದವರು, ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳ ಕುರಿತು ಕುರುಡಾಗಿರುವವರು ಮಾತ್ರ ಕಮೀಷನರ್ ಅಗರ್ ವಾಲ್ ತರ ನಡೆದುಕೊಳ್ಳಲು ಸಾಧ್ಯ. ಅಗರ್ ವಾಲ್ ಅವರಿಗೆ ಕಾನೂನು, ಸಂವಿಧಾನದ ಕುರಿತು ಅರಿವಿನ ಕೊರತೆ ಇದೆ. ಅಥವಾ ನಾನು ಅದನ್ನು ಮೀರಿದವನು ಎಂಬ ಅಹಂ ಇದೆ. ಪೊಲೀಸ್ ಕಮೀಷನರ್ ಅವರ ಈ ಅತಿರೇಕದ ನಡವಳಿಕೆಯ ವಿರುಧ್ಧವೂ ಹೋರಾಟ ನಡೆಯಲಿದೆ. ತಡೆಯುವುದಾದರೆ ತಡೆಯಲಿ. ಸರಕಾರ ಇಂತಹ ಜನವಿರೋಧಿ ಅಧಿಕಾರಿಯನ್ನು ತಕ್ಷಣ ವರ್ಗಾಯಿಸಬೇಕು ಎಂದೂ ನಾವು ಆಗ್ರಹಿಸುತ್ತೇವೆ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಮೀಷನರ್ ಅಗರವಾಲ್ ಅವರೆ, ಹದಿನೈದು ದಿನದಲ್ಲಿ ಎರಡು FIR ಹಾಕಿದ್ದೀರಿ. ಯಾವಾಗ ಬಂಧಿಸುತ್ತೀರಿ ಹೇಳಿ, ನಿಮ್ಮ ಮುಂದೆ ಹಾಜರಾಗುತ್ತೇವೆ ಎಂದು ಕಮೀಷನರ್ ಅವರಿಗೆ ನೇರ ಪ್ರಶ್ನೆ ಇಟ್ಟಿದ್ದಾರೆ.