ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಮರಳುವ ಹಾದಿಯಲ್ಲಿ ಕಾಂಗ್ರೆಸ್ ಮುನ್ನಡೆಯುತ್ತಿದೆ. 68 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವು 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರ ಹಿಡಿಯುವತ್ತ ದಿಟ್ಟ ಹೆಜ್ಜೆಯನ್ನಿರಿಸಿದೆ.
ಇತ್ತ ಬಿಜೆಪಿ 17ಸ್ಥಾನ ಗೆದ್ದು 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವತಂತ್ರ ಅಭ್ಯರ್ಥಿಗಳು ಮೂವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಭೂಪಿಂದರ್ ಬಘೇಲ್, ಭೂಪಿಂದರ್ ಹೂಡಾ, ಮತ್ತು ರಾಜೀವ್ ಶುಕ್ಲಾ ಈಗ ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದಾರೆ.
ಸಿಎಂ ಜೈರಾಮ್ ಠಾಕೂರ್ ರಾಜೀನಾಮೆ:
ಜನಾದೇಶವನ್ನು ಗೌರವಿಸುತ್ತೇನೆ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ವರಿಷ್ಠರಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ರಾಜಕೀಯ ಬದಿಗೊತ್ತಿ ರಾಜ್ಯದ ಅಭಿವೃದ್ಧಿಗೆ ಬದ್ಧನಾಗಿರುವುದಾಗಿ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೈರಾಮ್ ಠಾಕೂರ್ ಗುರುವಾರ ಹೇಳಿದ್ದಾರೆ.
ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ!
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೂತನ ಸರ್ಕಾರ ರಚಿಸಲಿದೆ ಎಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಗುರುವಾರ ಹೇಳಿದ್ದಾರೆ.
ಆಡಳಿತ ವೈಫಲ್ಯವೇ ಬಿಜೆಪಿ ಸೋಲಿಗೆ ಕಾರಣ!
2017ರಲ್ಲಿ ಬಿಜೆಪಿ 44 ಸ್ಥಾನ ಹಾಗೂ ಕಾಂಗ್ರೆಸ್ 21 ಸ್ಥಾನ ಗಳಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತ ವೈಫಲ್ಯ, ಪಕ್ಷದೊಳಗೆ ಎದ್ದ ಬಂಡಾಯ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಆಪರೇಷನ್ ಕಮಲ ಭೀತಿ : ಶಾಸಕರ ಸ್ಥಳಾಂತರಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ!
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದು, ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ತನ್ನ ಶಾಸಕರಿಗೆ ಆಪರೇಷನ್ ಕಮಲದ ಗಾಳ ಹಾಕಬಹುದು ಎಂಬ ಕಾರಣಕ್ಕೆ ಎಲ್ಲ ಶಾಸಕರಿಗೂ ಚಂಡೀಗಢಕ್ಕೆ ತೆರಳುವಂತೆ ಹೈಕಮಾಂಡ್ ಸೂಚನೆ ನೀಡಿದೆ.