Tuesday, February 10, 2026

ಸತ್ಯ | ನ್ಯಾಯ |ಧರ್ಮ

ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ಸಚಿವರ ದರ್ಜೆ! ನಿಗಮ-ಮಂಡಳಿ ನೇಮಕಾತಿಯಲ್ಲಿ ಬಹಿರಂಗವಾದ ಕಾಂಗ್ರೆಸ್–ಬಿಜೆಪಿ ‘ಅಡ್ಜಸ್ಟ್‌ಮೆಂಟ್ ರಾಜಕಾರಣ’

ಕಾಂಗ್ರೆಸ್ ಸರ್ಕಾರದ ನಿಗಮ–ಮಂಡಳಿ ನೇಮಕಾತಿಗಳಲ್ಲಿ ರಾಜಕೀಯ ಅಚ್ಚರಿ ಪ್ರಕರಣವೊಂದು ಬಹಿರಂಗವಾಗಿದೆ. ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ಕ್ರಮ ಸಂಖ್ಯೆ 54ರಲ್ಲಿ ಶಿಕಾರಿಪುರದ ಬಿಜೆಪಿ ಮುಖಂಡ ಭೂಕಾಂತ್ ಅವರನ್ನು ನಿಗಮ/ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಜೊತೆಗೆ ಅವರಿಗೆ ರಾಜ್ಯ ಸಚಿವರ ದರ್ಜೆ ಕೂಡ ನೀಡಲಾಗಿದೆ. ಇದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಾಜಕೀಯ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಭೂಕಾಂತ್ ಅವರು ಸಕ್ರಿಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಮುಖಂಡರು. ಅವರ ಧರ್ಮಪತ್ನಿ ಕೂಡ ಬಿಜೆಪಿಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಅಲ್ಲದೇ, ಭೂಕಾಂತ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯಕ್ಕೆ ಸೇರಿದವರು ಎಂಬುದು ರಾಜಕೀಯ ವಲಯದಲ್ಲಿ ಬಹಿರಂಗ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸಭಾ ಚುನಾವಣೆಯಲ್ಲೂ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್
ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಸಹ ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಗೌಡರಿಗೆ ಟಿಕೆಟ್ ಕೈ ತಪ್ಪಿದ್ದರ ಹಿಂದೆಯೂ ಇದೇ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಇದೆ ಎನ್ನಲಾಗಿದೆ. ಪ್ರಸ್ತುತ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿರುವ ಬಿವೈ ವಿಜಯೇಂದ್ರ ಅವರ ಎದುರು ಎರಡನೇ ಸ್ಥಾನಕ್ಕೆ ಬಂದು ಸೋತ ನಾಗರಾಜ್ ಗೌಡ, ಕಾಂಗ್ರೆಸ್ ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅವರ ಬದಲಾಗಿ ದುರ್ಬಲ ಅಭ್ಯರ್ಥಿಯನ್ನು ವಿಜಯೇಂದ್ರ ಎದುರು ಹಾಕಿ, ವಿಜಯೇಂದ್ರ ಗೆಲುವಿಗೆ ಪರೋಕ್ಷ ಕಾರಣವಾಗಿತ್ತು. ಸಧ್ಯ ನಿಗಮ ಮಂಡಳಿ ಆಯ್ಕೆಯ ವಿಚಾರದಲ್ಲೂ ಯಡಿಯೂರಪ್ಪ ಕುಟುಂಬದ ಆಪ್ತ ಡಾ.ಭೂಕಾಂತ್ ಅವರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ ನೀಡಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಿದ್ಧಾಂತಕ್ಕಿಂತ ಹೊಂದಾಣಿಕೆ ಮುಖ್ಯವೇ?
ಕಾಂಗ್ರೆಸ್ ಅಧಿಕಾರದಲ್ಲಿದ್ದರೂ, ಬಿಜೆಪಿ ಹಿನ್ನೆಲೆಯ ನಾಯಕರಿಗೆ ಗೌರವಾನ್ವಿತ ಹುದ್ದೆಗಳು ಲಭಿಸುತ್ತಿರುವುದು ಪಕ್ಷದೊಳಗೆ ಅಸಮಾಧಾನವನ್ನು ಹೆಚ್ಚಿಸಿದೆ. ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಮತ್ತು ನಿಷ್ಠಾವಂತ ನಾಯಕರನ್ನು ಬದಿಗೊತ್ತಲ್ಪಟ್ಟು, ರಾಜಕೀಯ ಹೊಂದಾಣಿಕೆಗಳ ಮೂಲಕ ಬಿಜೆಪಿ ಮುಖಂಡರಿಗೆ ಮಣೆ ಹಾಕಲಾಗಿದೆಯೇ? ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ಕಾರ್ಯಕರ್ತರಲ್ಲಿ ಅಸಮಾಧಾನ
ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದ ನೆಲಮಟ್ಟದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. “ಬಿಜೆಪಿಯಿಂದ ಬಂದವರಿಗೆ ಮಂತ್ರಿಗಳ ದರ್ಜೆ, ಆದರೆ ಕಾಂಗ್ರೆಸ್‌ಗೆ ದುಡಿದವರಿಗೆ ಕಡೆಗಣನೆ – ಇದು ಯಾವ ನ್ಯಾಯ?” ಎಂಬ ಪ್ರಶ್ನೆ ಪಕ್ಷದೊಳಗೆ ಗಟ್ಟಿಯಾಗುತ್ತಿದೆ.

ಈ ನೇಮಕಾತಿ, ಕಾಂಗ್ರೆಸ್ ಸರ್ಕಾರದ ಸಿದ್ಧಾಂತಾಧಾರಿತ ರಾಜಕಾರಣದ ಮೇಲೆಯೇ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದ್ದು, ಮುಂದೆ ಇದು ರಾಜಕೀಯವಾಗಿ ದೊಡ್ಡ ವಿವಾದವಾಗಿ ರೂಪುಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page