ಜಮ್ಮು: “ಕಾಂಗ್ರೆಸ್ ಪಕ್ಷವನ್ನು ನಮ್ಮ ರಕ್ತ ಬಸಿದು ಕಟ್ಟಿದ್ದೇವೇ ಹೊರತು ಕಂಪ್ಯೂಟರಿಗಳಿಂದಲೋ, ಟ್ವಿಟರುಗಳಿಂದಲೋ ಕಟ್ಟಲಿಲ್ಲ. ಕೆಲವರು ನಮ್ಮ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಕಂಪ್ಯೂಟರು ಮತ್ತು ಟ್ವೀಟುಗಳಿಗಷ್ಟೇ ಸೀಮಿತವಾಗಲಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ತಳಮಟ್ಟದಲ್ಲಿ ಎಲ್ಲೂ ಕಾಣಿಸುವುದಿಲ್ಲ” ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರನಾಯಕ ಗುಲಾಮ್ ನಬಿ ಆಜಾದ್ ಕಿಡಿ ಕಾರಿದ್ದಾರೆ.
ಜಮ್ಮುವಿನಲ್ಲಿ ಇಂದು ನಡೆದ ತಮ್ಮ ಬೆಂಬಲಿಗರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತಾಡಿದ ಗುಲಾಂ ನಬಿ ಆಜಾದ್ ತಾವು ಬಿಟ್ಟು ಹೋಗಿರುವ ಕಾಂಗ್ರೆಸ್ ಪಕ್ಷದ ಕುರಿತು ತೀವ್ರ ಟೀಕಾ ಪ್ರಹಾರ ನಡೆಸಿದ್ದು, “ಕಾಂಗ್ರೆಸ್ ಜನರು ಈಗ ಬಸ್ಸುಗಳಲ್ಲಿ ಜೈಲಿಗೆ ಹೋಗುತ್ತಾರೆ, ಡಿಜಿಪಿ, ಕಮಿಷನರುಗಳಿಗೆ ಮಾತನಾಡಿ ತಮ್ಮ ಹೆಸರುಗಳನ್ನು ಬರೆಸಿ ಒಂದು ಗಂಟೆಯಲ್ಲಿ ಹೊರಬರುತ್ತಾರೆ. ಹೀಗಾಗಿಯೇ ಕಾಂಗ್ರೆಸ್ ಬೆಳೆಯಲು ಸಾಧ್ಯವಾಗಿಲ್ಲʼ ಎಂದವರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ತೊರೆದಿರುವ ಆಜಾದ್ ತಮ್ಮ ಮುಂದಿನ ನಡೆಯ ಕುರಿತು ಮಾಹಿತಿ ನೀಡಿ, ನಾನು ಹೊಸ ಪ್ರಾದೇಶಿಕ ಪಕ್ಷ ಕಟ್ಟಲಿದ್ದು ಅದರ ಹೆಸರನ್ನು ಇನ್ನೂ ನಿರ್ಧರಿಸಿಲ್ಲ, ಜಮ್ಮು ಕಾಶ್ಮೀರದ ಜನರು ಅದರ ಹೆಸರು ಮತ್ತು ಬಾವುಟನ್ನು ನಿರ್ಧರಿಸಲಿದ್ದಾರೆʼ ಎಂದು ತಿಳಿಸಿದ್ದಾರೆ. “ನನ್ನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರನ್ನು ನೀಡಲಿದ್ದೇನೆ” ಎಂದಿದ್ದಾರೆ. ಜಮ್ಮೂ ಕಾಶ್ಮೀರದ ಪೂರ್ಣ ರಾಜ್ಯ ಸ್ಥಾನಮಾನ ಮರಳಿ ಪಡೆಯುವ ಬಗ್ಗೆ ನನ್ನ ಪಕ್ಷ ಗಮನ ಕೇಂದ್ರೀಕರಿಸಿಲಿದೆಯಲ್ಲದೇ ಸ್ಥಳೀಯರಿಗೆ ಭೂಮಿ ಮತ್ತು ಉದ್ಯೋಗ ಹಕ್ಕಿನ ಕುರಿತು ಹೋರಾಡಲಿದೆ ಎಂದು ಈ ಮಾಜಿ ಕಾಂಗ್ರೆಸ್ ಧುರೀಣ ತಿಳಿಸಿದ್ದಾರೆ.