ಟಿವಿಕೆ ವಿಜಯ್: ತಮಿಳುನಾಡಿನಲ್ಲಿ ನಟ ವಿಜಯ್ ಸ್ಥಾಪಿಸಿರುವ ಟಿವಿಕೆ (TVK) ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲವೇ? ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಇತ್ತೀಚೆಗೆ ನೀಡಿದ ಪ್ರತಿಕ್ರಿಯೆಯೇ ಇದಕ್ಕೆ ಸಾಕ್ಷಿಯಾಗಿದೆ.
ತಮಗೆ ಟಿವಿಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ಪಕ್ಷಕ್ಕೆ ರಾಹುಲ್ ಗಾಂಧಿಯೇ ‘ಬೂಸ್ಟ್ ಮತ್ತು ಹಾರ್ಲಿಕ್ಸ್’ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಜೊತೆಗೂಡಿ ಸಾಗಲು ಸಿದ್ಧವಿರುವುದಾಗಿ ಘೋಷಿಸಿದ್ದರು.
“ಕಾಂಗ್ರೆಸ್ ಪಕ್ಷಕ್ಕೆ ಒಂದು ಇತಿಹಾಸ ಮತ್ತು ಪರಂಪರೆ ಇದೆ. ಆ ಪಕ್ಷದ ಪುನರುಜ್ಜೀವನಕ್ಕೆ ಬೆಂಬಲ ನೀಡಲು ವಿಜಯ್ ಸಿದ್ಧರಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳಬೇಕೋ, ಬೇಡವೋ ಎಂಬುದು ಕಾಂಗ್ರೆಸ್ ಕೈಯಲ್ಲಿದೆ. ತಮಿಳುನಾಡಿನಲ್ಲಿ ಆ ಪಕ್ಷ ರಾಜಕೀಯವಾಗಿ ಚೇತರಿಸಿಕೊಳ್ಳಲು ಕಷ್ಟಪಡುತ್ತಿದೆ,” ಎಂದು ಚಂದ್ರಶೇಖರ್ ಹೇಳಿದ್ದರು. ಆದರೆ, ಈ ಹೇಳಿಕೆಗಳಿಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಪ್ರತಿಕ್ರಿಯೆ ನೀಡಿದ್ದು, ವಿಜಯ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, “ಒಮ್ಮೆ ನಮ್ಮ ಪಕ್ಷದ ಕಾರ್ಯಕರ್ತರನ್ನು ನೋಡಿ. ಅವರು ಈಗಾಗಲೇ ಸಾಕಷ್ಟು ಉತ್ಸಾಹದಲ್ಲಿದ್ದಾರೆ. ನಮ್ಮ ಪಕ್ಷಕ್ಕೆ ಅಗತ್ಯವಿರುವ ಬೂಸ್ಟ್, ಹಾರ್ಲಿಕ್ಸ್ ಮತ್ತು ಬೋರ್ನ್‌ವಿಟಾ ನೀಡಲು ರಾಹುಲ್ ಗಾಂಧಿ ಇದ್ದಾರೆ,” ಎಂದು ಹೇಳಿದರು. ಅಂದರೆ ಸದ್ಯಕ್ಕೆ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಆಲೋಚನೆ ಇಲ್ಲ ಎಂದು ಅವರು ತಿಳಿಸಿದರು.
ಇನ್ನೊಂದೆಡೆ, ಈ ವಿಷಯದ ಬಗ್ಗೆ ಟಿವಿಕೆ ಪರವಾಗಿ ವಿಜಯ್ ಆಗಲಿ ಅಥವಾ ಇತರ ನಾಯಕರಾಗಲಿ ಪ್ರತಿಕ್ರಿಯಿಸಿಲ್ಲ. ಇನ್ನು, ಬಹುಕಾಲದಿಂದ ಡಿಎಂಕೆ (DMK) ಜೊತೆ ಮೈತ್ರಿ ಹೊಂದಿದ್ದ ಕಾಂಗ್ರೆಸ್‌ಗೆ ಈ ಬಾರಿ ಆ ಅವಕಾಶ ಸಿಗುವಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಡಿಎಂಕೆ ಅಷ್ಟೇನೂ ಒಲವು ತೋರುತ್ತಿಲ್ಲ. ಹಾಗಂತ ಕಾಂಗ್ರೆಸ್ ಸ್ವಂತ ಬಲದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಧ್ಯತೆಯೂ ಕಡಿಮೆ ಇದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಯಾರಾದರೊಬ್ಬರ ಜೊತೆ ಮೈತ್ರಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.
