ಬೆಂಗಳೂರು: ಕಾಂಗ್ರೆಸ್ ಪಕ್ಷದವರು ಅಧಿಕಾರದಲ್ಲಿದ್ದಾಗ ಪತ್ರಕರ್ತರಿಗೆ ಐ ಫೋನ್, ಲ್ಯಾಪ್ ಟಾಪ್, ಗೋಲ್ಡ್ ಕಾಯ್ನ್ ಗಿಫ್ಟ್ ಕೊಟ್ಟಿದ್ದಾರೆ. ಅವರಿಗೆ ಯಾವ ನೈತಿಕ ಹಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ದೀಪಾವಳಿ ಸಿಹಿತಿಂಡಿಯ ಗಿಫ್ಟ್ ನೊಂದಿಗೆ ಲಕ್ಷಗಟ್ಟಲೆ ಹಣ ಕೊಟ್ಟಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳು, ಹಣ ನೀಡುವಂತೆ ತಾವು ಯಾರಿಗೂ ನಿರ್ದೇಶನ ನೀಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
ದೀಪಾವಳಿ ಉಡುಗೊರೆಯಾಗಿ ಹಣ ಕೊಟ್ಟ ಹಗರಣದ ಕುರಿತು ‘ಪೀಪಲ್ ಮೀಡಿಯಾ’ ಶುಕ್ರವಾರ ಸ್ಫೋಟಕ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದ್ದು, ಪತ್ರಕರ್ತರಿಗೆ ಹಣ ನೀಡುವ ಮೂಲಕ ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿತ್ತು. ಪತ್ರಕರ್ತರಿಗೆ ಭಕ್ಷೀಸು ಹಗರಣದ ಕುರಿತು ಜನಾಧಿಕಾರ ಸಂಘರ್ಷ ಪರಿಷತ್ ಲೋಕಾಯುಕ್ತರಿಗೆ ದೂರು ಕೂಡ ಸಲ್ಲಿಸಿದೆ.
ಈಗಾಗಲೇ ಲೋಕಾಯುಕ್ತ ಮುಂದೆ ಪ್ರಕರಣ ಇದೆ. ಹೀಗಾಗಿ ಬೇರೆ ರೀತಿಯ ತನಿಖೆ ಅಗತ್ಯವಿಲ್ಲ. ಲೋಕಾಯುಕ್ತ ತನಿಖೆ ನಡೆಯಲಿ, ಸತ್ಯಾಂಶ ಹೊರಗೆ ಬರಲಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪತ್ರಕರ್ತರಿಗೆ ಭಕ್ಷೀಸು ಪ್ರಕರಣ ಕಾಂಗ್ರೆಸ್ ಪಕ್ಷದ ಟೂಲ್ ಕಿಟ್ ಎಂದು ಟೀಕಿಸಿದ ಅವರು, ಕಾಂಗ್ರೆಸ್ ವಕ್ತಾರರು ನೀಡಿರುವ ಹೇಳಿಕೆಯನ್ನು ಖಂಡಿಸಿದರು.
ಭಾರತೀಯ ಜನತಾ ಪಕ್ಷ ಹಿಂದುಳಿದವರ, ಎಸ್ ಟಿ , ಎಸ್ ಟಿ ಹಾಗಯ ಮಹಿಳೆಯರ ಸಮಾವೇಶಗಳನ್ನು ಆಯೋಜಿಸುತ್ತಿದ್ದು, ಗುಲ್ಬರ್ಗದಲ್ಲಿ ನಡೆಯುತ್ತಿರುವ ಹಿಂದುಳಿದವರ ಸಮಾವೇಶದಲ್ಲಿ ಎರಡು ಲಕ್ಷ ಜನರು ಸೇರಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.