ಬೆಂಗಳೂರು: ದೀಪಾವಳಿ ನೆಪದಲ್ಲಿ ಆಯ್ದ ಪತ್ರಕರ್ತರಿಗೆ ಲಕ್ಷಗಟ್ಟಲೆ ಗಿಫ್ಟ್ ನೀಡಿದ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿಯವರನ್ನು ಬಲಿಪಶು ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇಂದು ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪತ್ರಕರ್ತರಿಗೆ ಹಣ ನೀಡಲು ತಾವು ಸೂಚನೆ ನೀಡಿರಲಿಲ್ಲ ಎಂದು ಹೇಳಿರುವುದು ಮಾಧ್ಯಮ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ಆಯ್ದ ಪತ್ರಕರ್ತರಿಗೆ ನೀಡಲಾದ ಹಣವನ್ನು ತಮ್ಮ ಮನೆಯಿಂದ ತಂದು ಕೊಟ್ಟಿರುತ್ತಾರೆಯೇ? ಅವರು ತಮಗೆ ಕೊಟ್ಟ ನಿರ್ದೇಶನವನ್ನೇ ಪಾಲಿಸಿರುತ್ತಾರೆ. ಅವರನ್ನು ಸಿಲುಕಿಸುವುದು ಎಷ್ಟು ಸರಿ? ಎಂಬ ಪ್ರಶ್ನೆಗಳು ಪತ್ರಕರ್ತರ ವಲಯದಲ್ಲಿ ಹರಿದಾಡುತ್ತಿದೆ.
ಶುಕ್ರವಾರ ದೀಪಾವಳಿ ಭಕ್ಷೀಸು ಹಗರಣವನ್ನು ಪೀಪಲ್ ಮೀಡಿಯಾ ಬಯಲಿಗೆ ಎಳೆದ ನಂತರ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವೇ ಮೂಡಿದ್ದು, ಈಗಾಗಲೇ ಹಗರಣ ಕುರಿತಂತೆ ಜನಾಧಿಕಾರ ಸಂಘರ್ಷ ಪರಿಷತ್ ಲೋಕಾಯುಕ್ತಕ್ಕೆ ದೂರು ನೀಡಿದೆ.

ಈ ನಡುವೆ ಕೆಲ ಪತ್ರಕರ್ತರು ಭಕ್ಷೀಸು ಪಡೆದಿರುವುದರಿಂದ ಎಲ್ಲ ಪತ್ರಕರ್ತರಿಗೂ ಕಳಂಕ ಅಂಟಿಕೊಂಡಿದೆ. ಜನರು ಪತ್ರಕರ್ತರನ್ನು ಕಳ್ಳರಂತೆ ನೋಡುತ್ತಿದ್ದಾರೆ. ಈ ಕುರಿತು ಸರಿಯಾದ ತನಿಖೆ ನಡೆಯಬೇಕು ಎಂದು ಹಿರಿಯ ಪತ್ರಕರ್ತರು ಆಗ್ರಹಿಸಿದ್ದಾರೆ.
ಪತ್ರಕರ್ತರಿಗೆ ಭಕ್ಷೀಸು ನೀಡಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದರೂ ಅವರದೇ ಸಂಪುಟದ ಸದಸ್ಯರಾದ ಆರೋಗ್ಯ ಸಚಿವ ಡಿ.ಸುಧಾಕರ್ ತಾವು ಪತ್ರಕರ್ತರಿಗೆ ವಾಚು, ಸ್ಕಾಚು ಗಿಫ್ಟ್ ಕೊಟ್ಟಿರುವುದನ್ನು ‘ಹಿಂದೂ ಸಂಸ್ಕೃತಿಯ ಭಾಗ’ ಎಂದು ಸಮರ್ಥಿಸಿಕೊಂಡಿದ್ದಾರೆ.