ಸಮಾನ ನಾಗರಿಕ ಸಂಹಿತೆಯನ್ನು ಬಿಜೆಪಿ ಚುನಾವಣಾ ತಂತ್ರವಾಗಿ ಬಳಸಿಕೊಂಡು ಚುನಾವಣೆಯ ನಂತರ ಇದನ್ನು ಮರೆತು ಬಿಡುತ್ತದೆ. ಬಿಜೆಪಿಗೆ ನಿಯತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.
ಸಂವಿಧಾನದ 44 ನೇ ಆರ್ಟಿಕಲ್ ಪ್ರಕಾರ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರುವುದು ಸರ್ಕಾರದ ಜವಾಬ್ದಾರಿ. ಎಲ್ಲಾ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇದನ್ನು ಜಾರಿಗೆ ತರಬೇಕು. ಉತ್ತರಾಖಂಡ ಚುನಾವಣೆಗೆ ಮೊದಲು ಬಿಜೆಪಿ ಒಂದು ಕಮಿಟಿ ರಚಿಸಿತು. ಚುನಾವಣೆಯ ನಂತರ ಅದನ್ನು ಮರೆತೇ ಬಿಟ್ಟಿತು. ಗುಜರಾತ್ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಕಮಿಟಿ ರಚಿಸಿದೆ. ಇದನ್ನೂ ಮರೆತು ಬಿಡುತ್ತಾರೆ ಎಂದು ಹೇಳಿದರು.
ಬಿಜೆಪಿಗೆ ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಇದನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಬಿಜೆಪಿಗೆ ನಿಯತ್ತಿಲ್ಲ ಎಂದು ಕೇಜ್ರೀವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ನೋಟಿನಲ್ಲಿ ಗಣೇಶ ಹಾಗೂ ಲಕ್ಷ್ಮಿ ಫೋಟೋಗಳನ್ನು ಹಾಕಬೇಕು ಎಂದು ಅರವಿಂದ್ ಕೇಜ್ರಿವಾಲ್ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಇದು ರಾಷ್ಟ್ರದಾದ್ಯಂತ ಟೀಕೆಗೆ ಗುರಿಯಾಗಿತ್ತು. ಈಗ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವಂತೆ ಕೇಜ್ರೀವಾಲ್ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.