ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಸೋಮವಾರ, ಸೆಪ್ಟೆಂಬರ್ 9ರಂದು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ವಿವಾದಾತ್ಮಕ ವ್ಯಕ್ತಿ ಚೌಧರಿ ಲಾಲ್ ಸಿಂಗ್ ಅವರಿಗೂ ಕಥುವಾದಲ್ಲಿನ ಬಸೋಹ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದೆ.
ಲಾಲ್ ಸಿಂಗ್ ಜೊತೆಗೆ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ತನ್ನ ಮೂರನೇ ಪಟ್ಟಿಯಲ್ಲಿ ಕಾಂಗ್ರೆಸ್ ಆರ್‌ಎಸ್ ಪುರ-ಜಮ್ಮು ದಕ್ಷಿಣದಿಂದ ಜೆಕೆಪಿಸಿಸಿ ಕಾರ್ಯಾಧ್ಯಕ್ಷ ರಾಮನ್ ಭಲ್ಲಾ ಮತ್ತು ಬಿಷ್ನಾ (ಎಸ್‌ಸಿ) ಕ್ಷೇತ್ರದಿಂದ ಮಾಜಿ ಎನ್‌ಎಸ್‌ಯುಐ ಮುಖ್ಯಸ್ಥ ನೀರಜ್ ಕುಂದನ್ ಅವರನ್ನು ಕಣಕ್ಕಿಳಿಸಿದೆ. ಈ ಪಟ್ಟಿಯೊಂದಿಗೆ ಕಾಂಗ್ರೆಸ್ ಈಗ ವಿಧಾನಸಭಾ ಚುನಾವಣೆಗೆ ಒಟ್ಟು 34 ಅಭ್ಯರ್ಥಿಗಳನ್ನು ಘೋಷಿಸಿದೆ.
2018ರಲ್ಲಿ, ಬಿಜೆಪಿ ನೇತೃತ್ವದ ಸರ್ಕಾರದ ಮಾಜಿ ಸಚಿವ ಸಿಂಗ್ ಎಂಟು ವರ್ಷದ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳನ್ನು ಬೆಂಬಲಿಸಿ ಸ್ಥಳೀಯ ಹಿಂದುತ್ವ ನಾಯಕರು ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ಮೆರವಣಿಗೆಯಲ್ಲಿ ಸಿಂಗ್ ಅವರ ಉಪಸ್ಥಿತಿ ಆಗ ವ್ಯಾಪಕ ಖಂಡನೆಗೆ ಕಾರಣವಾಗಿತ್ತು. ನಂತರ ದೇಶಾದ್ಯಂತ ವ್ಯಕ್ತವಾದ ಸಾರ್ವಜನಿಕ ಆಕ್ರೋಶದಿಂದ ಅವರಿಗೆ ರಾಜಕೀಯ ಹಿನ್ನಡೆಯಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಅಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಲಾಲ್ ಸಿಂಗ್ ಅತ್ಯಾಚಾರದ ಆರೋಪವನ್ನು ಹಿಂದೂಗಳ ವಿರುದ್ಧ ನಡೆಸಲಾಗಿರುವ ಪಿತೂರಿ ಎಂದು ಕರೆದಿದ್ದರು. ಜೊತೆಗೆ ಆರೋಪಿಗಳಾದ ಪರ್ವೇಶ್ ಕುಮಾರ್ ಸಂಜಿ ರಾಮ್, ದೀಪಕ್ ಖಜುರಿಯಾ ಮತ್ತು ಪರ್ವೇಶ್ ಕುಮಾರ್ ಪರವಾಗಿ ಮಾತನಾಡಿದ್ದರು. ಈ ಹೇಳಿಕೆಯು ರಾಷ್ಟ್ರ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ ಜನರು ಬಿಜೆಪಿಯ ಮೇಲೆ ಟೀಕೆಗಳ ಸುರಿಮಳೆಯನ್ನೇ ಮಾಡಿದ್ದರು. ಕಥುವಾ ಅತ್ಯಾಚಾರ ಜಗತ್ತಿನ ಗಮನವನ್ನೇ ಸೆಳೆದು ಜರ್ಮನಿಯ ಭಾರತ ದೂತವಾವಸದ ಮುಂದೆ ಬಾಲಕಿಯ ಹೆಸರಿನಲ್ಲಿ ಸ್ಮಾರಕವನ್ನೂ ರಚಿಸಲಾಗಿತ್ತು.
ಅಲ್ ಜಜೀರಾ ವರದಿಯ ಪ್ರಕಾರ ಸಂತ್ರಸ್ತೆಯನ್ನು ಅಪಹರಿಸಿ ದೇವಸ್ಥಾನದೊಳಗೆ ಒಂದು ವಾರದವರೆಗೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಕೆಯ ಗರ್ಭಕೋಶ ಆಕೆಯ ಖಾಸಗಿ ಭಾಗದಿಂದ ಹೊರಬರುವಷ್ಟು ಕ್ರೂರವಾಗಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು.
ರಾಜೀನಾಮೆ ನೀಡಿದ ನಂತರ ಸಿಂಗ್ “ಡೋಗ್ರಾ ಸ್ವಾಭಿಮಾನ್ ಸಂಘಟನ್ ಪಕ್ಷ” ವನ್ನು ಸ್ಥಾಪಿಸಿದರು. ಕೊನೆಗೆ, 20 ಮಾರ್ಚ್ 2024ರಂದು ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಇದೀಗ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ವ್ಯಕ್ತಿಯ ಉಮೇದುವಾರಿಕೆಯ ವಿರುದ್ಧ ಕಾಂಗ್ರೆಸ್ ಬೆಂಬಲಿಗರೇ ತಿರುಗಿಬಿದ್ದಿದ್ದಾರೆ.
ಆದರೆ ಬಿಜೆಪಿ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಗೆಲ್ಲುವ ತಂತ್ರದ ಭಾಗವಾಗಿ ಕಾಂಗ್ರೆಸ್ ಈ ವ್ಯಕ್ತಿಯನ್ನು ಕಣಕ್ಕಿಳಿಸಿದೆ ಎನ್ನಲಾಗಿದೆ.
ಹಿಂದೂ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಲಾಲ್ ಸಿಂಗ್ ದೊಡ್ಡ ಮಟ್ಟದ ಬೆಂಬಲವನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ವಿರೋಧ ಪಕ್ಷಗಳು ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದು, ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ತನ್ನ ಸಿದ್ಧಾಂತಗಳೊಡನೆ ರಾಜಿ ಮಾಡಿಕೊಳ್ಳುತ್ತಿದೆ ಎಂದು ಅವು ಆರೋಪಿಸಿವೆ.
ಪೂರಕ ಮಾಹಿತಿ: ಸಿಯಾಸತ್