ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಇಂದು ಜಿಲ್ಲಾ ಕೇಂದ್ರಗಳಲ್ಲಿ ಗವರ್ನರ್ ನಡೆ ವಿರುದ್ಧ ಹಾಗೂ ಸಿಎಂ ಬೆಂಬಲಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಗೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕೇಂದ್ರಗಳ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಸಹ ಮಾಡಲಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಸದಂತೆ ಸೂಚನೆ :
ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹಸಚಿವ ಪರಮೇಶ್ವರ್ ಭೇಟಿ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕುರಿತು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆ ದಿಕ್ಕು ತಪ್ಪಿಸಲು ಕೆಲ ಕಿಡಿಗೇಡಿಗಳು ಪ್ರತಿಭಟನೆ ವೇಳೆ ಕಲ್ಲೆಸೆಯುವ ಪ್ರಯತ್ನ ಮಾಡಬಹುದು. ಹೀಗಾಗಿ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ಮಾಡಿ ಎಂದು ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಈಗಾಗಲೇ ಸಿದ್ದರಾಮಯ್ಯಗೆ ಸಚಿವರು ಹಾಗೂ ಹೈಕಮಾಂಡ್ ಎಲ್ಲಾ ರೀತಿಯ ಸಹಕಾರ ನೀಡಲಿದ್ದು, ಇಂದು ಬೆಳಗ್ಗೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲು ದೆಹಲಿಯಿಂದ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಇದರ ಮುಂದುವರೆದ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಕಾಂಗ್ರೆಸ್ ಶಾಸಕಾಂಗದ ಸಭೆ ಕರೆದಿದ್ದು ಎಲ್ಲಾ ಶಾಸಕರ ಕಡೆಯಿಂದ ಬೆಂಬಲ ಕೋರಲಿದ್ದಾರೆ. ಹೀಗಾಗಿ ಸಭೆ ಕರೆದು ರಾಜ್ಯಪಾಲರ ವಿರುದ್ಧ ಮುಂದಿನ ಹೋರಾಟಗಳಿಗೆ ಶಾಸಕರು ಸಹಕಾರ ಕೋರಲಿದ್ದಾರೆ.