Home ದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಪ್ ಪ್ರತ್ಯೇಕ ಸ್ಪರ್ಧೆ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಪ್ ಪ್ರತ್ಯೇಕ ಸ್ಪರ್ಧೆ

0

ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ಮೈತ್ರಿ ಸಂಸತ್‌ ಚುನಾವಣೆಗೆ ಮಾತ್ರವೇ ಸೀಮಿತವಾಗುವ ಸಾಧ್ಯತೆ ಕಾಣುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಲಿವೆ. ಈ ವಿಷಯವನ್ನು ಸ್ವತಃ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ದೆಹಲಿ ಮತ್ತು ಹರಿಯಾಣ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಲಿವೆ ಎಂದು ಅವರು ಘೋಷಿಸಿದರು. ಹರಿಯಾಣ ಮತ್ತು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಏತನ್ಮಧ್ಯೆ, ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಏಳು ಸಂಸದ ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಒಟ್ಟಿಗೆ ಸ್ಪರ್ಧಿಸಿದ್ದವು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. ದೆಹಲಿಯನ್ನು ಬಿಜೆಪಿ ಮತ್ತೊಮ್ಮೆ ಸ್ವೀಪ್‌ ಮಾಡಿತ್ತು.

ಎಎಪಿ ನಾಯಕ ಮತ್ತು ಸಚಿವ ಗೋಪಾಲ್ ರಾಯ್ ಕಳೆದ ತಿಂಗಳು ಈ ಎರಡು ಪಕ್ಷಗಳ ಮೈತ್ರಿ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದರು. ಯಾವುದೇ ಮೈತ್ರಿ ಇಲ್ಲದೇ ಏಕಾಂಗಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಆಪ್ ಪರವಾಗಿ ಅವರು ಸ್ಪಷ್ಟಪಡಿಸಿದ್ದರು. ಲೋಕಸಭೆ ಚುನಾವಣೆಗೆ ಮಾತ್ರ ಮೈತ್ರಿ ಮಾಡಿಕೊಳ್ಳಲಾಗಿದ್ದು, ದೆಹಲಿ ವಿಧಾನಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಗೋಪಾಲ್ ರಾಯ್ ಹೇಳಿದ್ದರು.

ಜೂನ್ 6ರಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ಎಎಪಿ ಶಾಸಕರ ಸಭೆಯ ನಂತರ ಈ ಘೋಷಣೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಎರಡು ಪಕ್ಷಗಳ ಮೈತ್ರಿ ಕುರಿತು ಕಾಂಗ್ರೆಸ್ ನಿಲುವನ್ನು ಬಹಿರಂಗಪಡಿಸಿದ್ದಾರೆ.

You cannot copy content of this page

Exit mobile version