ಧರ್ಮಾವರಂ: ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಯುವ ಮುಖಂಡ ರಾಜ್ ಸಂಪತ್ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಹೊರವಲಯದ ನೀರಾವರಿ ಟ್ಯಾಂಕ್ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದು, ಶವವಾಗಿ ಪತ್ತೆಯಾಗಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಸಂಪತ್(36) ಲೋಕಸಭೆ ಚುನಾವಣೆಗೆ ಕೇರಳದಲ್ಲಿ ಎನ್‌ಎಸ್‌ಯುಐ ಉಸ್ತುವಾರಿಯನ್ನು ವಹಿಸಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದರು. ಜೊತೆಗೆ ರಾಹುಲ್ ಗಾಂಧಿಯವರ ಐದು ತಿಂಗಳ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.
ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ರಾಜ್ ಸಂಪತ್‌ಗೆ ಅವರ ಸ್ನೇಹಿತರು ಕೊನೆಯ ಬಾರಿ ನೋಡಿದ್ದರು. ಆ ಬಳಿಕ ಅವರು ನಾಪತ್ತೆಯಾಗಿದ್ದರು. ಸ್ಥಳೀಯರು ಮೃತದೇಹವೊಂದು ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಪ್ರಾಥಮಿಕ ತನಿಖೆಯಿಂದ ಸಂಪತ್‌ನನ್ನು ಬೇರೆಡೆ ಕೊಲೆ ಮಾಡಿ ಶವವನ್ನು ಪಟ್ಟಣದ ಹೊರವಲಯದ ತೊಟ್ಟಿಯ ಬಳಿ ಎಸೆದು ಹೋಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಡಿಎಸ್ಪಿ ಶ್ರೀನಿವಾಸ ರಾವ್, ವಿಧಿವಿಜ್ಞಾನ ತಂಡದೊಂದಿಗೆ ಶವ ಪತ್ತೆಯಾದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಸಂಪತ್‌ಗೆ ಸಹ ವಕೀಲರೊಬ್ಬರ ಜತೆ ಜಮೀನು ವಿವಾದವಿದ್ದು, ಈ ಕುರಿತು ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು ಎಂದು ಸಂಪತ್ ಅವರ ಆಪ್ತ ಮೂಲಗಳು ತಿಳಿಸಿವೆ. ಈ ಕುರಿತು ಎಲ್ಲಾ ಕೋನಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ವಕೀಲರಾಗಿರುವ ಸಂಪತ್ ಅವರು ಧರ್ಮಾವರಂ ಮಂಡಲದ ಯರ್ರಗುಂಟಪಲ್ಲೆ ಮೂಲದವರು ಆದರೆ ಎರಡು ದಶಕಗಳಿಗೂ ಹೆಚ್ಚು ಕಾಲ ಹಿಂದೂಪುರದಲ್ಲಿ ನೆಲೆಸಿದ್ದರು. ವಿದ್ಯಾರ್ಥಿ ಜೀವನದಿಂದ ರಾಜಕೀಯ ಪ್ರಾರಂಭಿಸಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಮುನ್ನೆಲೆಗೆ ಬಂದಿದ್ದರು ಮತ್ತು NSUIನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಈ ಕುರಿತು NSUI ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ರಾಜ್ ಸಂಪತ್ ನಿಧನಕ್ಕೆ ಸಂತಾಪವನ್ನು ಸೂಚಿಸಿದೆ. ನಿಮ್ಮ ನಾಯಕತ್ವ ಮತ್ತು ಬದ್ಧತೆಯನ್ನು NSUI ಮತ್ತು ಕಾಂಗ್ರೆಸ್ ಕುಟುಂಬವು ಶಾಶ್ವತವಾಗಿ ಸ್ಮರಿಸುತ್ತದೆ. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಉಳಿಯುತ್ತೀರಿ ಎಂದು ಹೇಳಿಕೊಂಡಿದೆ.