ನವದೆಹಲಿ: ನನ್ನ ದೇಹದೊಳಗೆ ಗಂಭಿರ ಖಾಯಿಲೆಗಳ ಲಕ್ಷಣಗಳಿವೆ. ಆದರೂ ನಾಡಿದ್ದು ಜೂನ್ 2ರಂದು ಜೈಲಿಗೆ ಹೋಗಿ ಶರಣಾಗ್ತಿನಿ. ದೇಶದ ಸರ್ವಾಧಿಕಾರಿಗೆ ಬುದ್ಧಿ ಕಲಿಸುವುದಕ್ಕಾಗಿ ನಾನು ಮತ್ತೆ ಜೈಲಿಗೆ ಹೋಗಲಿದ್ದೇನೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ‘ನನ್ನನ್ನು ಎಷ್ಟು ದಿನ ಜೈಲಿನಲ್ಲಿ ಇರಿಸಲಾಗುತ್ತದೆ ಎಂದು ನನಗೆ ತಿಳಿದಿಲ್ಲ. ನಾಡಿದ್ದು ತಿಹಾರ್ ಜೈಲಿನಲ್ಲಿ ಪೊಲೀಸರ ಮುಂದೆ ಶರಣಾಗುತ್ತೇನೆ ಎಂದು ಶುಕ್ರವಾರ ಹೇಳಿದ್ದಾರೆ.
ಮೇ 10 ರಿಂದ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ಕೇಜ್ರಿವಾಲ್ ಹೊರಗಿದ್ದರು. ಅವರ ದೇಹವು “ಗಂಭೀರ ಕಾಯಿಲೆ”ಯ ಕೆಲವು ಲಕ್ಷಣಗಳನ್ನು ಹೊಂದಿರಬಹುದು ಎಂದು ವೈದ್ಯರು ತಿಳಿಸಿದ್ದರು.
ಚಿತ್ರಹಿಂಸೆಗೆ ತಲೆಬಾಗುವುದಿಲ್ಲ: ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, “ಅವರು ನನ್ನನ್ನು ಬಗ್ಗಿಸಲು ಮತ್ತು ನನ್ನ ಬಾಯಿ ಮುಚ್ಚಿಸಲು ಹಲವು ರೀತಿಯಲ್ಲಿ ಪ್ರಯತ್ನಿಸಿದರು. ಆದರೆ, ಯಶಸ್ವಿಯಾಗಲಿಲ್ಲ, ನಾನು ಜೈಲಿನಲ್ಲಿದ್ದಾಗ ಹಲವು ರೀತಿಯಲ್ಲಿ ಚಿತ್ರಹಿಂಸೆ ನೀಡಿದರು. ನನ್ನ ಔಷಧಿಗಳನ್ನು ನಿಲ್ಲಿಸಿದರು. ಆದರೂ ನಾನು ಸೋಲಲಿಲ್ಲ ಎಂದರು.
“ಜೈಲಿಗೆ ಹೋದಾಗ ನನ್ನ ತೂಕ 70 ಕೆ.ಜಿ. ಇವತ್ತು 64 ಕೆ.ಜಿ. ಇದೆ. ಜೈಲಿನಿಂದ ಬಿಡುಗಡೆಯಾದ ಮೇಲೂ ತೂಕ ಹೆಚ್ಚುತ್ತಿಲ್ಲ, ಇದು ದೇಹದಲ್ಲಿ ಯಾವುದೋ ಗಂಭೀರ ಕಾಯಿಲೆಯ ಲಕ್ಷಣವೂ ಆಗಿರಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ. ಅನೇಕ ಪರೀಕ್ಷೆಗಳನ್ನು ಮಾಡಬೇಕಾಗಿದೆ” ಎಂದು ಅವರು ಹೇಳಿದರು.
“ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ನನಗೆ 21 ದಿನಗಳ ಕಾಲಾವಕಾಶ ನೀಡಿತ್ತು. ನಾಡಿದ್ದು ದಿನ ನಾನು ತಿಹಾರ್ ಜೈಲಿಗೆ ಹಿಂತಿರುಗುತ್ತೇನೆ, ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಮನೆಯಿಂದ ಹೊರಡುತ್ತೇನೆ. ಈ ಬಾರಿ ಅವರು ನನಗೆ ಹೆಚ್ಚು ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಆದರೆ ನಾನು ತಲೆಬಾಗುವುದಿಲ್ಲ” ಎಂದು ಹೇಳಿದರು.
ಉಚಿತ ಯೋಜನೆಗಳ ಮುಂದುವರಿಕೆ: “ ಜನರಿಗಾಗಿ ಪ್ರಾರಂಭಿಸಲಾಗಿರುವ ಉಚಿತ ವಿದ್ಯುತ್, ಮೊಹಲ್ಲಾ ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಉಚಿತ ಔಷಧಿಗಳು, ಚಿಕಿತ್ಸೆ, 24 ಗಂಟೆಗಳ ವಿದ್ಯುತ್ ಮತ್ತು ಇತರ ಹಲವು ವಿಷಯಗಳು ಮುಂದುವರಿಯುತ್ತದೆ. ಹಿಂದಿರುಗಿದ ನಂತರ, ನಾವು ದೆಹಲಿಯ ಪ್ರತಿ ತಾಯಿ ಮತ್ತು ಸಹೋದರಿಗೆ ಪ್ರತಿ ತಿಂಗಳು 1,000 ರೂಪಾಯಿಗಳನ್ನು ನೀಡಲು ಪ್ರಾರಂಭಿಸುತ್ತೇವೆ” ಎಂದು ಅವರು ಹೇಳಿದರು.
ನನ್ನ ತಾಯಿಗಾಗಿ ಪ್ರಾರ್ಥಿಸಿ: ಅಸ್ವಸ್ಥರಾಗಿರುವ ತಮ್ಮ ತಾಯಿಗಾಗಿ ಪ್ರಾರ್ಥಿಸುವಂತೆ ಕೇಜ್ರಿವಾಲ್ ಜನರಲ್ಲಿ ಮನವಿ ಮಾಡಿದ್ದಾರೆ. “ನನ್ನ ಹೆತ್ತವರಿಗೆ ತುಂಬಾ ವಯಸ್ಸಾಗಿದೆ, ನನ್ನ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ನಾನು ಜೈಲಿನಲ್ಲಿ ಅವಳ ಬಗ್ಗೆ ತುಂಬಾ ಚಿಂತೆ ಮಾಡುತ್ತೇನೆ. ನನ್ನ ಹೆತ್ತವರನ್ನು ನೋಡಿಕೊಳ್ಳಿ ಮತ್ತು ಅವರಿಗಾಗಿ ಪ್ರಾರ್ಥಿಸಿ” ಎಂದು ಬೇಸರದಿಂದ ಹೇಳಿದರು.
ಅಬಕಾರಿ ನೀತಿ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಏಳು ದಿನಗಳ ವಿಸ್ತರಣೆಗೆ ಕೇಜ್ರಿವಾಲ್ ಅವರ ಮನವಿಯನ್ನು ಆಲಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.