Saturday, March 22, 2025

ಸತ್ಯ | ನ್ಯಾಯ |ಧರ್ಮ

ಕ್ಷೇತ್ರ ಪುನರ್ ವಿಂಗಡನೆ|ಚೆನ್ನೈನಲ್ಲಿ ನಡೆಯುತ್ತಿರುವ ಸ್ಟಾಲಿನ್ ನೇತೃತ್ವದ ಸಭೆಯಲ್ಲಿ ಡಿ.ಕೆ.ಶಿ ಭಾಗಿ

ಕ್ಷೇತ್ರ ಪುನರ್ ವಿಂಗಡನೆ ಕುರಿತಾಗಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕರ್ನಾಟಕದ ಪರವಾಗಿ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದಾರೆ. 

ಈ ಸಭೆಯಲ್ಲಿ 2026ಕ್ಕೆ ನಡೆಯಲಿರುವ ಕ್ಷೇತ್ರ ಪುನರ್ ವಿಂಗಡನೆ ರಾಜ್ಯಗಳ ಮೇಲೆ ಬೀರುವ ಪ್ರಭಾವಗಳ ಬಗ್ಗೆ  ಚರ್ಚೆ ನಡೆಯಲಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಭೆಯಲ್ಲಿ ಭಾಗಿಯಾಗಿದ್ದಾರೆ. 

ಇನ್ನು ತೆಲಂಗಾಣದ ಮಾಜಿ ಸಚಿವ ಕೆ. ಟಿ ರಾಮರಾವ್ ಬಿಆರ್‌ಎಸ್‌ ಅನ್ನು ಪ್ರತಿನಿಧಿಸಿದರೆ, ವೈಎಸ್‌ಆರ್‌ಸಿಪಿ, ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಬಿಜೆಡಿ ಮತ್ತು ಎಎಪಿಯಂತಹ ರಾಜಕೀಯ ಪಕ್ಷಗಳ ನಾಯಕರು ಕೂಡಾ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಜನಸೇನಾ ಸಂಸದ ತಂಗೆಲ್ಲ ಉದಯ್ ಶ್ರೀನಿವಾಸ್ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಊಹಾಪೋಹಗಳಿದ್ದವು. ಆದರೆ ಅವರು ತಮ್ಮ ನಾಯಕ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ರವನ್ನು ಸ್ಟಾಲಿನ್‌ ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.

ಈ ನಡುವೆ ಡಿಎಂಕೆ ತನ್ನ ದ್ವಿಭಾಷಾ ಸೂತ್ರಕ್ಕೆ ಅನುಗುಣವಾಗಿ ಭಾಗವಹಿಸುವ ನಾಯಕರ ಹೆಸರುಗಳನ್ನು ಅವರ ಮಾತೃಭಾಷೆ ಮತ್ತು ಇಂಗ್ಲಿಷ್‌ನಲ್ಲಿ ನಾಮಫಲಕಗಳಲ್ಲಿ ಮುದ್ರಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಸಂದೇಶವನ್ನು ರವಾನಿಸಿದೆ. ಲೋಕಸಭಾ ಚುನಾವಣೆಯ ನಂತರ ಬಿಜೆಪಿಯ ವಿಪಕ್ಷಗಳ ಮೊದಲ ಸಭೆ ಇದಾಗಿರುವುದರಿಂದ ಮಹತ್ವವನ್ನು ಪಡೆದಿದೆ.

ಕ್ಷೇತ್ರ ಪುನರ್ ವಿಂಗಡಣೆಯನ್ನು ಕೇವಲ ಜನಸಂಖ್ಯೆಯ ಆಧಾರದ ಮೇಲೆ ನಡೆಸಿದರೆ ಅನೇಕ ರಾಜ್ಯಗಳು ತಮ್ಮ ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳುತ್ತವೆ ಎಂಬ ಬಗ್ಗೆ ಚರ್ಚೆ ನಡೆಯಲಿದ್ದು, ಈ ರಾಜ್ಯಗಳೆಲ್ಲ ಸೇರಿ ಕ್ಷೇತ್ರ ಮರುವಿಂಗಡಣೆ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಸಾಧ್ಯತೆಗಳಿವೆ. 

ಕರ್ನಾಟಕದ ಪ್ರತಿನಿಧಿಯಾಗಿ ಚೆನ್ನೈಗೆ ಆಗಮಿಸಿದ್ದ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಕ್ಷೇತ್ರ ಪುನರ್ ವಿಂಗಡಣೆ ವಿವಾದ ಕುರಿತ ದಕ್ಷಿಣ ರಾಜ್ಯಗಳ ಪ್ರತಿನಿಧಿಗಳನ್ನು ಒಗ್ಗೂಡಿಸುವಲ್ಲಿ ಎಂ.ಕೆ ಸ್ಟಾಲಿನ್ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅವರು ಈ ದೇಶದ ಒಕ್ಕೂಟ ಮತ್ತು ಸಂವಿಧಾನವನ್ನು ರಕ್ಷಿಸುತ್ತಿದ್ದಾರೆ ಎಂಬ ಹೆಮ್ಮೆ ನಮಗಿದೆ. ಮುಂದೆ ಏನು ಅನುಸರಿಸಬೇಕು ಹಾಗೂ ಹೇಗೆ ಒಗ್ಗೂಡಿ ಕೆಲಸ ಮಾಡಬೇಕು ಎಂಬುದರ ಕುರಿತು ನಾವೆಲ್ಲರೂ ಚರ್ಚಿಸುತ್ತೇವೆ ಎಂದರು.

ತೆಲಂಗಾಣ, ಪಂಜಾಬ್, ಕೇರಳದ ನಾಯಕರು ಸೇರಿದಂತೆ ನಾವೆಲ್ಲರೂ ಇಲ್ಲಿ ಸೇರಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ದೇಶವನ್ನು ನಿರಾಸೆಗೊಳಿಸುವುದಿಲ್ಲ ಮತ್ತು ನಮ್ಮ ಸ್ಥಾನಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ನಮ್ಮದು ಬಹಳ ಪ್ರಗತಿಪರ ರಾಜ್ಯವಾಗಿದ್ದು, ಆರ್ಥಿಕವಾಗಿ ಮತ್ತು ಸಾಕ್ಷರತೆಯಲ್ಲಿ ಗಟ್ಟಿಯಾಗಿ ನಿಂತಿದ್ದೇವೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page