Home ಬ್ರೇಕಿಂಗ್ ಸುದ್ದಿ ಹಾಸನ ನ 17 ರಂದು ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಕಾರ್ಯಕ್ರಮ – ರಾಜು ಗೊರೂರು

ನ 17 ರಂದು ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಕಾರ್ಯಕ್ರಮ – ರಾಜು ಗೊರೂರು

0


ಹಾಸನ : ಸಂವಿಧಾನದ ಮಹತ್ವ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ನಾಗರಿಕರ ಕರ್ತವ್ಯಗಳ ಅರಿವು ಯುವ ಪೀಳಿಗೆಗೆ ಬೇರೂರಿಸಲು ಗಂಧದ ಕೋಠಿಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಥಮ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ನವೆಂಬರ್ ೧೭ರಂದು ಮಧ್ಯಾಹ್ನ ೧ ಗಂಟೆಗೆ ನಡೆಯಲಿದೆ ಎಂದು ರಾಜ್ಯ ಸಂವಿಧಾನ ಓದು ಅಭಿಯಾನದ ರಾಜ್ಯ ಸಂಚಾಲಕರಾದ ರಾಜು ಗೊರೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಂವಿಧಾನ ಓದು ಅಭಿಯಾನ ಕರ್ನಾಟಕ ಮತ್ತು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಗಂಧದ ಕೋಠಿ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಕುರಿತು ಪ್ರಥಮ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ಉದ್ದೇಶ ಕೇವಲ ಪಠ್ಯ ಚಟುವಟಿಕೆಯಲ್ಲ, ಯುವ ಪೀಳಿಗೆಗೆ ಸಂವಿಧಾನದ ಆತ್ಮಸತ್ವ ಪರಿಚಯಿಸಿ, ಪ್ರಜಾಸತ್ತಾತ್ಮಕ ಮೌಲ್ಯಗಳ ಬಲವರ್ಧನೆ ಮಾಡುವುದು. ಈ ಸ್ಪರ್ಧೆ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಸಂವಿಧಾನದ ಪ್ರಮುಖ ಅಂಶಗಳು, ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತಂತೆ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದರ ಮೇಲೆ ಪ್ರಬಂಧ ಬರೆಯಬೇಕಾಗಿದೆ. ಪ್ರಬಂಧದ ಮೂಲಕ ಸಾಮಾಜಿಕ ನ್ಯಾಯ, ಮಹಿಳಾ ಹಕ್ಕುಗಳು ಹಾಗೂ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ವಿಶ್ಲೇಷಿಸಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ ಎಂದರು. ಜಿಲ್ಲೆಯ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಪ್ರತೀ ಕಾಲೇಜಿನಿಂದ ಐದು ಮಂದಿ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಇ, ಬಿಎಫ್‌ಎ, ಎಂಭಿಬಿಎಸ್, ಬಿವಿಎಸ್‌ಸಿ, ಬಿಎಸ್ಸಿ (ಕೃಷಿ), ನರ್ಸಿಂಗ್ ಹಾಗೂ ಐದು ವರ್ಷದ ಕಾನೂನು ವಿದ್ಯಾರ್ಥಿಗಳು ಮಾತ್ರ ಸ್ಪರ್ಧಿಸಲು ಅರ್ಹರು. ಪದವಿ ನಂತರದ ಹಾಗೂ ಬಿ.ಎಡ್ ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ. ವಯೋಮಿತಿ ೨೫ ವರ್ಷ ನಿಗದಿಪಡಿಸಲಾಗಿದೆ. ದೃಢೀಕರಣ ಪತ್ರವನ್ನು ನವೆಂಬರ್ ೧೪ರೊಳಗೆ ಹಾಸನದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಕಳುಹಿಸಬೇಕು ಎಂದು ಹೇಳಿದರು.
ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಸ್ಥಾನಕ್ಕೆ ೧೦,೦೦೦, ದ್ವಿತೀಯರಿಗೆ ೫,೦೦೦, ತೃತೀಯರಿಗೆ ೩,೦೦೦ ಹಾಗೂ ೧೦ ಸಾಂತ್ವನ ಬಹುಮಾನಿಗಳಿಗೆ ತಲಾ ೧,೦೦೦ ನಗದು ಬಹುಮಾನ ನೀಡಲಾಗುತ್ತದೆ. ಎಲ್ಲರಿಗೂ ಪ್ರಶಸ್ತಿ ಪತ್ರ, ಸಂವಿಧಾನ ಓದು ಪುಸ್ತಕ ಹಾಗೂ ಸ್ಪರ್ಧಾ ಪ್ರಶ್ನೋತ್ತರ ಮಾಲಿಕೆ ವಿತರಿಸಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಡಿ.ಕೆ. ಮಂಜಯ್ಯ ವಹಿಸಲಿದ್ದು, ಡಾ. ರುದ್ರೇಶ್ ಅದರಂಗಿ (ಕನ್ನಡ ಸಹ ಪ್ರಾಧ್ಯಾಪಕ, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು), ಬಿ. ರಾಜಶೇಖರಮೂರ್ತಿ ಹಾಗೂ ಹೆಚ್.ಎನ್. ಹಾಲ್ ಮುಖ್ಯ ಅತಿಥಿಗಳಾಗಿರುತ್ತಾರೆ. ಕೆ.ಪಿ. ಗಂಗಾಧರ (ಉಪನಿರ್ದೇಶಕ, ಪೌರ ಶಿಕ್ಷಣ ಇಲಾಖೆ), ಪ್ರೊ. ಮೋಹನ್ ಕುಮಾರ್ (Iಕಿಂಅ ಸಂಚಾಲಕ), ದೂದ್ ಪೀರ್ ಪಿ.ಕೆ. (ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ), ಮತ್ತು ಜಿ.ಟಿ. ವೆಂಕಟೇಶ್ (ನಿವೃತ್ತ ಮುಖ್ಯ ಇಂಜಿನಿಯರ್, ಕರ್ನಾಟಕ ಜಲ ಸಾರಿಗೆ ಮಂಡಳಿ) ಉಪಸ್ಥಿತರಿರುತ್ತಾರೆ ಎಂದರು.
ಜಿಲ್ಲಾ ಸಂಘಟಕರಾದ ಹುಲಿಕಲ್ ರಾಜಶೇಖರ್ ಸ್ವಾಗತ ಭಾಷಣ ಮಾಡುವರು. ಕಾರ್ಯಕ್ರಮವನ್ನು ಎಚ್.ಬಿ. ವಿಜಯಕುಮಾರ್ (ನಿವೃತ್ತ ಕುಲಪತಿ) ಸಂಚಾಲಿಸಲಿದ್ದು, ದೇವೇಗೌಡ ಬಿ. (ನಿವೃತ್ತ ಲೆಖ್ಯಪತ್ರಾಧಿಕಾರಿ) ಸಹಯೋಗ ನೀಡಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಚೀಪ್ ಇಂಜಿನಿಯರ್ ಜಿ.ಟಿ. ವೆಂಕಟೇಶ್, ಸಾರ್ವಜನಿಕರ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎನ್. ರುದ್ರಯ್ಯ, ನಿವೃತ್ತ ಉಪನಿರ್ದೇಶಕ ವಿಜಯಕುಮಾರ್, ನಿವೃತ್ತ ಲೆಕ್ಕಾಧಿಕಾರಿ ದೇವೇಗೌಡ, ಜಿಲ್ಲಾ ಸಂಘಟಕ ರಾಜಶೇಖರ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version