Saturday, April 27, 2024

ಸತ್ಯ | ನ್ಯಾಯ |ಧರ್ಮ

ಸಂವಿಧಾನವೇ ನಮ್ಮ ಬೈಬಲ್, ಕುರಾನ್, ಭಗವದ್ಗೀತೆ ; ಡಿಸಿಎಂ ಡಿಕೆಶಿ

“ಕಾಂಗ್ರೆಸ್ ಗೂ ಸಂವಿಧಾನಕ್ಕೂ ಒಂದು ಅವಿನಾಭಾವ ಸಂಬಂಧ. ಹಾಗಾಗಿಯೇ ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳಿಗೆ ಬದ್ದವಾಗಿ ಸದಾ ಹೋರಾಡುತ್ತದೆ. ಆ ಕಾರಣದಿಂದ ಸಂವಿಧಾನವೇ ನಮ್ಮ ಬೈಬಲ್, ಸಂವಿಧಾನವೇ ನಮ್ಮ ಕುರಾನ್, ಸಂವಿಧಾನವೇ ನಮ್ಮ ಭಗವದ್ಗೀತೆ” ಎಂಬುದಾಗಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ “ಭೀಮ ಸಂಕಲ್ಪ” ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.


ನನ್ನ ವಿದ್ಯಾರ್ಥಿ ಜೀವನದಿಂದಲೂ ನಾನು ದಲಿತ ಸಂಘರ್ಷ ಸಮಿತಿಯ ಹೋರಾಟವನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ನೀವೆಲ್ಲ ಬೀದಿಯಲ್ಲಿ ಹೋರಾಡ್ತಾ ಇದೀರ. ದಸಂಸ ನಾಯಕರು ಸಮಾಜದ ಬದಲಾವಣೆಗೆ ನಿರಂತರವಾಗಿ ಹೋರಾಟ ನಡೆಸುತ್ತಿರುವವರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ದೀಕ್ಷೆ ಉಳಿಸಿಕೊಳ್ಳು ನಿಮ್ಮ ಹೋರಾಟ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.


ನಾವು ಒಂದು ಕಾಲದಲ್ಲಿ ಸಂವಿಧಾನ ಪೀಠಿಕೆಯನ್ನು 11 ಸಾವಿರ ಪಂಚಾಯ್ತಿಗಳಲ್ಲಿ ಬೋಧಿಸುವ ಪ್ರತಿಜ್ಞೆ ಕೈಗೊಂಡಿದ್ವಿ. ಬಾಬಾ ಸಾಹೇಬರು ನಮಗೆ ಸಂವಿಧಾನದ ಮೂಲಕ ಗೌರವದ ಬದುಕನ್ನು ತಂದುಕೊಟ್ಟಿದ್ದಾರೆ. ಆ ಮೂಲಕ ನಾವು ಬಾಬಾಸಾಹೇಬರನ್ನು ದೇವರಂತೆ ಕಾಣುತ್ತೇವೆ. ಅಂಬೇಡ್ಕರ್ ಅಂದರೆ ಜ್ಞಾನ, ಅಂಬೇಡ್ಕರ್ ಅಂದರೆ ಸಮಾನತೆ, ಅಂಬೇಡ್ಕರ್ ಎಂದರೆ ಧೈರ್ಯ. ಎಂದು ಹೇಳಿದ್ದಾರೆ.


ಇತಿಹಾಸ ಮರೆತವರು ಇತಿಹಾಸ ಸೃಷ್ಡಿಸಲಾರರು ಎಂದು ಅಂಬೇಡ್ಕರ್ ಹೇಳಿದ್ದಾರೆ. ಇಂದು ಕಾಂಗ್ರೆಸ್ ಅದ್ಯಕ್ಷ ಸ್ಥಾನದಲ್ಲಿ ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆಯವರು ಕುಳಿತಿದ್ದಾರೆ. ಅವರಿಗೆ ನೀವು ಗೌರವಿಸಿದ್ದೀರಿ. ಅವರ ನಾಯಕತ್ವದಲ್ಲಿ ಇಡೀ ದೇಶದಲ್ಲಿ ಬದಲಾವಣೆಗೆ ನಾಂದಿ ಹಾಡಿದೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ದಲಿತರ ಸ್ಥಾನಮಾನದ ಉಲ್ಲೇಖಿಸಿ ಹೇಳಿದ್ದಾರೆ.


ಹಾಗೆಯೇ ‘ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಪಂಗಡ ಸಮುದಾಯಗಳಿಗೆ SCP/TSP ಕಾಯ್ದೆ ಜಾರಿ ಮಾಡಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ. ಹಾಲಿ ಸರ್ಕಾರದಲ್ಲಿ ಸಹ ದಲಿತ ಸಮಯದಾಯದ ಜನಪ್ರತಿನಿಧಿಗಳು ಮಂತ್ರಿಗಳಾಗಿದ್ದಾರೆ. ನಮ್ಮ ಸರ್ಕಾರ ಒಂದು ಜಾತಿ ಒಂದು ಧರ್ಮ ಎಂದಲ್ಲ, ಮಾನವೀಯತೆಯ ಸಿದ್ದಾಂತದ ಆದಾರದಲ್ಲಿ ಇಡೀ ಸಮಾಜವನ್ನು ಒಂದುಗೂಡಿಸಿಕೊಂಡು ಹೋಗುತ್ತದೆ. ಹಾಗೆಯೇ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮುಂದಿಟ್ಟಿರುವ ಹಕ್ಕೊತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಈ ಮೂಲಕ ಭರವಸೆ ನೀಡುತ್ತಿದ್ದೇ‌‌ನೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು