Home ಬೆಂಗಳೂರು ಸಂವಿಧಾನ ತಿದ್ದುಪಡಿ ಮಸೂದೆಯ ಸೋಲು ಇಂಡಿಯಾ ಒಕ್ಕೂಟದ ಗೆಲುವು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸಂವಿಧಾನ ತಿದ್ದುಪಡಿ ಮಸೂದೆಯ ಸೋಲು ಇಂಡಿಯಾ ಒಕ್ಕೂಟದ ಗೆಲುವು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

0

ಬೆಂಗಳೂರು: ಲೋಕಸಭೆಯಲ್ಲಿ ಸಂವಿಧಾನದ 131ನೇ ತಿದ್ದುಪಡಿ ಮಸೂದೆ ಸೋಲುಂಡಿರುವುದನ್ನು ‘ಇಂಡಿಯಾ’ ಒಕ್ಕೂಟದ ಗೆಲುವು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಬಣ್ಣಿಸಿದ್ದಾರೆ.

ಈ ಮಸೂದೆಯು ಲೋಕಸಭೆಯ ಬಲವನ್ನು ಪ್ರಸ್ತುತ 543 ರಿಂದ 850ಕ್ಕೆ ಹೆಚ್ಚಿಸಲು ಹಾಗೂ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲು ಪ್ರಸ್ತಾಪಿಸಿತ್ತು. ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತಿವೆಯಾದರೂ, ಅದನ್ನು ಕ್ಷೇತ್ರ ಪುನರ್ ವಿಂಗಡಣೆಯೊಂದಿಗೆ (Delimitation) ಜೋಡಿಸಿರುವುದನ್ನು ತೀವ್ರವಾಗಿ ವಿರೋಧಿಸುತ್ತಿವೆ.

ಮಹಿಳಾ ಮೀಸಲಾತಿ ಮಸೂದೆಯು ಕಾಂಗ್ರೆಸ್ ಪಕ್ಷದ ಕನಸು ಎಂದು ಬಣ್ಣಿಸಿದ ಶಿವಕುಮಾರ್, ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. “ಈ ಮಸೂದೆಗಾಗಿ ಶ್ರಮಿಸಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಸರ್ಕಾರ ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿಲ್ಲ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಹಿಟ್ಲರ್ ಶೈಲಿಯ ಆಡಳಿತಕ್ಕೆ ಅವಕಾಶವಿಲ್ಲ,” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಮಸೂದೆ ಸೋಲುತ್ತದೆ ಎಂದು ಗೊತ್ತಿದ್ದರೂ ಅದನ್ನು ಮಂಡಿಸಿದ್ದು ಅವರೇ. ಅವರೇ ಮಹಿಳಾ ವಿರೋಧಿಗಳು. ನಾವು ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಲ್ಲವೇ? ಅವರನ್ನು ಜನರು ಆಯ್ಕೆ ಮಾಡಿಲ್ಲವೇ? ಅವರು ನಮ್ಮೊಂದಿಗೆ ಚರ್ಚಿಸಬೇಕಿತ್ತು. ಮಹಿಳಾ ಮೀಸಲಾತಿ ಮಸೂದೆಯು ಬಿಜೆಪಿಯ ಆಸ್ತಿಯಲ್ಲ, ಅದು ದೇಶದ ಆಸ್ತಿ,” ಎಂದು ಕಿಡಿಕಾರಿದರು.

ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಮಸೂದೆಯನ್ನು ಮಂಡಿಸಿದ್ದನ್ನು ಕೂಡ ಅವರು ತೀವ್ರವಾಗಿ ಟೀಕಿಸಿದರು.

You cannot copy content of this page

Exit mobile version