“. ಇಲ್ಲಿ ಬರೆಯುತ್ತಿರುವುದು ಆಳುವ ಬಿಜೆಪಿಯ ಡೋಂಗಿ ಹಿಂದೂತ್ವದ ಕಾವಿಯ ಹಿಂದೆ ಸುಲಭವಾಗಿ ಕಾಣದೇ ಅಡಗಿರುವ ಭ್ರಷ್ಟಾಚಾರದ ಕೊಳೆಯ ಕುರಿತಾಗಿರುವುದರಿಂದ ಇದು ಪಕ್ಕನೇ ನೆನಪಿಗೆ ಬಂತು!.” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಹೆಚ್ಚು ಕಡಿಮೆ ದಶಕಕ್ಕೂ ಹಿಂದೆ ಹಿಂದೂ ಮತಾಂಧರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಕೂಲಿ ಕಾರ್ಮಿಕರೊಬ್ಬರಿಗೆ ಥಳಿಸಿದ್ದರು. ಕಾರಣ ಇಷ್ಟೇ: ಆತ ಕೇಸರಿ ಲುಂಗಿ ಧರಿಸಿದ್ದು! ವಿವರಗಳು ನೆನಪಿಲ್ಲವಾದರೂ, ಆತ ನೀಡಿದ ಕಾರಣ ನೆನಪಿದೆ. ಮುಸ್ಲಿಮನಾಗಿ ನೀನ್ಯಾಕೆ ಕೇಸರಿ ಮುಂಡು ಧರಿಸಿದೆ ಎಂದು ಕೇಳಿದಾಗ, ಕೇಸರಿಯನ್ನು ನಿಮಗೆ ಗುತ್ತಿಗೆಗೆ ಕೊಟ್ಟಿದೆಯೇ ಎಂದೆಲ್ಲ ಆತ ಹೇಳಬಹುದಾಗಿತ್ತು. ಆದರೆ, ಆತ ಹೇಳಿದ್ದಿಷ್ಟೇ: “ನಾನು ಕೆಂಪುಕಲ್ಲಿನ ಕೆಲಸ ಮಾಡುವವನು; ಕಾವಿ ಮುಂಡಿನಲ್ಲಿ ಕಲ್ಲಿನ ಕೊಳೆ ಕಾಣುವುದಿಲ್ಲ!” ಎರಡು, ಎರಡೂವರೆ ದಶಕಗಳ ಹಿಂದೆ “ಕೇಸರಿ” ಎಂಬ ಲೇಬಲ್ ಇರಲಿಲ್ಲ! ತುಳುವಿನ “ಕಾವೆ” ಮಾತ್ರ ಚಾಲ್ತಿಯಲ್ಲಿದ್ದದ್ದು. ಆಗಲೂ, ಈಗಲೂ ಕೂಲಿ ಕಾರ್ಮಿಕರು ಹೆಚ್ಚಾಗಿ ಉಡುತ್ತಿದ್ದದ್ದು, ಉಡುತ್ತಿರುವುದು “ಕಾವೆ” ಮುಂಡು! ಹಾಗಾಗಿ “ಕೇಸರಿ” ಉಟ್ಟವರೆಲ್ಲಾ ಬಿಜೆಪಿ, ಆರೆಸ್ಸಿನವರೆಂದು ಕರಾವಳಿಯ ಹೊರಗಿನವರು ತಪ್ಪು ತಿಳಿಯುವುದು ಬೇಡ! ಇಲ್ಲಿ ಬರೆಯುತ್ತಿರುವುದು ಆಳುವ ಬಿಜೆಪಿಯ ಡೋಂಗಿ ಹಿಂದೂತ್ವದ ಕಾವಿಯ ಹಿಂದೆ ಸುಲಭವಾಗಿ ಕಾಣದೇ ಅಡಗಿರುವ ಭ್ರಷ್ಟಾಚಾರದ ಕೊಳೆಯ ಕುರಿತಾಗಿರುವುದರಿಂದ ಇದು ಪಕ್ಕನೇ ನೆನಪಿಗೆ ಬಂತು!
ಆಧುನಿಕ ಭಾರತೀಯ ರಾಜಕೀಯದ ನಿರೂಪಣೆಯನ್ನು ಸಾಮಾನ್ಯವಾಗಿ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂದೇ ಸುಳ್ಳಾಗಿ ಮಾಡಲಾಗುತ್ತದೆ. ಆದರೆ, ಭ್ರಷ್ಟತೆ ಹುಟ್ಟುಗುಣವಾಗಿರುವ ರಾಜಕೀಯ ಶಕ್ತಿಗಳ ಬ್ಯಾಲೆನ್ಸ್ ಶೀಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿ ಹೋಲಿಸಿದರೆ, ಆತಂಕಕಾರಿ ವಾಸ್ತವ ಕಣ್ಣಿಗೆ ರಾಚುತ್ತದೆ. ದೇಶಭಕ್ತಿ ಮತ್ತು “ಸ್ವಚ್ಛ” ಆಡಳಿತದ ಸೋಗಿನಲ್ಲಿ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ದೇಶದ ಇತಿಹಾಸದಲ್ಲೇ ಈ ತನಕ ಯಾರೂ ಕಂಡಿರದ ಭಾರೀ ದೊಡ್ಡ ಪ್ರಮಾಣದ ರಾಜಕೀಯ ಬಂಡವಾಳವನ್ನು ಕ್ರೋಢೀಕರಿಸಿದೆ. ಇದು ಕೇವಲ ಪಕ್ಷದ ಬೆಳವಣಿಗೆಯ ಕತೆಯಲ್ಲ; ಇದು ಲಂಚ ಮತ್ತು ವಸೂಲಿಯ, ಮಾರ್ವಾಡೀಕೃತ ಲಂಚದ “ಮಾಫಿಯಾ ವ್ಯವಸ್ಥೆ”ಯ ಸಾಂಸ್ಥೀಕರಣ ಕತೆಯಾಗಿದೆ – ಇದು ಭಿನ್ನಮತೀಯರ ವಿರುದ್ಧ ಬಳಸಲು ಮತ್ತು ಪ್ರಬಲರನ್ನು ರಕ್ಷಿಸಲು ವಿನ್ಯಾಸಗೊಳಿಸಲೆಂದೇ ರಚಿಸಲಾಗಿರುವ ಸರಕಾರೀ ಪ್ರಾಯೋಜಿತ ವಸೂಲಿ ಯಂತ್ರದ ಕತೆ.
ಆರ್ಥಿಕ ಏಕಸ್ವಾಮ್ಯ; ಸಮಾನಾವಕಾಶದ ಕೊಲೆ
ಕಳೆದ ದಶಕದಲ್ಲಿ ಬಿಜೆಪಿಯ ಬಂಡವಾಳ ಸಂಗ್ರಹಣೆಯ ಪ್ರಮಾಣಕ್ಕೆ ಭಾರತೀಯ ಇತಿಹಾಸದಲ್ಲಿ ಯಾರೂ ಸರಿಸಾಟಿಯಿಲ್ಲ! ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಗಳ ಪ್ರಕಾರ, 2014 ಮತ್ತು 2023ರ ನಡುವೆ ಬಿಜೆಪಿಯ ಘೋಷಿತ ಆಸ್ತಿಗಳು 600 ಶೇಕಡಾಕ್ಕಿಂತ ಹೆಚ್ಚು ಏರಿಕೆ ಕಂಡಿವೆ. 2022-23ರ ಆರ್ಥಿಕ ವರ್ಷದ ವೇಳೆಗೆ, ಬಿಜೆಪಿಯ ಒಟ್ಟು ಆಸ್ತಿಗಳ ಮೌಲ್ಯ ಸುಮಾರು ಆರು ಸಾವಿರದ ನಲವತ್ತಾರು ಕೋಟಿ ರೂಪಾಯಿಗಳಷ್ಟಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಹತ್ತಿರದ ರಾಷ್ಟ್ರೀಯ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸುಮಾರು ಎಂಟುನೂರ ಐದು ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದೆ. ಇದರರ್ಥ ಆಡಳಿತ ಪಕ್ಷದ ಸಂಪತ್ತು ಅದರ ಪ್ರಮುಖ ವಿರೋಧ ಪಕ್ಷದ ಸಂಪತ್ತಿಗಿಂತ ಸುಮಾರು ಏಳೂವರೆ ಪಟ್ಟು ಹೆಚ್ಚಾಗಿದೆ.
ಈ ಭಾರೀ “ಸಂಪನ್ಮೂಲ ಅಂತರ”ವು ತಳಮಟ್ಟದ ಬೆಂಬಲ ಅಥವಾ ಪಕ್ಷದ ಕಾರ್ಯಕರ್ತರ ಕೊಡುಗೆಗಳ ಪರಿಣಾಮವಾಗಿ ಉಂಟಾಗಿಲ್ಲ. ವಾಸ್ತವದಲ್ಲಿ, ಪಕ್ಷದ ಕಾರ್ಯಕರ್ತರು ನೀಡುವ ಸಣ್ಣ ಸಣ್ಣ ಮೊತ್ತಗಳಿಂದ ಈ ಸಂಪತ್ತು ಸಂಗ್ರಹವಾಗಿಲ್ಲ. ಅದು ತೋರಿಕೆ ಮಾತ್ರ! ಅದು ಒಟ್ಟು ರಾಶಿಯಲ್ಲಿ ಒಂದು ಮುಷ್ಟಿ ಅಷ್ಟೇ. ಆಧುನಿಕ ಬಿಜೆಪಿಯ ಡಬಲ್ ಎಂಜಿನ್ ಸರಕಾರ ನಡೆಯುತ್ತಿರುವುದು ಕಾರ್ಪೊರೇಟ್ ದೈತ್ಯರ “ಇಂಧನ”ದಿಂದ. ಈ ಸಂಪತ್ತು- ಬಿಜೆಪಿಯ ಸಾಮಾಜಿಕ ಮಾಧ್ಯಮದ ಬಾಡಿಗೆಯ “ಟ್ರೋಲ್ ಕಪಿಸೇನೆ”ಗಳನ್ನು ಸಾಕಿ- ವಿರೋಧಿಗಳ ವ್ಯವಸ್ಥಿತ ಮಾನಹರಣ ಮಾಡುವುದರಿಂದ ಹಿಡಿದು, ಮುಖ್ಯವಾಹಿನಿಯ ಮಾಧ್ಯಮ ನಾಯಿಗಳನ್ನು ಸಾಕುವ ವರೆಗೆ; ವಿಫಲ ಯೋಜನೆಗಳ ಥಂಡಿಥಂಡಿ ಸುಳ್ಳು ಜಾಹೀರಾತುಗಳಿಂದ ಹಿಡಿದು, ನಕಲಿ ಜನಾಭಿಪ್ರಾಯ ರೂಪಿಸಿ, ಮತಗಳನ್ನು, ಜನಪ್ರತಿನಿಧಿಗಳನ್ನು ಕೊಳ್ಳುವ ವರೆಗೆ ಪ್ರಜಾಪ್ರಭುತ್ವದ ವಿವಿಧ “ಪುಣ್ಯ ಕಾರ್ಯ”ಗಳಿಗೆ ಬಳಕೆಯಾಗುತ್ತದೆ. ಈ ಮೂಲಕ ಅದು ಯಾವುದೇ ಪ್ರತಿಸ್ಪರ್ಧಿಯ ಸಂಪನ್ಮೂಲಗಳನ್ನು ಖಾಲಿ ಮಾಡುವ ಬಹು-ವರ್ಷಗಳ ಚುನಾವಣಾ ಪ್ರಚಾರ, ಅಪಪ್ರಚಾರಗಳನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿದೆ.
“ಕಾನೂನುಬದ್ಧ ಚುನಾವಣಾ ಬಾಂಡ್” ದಂಧೆ!
ಈ ಸಂಪತ್ತಿನ ಪ್ರಾಥಮಿಕ ಎಂಜಿನ್ ಚುನಾವಣಾ ಬಾಂಡ್ ಯೋಜನೆ (EBS). 2018 ಮತ್ತು 2024ರ ನಡುವೆ, ಸುಮಾರು ಹದಿನಾರು ಸಾವಿರದ ಐದುನೂರ ಹದಿನೆಂಟು ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳು ಮಾರಾಟವಾದವು. ಈ ಬೃಹತ್ ಮೊತ್ತದಲ್ಲಿ, ಬಿಜೆಪಿ ಮಾತ್ರವೇ ಸುಮಾರು ಎಂಟು ಸಾವಿರದ ಇನ್ನೂರ ಐವತ್ತೊಂದು ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ. ಇದು ಇಡೀ ದೇಶಾದ್ಯಂತ ನೀಡಲಾದ ಎಲ್ಲಾ ಬಾಂಡ್‌ಗಳ ಸರಿಸುಮಾರು 50 ಶೇಕಡಾದಷ್ಟಿದೆ. ಇದಕ್ಕೆ ಹೋಲಿಸಿದರೆ, ಕಾಂಗ್ರೆಸ್ ಸುಮಾರು ಒಂದು ಸಾವಿರದ ಒಂಬೈನೂರ ಐವತ್ತೆರಡು ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ. ಇದು ಒಟ್ಟು ಮೊತ್ತದ ಸುಮಾರು 11 ಶೇಕಡಾ ಮಾತ್ರ.
ಕಪಿಲ್ ಸಿಬಲ್‌ರಂತಹ ಕಾನೂನು ತಜ್ಞರು- ಇದು ಕೇವಲ ಕಾರ್ಪೋರೇಟ್‌ಗಳು ನೀಡುವ “ರಾಜಕೀಯ ಬೆಂಬಲ” ಅಲ್ಲ; ಬದಲಾಗಿ, ಪ್ರಬಲ ಉದ್ಯಮ ಗುಂಪುಗಳ ಏಕಸ್ವಾಮ್ಯದ ಸಾಂಸ್ಥೀಕರಣ ಎಂದು ವಾದಿಸಿದ್ದಾರೆ. ಒಂದೇ ಪಕ್ಷವು ಒಟ್ಟು ಅನಾಮಧೇಯ ಕಾರ್ಪೊರೇಟ್ ನಿಧಿಯ ಅರ್ಧದಷ್ಟು ಹಣವನ್ನು ನಿಯಂತ್ರಿಸಿದಾಗ, ನ್ಯಾಯಯುತ ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ “ಸಮಾನ ಆಟದ ಮೈದಾನ” ಸಂಪೂರ್ಣವಾಗಿ ನಾಶವಾಗುತ್ತದೆ. ಈ “ಯುದ್ಧ ನಿಧಿ”ಯನ್ನು ಕೇವಲ ಜಾಹೀರಾತುಗಳಿಗಾಗಿ ಮಾತ್ರ ಬಳಸಲಾಗುತ್ತಿಲ್ಲ; ಇದು ಜನಪ್ರತಿನಿಧಿಗಳ “ಕುದುರೆ ವ್ಯಾಪಾರ”ದ “ಕಮಲ ಕಲೆ”ಗೂ ಹಣಕಾಸು ಒದಗಿಸುತ್ತದೆ. ಭಾರತದಾದ್ಯಂತದ ಹಲವಾರು ರಾಜ್ಯಗಳಲ್ಲಿ, ಪ್ರಜಾಪ್ರಭುತ್ವದ ಜನಾದೇಶಗಳನ್ನು ವ್ಯಾಪಾರಿ ವಹಿವಾಟುಗಳಾಗಿ ಪರಿಗಣಿಸುವುದನ್ನು ನಾವು ನೋಡಿದ್ದೇವೆ. ಅಲ್ಲಿ ಶಾಸಕರನ್ನು ಹತ್ತಾರು ಕೋಟಿಗಳಿಗೆ ಖರೀದಿಸಿ, ಚುನಾಯಿತ ಸರಕಾರಗಳನ್ನು ಕೈಗೊಂಬೆ ರಾಜ್ಯಪಾಲರ ಮೂಲಕ ಉರುಳಿಸಲಾಗುತ್ತದೆ. ಇದು ಮತದಾರರು ಮಾಡಿದ ಆಯ್ಕೆಯನ್ನೇ ಅಪ್ರಸ್ತುತಗೊಳಿಸುತ್ತದೆ, ಪ್ರಜಾಪ್ರಭುತ್ವವನ್ನೇ ನಗೆಪಾಟಲು ಮಾಡುತ್ತದೆ.
ಐಷಾರಾಮಿ ಕಚೇರಿಗಳು ಮತ್ತು ಪ್ರಚಾರ ಯಂತ್ರ
ಸರಾಸರಿ ನಾಗರಿಕರು ಹಣದುಬ್ಬರದಿಂದ ಬಳಲುತ್ತಿರುವಾಗ, ಬಿಜೆಪಿಯ ಸಂಪತ್ತು ಭಾರತದ ಬಹುತೇಕ ಪ್ರತಿಯೊಂದು ಜಿಲ್ಲೆಯಲ್ಲೂ ಅತ್ಯಾಧುನಿಕ, ಐಷಾರಾಮಿ ಕಚೇರಿಗಳ ನಿರ್ಮಾಣದಲ್ಲಿ ಕಣ್ಣಿಗೆ ರಾಚುತ್ತದೆ. ಇವು ಕೇವಲ ಆಡಳಿತಾತ್ಮಕ ಕಟ್ಟಡಗಳಲ್ಲ; ಬದಲಾಗಿ, ಏಕಸ್ವಾಮ್ಯ ರಾಜಕೀಯ ಶಕ್ತಿಯ ಸಂಕೇತಗಳಾಗಿವೆ. ಈ ಸಂಪತ್ತು ಅತ್ಯಾಧುನಿಕ, ಸುಳ್ಳು ಪ್ರಚಾರದ ಯಂತ್ರಗಳಿಗೂ ಶಕ್ತಿ ನೀಡುತ್ತದೆ. ಭಾರೀ ಹಣದ ಐಟಿ ಸೆಲ್‌ಗಳ ಮೂಲಕ ಸಂಪೂರ್ಣ ಸುಳ್ಳಾದ ಡಿಜಿಟಲ್ ನಿರೂಪಣೆಯನ್ನು ನಿಯಂತ್ರಿಸುವ ಮೂಲಕ, ಪಕ್ಷವು ನೋಮ್ ಚೋಮ್ಸ್ಕಿ “ಮೆನ್ಯೂಫ್ಯಾಕ್ಚರಿಂಗ್ ಕನ್‌ಸೆಂಟ್” ಪುಸ್ತಕದಲ್ಲಿ ಹೇಳಿರುವಂತೆ ಜನರ ಒಪ್ಪಿಗೆಯನ್ನು ಉತ್ಪಾದಿಸಬಹುದು; ಭಿನ್ನಮತೀಯರಿಗೆ, ವಿರೋಧಿಗಳಿಗೆ “ರಾಷ್ಟ್ರವಿರೋಧಿ” ಎಂದು ಹಣೆಪಟ್ಟಿ ಕಟ್ಟಬಹುದು ಮತ್ತು ನಿರುದ್ಯೋಗ ಮತ್ತು ಕುಸಿಯುತ್ತಿರುವ ಮೂಲಸೌಕರ್ಯದಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಬಹುದು. ನಕಲಿ ಪದವೀಧರ ಅಲ್ಪಜ್ಞಾನಿಯನ್ನು ಮಹಾಜ್ಞಾನಿಯಂತೆ, ವಿಶ್ವಗುರುವಿನಂತೆ ಚಿತ್ರಿಸಿ ಭ್ರಮಾಲೋಕವನ್ನು ಸೃಷ್ಟಿಸಬಹುದು. ಈ ನಿಧಿಗಳ ಉತ್ತರದಾಯಿತ್ವವೇ ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲ! ಏಕೆಂದರೆ, ಈ ಟ್ರಸ್ಟ್‌ಗಳ “ಖಾಸಗಿ” ಸ್ವರೂಪ! ಈಗ ನಿಷ್ಕ್ರಿಯವಾಗಿರುವ ಬಾಂಡ್ ಯೋಜನೆಯ ಮೂಲಕ ಯಾವ ಕಾರ್ಪೊರೇಟ್ ಗುಂಪು ಬಿಜೆಪಿಯ ಯಾವ ಐಷಾರಾಮಿ ಕಚೇರಿಗೆ ಹಣ ನೀಡಿದೆ ಎಂದು ಸಾರ್ವಜನಿಕರಿಗೆ ಎಂದಿಗೂ ಗೊತ್ತಾಗುವುದಿಲ್ಲ! ಇದನ್ನು ಈ ಯೋಜನೆಯು ಹಿಂದಿನ ಕಂತಿನಲ್ಲಿ ನೋಡಿರುವಂತೆ ದೇಣಿಗೆದಾರರ ಅನಾಮಿಕತೆಯನ್ನು ಖಾತರಿಪಡಿಸುತ್ತದೆ.
“ವಾಷಿಂಗ್ ಮೆಷಿನ್” ಮತ್ತು ನ್ಯಾಷನಲ್ ಹೆರಾಲ್ಡ್
ಈ ”ಮಾಫಿಯಾ ವ್ಯವಸ್ಥೆ”ಯು ಕಾನೂನಿನ ಆಯ್ದ, ಬೇಕಾಬಿಟ್ಟಿ ಅನ್ವಯದಲ್ಲಿ ಹೆಚ್ಚು ಗೋಚರಿಸುತ್ತದೆ. ಉದಾಹರಣೆಗೆ, ಕಾಂಗ್ರೆಸ್ ನಾಯಕತ್ವದ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ED)ವು ನಿರಂತರವಾಗಿ ಮುಂದುವರಿಸಿದ್ದು, ಕೇವಲ ತೊಂಬತ್ತು ಕೋಟಿ ರೂಪಾಯಿಗಳ ದುರುಪಯೋಗದ ಆರೋಪವನ್ನು ಭಾರೀ ಭ್ರಷ್ಟಾಚಾರ ಎಂಬಂತೆ ಬಿಂಬಿಸುತ್ತಿದೆ. ನ್ಯಾಷನಲ್ ಹೆರಾಲ್ಡ್ ಕೂಡಾ ಒಂದು ಹಳೆಯ ಟ್ರಸ್ಟ್. ಮೇಲಾಗಿ ಇದು ಬಿಜೆಪಿಯ ಎಂಟು ಸಾವಿರ ಕೋಟಿ ರೂಪಾಯಿ ರೂ. ಮೀರಿದ ಬಾಂಡ್ ಗಳಿಕೆಯ ಒಂದು ಶೇಕಡಾಕ್ಕಿಂತ ಕಡಿಮೆ ಮೊತ್ತ. ಆದರೆ, ಕಾಂಗ್ರೆಸ್ ಟ್ರಸ್ಟಿನ, ನಾಯಕರ ಮೇಲೆ ಕೇಸು; ಬಿಜೆಪಿ, ಆರೆಸ್ಸೆಸ್ ಟ್ರಸ್ಟ್‌ಗಳ ಲೆಕ್ಕವನ್ನೇ ಕೇಳುವಂತಿಲ್ಲ! ಇದು ಯಾವ ಸೀಮೆಯ ನ್ಯಾಯ!? ಈ ದ್ವಂದ್ವ ನಿಲುವು ಸಾಂಸ್ಥಿಕ ಭ್ರಷ್ಟಾಚಾರದ ಸ್ಪಷ್ಟ ಲಕ್ಷಣವಾಗಿದೆ: ಸರಕಾರವು ಸಣ್ಣ ಪಾರಂಪರಿಕ ವಹಿವಾಟನ್ನು ಬೃಹತ್ ಕ್ರಿಮಿನಲ್ ಪಿತೂರಿ ಎಂದು ನಿರೂಪಿಸುತ್ತದೆ; ಅದೇ ಹೊತ್ತಿಗೆ “ಶೆಲ್ ಕಂಪನಿಗಳಿಂದ” ತನ್ನ ಸ್ವಂತ ಖಾತೆಗಳಿಗೆ ಹರಿಯುವ ಸಾವಿರಾರು ಕೋಟಿಗಳನ್ನು ರಕ್ಷಿಸುತ್ತದೆ.
”ವಾಷಿಂಗ್ ಮೆಷಿನ್” ಪರಿಣಾಮವು ಈ ಕೊಳೆತವನ್ನು ಮತ್ತಷ್ಟು ವಿವರಿಸುತ್ತದೆ. ಬಿಜೆಪಿ ನಾಯಕತ್ವದಿಂದ “ಭ್ರಷ್ಟ” ಎಂದು ಹಣೆಪಟ್ಟಿ ಕಟ್ಟಲಾಗಿದ್ದ ಹಲವಾರು ವಿರೋಧ ಪಕ್ಷ ನಾಯಕರು ಆಡಳಿತ ಪಕ್ಷಕ್ಕೆ ಪಕ್ಷಾಂತರಗೊಂಡ ಕ್ಷಣದಲ್ಲಿ ಅವರ ವಿರುದ್ಧ ತನಿಖೆಗಳು ಸ್ಥಗಿತಗೊಂಡಿವೆ ಅಥವಾ ಸಂಪೂರ್ಣವಾಗಿ ಮಾಯವಾಗಿವೆ. ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮನಂತ ಹಲವು ಉದಾಹರಣೆಗಳನ್ನು ಕೊಡಬಹುದು. ಸರಕಾರಿ ಮಾಫಿಯಾಕ್ಕೆ ತಲೆಬಾಗಲು ನಿರಾಕರಿಸುವವರು ಭ್ರಷ್ಟಾಚಾರ ಮಾಡಿದರೆ ಮಾತ್ರವೇ ಅದು ದೊಡ್ಡ ಅಪರಾಧ! ಅಧಿಕೃತ ನಿಲುವೆಂದರೆ, “ಬೇಕಾದಷ್ಟು ಭ್ರಷ್ಟಾಚಾರ ಮಾಡಿ; ನಮಗೆ ಪಾಲುಕೊಡದಿದ್ದರೆ ಮಾತ್ರ ಜಾಗ್ರತೆ!” ಎಂಬಂತೆ ಕಾಣುತ್ತಿದೆ.
ರಾಜಕೀಯ ನಿಧಿಯನ್ನು ಮೀರಿ, ಭ್ರಷ್ಟಾಚಾರವು ಆಡಳಿತಕ್ಕೂ ವಿಸ್ತರಿಸಿದೆ. “ಕಾಗದದ ಮೇಲೆ” ಮಾತ್ರವೇ ಇರುವ ಸರಕಾರಿ ಯೋಜನೆಗಳು ಮತ್ತು ಕಳಪೆ ಗುಣಮಟ್ಟದ ಮೂಲಸೌಕರ್ಯಗಳ ವಿರಾಟ ಸ್ವರೂಪವನ್ನೇ ನಾವು ನೋಡುತ್ತಿದ್ದೇವೆ. ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ಆಗಾಗ ಸೇತುವೆಗಳು ಕುಸಿಯುವುದು, ತೀರಾ ಕಳಪೆ ರಸ್ತೆ ಇತ್ಯಾದಿ ಕಾಮಗಾರಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೆಕ್ಕವಿಲ್ಲದಷ್ಟು ಹರಿದಾಡುತ್ತಿರುವುದು- ಬಿಜೆಪಿ ಆಡಳಿತದ ಭ್ರಷ್ಟತೆಯ ರೂಪಕವಾಗಿದೆ: ಟೊಳ್ಳಾದ, ತುಕ್ಕು ಹಿಡಿದ ಕಾಮಗಾರಿಗೆ ಹೊರಗೆ ಹೊಳೆಯುವ, ದೇಶಭಕ್ತಿಯ ಗಾರೆ ಕೆಲಸ. ಇದು ಬಿಜೆಪಿಯ ಆಡಳಿತ. ಒಪ್ಪಂದಗಳನ್ನು ಹೆಚ್ಚಾಗಿ “ಸ್ನೇಹಪರ” ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಲಾಗುತ್ತದೆ. ನಂತರ ಅವರು ಯೋಜನೆಯ ವೆಚ್ಚದ ಒಂದು ಭಾಗವನ್ನು ಬಾಂಡ್‌ಗಳು ಅಥವಾ ಟ್ರಸ್ಟ್‌ಗಳ ಮೂಲಕ ಪಕ್ಷದ ಖಜಾನೆಗೆ ಹಿಂತಿರುಗಿಸುತ್ತಾರೆ.
ಪಿಎಂ ಕೇರ್ಸ್ ನಿಧಿಯಲ್ಲಿ ಪಾರದರ್ಶಕತೆಯ ಕೊರತೆಯಿದೆ – ಇದು ಸಿಎಜಿ ಮತ್ತು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿದೆ ಎಂಬುದನ್ನು ಇಲ್ಲಿ ಹಿಂದೆಯೇ ಓದಿದ್ದೀರಿ. ಕಲ್ಲಿದ್ದಲು ಮತ್ತು ಗಣಿಗಾರಿಕೆ ಬ್ಲಾಕ್‌ಗಳನ್ನು ಅನುಕೂಲಕರ ಕಾರ್ಪೊರೇಟ್ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಮಾದರಿ ಒಂದೇ ರೀತಿಯದ್ದು: ಬಿಜೆಪಿ ತನ್ನ ಹಣಕಾಸಿನ ವಿಷಯದಲ್ಲಿ “ಹಗಲು ದರೋಡೆಕೋರ”! ಹೊರಗೆ ತೋರಿಸುವ ಬೇಗಡೆ ವಾಕ್ಚಾತುರ್ಯದಲ್ಲಿ “ಮಹಾನ್ ದೇಶಭಕ್ತ”! ಈ ವಂಚನೆಯ ಕಲೆಯನ್ನು ಅದು ಚೆನ್ನಾಗಿ ಕರಗತ ಮಾಡಿಕೊಂಡಿದೆ.
ಸ್ವಚ್ಛತೆಯ ಮುಖವಾಡ
ಭಾರತೀಯ ಜನತಾ ಪಕ್ಷವು ತ್ಯಾಗ ಮತ್ತು ರಾಷ್ಟ್ರೀಯತೆಯ ಹಿಂದೂ ಪಕ್ಷವಾಗಿ ತನ್ನನ್ನು ತಾನು ತೋರಿಸಿಕೊಳ್ಳುತ್ತದೆ. ಆದರೆ, ಅದರ ಬ್ಯಾಲೆನ್ಸ್ ಶೀಟ್‌ಗಳು ದುರಾಸೆ ಮತ್ತು ವ್ಯವಸ್ಥಿತ ಭ್ರಷ್ಟಾಚಾರದ ಕತೆಯನ್ನು ಹೇಳುತ್ತವೆ. ಸಣ್ಣ ದೇಣಿಗೆಗಳಿಗಾಗಿ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಾ, ತಾನು ಮಾತ್ರ ಸಾವಿರಾರು ಕೋಟಿ ರೂಪಾಯಿಯ ಸಂಪತ್ತನ್ನು ಸಂಗ್ರಹಿಸುವ ಮೂಲಕ, ಅದು ಅಧಿಕಾರವನ್ನು ಖರೀದಿಸುವ ಮತ್ತು ನ್ಯಾಯವನ್ನು ಮಾರಾಟ ಮಾಡುವ ಭ್ರಷ್ಟ ವ್ಯವಸ್ಥೆಯನ್ನು ಸೃಷ್ಟಿಸಿದೆ. ಭ್ರಷ್ಟಾಚಾರವು ಇನ್ನು ಮುಂದೆ ಒಂದು ವಿಕ್ಷಿಪ್ತತೆಯಲ್ಲ! ಅದು ನ್ಯಾಯಬದ್ಧ, ಸರಕಾರಿ ಮಾನ್ಯತೆಯ ವ್ಯವಸ್ಥೆಯೇ ಆಗಿದೆ. ರಾಜಕೀಯ ಪಕ್ಷಗಳ ಸಂಪನ್ಮೂಲ ಅಂತರವನ್ನು ಸರಿಪಡಿಸುವವರೆಗೆ ಮತ್ತು “ಮಾಫಿಯಾ ವ್ಯವಸ್ಥೆ”ಯಿಂದ ಸಂಗ್ರಹಿಸಿದ ನಿಧಿಯನ್ನು ಇಲ್ಲವಾಗಿಸುವ ವರೆಗೆ, ಭಾರತೀಯ ಗಣರಾಜ್ಯವು ಹೆಸರಿಗೆ ಮಾತ್ರ ಪ್ರಜಾಪ್ರಭುತ್ವವಾಗಿ ಉಳಿಯುತ್ತದೆ, ಕೇಸರಿ ಬಣ್ಣದ ಧರ್ಮದ ಮುಸುಕಿನಡಿಯಲ್ಲಿ ಅತಿ ಹೆಚ್ಚು ದೇಣಿಗೆ ನೀಡುವ “ಆನಿ”ಗಳಿಂದ ಭ್ರಷ್ಟ, ವಂಚಕರ ಮೂಲಕ ಆಳಲ್ಪಡುತ್ತದೆ. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು!?
