Home ಅಂಕಣ ಸಂಸತ್ತಿನ ಪೂರ್ವಸೂರಿಗಳು – 24 : ಪಿಲೂ ಮೋದಿ: ಹಾಸ್ಯಪ್ರಜ್ಞೆ ಮತ್ತು ಮೇಧಾವಿತನದ ಸಮ್ಮಿಲನದಿಂದ ಕೂಡಿದ್ದ...

ಸಂಸತ್ತಿನ ಪೂರ್ವಸೂರಿಗಳು – 24 : ಪಿಲೂ ಮೋದಿ: ಹಾಸ್ಯಪ್ರಜ್ಞೆ ಮತ್ತು ಮೇಧಾವಿತನದ ಸಮ್ಮಿಲನದಿಂದ ಕೂಡಿದ್ದ ಸಂಸದ

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತ ನಾಲ್ಕನೇ ಲೇಖನ

ಮೋದಿ ಅವರ ಹಾಸ್ಯಪ್ರಜ್ಞೆಯು ಭಾಷಣಗಳಲ್ಲಿ ಮಾತ್ರವಲ್ಲದೆ ಬರಹಗಳಲ್ಲಿಯೂ ಎದ್ದು ಕಾಣುತ್ತಿತ್ತು.

ಸ್ವತಂತ್ರ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಪಿಲೂ ಮೋದಿ ಅವರು ವಾಸ್ತುಶಿಲ್ಪಿಯಾಗಿದ್ದರು. ರಾಜಕಾರಣಿಯಾಗಿ ಬೆಳೆದ ಅವರು ಅನುಭವೀ ಸಂಸದರಾಗಿ ಗುರುತಿಸಿಕೊಂಡಿದ್ದರು. ನಾಲ್ಕು ಮತ್ತು ಐದನೇ ಲೋಕಸಭೆಗೆ ಚುನಾಯಿತರಾಗಿದ್ದ ಅವರು 1978 ರಿಂದ 1983 ರಲ್ಲಿ ತನ್ನ ಕೊನೆಗಾಲದವರೆಗೂ ರಾಜ್ಯಸಭೆಯ ಸದಸ್ಯರಾಗಿದ್ದರು. ಒಬ್ಬ ಸಂಸದರಾಗಿದ್ದುಕೊಂಡು ವಿನೋದಾವಳಿಗಳ ಮೂಲಕವೇ ತನ್ನ ಗುರುತನ್ನು ಮೂಡಿಸಿದವರು.

1926 ನವೆಂಬರ್‌ 14 ರಂದು ಶ್ರೀಮಂತ ಪಾರ್ಸಿ ಕುಟುಂಬದ ಸರ್‌ ಹೋಮಿ ಮೋದಿ ಅವರ ಮಗನಾಗಿ ಪಿಲೂ ಮೋದಿಯವರ ಜನನ. ಅವರಿಗೆ ಇಬ್ಬರು ಸಹೋದರರಿದ್ದರು. ಭಾರತದಲ್ಲಿ ಕ್ರೆಡಿಟ್‌ ಕಾರ್ಡ್‌ ಸೇವೆಗಳ ಆದ್ಯ ಪ್ರವರ್ತಕರಾದ ಕಾಲಿ ಮೋದಿ ಮತ್ತು ಟಿಸ್ಕೋ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ರುಸ್ಸಿ ಮೋದಿ ಆ ಸಹೋದದರು.

ಪಿಲೂ ಅವರು ಡೆಹ್ರಾಡೂನಿನ ಡೂನ್‌ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ನಂತರ, ಬಾಂಬೆಯ (ಈಗಿನ ಮುಂಬೈ) ಸರ್‌ ಜೆಜೆ ಕಾಲೇಜ್‌ ಆಫ್‌ ಆರ್ಕಿಟೆಕ್ಚರಲ್ಲಿ ವಾಸ್ತುಶಿಲ್ಪ ಕಲಿಯುತ್ತಾರೆ. ಅಲ್ಲಿಂದ ಬ್ಯಾಚುಲರ್‌ ಆಫ್‌ ಆರ್ಕಿಟೆಕ್ಚರ್‌ ಪದವಿ ಪಡೆದುಕೊಳ್ಳುತ್ತಾರೆ. ವಾಸ್ತುಶಿಲ್ಪದಲ್ಲಿ ಸ್ನಾತಕೋತ್ರ ಪದವಿಗಾಗಿ ಅವರು ಅಮೇರಿಕಾದ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೇರುತ್ತಾರೆ. 1970 ರ ದಶಕದಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ಜುಲ್ಫಿಕರ್‌ ಅಲಿ ಭುಟ್ಟೋ ಆಗ ಅವರ ಕಾಲೇಜಿನ ರೂಮ್‌ಮೇಟ್‌ ಮತ್ತು ಆಪ್ತ ಸ್ನೇಹಿತರಾಗಿದ್ದರು. ಕಲಿಕೆಯನ್ನು ಪೂರ್ಣಗೊಳಿಸಿದ ನಂತರ ತನ್ನ ಸಹಪಾಠಿಯಾಗಿದ್ದ ಸ್ವಿಸ್‌ ಮೂಲದ ಅಮೆರಿಕನ್‌ ಲವಿನಾ (ವಿನಾ) ಕೊಲ್ಗನ್‌ ಅವರನ್ನು 1953 ಜನವರಿ 3 ರಂದು ವಿವಾಹವಾಗುತ್ತಾರೆ.

ಬರ್ಕ್ಲಿಯ ಕೆಲಸ ಮುಗಿಸಿಕೊಂಡು ಅವರು ಭಾರತಕ್ಕೆ ಮರಳುತ್ತಾರೆ. ಲೆ ಕಾರ್ಬೂಸಿಯರ್ ಅವರೊಂದಿಗೆ ಸೇರಿಕೊಂಡು ಚಂಡೀಗಢ ಕ್ಯಾಪಿಟಲ್ ಪ್ರಾಜೆಕ್ಟ್‌ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಅವರು ವಿನ್ಯಾಸ ಮಾಡಿದ ಇನ್ನೊಂದು ಪ್ರಮುಖ ಕಟ್ಟಡವೆಂದರೆ ದುರ್ಗಾ ಬಾಜಪೇಯಿ ಜೊತೆಗೆ ಸೇರಿಕೊಂಡು ವಿನ್ಯಾಸ ಮಾಡಿದ ದೆಹಲಿಯ ಓಬೆರಾಯ್‌ ಹೋಟೆಲ್.‌ ಲಾರ್ಸೆನ್ & ಟೂಬ್ರೊ ಲಿಮಿಟೆಡ್‌ನ ಹಿಂದಿನ ಅಂಗಸಂಸ್ಥೆಯಾಗಿದ್ದ ಎಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ನಿನ ಚೆನ್ನೈಯ ಪ್ರಧಾನ ಕಚೇರಿಯನ್ನು ವಿನ್ಯಾಸ ಮಾಡಿದ್ದು ಕೂಡ ಪಿಲೂ ಮೋದಿ. ಅದು ಫೆಡರೇಶನ್ ಇಂಟರ್ನ್ಯಾಷನಲ್ ಡೆ ಲಾ ಪ್ರಿಕಾಂಟ್ರೇನ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ದಂಪತಿಗಳು ಜಂಟಿಯಾಗಿ 1953 ರಲ್ಲಿ ಚರ್ಚ್‌ಗೇಟ್‌ನ ಸ್ಟೇಡಿಯಂ ಹೌಸ್‌ನಲ್ಲಿ ಮೋದಿ ಮತ್ತು ಕೋಲ್ಗನ್ ಎಂಬ ವಾಸ್ತುಶಿಲ್ಪ ಕಂಪೆನಿಯೊಂದನ್ನು ಆರಂಭಿಸುತ್ತಾರೆ. ಟಿಸ್ಕೋದ ಹಿರಿಯ ಅಧಿಕಾರಿಗಳಿಗಾಗಿ ಮರೈನ್‌ ಲೈನ್ಸಿನಲ್ಲಿ ಒಂದು ಅಪಾರ್ಟ್‌ಮೆಂಟ್‌ ಕಟ್ಟುವುದು ಅವರ ಮೊದಲ ಯೋಜನೆಯಾಗಿತ್ತು. ವೋಲ್ಟಾಸ್‌ ಕಂಪೆನಿಯ ಏರ್‌ ಕಂಡಿಷನರ್‌ನ ಒಂದು ಮಾದರಿಗೆ ಅದರ ಮುಂಭಾಗದ ಕವಚವನ್ನು ಸಹ ಅವರು ವಿನ್ಯಾಸಗೊಳಿಸಿದ್ದರು.

ಒಲಿಂಪಸ್‌, ಮೂರು ಟೆಲ್ಕೋ ಕಛೇರಿಗಳು, ಭಾರತ್‌ ಬಿಜ್ಲಿಯ ಪ್ರಧಾನ ಕಛೇರಿ, ಮುಕಂದ್ ಐರನ್ ಮತ್ತು ಸ್ಟೀಲ್, ಸ್ಯಾಂಡೋಜ್‌, ವೋಲ್ಟಾಸ್ ಮತ್ತು ಡೈನರ್ಸ್ ಕ್ಲಬ್ ಮತ್ತು ಬಿಸಿನೆಸ್‌ ಸರ್ವಿಸ್‌ ಸೆಂಟರ್‌ಗಳು ಮೋದಿ ಅವರ ಇತರ ಯೋಜನೆಗಳಾಗಿದ್ದವು.

ತನ್ನ ರಾಜಕೀಯ ಬುದುಕಿನಲ್ಲಿ ಮೋದಿ ಅವರು ಉದಾರವಾದ ಮತ್ತು ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು. ಸ್ವತಂತ್ರ ಪಕ್ಷದ ಸ್ಥಾಪಕ ಸದಸ್ಯರಾಗಿದ್ದ ಅವರು ನಂತರದಲ್ಲಿ ಅದರ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದರು.

ಸಂಸದರಾಗಿ
1967 ರ 4 ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗುಜರಾತಿನ ಗೋಧ್ರಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. 1971 ರಲ್ಲಿ ಪುನಹ ಚುನಾಯಿತರಾಗಿ ಮಾರ್ಚ್‌ 1977 ರ ತನಕ ಐದನೇ ಲೋಕಸಭೆಯಲ್ಲಿ ಸಂಸದರಾಗಿ ಸೇವೆ ಸಲ್ಲಿಸುತ್ತಾರೆ. ಆದರೆ 1977 ರಲ್ಲಿ ಕೆಲವೇ ಮತಗಳ ಅಂತರದಿಂದ ಸೋಲುತ್ತಾರೆ. 1974 ರಲ್ಲಿ ಮೋದಿ ಅವರು ತನ್ನ ಸ್ವತಂತ್ರ ಪಕ್ಷವನ್ನು ಚರಣ್‌ ಸಿಂಗ್‌ ಅವರ ಭಾರತೀಯ ಕ್ರಾಂತಿ ದಳದೊಂದಿಗೆ ವಿಲೀನಗೊಳಿಸುತ್ತಾರೆ. 1977 ರಲ್ಲಿ ಅದು ಜನತಾ ಪಕ್ಷದೊಂದಿಗೆ ವಿಲೀನವಾಗುತ್ತದೆ. ಒಂದು ವರ್ಷದ ವಿರಾಮದ ನಂತರ ಅವರು 1978 ಏಪ್ರಿಲ್‌ 10 ರಂದು ರಾಜ್ಯಸಭೆ ಪ್ರವೇಶಿಸುತ್ತಾರೆ. 1983 ರಲ್ಲಿ ತನ್ನ ಸಾವಿನ ತನಕವೂ ಅಲ್ಲಿ ಸೇವೆ ಸಲ್ಲಿಸುತ್ತಾರೆ.

ತನ್ನ ವೃತ್ತಿ ಬದುಕಿನ ಜೊತೆಗೆ, ಸಂಸತ್ತಿನ ಭಾಷಣಗಳಲ್ಲಿ ವಿನೋದ ಮತ್ತು ಹಾಸ್ಯವನ್ನು ಯಥೇಚ್ಚವಾಗಿ ಬಳಸುವ ಮೂಲಕ ಅವರು ಹೆಸರುವಾಸಿಯಾಗಿದ್ದರು. ತನ್ನ ಸಂಪ್ರದಾಯವಾದಿ ಮತ್ತು ಅಮೇರಿಕಾ ಪರವಾದ ದೃಷ್ಟಿಕೋನಗಳಿಂದಾಗಿ ಕಾಂಗ್ರೆಸ್‌ ಸಂಸದರು ಅವರನ್ನು “ವಾಷಿಂಗ್ಟನ್‌ ಗಿಣಿ” ಎಂದು ಗೇಲಿ ಮಾಡುತ್ತಿದ್ದರು.

ಅವರನ್ನು ಕೆಣಕಲೆಂದು ಒಂದು ದಿನ ಅವರು “ನಾನು CIA ಏಜೆಂಟ್‌” ಎಂಬ ಫಲಕ ನೇತುಹಾಕಿಕೊಂಡು ಸದನಕ್ಕೆ ಆಗಮಿಸಿದ್ದರು. ಸಭಾಧ್ಯಕ್ಷರು ಅದನ್ನು ತೆಗೆಯಲು ಸೂಚಿಸಿದಾಗ, “ನಾನು ಇನ್ನು ಮುಂದೆ CIA ಏಜೆಂಟ್‌ ಅಲ್ಲ” ಎಂದು ಹೇಳುತ್ತಲೇ ಫಲಕವನ್ನು ತೆಗೆಯುತ್ತಾರೆ.

ಒಂದು ದಿನ ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ಆಡಳಿತ ಪಕ್ಷದ ಜೆ.ಸಿ. ಜೈನ್‌ ಅವರು ಮೋದಿಯವರನ್ನು ಕೆಣಕಲು ಶುರು ಮಾಡುತ್ತಾರೆ. ಆಗ ಕೋಪಗೊಳ್ಳುವ ಅವರು ಜೈನ್‌ ಅವರಿಗೆ “ಬೊಗಳುವುದನ್ನು ನಿಲ್ಲಿಸಿ” (Stop barking) ಎಂದು ಜೋರು ದನಿಯಲ್ಲಿ ಹೇಳುತ್ತಾರೆ. ಆಗ ಜೈನ್‌ ಅವರು ಎದ್ದು ನಿಂತು “ಸರ್‌, ಅವರು ನನ್ನನ್ನು ನಾಯಿ ಎಂದು ಕರೆಯುತ್ತಿದ್ದಾರೆ, ಇದು ಅಸಂವಿಧಾನಿಕ ಭಾಷೆ” ಎಂದು ಪೀಠದ ಮುಂದೆ ಕೂಗಾಡುತ್ತಾರೆ.

ಆಗ ಪೀಠದಲ್ಲಿದ್ದ ಹಿದಾಯತುಲ್ಲಾ ಅವರು ಅದಕ್ಕೆ ಸಮ್ಮತಿಸಿ, “ಇದು ದಾಖಲೆಯಲ್ಲಿ ಉಳಿಸಲಾಗುವುದಿಲ್ಲ” ಎಂದು ಹೇಳುತ್ತಾರೆ. ತಕ್ಷಣವೇ ಮೋದಿ ಅವರು ಚೂರೇ ಚೂರು ಭಾವ ವ್ಯತ್ಯಾಸವಿಲ್ಲದೆ, “ಸರಿ, ಹಾಗಾದರೆ ಕಿರುಚುವುದನ್ನು ನಿಲ್ಲಿಸಿ” (All right then, stop braying) ಎಂದು ಹೇಳಿ ತನ್ನ ಅಸಂವಿಧಾನಿಕ ಮಾತನ್ನು ತಿದ್ದಿಕೊಳ್ಳುತ್ತಾರೆ. ಆ ಮಾತಿನ ಮರ್ಮ ಅರಿಯದ ಜೈನ್‌ ಸುಮ್ಮನಾಗುತ್ತಾರೆ ಮತ್ತು ಅದು ದಾಖಲೆಯಲ್ಲಿ ಸೇರಿಕೊಳ್ಳುತ್ತದೆ.

ಒಮ್ಮೆ ಸಚಿವರೊಬ್ಬರು ಬಿಸಿಯೇರಿದ ಚರ್ಚೆಯ ಹೊತ್ತಿನಲ್ಲಿ “ಬೊಗಳುವ ಎಲ್ಲ ನಾಯಿಗಳಿಗೂ ಉತ್ತರ ಕೊಡಬೇಕಾದ ಅಗತ್ಯ ಇಲ್ಲ” ಎಂದು ಹೇಳಿ ಬಿಡುತ್ತಾರೆ. ಆಗ ಎದ್ದು ನಿಲ್ಲುವ ಮೋದಿಯವರು “ಸ್ಪೀಕರ್‌ ಸರ್‌, ಟ್ರೆಶರಿ ಬೆಂಚಿನಲ್ಲಿ ಮಹಾನ್‌ ಮನುಷ್ಯರುಗಳು ಕುಳಿತಿದ್ದಾರೆ. ಅವರು ಸರಕಾರದ ಪಿಲ್ಲರ್‌ಗಳು, ಪ್ರಜಾಪ್ರಭುತ್ವದ ಪಿಲ್ಲರ್‌ಗಳು. ಮತ್ತೆ ನಾವೆಲ್ಲ ನಾಯಿಗಳು. ನಾಯಿಗಳು ಪಿಲ್ಲರ್‌ಗಳ ಜೊತೆಗೆ ಹೇಗೆ ವರ್ತಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.” ಎಂದು ಹೇಳುತ್ತಾರೆ. ಒಟ್ಟು ಸದನವೇ ಆಗ ನಗೆಗಡಲಲ್ಲಿ ತೇಳುತ್ತದೆ.

ಗ್ಯಾನಿ ಜೈಲ್‌ ಸಿಂಗ್‌ ಅವರು ಗೃಹ ಸಚಿವರಾಗಿದ್ದಾಗ ರಾಜ್ಯಸಭೆಯಲ್ಲಿ ಅವರು ಒಂದು ಮಸೂದೆಯನ್ನು ಮಂಡಿಸುತ್ತಿದ್ದರು. ಆ ಚರ್ಚೆಯಲ್ಲಿ ಮೋದಿಯವರು ಕೂಡ ಭಾಗವಹಿಸಿದ್ದರು. ಮೋದಿ ಅವರ ಟೀಕೆಗೆ ಉತ್ತರಿಸುತ್ತಾ ಜೈಲ್‌ ಸಿಂಗ್‌ ಅವರು ಹಿಂದಿಯಲ್ಲಿ “ಪಿಲೂ ಮೋದಿ ತೋ ಬಡೇ ಸೀಸನಲ್‌ ಮೆಂಬರ್‌ ಹೇ” (ಪಿಲೂ ಮೋದಿ ಅವರು ದೊಡ್ಡ ಸೀಸನಲ್‌ ಮೆಂಬರ್)‌ ಎಂದು ಹೇಳುತ್ತಾರೆ.

ಒಟ್ಟು ಸಭೆ ಆಗ ನಗಲು ಶುರು ಮಾಡುತ್ತದೆ. ಆಗ ಜೈಲ್‌ ಸಿಂಗ್‌ ಅವರ ಪಕ್ಕದಲ್ಲಿದ್ದ ಮಂತ್ರಿಯೊಬ್ಬರು ಅದು ಸೀಸನಲ್‌ ಅಲ್ಲ ಸೀಸನ್ಡ್‌ ಎಂದು ಅವರ ಕಿವಿಯಲ್ಲಿ ಉಸುರುತ್ತಾರೆ.

ಆಗ ಜೈಲ್‌ ಸಿಂಗ್‌ ಅವರು “ನನಗೆ ಇಂಗ್ಲಿಷ್‌ ಚೂರುಪಾರು ಮಾತ್ರ ಗೊತ್ತು. ಅವರಿಗೆ ಅವರ ಹೆಂಡತಿ ಚೆನ್ನಾಗಿ ಇಂಗ್ಲಿಷ್‌ ಕಲಿಸಿದ್ದಾರೆ.” ಎಂದು ಹೇಳುತ್ತಾರೆ. ಇದನ್ನು ಕೇಳಿದ ಮೋದಿ ಅವರು ಮೇಜು ತಟ್ಟಿ ಆಕ್ಷೇಪ ಎತ್ತುತ್ತಾರೆ. ಇಡೀ ಸದನವೇ ಆಗ ಮೋದಿಯವರನ್ನು ನೋಡುತ್ತಿತ್ತು. ಉಪಸಭಾಪತಿಗಳು “ನಿಮ್ಮ ತಕರಾರು ಏನು?” ಎಂದು ಕೇಳತ್ತಾರೆ. ಆಗ ಮೋದಿ “ಗ್ಯಾನಿಜೀ ಅವರಿಗೆ ಮಾಹಿತಿ ಕೊರತೆ ಇದೆ. ನನ್ನ ಹೆಂಡತಿ ನನಗೆ ಇಂಗ್ಲಿಷ್‌ ಕಲಿಸಿ ಕೊಟ್ಟಿಲ್ಲ. ಬದಲಿಗೆ ನಾನೇ ಆಕೆಗೆ ಇಂಗ್ಲಿಷ್‌ ಕಲಿಸಿ ಕೊಟ್ಟಿರುವುದು.” ಎಂದು ಹೇಳುತ್ತಾರೆ. ಮತ್ತೆ ಸದನವು ನಗೆಗಡಲಲ್ಲಿ ತೇಲುತ್ತದೆ. ಮೋದಿ ಅವರ ಪತ್ನಿ ಸ್ವಿಸ್‌ ಆಗಿದ್ದರು.

ಹಾಗೆಯೇ ಒಂದು ದಿನ ರೈಲ್ವೇ ಹಳಿಗಳು ಮತ್ತು ಬೋಗಿಗಳನ್ನು ವೇಗವಾಗಿ ಬದಲಾಯಿಸಲು ಸುಲಭವಾಗುವಂತೆ ಅವುಗಳನ್ನು ಆಮದು ಮಾಡಿಕೊಳ್ಳುವ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿತ್ತು. ವಿರೋಧ ಪಕ್ಷದ ಸಂಸದರಾಗಿದ್ದ ಇಂದ್ರದೀಪ್‌ ಸಿನ್ಹಾ ಅವರು ಆಮದು ಮಾಡಿಕೊಳ್ಳುವ ಬದಲಾಗಿ ಸ್ಥಳೀಯವಾಗಿ ತಯಾರಿಸುವ ಕುರಿತು ಮಾತನಾಡುತ್ತಾರೆ. ಆಮದಿನಲ್ಲಿ ಮತ್ತಷ್ಟು ವಿಳಂಬವೆಂದು ಅವರು ನಂಬಿದ್ದರು. ಆಗ ಮಧ್ಯಪ್ರವೇಶ ಮಾಡುವ ಮೋದಿ ಅವರು, ಆಮದು ಮಾಡುವಿದರಿಂದ ಅಲ್ಲ, ಬದಲಿಗೆ ಅವುಗಳನ್ನು ಇಲ್ಲೇ ತಯಾರಿಸುವ ಕಾರಣದಿಂದ ವಿಳಂಬ ಆಗುತ್ತದೆ ಎಂದು ಹೇಳುತ್ತಾರೆ. ಮೋದಿಯವರ ಮಾತಿಗೆ ಉತ್ತರಿಸುವ ಸಿನ್ಹಾ “ಆಮದು ಮಾಡಿಕೊಳ್ಳುವ ಏಜೆಂಟ್‌ ನೀವೊಬ್ಬರೇ ಅಲ್ಲ, ಇಲ್ಲಿ ಬಹಳಷ್ಟು ಜನ ಇದ್ದಾರೆ” ಎಂದು ಹೇಳುತ್ತಾರೆ. ಸಭಾಧ್ಯಕ್ಷರು ತಕ್ಷಣವೇ “ಅವರು ಆಮದು ಏಜೆಂಟ್‌ ಅಲ್ಲ, ಅವರೊಬ್ಬ ರಫ್ತು ಏಜೆಂಟ್” ಎಂದು ಹೇಳಿ ಸಿನ್ಹಾ ಅವರ ಮಾತನ್ನು ತಿದ್ದುತ್ತಾರೆ. ಅದಕ್ಕೆ ಮೋದಿಯವರ ಉತ್ತರ ಹೀಗಿತ್ತು. “ನಾನು ಖಾಲಿ ಮಾರುಕಟ್ಟೆಯಲ್ಲಿ ಐಡಿಯಾಗಳನ್ನು ರಫ್ತು ಮಾಡುತ್ತೇನೆ.”

ಶ್ಯಾಮ್‌ ಲಾಲ್‌ ಯಾದವ್‌ ಅವರು ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆಯಾದಾಗ, ಸದನದ ಎಲ್ಲ ರಾಜಕೀಯ ಪಕ್ಷಗಳು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದರು. ಮೋದಿಯವರು ಕೂಡ ಹೊಸ ಉಪಸಭಾಪತಿಗಳನ್ನು ಅಭಿನಂದಿಸುತ್ತಾ ಹೀಗೆ ಎಚ್ಚರಿಸಿದರು, “ನನ್ನ ಗೆಳೆಯರಾದ ಶ್ರೀ ಶ್ಯಾಮ್‌ ಲಾಲ್‌ ಅವರಿಗೆ ಅಭಿನಂದನೆ ಸಲ್ಲಿಸುವಂತೆ ಎಲ್ಲರ ಬಳಿ ಕೇಳಿಕೊಳ್ಳುತ್ತೇನೆ. ನನ್ನ ಆತ್ಮೀಯ ಗೆಳೆಯ ಈ ಹಿಂದಿನಂತೆಯೇ ಮುಂದೆಯೂ ಪಕ್ಷಪಾತಿಯಾಗಿಯೇ ಮುಂದುವರಿಯುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ನನ್ನ ಗೆಳೆಯರೂ, ನೆರೆಯವರೂ ಮತ್ತು ಸಹೋದ್ಯೋಗಿಯೂ ಆದ ಅವರು ಯಾವುದೇ ಸಂಕಷ್ಟಗಳಿಲ್ಲದೆ, ಆರಾಮವಾಗಿ ಪೀಠದಲ್ಲಿರಲಿ ಎಂದು ನಾನು ಹಾರೈಸುತ್ತೇನೆ. ಜೊತೆಗೆ, ಅವರು ಪೀಠದಲ್ಲಿ ಸರಿಯಾಗಿ ವರ್ತಿಸದಿದ್ದರೆ ನಾನು ಅವರ ಸೀಟಿನಲ್ಲಿ ಕೂತು ಬಿಡುತ್ತೇನೆ.” ಉಪಸಭಾಪತಿಗಳು ಸಭಾಧ್ಯಕ್ಷ ಪೀಠದಲ್ಲಿರದಿದ್ದಾಗ ವಿರೋಧ ಪಕ್ಷದ ನಾಯಕನ ಪಕ್ಕದಲ್ಲಿಯೇ ಕೂತಿರುತ್ತಾರೆ.

ಮೋದಿ ಅವರ ಹಾಸ್ಯ ಪ್ರಜ್ಞೆಯು ಕೇವಲ ಅವರ ಭಾಷಣಗಳಲ್ಲಿ ಮಾತ್ರವಲ್ಲ, ಬರವಣಿಗೆಯಲ್ಲಿಯೂ ಎದ್ದು ಕಾಣುತ್ತಿತ್ತು. ಅವರು ತಮ್ಮ ಪತ್ರಗಳಲ್ಲಿ ಇಂದಿರಾ ಗಾಂಧಿಯವರನ್ನು IG ಎಂದು ಸಂಬೋಧಿಸುತ್ತಿದ್ದರು. ಹಾಗೆಯೇ ತಮ್ಮ ಹೆಸರನ್ನು PM ಎಂದು ನಮೂದಿಸಿ ಸಹಿ ಹಾಕುತ್ತಿದ್ದರು. ಅವರು ಇಂದಿರಾ ಗಾಂಧಿಯವರ ಬಳಿ “ನೀವು ಬರೀ ತಾತ್ಕಾಲಿಕ ಪ್ರಧಾನಿ, ನಾನೇ ಶಾಶ್ವತ ಪ್ರಧಾನಿ” ಎಂದು ಹೇಳಿಕೊಳ್ಳುತ್ತಿದ್ದರು.

1975 ರಲ್ಲಿ ಇಂದಿರಾ ಗಾಂಧಿ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯಲ್ಲಿ MISA ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಹಾಗೆ ಬಂಧನಕ್ಕೊಳಗಾಗಿ ಸುಮಾರು 16 ತಿಂಗಳುಗಳ ಕಾಲ ತಿಹಾರ್‌ ಮತ್ತು ರೋಹ್ಟಕ್‌ ಜೈಲುಗಳಲ್ಲಿ ಕಳೆದಿದ್ದರು.

ಒಬ್ಬ ವಿನೋದಪ್ರಿಯ ಸಂಸದ ಮತ್ತು ಅದ್ಭುತ ವಾಸ್ತುಶಿಲ್ಪಿ ಎಂಬುದರ ಜೊತೆಗೆ, ಮೋದಿ ಒಬ್ಬ ಜನಪ್ರಿಯ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು. ಅವರು ಬರೆದ ಎರಡು ಪುಸ್ತಕಗಳಿವೆ.

ಮೊದಲ ಪುಸ್ತಕ, ಜುಲ್ಫಿಕರ್‌ ಅಲಿ ಅವರ ಕಾಲ ಮತ್ತು ಬದುಕಿನ ಬಗ್ಗೆ ಬರೆದ ಪುಸ್ತಕ“ಜುಲ್ಫಿ, ಮೈ ಫ್ರೆಂಡ್‌” (1973). ಎರಡನೇ ಪುಸ್ತಕ, “ಡೆಮಾಕ್ರಸಿ ಮೀನ್ಸ್‌ ಬ್ರೆಡ್‌ ಆಂಡ್‌ ಫ್ರೀಡಂ” (1979). ಇದನ್ನು ಅವರು ಬರೆದದ್ದು ತನ್ನ 16 ತಿಂಗಳುಗಳ ಕಾಲದ ಜೈಲುವಾಸದ ಸಮಯದಲ್ಲಿ. ಈ ಪುಸ್ತಕವು ಪ್ರಜಾಪ್ರಭುತ್ವ ಆಶಯದ ಉಗಮ ಮತ್ತು ಅದನ್ನು ಉಳಿಸಿಕೊಳ್ಳುವ ಕೆಲಸಕಾರ್ಯಗಳು ಹಾಗೂ ಸಂಸ್ಥೆಗಳ ಬಗೆಗಿನ ಹುಡುಕಾಟದ ಒಂದು ಪ್ರಯತ್ನವಾಗಿತ್ತು.

ಬಾಂಬೆಯಿಂದ ಪ್ರಕಟವಾಗುತ್ತಿದ್ದ ಮಾರ್ಚ್‌ ಆಫ್‌ ದಿ ನೇಷನ್‌ ಎಂಬ ಇಂಗ್ಲಿಷ್‌ ವಾರಪತ್ರಿಕೆಯ ಸಂಪಾದಕರಾಗಿ ಕೂಡ ಅವರು ಕೆಲಸ ಮಾಡಿದ್ದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಹಲವು ಲೇಖನಗಳನ್ನು ಬರೆದಿದ್ದರು.

ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಭಾರತದ ರಾಜಕಾರಣಕ್ಕೆ ವಿಶೇಷವಾದ ವಿನೋದ, ತೆಳುಹಾಸ್ಯ ಮತ್ತು ಪ್ರಬುದ್ಧತೆಯ ಲೇಪನವನ್ನು ನೀಡಿದ್ದ ಪಿಲೂ ಮೋದಿ ಅವರು ನಿದ್ದೆಯಲ್ಲಿದ್ದಾಗಲೇ ಮರಣ ಹೊಂದಿದರು. ಅವರ ಸಾವಿಗಿಂತ ಕೆಲದಿನಗಳ ಮುಂಚೆ ಇಂಡಿಯಾ ಟುಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ, “ಜಗತ್ತು ಒಂದು ಐಡಿಯಾದ ಸುತ್ತ ಸುತ್ತುತ್ತಿದೆ. ಶುದ್ಧ ಹೃದಯ, ಒಳ್ಳೆಯ ಉದ್ದೇಶ ಮತ್ತು ದೃಢಸಂಕಲ್ಪವಿದ್ದರೆ ಪ್ರತಿಯೊಂದು ಸಮಸ್ಯೆಗೂ ಇಲ್ಲಿ ಪರಿಹಾರವಿದೆ.” ಅವತ್ತು ತಾನೊಂದು ಹೊಸ ರಾಜಕೀಯ ಪಕ್ಷವನ್ನು ಆರಂಭಿಸುವ ಕುರಿತು ಕೂಡ ಮಾಹಿತಿ ನೀಡಿದ್ದರು. ಆದರೆ 1983 ಜನವರಿ 29 ರಂದು ಅವರು ನಿಧನರಾದರು. ಆಗ ಅವರ ಪ್ರಾಯ 57.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

You cannot copy content of this page

Exit mobile version