Home ಅಂಕಣ ಬೊಗಸೆಗೆ ದಕ್ಕಿದ್ದು-87 : ಆರೆಸ್ಸೆಸ್ಸಿನ ಫ್ಯಾಸಿಸ್ಟ್, ನಾಝಿ ಬೇರುಗಳು!

ಬೊಗಸೆಗೆ ದಕ್ಕಿದ್ದು-87 : ಆರೆಸ್ಸೆಸ್ಸಿನ ಫ್ಯಾಸಿಸ್ಟ್, ನಾಝಿ ಬೇರುಗಳು!

0

“..ಆರೆಸ್ಸೆಸ್ಸಿಗೆ ಮೂಲ ಪ್ರೇರಣೆಯಾಗಿದ್ದದ್ದು ಕಾಂಗ್ರೆಸ್‍ನ ಒಳಗೇ ಇದ್ದ “ಹಿಂದೂ ಮಹಾಸಭಾ” ಎಂಬ ಒಂದು ಸಮಾನಾಸಕ್ತಿ ಗುಂಪು…” ನಿಖಿಲ್ ಕೋಲ್ಪೆಯವರ ಬರಹದಲ್ಲಿ

1925ರ ಸೆಪ್ಟೆಂಬರ್ 27ರಂದು ಸ್ಥಾಪನೆಯಾದ ಆರೆಸ್ಸೆಸ್ ರಾಷ್ಟ್ರಪ್ರೇಮದ ಹೆಸರಿನಲ್ಲಿ ಪ್ರತಿಪಾದಿಸುತ್ತಾ ಬಂದಿರುವ “ರಾಷ್ಟ್ರ” ಯಾವುದು, ಅದನ್ನು ಸ್ಥಾಪಿಸಿದ ಡಾ. ಕೇಶವರಾವ್ ಬಲಿರಾಮ ಹೆಡ್ಗೇವಾರ್ ಮತ್ತು ಅದಕ್ಕೂ ಮೊದಲು ಅದನ್ನು ಪ್ರತಿಪಾದಿಸಿದ ಡಾ. ಬಿ.ಎಸ್. ಮೂಂಜೆಯ ಫ್ಯಾಸಿಸ್ಟ್ ಪ್ರಭಾವವನ್ನು ತಿಳಿದುಕೊಳ್ಳುವುದು- ಇಂದು ಅದು ನೋಂದಣಿಯಾಗದೆ ಸರಕಾರದ ಸಕಲ ಮಾನ್ಯತೆ ಪಡೆಯುತ್ತಿರುವ ಸಂದರ್ಭದಲ್ಲಿ ಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ಈ ಬ್ರಾಹ್ಮಣವಾದಿ “ಹಿಂದೂತ್ವ” ಸಂಘಟನೆಯು ಇಟಲಿ ಮತ್ತು ಜರ್ಮನಿಯ ಫ್ಯಾಸಿಸ್ಟ್-ನಾಝಿ ಸಂಘಟನೆಗಳ ಜೊತೆ ಹೊಂದಿರುವ ದಂಗುಬಡಿಸುವ ಸಮಾನತೆಯನ್ನು ಕಳೆದ ಕಂತಿನಲ್ಲಿ ಸ್ಥೂಲವಾಗಿ ನೋಡಿದ್ದೆವು. ಇಲ್ಲೀಗ ಅದರ ಬೇರುಗಳನ್ನು ಸ್ವಲ್ಪ ವಿವರವಾಗಿ ನೋಡೋಣ.

ಆರೆಸ್ಸಿಗರು “ಡಾಕ್ಟರ್ ಜೀ” ಎಂದು ಕರೆಯುವ ಹೆಡ್ಗೇವಾರ್ ಮತ್ತು ಆತನ ಗುರು ಮೂಂಜೆ ಎಂಬ ಮರಾಠಿ ಚಿತ್ಪಾವನ ಬ್ರಾಹ್ಮಣರಿಬ್ಬರು ಜೀವ ಉಳಿಸುವ ವೈದ್ಯರಾಗದೆ ಸಮಾಜದಲ್ಲಿ ಕೋಮುವಾದದ ವಿಷ ಹರಡುವ ವೈದ್ಯರಾದದ್ದನ್ನು ನಾವು ಮನಗಾಣಬೇಕು. ಇಂದು ಹೆಡ್ಗೇವಾರ್ ಹಲವು ರಾಜ್ಯಗಳ ಪಠ್ಯ ಪುಸ್ತಕಗಳಲ್ಲಿ ಪಾಠವಾಗಿ ಮಕ್ಕಳ ಎಳೆ ಮನಸ್ಸುಗಳನ್ನು ಪ್ರವೇಶಿಸುತ್ತಿರುವಾಗ, ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಶಾಖೆಗಳಲ್ಲಿ ಕುಟಿಲವಾಗಿ ರೂಪಿಸಿದ ಆಟಗಳ ಮೂಲಕ ಮತ್ತು ವಾಟ್ಸಾಪ್ ವಿಷವಿದ್ಯಾಲಯದಲ್ಲಿ ಆತನ ವಿಚಾರಗಳನ್ನು ಹರಡಲಾಗುತ್ತಿರುವಾಗ ಇದು ಇನ್ನಷ್ಟು ಪ್ರಸ್ತುತ.

ಆರೆಸ್ಸೆಸ್ಸಿಗೆ ಮೂಲ ಪ್ರೇರಣೆಯಾಗಿದ್ದದ್ದು ಕಾಂಗ್ರೆಸ್‍ನ ಒಳಗೇ ಇದ್ದ “ಹಿಂದೂ ಮಹಾಸಭಾ” ಎಂಬ ಒಂದು ಸಮಾನಾಸಕ್ತಿ ಗುಂಪು. 1923ರಲ್ಲಿ ಇದು ಮದನ ಮೋಹನ ಮಾಳವೀಯ ಎಂಬವರ ನೇತೃತ್ವದಲ್ಲಿ ಒಂದು ಸ್ವಯಂ ಆಸ್ತಿತ್ವ ಇರುವ ಸಂಘಟನೆಯಾಗಿ ಹುಟ್ಟಿತು. ಇಂದು ಈತನನ್ನೂ ಒಬ್ಬ “ರಾಷ್ಟ್ರೀಯ ನಾಯಕ”ನಾಗಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ಹಿಂದೂ’ ಹೆಸರಿನಲ್ಲಿ ಬ್ರಾಹ್ಮಣವಾದಿ ಮೇಲ್ಜಾತಿಗಳ ಹಿತರಕ್ಷಣೆಗಾಗಿಯೇ ಇದ್ದ ಈ ಸಂಘಟನೆಯು ತಳವರ್ಗದವರನ್ನು ಸೇರಿಸಿಕೊಳ್ಳಲೂ ಇಲ್ಲ. ತಳವರ್ಗದವರು ಅದನ್ನು ಮೂಸಿ ನೋಡಲೂ ಇಲ್ಲ. ಅದು ವರ್ಣಾಶ್ರಮ ಧರ್ಮ, ಬ್ರಾಹ್ಮಣ್ಯದ ಮೇಲ್ಮೆಯನ್ನು ಉಳಿಸಿಕೊಳ್ಳಲು ಬಯಸುವ ಒಂದು ಪಿತೂರಿಗಾರರ, ಪ್ರಚೋದಕರ ಹಲ್ಲಿಲ್ಲದ ಸಂಘಟನೆಯಾಗಿಯೇ ಉಳಿದುಕೊಂಡಿತ್ತು. ಹಿನ್ನೆಲೆಯಲ್ಲಿ ಕುಳಿತು ಪಿತೂರಿ ಮಾಡುವುದು, ಪ್ರಚೋದಿಸುವುದಷ್ಟೇ ಅದರ ಕೆಲಸವಾಗಿತ್ತು.

ಮಾಳವೀಯರ ವಿಚಾರಗಳಿಂದ ಹಿಂದೆಯೇ ಪ್ರಭಾವಿತರಾದ ಹೆಡ್ಗೇವಾರ್ ಅವರ ಎಳೆ ಮನಸ್ಸಿಗೆ ಹೊಕ್ಕಿದ್ದೂ ರಾಷ್ಟ್ರೀಯತೆಯ ಕುರಿತ ಇದೇ ಬಾಲಿಶ ವಿಚಾರಗಳೇ ಆಗಿದ್ದವು. ಕೇವಲ 5000 ಸಾವಿರ ಸೈನಿಕರನ್ನು ಹೊಂದಿದ್ದ ರಾಬರ್ಟ್ ‍ಕ್ಲೈವ್ ಹೇಗೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಗಲ್ಲು ಹಾಕಿದ? ಅಲ್ಲಾವುದ್ದೀನ್ ಖಿಲ್ಜಿ ಹದಿನೇಳು ಬಾರಿ ದಂಡಯಾತ್ರೆ ಮಾಡಿ ಸೋಮನಾಥ ಸಹಿತ ಹಲವಾರು ದೇವಾಲಯಗಳಿಗೆ ದಾಳಿ ಮಾಡಿ ಸಂಪತ್ತು ಲೂಟಿ ಮಾಡಿದ? ಈ ಮುಂತಾದ ವಿಚಾರಗಳು ಅವರ ತಲೆಯಲ್ಲಿದ್ದವು. ಆದರೆ ಸೋಮನಾಥಪುರದಲ್ಲಿ ಬ್ರಾಹ್ಮಣರ ಅಪಾರ ಪ್ರಮಾಣದ ಸಂಪತ್ತನ್ನು ಬಚ್ಚಿಡಲಾಗಿತ್ತು; ಅದಕ್ಕಾಗಿ ಹಿಂದೂ ರಾಜರುಗಳೂ ಸೋಮನಾಥ ಮತ್ತು ಅಂತಹಾ ಇತರ ದೇವಾಲಯಗಳಿಗೆ ದಾಳಿ ಮಾಡಿದ್ದರು. ಆಗ “ಹಿಂದೂ”ಗಳು ಯಾಕೆ ಪ್ರತಿರೋಧ ತೋರಲಿಲ್ಲ? ಯಾಕೆಂದರೆ, ಇದರಿಂದ ಬಡ ಜನರಿಗಾಗಲೀ ದೇವಾಲಯ ಪ್ರವೇಶ ಇಲ್ಲದ ದಲಿತರಿಗಾಗಲೀ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ; ಅದು ರಾಜರಿಗೆ ಸಂಬಂಧಿಸಿದ ವಿಚಾರವಾಗಿತ್ತು. ಅಲ್ಲಾವುದ್ದೀನ್ ಖಿಲ್ಜಿಯ ಸೇನಾನಾಯಕ ಮಲ್ಲಿಕ್ ಕಾಫರ್ ಒಬ್ಬ ಮತಾಂತರಗೊಂಡ ಹಿಂದೂವಾಗಿದ್ದ; ಅವನು ಮತಾಂತರವಾಗಲು ಕಾರಣವೇನು? ಈ ದಾಳಿಗಳು ನಡೆದಾಗ ಹಿಂದೂ ರಾಜರುಗಳೇನು ಮಾಡುತ್ತಿದ್ದರು? “ಭಾರತ” ಎಂಬ ದೇಶ ಅಸ್ತಿತ್ವದಲ್ಲಿ ಇತ್ತೆ? ಕ್ಲೈವ್ ಆದಿಯಾಗಿ ಬ್ರಿಟಿಷರ ವಿರುದ್ಧ ಎರಡು ಮೂರು ಶತಮಾನ ಕಾಲ ಹಿಂದೂಗಳಾಗಲಿ, ಮುಸ್ಲಿಮರಾಗಲೀ- “ನಾವು ಭಾರತೀಯರು” ಎಂಬ ನೆಲೆಯಲ್ಲಿ ಯಾಕೆ ಒಟ್ಟಾಗಲಿಲ್ಲ? ಬ್ರಿಟಿಷರೂ, ಮೊಗಲರೂ, ಅವರೂ, ಇವರೂ- ಎಲ್ಲಾ ಆಡಳಿತಗಾರರು ಒಂದೇ, ನಮಗೇನು ಎಂಬ ಭಾವನೆ ಮೇಲು ಕೀಳಿನ ಜಾತಿವ್ಯವಸ್ಥೆಗೆ ಒಗ್ಗಿಕೊಂಡಿದ್ದ ಭಾರತೀಯರಲ್ಲಿ ಇರಲಿಲ್ಲವೆ? ಎಲ್ಲರೂ ಮೇಲಿನವರ ಸೇವೆ ಮಾಡಿಯೇ ಬದುಕಿದವರು. ಉಳಿದ ಹಿಂದೂಗಳು, ದಲಿತರನ್ನು, ಒಟ್ಟಾಗಿ ಹೇಳುವುದಾದರೆ ಯಾರೇ ಅಧಿಕಾರಕ್ಕೆ ಬರಲಿ; ಕೆಳವರ್ಗಗಳ ಜನರನ್ನು ಪರೋಕ್ಷವಾಗಿ ಆಳಿದವರು ಇದೇ ಬ್ರಾಹ್ಮಣರು.

ಈ ವಿಚಾರಗಳೆಲ್ಲ ಬಹುಶಃ ಬ್ರಾಹ್ಮಣನಾಗಿದ್ದ ಹೆಡ್ಗೇವಾರ್ ಅವರಿಗೆ ಹೊಳೆದಿರಲಾರದು. ಅವರು ಹಿಂದೂ ಏಕತೆಯನ್ನು ಪ್ರತಿಪಾದಿಸಿದಾಗ ಆ ಹಿಂದೂತ್ವ ಸಮಾನತೆಯ ಹಿಂದೂತ್ವ ಆಗಿರಲಿಲ್ಲ. ಬದಲಾಗಿ ಬಹುಸಂಖ್ಯಾತರು ಬ್ರಾಹ್ಮಣ್ಯವನ್ನು ಒಪ್ಪಿಕೊಂಡು ಅವರ ಅಡಿಯಾಳುಗಳಾಗಿ ಬದುಕಿ ಬಂದ ಹಿಂದೂತ್ವವಾಗಿತ್ತು. ಅವರ ಹಿಂದೂತ್ವ ವೇದ-ಉಪನಿಷದ್‍ಗಳಲ್ಲಿ ಇದ್ದ ಕೆಲವು ಉದಾತ್ತ ತತ್ವಗಳು (ಸಹಾನುಭವತು, ಸಹಾನೌಭುನತ್ತು… ಜತೆಗೆ ಬಾಳುವ, ಜೊತೆಗೆ ಉಣ್ಣುವ..) ಮತ್ತು ಸರ್ವೇ ಜನಾ ಸುಖಿನೋ ಭವಂತು ಎಂಬಂತಹ ಆದರ್ಶದ ಮೇಲೆ ನಿಂತಿರಲಿಲ್ಲ. ಮುಸ್ಲಿಮರು, ‘ಕ್ರೈಸ್ತ’ರಾದ ಬ್ರಿಟಿಷರ ವಿರುದ್ಧ ಹಿಂದೂಗಳು- ಬ್ರಾಹಣ್ಯದ ಮೇಲ್ಮೆ ಭೇದ ಭಾವವನ್ನು ಒಪ್ಪಿಕೊಂಡು ಒಂದಾಗಬೇಕು ಎಂಬ ಆಗ್ರಹದ ಮೇಲೆ ನಿಂತಿತ್ತು!

ವೈದ್ಯಕೀಯ ಕಲಿಯುತ್ತಿದ್ದಾಗ ಕಲ್ಕತ್ತಾದಲ್ಲಿ ಹೆಡಗೇವಾರ್ ಅವರಿಗೆ ಬಲಪಂಥೀಯ ಭೂಗತ ಗುಪ್ತ ಸಮಾಜಗಳ ಸಂಪರ್ಕ ಸಿಕ್ಕಿತು. ಅವರ ತಂತ್ರ-ಕುತಂತ್ರಗಳನ್ನು ಬಹುಶಃ ಚೆನ್ನಾಗಿಯೇ ಕಲಿತುಕೊಂಡರು. ಅವರು ಆರೆಸ್ಸೆಸ್ ಸ್ಥಾಪಿಸುವ ಕೆಲ ವರ್ಷ ಮೊದಲಷ್ಟೇ ಜರ್ಮನಿಯ ಜರ್ಮನ್ ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಪಾರ್ಟಿ ಸ್ಥಾಪನೆಯಾಗಿತ್ತು. ಅದರ ಸಂಘಟನಾ ಸಂರಚನೆ, ಎಸ್‍ಎಸ್ (ಸ್ಟ್ರೂಮ್ಸ್ ಸ್ಟ್ರಾಫೆಲ್- ಭದ್ರತಾ ಸಿಬ್ಬಂದಿ ಅಥವಾ ಚೌಕಿದಾರ್!) ಎಂದು ಕರೆಸಿಕೊಂಡ ಸಮವಸ್ತ್ರಧಾರಿ ಗೂಂಡಾ ವಿಭಾಗ ಇತ್ಯಾದಿಗಳನ್ನು ಅದೇ ಮಾದರಿಯಲ್ಲಿ ಆರೆಸ್ಸೆಸ್ಸಿನಲ್ಲಿ ಹೇಗೆ ಅಳವಡಿಸಲಾಯಿತು ಎಂಬುದನ್ನು ಈಗಾಗಲೇ ಸ್ಥೂಲವಾಗಿ ನೋಡಿದ್ದೇವೆ. ಬ್ರಿಟಿಷ್ ಕಾಲದ ಆಗಿನ ಪೊಲೀಸರ ಸಮವಸ್ತ್ರದ ರೀತಿ ಖಾಕಿ ಚಡ್ಡಿ, ಬೆಲ್ಟು-ಬೂಟುಗಳನ್ನು ನೀಡಿದ್ದಲ್ಲದೆ ಕೈಗೊಂದು ದಂಡವನ್ನೂ ನೀಡಲಾಯಿತು! ಇದೀಗ ಕೆಲವೆಡೆ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡಲಾಗುತ್ತಿದೆ. ಮಕ್ಕಳ ಕೈಗೆ ತ್ರಿಶೂಲ, ಖಡ್ಗಗಳನ್ನು ನೀಡಲಾಗುತ್ತಿದೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ.

ಇದರ ಕುರಿತು ಸ್ವಲ್ಪ ವಿವರವಾಗಿ ನೋಡಬೇಕೆಂದರೆ, ಪ್ರತೀ ಶಾಖೆಯಲ್ಲಿ ಒಬ್ಬ “ಬೌದ್ಧಿಕ್ ಪ್ರಮುಖ್” ಇರುತ್ತಾನೆ- ನಾಝಿಗಳ ಪೊಲಿಟಿಕಲ್ ಕಮಿಸ್ಸಾರ್ ರೀತಿಯಲ್ಲಿ. ಆತ ಆರೆಸ್ಸೆಸ್ ಸಿದ್ಧಾಂತಗಳನ್ನು ಹೇಳಿಕೊಟ್ಟು ಬ್ರೈನ್‍ವಾಶ್ ಮಾಡುತ್ತಾನೆ. ಆತ ಮೇಲಿನವರ ನೇರ ನಿಯಂತ್ರಣದಲ್ಲಿದ್ದು ಉಳಿದವರಿಗಿಂತ ಮೇಲಿರುತ್ತಾನೆ. ಇಲ್ಲಿ ‘ಆತ’ ಎಂಬುದಕ್ಕೆ ಮಹತ್ವ ಇದೆ. ಆರೆಸ್ಸೆಸ್‍ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ದೇಶವನ್ನು ಭಾರತ ಮಾತೆ ಎನ್ನುವ ಆರೆಸ್ಸೆಸ್ ಬಳಗದಲ್ಲಿ ರಾಷ್ಟ್ರ ಸೇವಿಕಾ ಸಂಘ ಎಂಬ ಪ್ರತ್ಯೇಕ ಸಂಘಟನೆ ಇದೆ. ಇದು ಸ್ವಯಂಸೇವಕನೊಬ್ಬನ ತಾಯಿ ಲಕ್ಷ್ಮೀಬಾಯಿ ಕೇಳ್ಕರ್ ಎಂಬವರ ಬೆಂಬಿಡದ ಒತ್ತಾಯದಿಂದ ಪ್ರಾರಂಭವಾಯಿತು. 1936ರಲ್ಲಿ ಆಕೆ ಸಂಘದಲ್ಲೇ ಸ್ತ್ರೀಯರ ವಿಭಾಗವೊಂದನ್ನು ಸ್ಥಾಪಿಸುವಂತೆ ಹೆಡ್ಗೇವಾರ್‌ರನ್ನು ಭೇಟಿ ಮಾಡಿದಾಗ ಅವರು ಸುತಾರಾಂ ಒಪ್ಪಲಿಲ್ಲ. ಕೊನೆಗೆ ಒತ್ತಾಯಕ್ಕೆ ಮಣಿದು ಆರೆಸ್ಸೆಸ್ ಮಾದರಿಯಲ್ಲೇ ಪ್ರತ್ಯೇಕ ಸಂಘಟನೆ ಮಾಡಿಕೊಳ್ಳಿ ಎಂದರು. ಆರೆಸ್ಸೆಸ್ “ಭಾರತೀಯ ನಾರಿ”ಗೆ ನೀಡುವ ಎರಡನೇ ದರ್ಜೆಯ ಸ್ಥಾನಮಾನವನ್ನು ತಿಳಿದಕೊಳ್ಳಲು ಈ ಬಗ್ಗೆಯೇ ಮುಂದೆ ಪ್ರತ್ಯೇಕವಾಗಿ ಪರಿಶೀಲಿಸೋಣ.

ಬೌದ್ಧಿಕ್ ಪ್ರಮುಖ್‍ಗಳು ಶಾಖೆಯಲ್ಲಿ ಆಟ, ಕತೆಗಳ ಮೂಲಕ ಹೇಗೆ ದ್ವೇಷಭಾವನೆಯನ್ನು ಗೊತ್ತೇ ಆಗದಂತೆ ಬಿತ್ತುತ್ತಾರೆ ಎಂಬುದನ್ನು ಹಿಂದೆ ಜನಸಂಘದಲ್ಲಿ ಇದ್ದು ಶಾಸಕರೂ ಆಗಿದ್ದ ಎ.ಕೆ.ಸುಬ್ಬಯ್ಯ ಅವರು ತಮ್ಮ ಆರ್.ಎಸ್.ಎಸ್ ಅಂತರಂಗ ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ. (1988, ಸಂಗಾತಿ ಪ್ರಕಾಶನ)
ಅವರು ಬರೆಯುತ್ತಾರೆ: “ಒಂದು ಉದಾಹರಣೆ ಮಾತ್ರ ಇಲ್ಲಿಡುತ್ತೇನೆ. ‘ಮೈ ಶಿವಾಜಿ ಹೂಂ’ ಎನ್ನುವ ಆಟವನ್ನು ಶಾಖೆಗಳಲ್ಲಿ ಆಡಿಸುತ್ತಾರೆ. ಮಕ್ಕಳೆಲ್ಲರೂ ‘ಮೈ ಶಿವಾಜಿ ಹೂಂ, ಮೈ ಶಿವಾಜಿ ಹೂಂ’ ಎಂದು ಓಡಾಡುತ್ತಾರೆ. ಮಧ್ಯದಲ್ಲಿ ಒಬ್ಬ ‘ಮೈ ಔರಂಗಜೇಬ್ ಹೂಂ’ ಎನ್ನುತ್ತಾನೆ. ಉಳಿದ ಮಕ್ಕಳು ಮಕ್ಕಳೆಲ್ಲರೂ ಹೋಗಿ ‘ಮೈ ಔರಂಗಜೇಬ್ ಹೂಂ’ ಎಂದವನ ಮೇಲೆ ಬೀಳುತ್ತಾರೆ – ಅವನನ್ನು ಥಳಿಸುತ್ತಾರೆ.” ಇಂತದ್ದೇ ಬ್ರೈನ್ ವಾಷಿಂಗ್ ಕೆಲಸವನ್ನು ನಾಜಿಗಳು ‘ಹಿಟ್ಲರ್ ಯೂತ್’ ಎಂಬ ಸಂಘಟನೆಯಲ್ಲಿ ಮಾಡಿದ್ದರು.

ಹಿಂದೂ ಮಹಾಸಭಾದಲ್ಲಿ ಎರಡು-ಮೂರು ವರ್ಷ ಸಕ್ರಿಯರಾಗಿದ್ದ ಹೆಡ್ಗೇವಾರ್, ಬ್ರಿಟಿಷ್ ಗುಲಾಮ ವಿನಾಯಕ ದಾಮೋದರ ಸಾವರ್ಕರ್ ಅವರ ವಿಚಾರಗಳಿಂದಲೂ ಪ್ರಭಾವಿತರಾಗಿದ್ದರು. ಅಂಡಮಾನ್ ಜೈಲಿನಲ್ಲಿದ್ದು, ನಂತರ ಬ್ರಿಟಿಷರಿಗೆ ‘ಕ್ಷಮಾಪಣಾ’ ಪತ್ರ ಬರೆದಿದ್ದ ಸಾವರ್ಕರ್ ಅವರನ್ನು ಈಗ “ವೀರ ಸಾವರ್ಕರ್” ಎಂದು ಹೊಗಳುತ್ತಿರುವ ಹಿಂದೂತ್ವದ ಬೆಂಬಲಿಗರು, ಆರೆಸ್ಸೆಸ್ಸಿಗೂ ತಿಳಿದಿರುವ ಗೋಹತ್ಯೆ ಬಗ್ಗೆ ಸಾವರ್ಕರರ ವಿಚಾರಗಳನ್ನು ತಿಳಿದರೆ ಕಂಗಾಲಾಗಿಬಿಡಬಹುದು. ತಿನ್ನುವವರನ್ನು ಅವರ ಪಾಡಿಗೆ ಬಿಟ್ಟರೆ ಒಳ್ಳೆಯದು ಎಂಬುದು ಅವರ ನಿಲುವು. ತಮಗೆ ಸರಿಹೊಂದುವುದನ್ನು ಮಾತ್ರ ಎತ್ತಿಕೊಂಡು, ಸರಿಹೊಂದದ್ದನ್ನು ಇಲ್ಲವೇ ಇಲ್ಲ ಎಂದು ನಟಿಸುವುದು ಆರೆಸ್ಸೆಸ್ಸಿನ ಸಾಮಾನ್ಯ ತಂತ್ರಗಳಲ್ಲಿ ಒಂದು.

ಆರಂಭದಲ್ಲಿ ಹೆಡ್ಗೇವಾರ್ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ, ಆಗಸ್ಟ್ 1921 ಮತ್ತು ಜುಲೈ 1922ರ ನಡುವೆ ಒಂದು ವರ್ಷ ಜೈಲು ಅನುಭವಿಸಿದ್ದರೂ, ನಂತರ ಬ್ರಿಟಿಷರ ಜೊತೆಗೆ ಸಹಕಾರ ತೋರಿದರು ಎಂಬುದು- ದಾಖಲೆಗಳಿರುವ ವಾಸ್ತವ. ಇದೀಗ ಸರಿಸುಮಾರು ಅದೇ ಕಾಲದ ಭಗತ್‍ಸಿಂಗ್ ಅವರಂತಹ ಕಮ್ಯುನಿಸ್ಟ್ ಒಲವುಳ್ಳ ಕ್ರಾಂತಿಕಾರಿಗಳನ್ನು ತಮ್ಮವರೆಂದು ಹೇಳಿಕೊಳ್ಳುತ್ತಿರುವವರು ಆಗ ಬ್ರಿಟಿಷರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದ್ದರು ಎಂಬುದಕ್ಕೆ ಲಿಖಿತ ಸಾಕ್ಷ್ಯಾಧಾರಗಳಿವೆ. ಈ ಸಂಘಟನೆಯು ತಮ್ಮ ಆಡಳಿತಕ್ಕೆ ‘ಉಪಯೋಗಿ’ ಎಂದು ಬ್ರಿಟಿಷರು ಬರೆದ ಪತ್ರಗಳು ಕೂಡ ಲಭ್ಯವಿವೆ. ದೇಶಪ್ರೇಮಿ ಎಂದು ಕರೆದುಕೊಳ್ಳುತ್ತಿರುವ ಆರೆಸ್ಸೆಸ್, ಬ್ರಿಟಿಷ್ ಆಡಳಿತದಲ್ಲಿ ಕೇವಲ ಒಂದು ಬಾರಿ ಮಾತ್ರ ನಿಷೇಧಕ್ಕೆ ಗುರಿಯಾಗಿತ್ತು. ಅದು 1947ರ ಮೊದಲ ಭಾಗದಲ್ಲಿ – ಅದೂ ಕೂಡ ಪಂಜಾಬ್ ಪ್ರಾಂತ್ಯದಲ್ಲಿ! ಕಾರಣ- ಸ್ವಾತಂತ್ರ್ಯ ಹೋರಾಟವಲ್ಲ – ಅವಿಭಜಿತ ಪಂಜಾಬಿನಲ್ಲಿ ಕೋಮುಗಲಭೆ ಹಬ್ಬಿಸಲು ಯತ್ನಿಸಿದ್ದು. ಆದರೆ, ಸ್ವಾತಂತ್ರ್ಯದ ಬಳಿಕ ಆರೆಸ್ಸೆಸ್ ಮೂರು ಭಾರಿ ನಿಷೇಧಿತವಾಯಿತು!. ಯಾವುದೇ ಜನಪರ ಹೋರಾಟದ ಕಾರಣಗಳಿಗಲ್ಲ!, ದೇಶದ ಶಾಂತಿಯನ್ನು ಕದಡಿದ ಕಾರಣಕ್ಕಾಗಿ! ‘ಕದಡಿದ ನೀರಲ್ಲಿ ಮೀನು ಹಿಡಿಯುವುದು’ ಎಂಬ ಮಾತು ಆರೆಸ್ಸೆಸ್‍ಗೆ ಚೆನ್ನಾಗಿ ಅನ್ವಯವಾಗುತ್ತದೆ.

ಮೊದಲ ಬಾರಿಗೆ 1948ರಲ್ಲಿಯೇ ಗೃಹ ಸಚಿವ, ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಅದನ್ನು ನಿಷೇಧಿಸಿದ್ದರು-ಕಾರಣ? ಗಾಂಧೀಜಿ ಹತ್ಯೆಗೆ ಸಂಭ್ರಮಾಚರಣೆ ಮಾಡಿ, ನಾಗಪುರ ಆದಿಯಾಗಿ ಎಲ್ಲೆಡೆ ಅದು ಸಿಹಿಹಂಚಿದ್ದು! ಎರಡನೇ ಬಾರಿ 1975-77 ರಲ್ಲಿ ತುರ್ತು ಪರಿಸ್ಥಿತಿ ವೇಳೆ. ತುರ್ತುಪರಿಸ್ಥಿತಿಗೆ ಪ್ರಬಲ ಕಾರಣ -ಬಲಪಂಥೀಯರು ಬಿತ್ತುತ್ತಿದ್ದ ವಿಷಬೀಜವಾಗಿದ್ದರೆ (ಸಿಪಿಐ ಇದಕ್ಕಾಗಿ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿತ್ತು), ಇನ್ನೊಂದು ಕಡೆಯಲ್ಲಿ ಕಮ್ಯುನಿಸ್ಟರು ಪ್ರಬಲವಾಗಿ- ಸಂಸತ್ತಿನಲ್ಲೂ ಗಣನೀಯ ಸ್ಥಾನ ಪಡೆದದ್ದು. ಮತ್ತೊಂದು ಕಡೆಯಲ್ಲಿ ನಕ್ಸಲೀಯರು ಕಲ್ಕತ್ತಾವನ್ನೇ ಪ್ರತಿಭಟನಕಾರರಿಂದ ತುಂಬುವಂತಹ ಪ್ರಭಾವಿ ಮಟ್ಟಕ್ಕೆ ಬೆಳೆದದ್ದು. ಮೂವರು ಪರಸ್ಪರ ವಿರೋಧಿಗಳನ್ನು ಒಂದೇ ಏಟಿಗೆ ಮಟ್ಟ ಹಾಕುವ ದುಸ್ಸಾಹಸಕ್ಕೆ ಇಂದಿರಾ ಗಾಂಧಿಯವರು ಕೈಹಾಕಿದ್ದರು. ಮೂರನೇ ಬಾರಿ ಅದು ಅಲ್ಪಕಾಲದ ನಿಷೇಧಕ್ಕೆ ಒಳಗಾದದ್ದು, 1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ ಮುಸ್ಲಿಮರ ವಿರುದ್ಧ ಶೂದ್ರರನ್ನು, ಅಷ್ಟೇ ಏಕೆ ಇವರಿಂದ ದಮನಿತರಾದ ದಲಿತರನ್ನೂ ಎತ್ತಿ ಕಟ್ಟಿ-‘ಹಿಂದೂ-ಒಂದು’ ಎಂಬ ಒಂದು ವಂಚಕ ವ್ಯಾಖ್ಯಾನ ಬರೆದಾಗ!

‘ಧರ್ಮ-ಸಂಸ್ಕೃತಿ ರಕ್ಷಣೆ ಮೂಲಕ ಸ್ವಾತಂತ್ರ್ಯ’ ಘೋಷಣೆಯ ಅರ್ಥವೇನು?
ಹೆಡ್ಗೇವಾರ್ ನಂತರ ಬಂದ ‘ಗುರೂಜಿ’ ಅಥವಾ ಎಂ.ಎಸ್. ಗೋಲ್ವಾಲ್ಕರ್ ಎಂಬ “ಸರಸಂಘಚಾಲಕ” ಸ್ವಾತಂತ್ರ್ಯ ಚಳವಳಿಯಿಂದ ಇನ್ನಷ್ಟು ದೂರ ಸರಿದರು. ಬ್ರಿಟಿಷರಿಗೆ ಪರವಾದ ಆರೆಸ್ಸೆಸ್ ನಿಲುವುಗಳನ್ನು ಕುರಿತು 1940ರಲ್ಲಿ ಎಲ್ಲಾ ಪ್ರಾದೇಶಿಕ ಸಂಘ ಚಾಲಕರಿಗೆ ಕಳುಹಿಸಲಾಗಿತ್ತು. ಗೋಲ್ವಾಲ್ಕರ್ ಅವರ ‘ಶ್ರೀ ಗುರೂಜಿ ದರ್ಶನ’ ಸಂಪುಟ 4ರಲ್ಲಿ (ಭಾರತೀಯ ವಿಚಾರ ಸಾಧನ ಪ್ರಕಾಶನ, 1974) ಇಂತಾ ಹಲವಾರು ವಿಚಾರಗಳನ್ನು ನೋಡಬಹುದು. (‘ವೇಬ್ಯಾಕ್ ಮೆಷಿನ್’ ಎಂಬ ನೆಟ್‍ನಲ್ಲಿ ಲಭ್ಯವಿರುವ ಪಿಡಿಎಫ್‍ನಲ್ಲಿ ಕೂಡಾ ಇಂತಹ ವಿಚಾರಗಳಿವೆ). ಶಂಶುಲ್ ಇಸ್ಲಾಂ ಅವರ ‘ರಿಲೀಜಿಯಸ್ ಡೈಮೆನ್ಷನ್ಸ್’ ಎಂಬ ಪುಸ್ತಕದಲ್ಲೂ ಬಹಳಷ್ಟು ವಿವರ –ದಾಖಲೆಗಳಿವೆಯಂತೆ. (ಇವೆಲ್ಲವನ್ನೂ ಓದಿ, ವ್ಯರ್ಥಮಾಡುವಷ್ಟು ಸಮಯ ನನ್ನಲ್ಲಿ ಇಲ್ಲವಾದರೂ ಅಗತ್ಯ ಇರುವುದನ್ನು ನೋಡಿದ್ದೇನೆ.)

ದಶಕಗಳವರೆಗೆ, ಆರಂಭಿಕ ಹಿಂದೂ ರಾಷ್ಟ್ರೀಯತೆ ಮತ್ತು ಯುರೋಪಿಯನ್ ಫ್ಯಾಸಿಸಂ ನಡುವಿನ ಸಂಬಂಧವನ್ನು ಒಂದು ಸುಳ್ಳು ರಾಜಕೀಯ ಆರೋಪವೆಂದು ಪರಿಗಣಿಸಲಾಗಿತ್ತು. ಆದರೆ, ಪ್ರಮುಖವಾಗಿ ಇಟಾಲಿಯನ್ ಇತಿಹಾಸಕಾರ ಡಾ. ಮಾರ್ಜಿಯಾ ಕ್ಯಾಸೊಲಾರಿ ಎಂಬವರು ನಡೆಸಿದ ಹಳೆಯ ದಾಖಲೆಗಳ ಸಂಶೋಧನೆಯು ಅಕ್ಷರಶಃ ಈ ಸಂಬಂಧವನ್ನು ಸಾಬೀತುಪಡಿಸಿತು. ಅವರು ಭಾರತದ ರಾಷ್ಟ್ರೀಯ ಆರ್ಕೈವ್ಸ್, ನೆಹರೂ ಸ್ಮಾರಕ ಗ್ರಂಥಾಲಯ ಮತ್ತು ರೋಮ್‌ನಲ್ಲಿರುವ ಇಟಾಲಿಯನ್ ವಿದೇಶಾಂಗ ಸಚಿವಾಲಯದ ಐತಿಹಾಸಿಕ ಆರ್ಕೈವ್ಸ್ ದಾಖಲೆಗಳನ್ನು ಪರಿಶೀಲಿಸಿದ್ದರು.

1931ರ ರೋಮ್ ಭೇಟಿ ಮತ್ತು ಮೂಂಜೆ ದಿನಚರಿ
ಈ ನಿರ್ಣಾಯಕ ಕೊಂಡಿಯು ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್ ಅವರ ಪ್ರಮುಖ ಮಾರ್ಗದರ್ಶಕ ಮತ್ತು ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಡಾ. ಬಿ.ಎಸ್. ಮೂಂಜೆ ಅವರ ವೈಯಕ್ತಿಕ ದಿನಚರಿಯಲ್ಲಿ ಕಂಡುಬರುತ್ತದೆ. ಮಾರ್ಚ್ 1931ರಲ್ಲಿ, ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಪರಿಷತ್ ಸಭೆಯಿಂದ ಹಿಂತಿರುಗುವಾಗ, ಮೂಂಜೆ ರೋಮ್‌ನಲ್ಲಿ ಹತ್ತು ದಿನಗಳನ್ನು ಕಳೆದರು. ತನ್ನ ಸ್ವಂತ ದಿನಚರಿ ನಮೂದುಗಳ ಪ್ರಕಾರವೇ (ಮಾರ್ಚ್ 19 ಮತ್ತು 20, 1931ರಂದು), ಮೂಂಜೆ ಇಟಾಲಿಯನ್ ಫ್ಯಾಸಿಸಂನ ಮೂಲಸೌಕರ್ಯಗಳಿಗೆ ವ್ಯವಸ್ಥಿತವಾಗಿ ಪ್ರವಾಸ ಮಾಡಿದರು. ಅವರು ಭೇಟಿ ನೀಡಿದ ಸ್ಥಳಗಳು: ಕೇಂದ್ರೀಯ ಮಿಲಿಟರಿ ದೈಹಿಕ ಶಿಕ್ಷಣ ಶಾಲೆ,​ ಫ್ಯಾಸಿಸ್ಟ್ ದೈಹಿಕ ಶಿಕ್ಷಣ ಅಕಾಡೆಮಿ ಮತ್ತು ಒಪೇರಾ ನಾಜಿಯೋನೇಲ್ ಬಲಿಲ್ಲಾ (ಆಡಳಿತದ ಪ್ರಮುಖ ಯುವ ಬ್ರೈನ್ ವಾಷಿಂಗ್ ಮತ್ತು ಪ್ಯಾರಾಮಿಲಿಟರಿ ವಿಭಾಗ). ಮಾರ್ಚ್ 19, 1931ರಂದು, ಮಧ್ಯಾಹ್ನ 3:00 ಗಂಟೆಗೆ, ಮೂಂಜೆ- ಪಲಾಝೊ ವೆನೆಜಿಯಾದಲ್ಲಿ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯನ್ನು ಮುಖಾಮುಖಿಯಾಗಿ ಭೇಟಿಯಾದರು. ಮೂಂಜೆ ತಮ್ಮ ದಿನಚರಿಯಲ್ಲಿ ಈ ಸಂವಾದವನ್ನು ದಾಖಲಿಸಿದ್ದಾರೆ: ​”ನಾನು ಡಾ. ಮೂಂಜೆ ಎಂದು ಹೇಳಿ ಅವರೊಂದಿಗೆ ಕೈಕುಲುಕಿದೆ. ನಾನು ಇಂದು ಬೆಳಿಗ್ಗೆ ಮತ್ತು ಮಧ್ಯಾಹ್ನ ಬಲಿಲ್ಲಾ ಮತ್ತು ಫ್ಯಾಸಿಸ್ಟ್ ಸಂಘಟನೆಗಳನ್ನು ನೋಡಿದೆ ಮತ್ತು ನಾನು ತುಂಬಾ ಪ್ರಭಾವಿತನಾದೆ… ಹಿಂದೂಗಳ ಮಿಲಿಟರಿ ಪುನರುಜ್ಜೀವನಕ್ಕಾಗಿ ಭಾರತ ಮತ್ತು ವಿಶೇಷವಾಗಿ ಹಿಂದೂ ಭಾರತಕ್ಕೆ ಅಂತಹ ಒಂದು ಸಂಸ್ಥೆಯ ಅಗತ್ಯವಿದೆ.”

​ಫ್ಯಾಸಿಸ್ಟ್ ನೀಲನಕ್ಷೆಯ ಭಾರತೀಯ ಕಾಪಿ
​ಮೂಂಜೆ ಭಾರತಕ್ಕೆ ಹಿಂದಿರುಗಿದಾಗ, ಅವರು ಈ ಮೆಚ್ಚುಗೆಯನ್ನು ರಹಸ್ಯವಾಗಿಡಲಿಲ್ಲ. 1931ರಲ್ಲಿ ಸ್ವಯಂಘೋಷಿತ ರಾಷ್ಟ್ರೀಯತಾವಾದಿ ಪತ್ರಿಕೆ “ದಿ ಮರಾಠಾ”ಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟವಾಗಿ ಹೀಗೆ ಹೇಳಿದರು: ​”(ನಮ್ಮ ನಾಯಕರು- ಜರ್ಮನಿಯ ಯುವ ಚಳುವಳಿ ಮತ್ತು ಇಟಲಿಯ ಬಲಿಲ್ಲಾ ಮತ್ತು ಫ್ಯಾಸಿಸ್ಟ್ ಸಂಘಟನೆಗಳನ್ನು ಅನುಕರಿಸಬೇಕು. ಭಾರತದಲ್ಲಿ ಪರಿಚಯಿಸಲು ಅವರು ಅತ್ಯಂತ ಸೂಕ್ತರು ಎಂದು ನಾನು ಭಾವಿಸುತ್ತೇನೆ…”

​1934ರಲ್ಲಿ, ಹಿಂದೂಗಳ ಮಿಲಿಟರಿ ಸಂಘಟನೆಯನ್ನು ಔಪಚಾರಿಕಗೊಳಿಸಲು ಮೂಂಜೆ, ಹೆಡ್ಗೇವಾರ್ ಜೊತೆ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದರು. ಆರ್ಕೈವಲ್ ದಾಖಲೆಗಳು ಮೂಂಜೆ ಒಂದು ಪರಿಕಲ್ಪನಾ ಪತ್ರವನ್ನು ಅಲ್ಲಿ ಹಂಚಿರುವುದನ್ನು ತೋರಿಸುತ್ತವೆ. ಅದರಲ್ಲಿ ಹೀಗಿದೆ: ​”ಹಳೆಯ ಕಾಲದ ಶಿವಾಜಿ ಅಥವಾ ಇಂದಿನ ಮುಸೊಲಿನಿ ಅಥವಾ ಹಿಟ್ಲರ್‌ನಂತಹ ಸರ್ವಾಧಿಕಾರಿಯಾಗಿ ಒಬ್ಬ ಹಿಂದೂವನ್ನು ಹೊಂದಿರುವ, ನಮ್ಮ ಸ್ವಂತ ಸ್ವರಾಜ್ ನಮಗೆ ಇಲ್ಲದಿದ್ದರೆ, ಈ ಆದರ್ಶವನ್ನು ಜಾರಿಗೆ ತರಲು ಸಾಧ್ಯವಿಲ್ಲ…”

​ಸ್ವಲ್ಪ ಸಮಯದ ನಂತರ, ಮೂಂಜೆ ನಾಸಿಕ್‌ನಲ್ಲಿ ಭೋಂಸ್ಲಾ ಮಿಲಿಟರಿ ಶಾಲೆಯನ್ನು ಸ್ಥಾಪಿಸಿದರು, ಇದನ್ನು ಹಿಂದೂ ಯುವಕರಿಗೆ ಸಾಂಸ್ಥಿಕ, ಅರೆಸೈನಿಕ ತರಬೇತಿಯನ್ನು ನೀಡಲು ರೂಪಿಸಲಾಗಿತ್ತು. ಈ ಶಾಲೆಯ ದೈಹಿಕ ಕವಾಯತು, ಸಮವಸ್ತ್ರ ಮತ್ತು ಸೈದ್ಧಾಂತಿಕ ತರಬೇತಿಯನ್ನು ಮಿಶ್ರಣ ಮಾಡಿದ ಅದರ ವಿಧಾನವನ್ನು ನೇರವಾಗಿ ಆರ್‌ಎಸ್‌ಎಸ್ ಶಾಖೆಗಳಲ್ಲಿ ಅಳವಡಿಸಿಕೊಳ್ಳಲಾಯಿತು. ಇದುವೇ ಆರೆಸ್ಸೆಸ್ಸಿನ ಮೂಲ ಬೇರು. ಇಂತ ಒಂದು ವಿಷದ ಸಸಿಯನ್ನು ಈಗ ಒಂದು ಹೆಮ್ಮರವಾಗಿ ಅದೇ ನಾಝಿ, ಫ್ಯಾಸಿಸ್ಟ್ ಮಾದರಿಯಲ್ಲಿ ಹೇಗೆ ಬೆಳೆಸಲಾಗುತ್ತಿದೆ ಎಂಬುದನ್ನು ಮುಂದೆ ನೋಡೋಣ.

You cannot copy content of this page

Exit mobile version