ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತೊಂಬತ್ತನೆಯ ಲೇಖನ
ಮಂಡಲ್ ವರದಿಯ ಶಿಫಾರಸುಗಳ ಅನುಷ್ಠಾನದ ಫಲವಾಗಿ ಹಿಂದುಳಿದ ವರ್ಗಗಳ ಮತ್ತು ಕೆಳಜಾತಿಗಳ ಆಶೋತ್ತರಗಳನ್ನು ಪ್ರತಿನಿಧಿಸುವ ಹೊಸ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರುಗಳು ಹುಟ್ಟಿಕೊಂಡರು.
ದಿನಾಂಕ: ಆಗಸ್ಟ್ 6, 1990
ಸ್ಥಳ: ಪ್ರಧಾನ ಮಂತ್ರಿ ಕಚೇರಿ, ಸೌತ್ ಬ್ಲಾಕ್, ನವದೆಹಲಿ
ಕಾರ್ಯಕ್ರಮ: ಕೇಂದ್ರ ಸಚಿವ ಸಂಪುಟ ಸಭೆ
ಕಾರ್ಯಸೂಚಿ: ದಿನಚರಿ
ಪ್ರಸ್ತುತ: ಪ್ರಧಾನ ಮಂತ್ರಿ ವಿ.ಪಿ. ಸಿಂಗ್, ಕೆಲವು ಮಂತ್ರಿಗಳು.
ಉಪಪ್ರಧಾನಿ ದೇವಿ ಲಾಲ್ ಮತ್ತು ಪ್ರಧಾನಿ ವಿ.ಪಿ. ಸಿಂಗ್ ಅವರುಗಳ ನಡುವಿನ ಅಧಿಕಾರದ ಜಟಾಪಟಿಯ ನಡುವೆಯೇ, ಈ ಸಭೆಯಲ್ಲಿ ವಿ.ಪಿ. ಸಿಂಗ್ ಎದ್ದು ನಿಂತು ಹೀಗೆ ಹೇಳುತ್ತಾರೆ. “ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದು ನಮ್ಮ ಪಕ್ಷದ ಪ್ರಣಾಳಿಕೆಯ ಭಾಗ. ಅದನ್ನು ಈಗ ಹಂತ ಹಂತವಾಗಿ ಜಾರಿಗೊಳಿಸುವ ಸಮಯ ಬಂದಿದೆ. ಅದಕ್ಕಾಗಿ ನಾನು ಇಂದು ಬಿ.ಪಿ. ಮಂಡಲ್ ಆಯೋಗದ ಶಿಫಾರಸುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಅದರ ಪ್ರಕಾರ ಸರಕಾರಿ ಉದ್ಯೋಗಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ. 27 ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಲಾಗಿದೆ. ಇದನ್ನು ನೀವೆಲ್ಲರೂ ಒಪ್ಪುತ್ತೀರಿ ಎಂದು ನಂಬಿದ್ದೇನೆ.
ಫಲಿತಾಂಶ: ಕೇಂದ್ರ ಸಚಿವ ಸಂಪುಟವು ಈ ಪ್ರಸ್ತಾವನೆಯನ್ನು ಅನುಮೋದಿಸಿತು
ರಾಜಕಾರಣದ ನಿಘಂಟಿನಲ್ಲಿ ಒಬ್ಬ ವ್ಯಕ್ತಿಯ ಉಪನಾಮವು ಚಿರಸ್ಥಾಯಿಯಾಗಿ ಉಳಿಯುವುದು ಅಪರೂಪ. ಆದರೆ, “ಮಂಡಲ್” ಎಂಬ ಹೆಸರೊಂದು ಮಾತ್ರ ಜೇನುಗೂಡಿಗೆ ಕಲ್ಲೆಸೆದು ತಿರುಗೇಟು ತಿಂದರೂ ಕೋಟಿಗಟ್ಟಲೆ ಜನರ ಬದುಕುಗಳನ್ನು ಸ್ಪರ್ಶಿಸಿ ಅವರನ್ನು ಸಬಲೀಕರಣಗೊಳಿಸಿತು.
ಭಾರತದ ಚುನಾವಣಾ ರಾಜಕಾರಣವನ್ನು ಪೂರ್ಣವಾಗಿ ಪರಿವರ್ತಿಸಿದವರಲ್ಲಿ ಕೊನೆಯ ಹೆಸರು ಯಾರದು ಎಂದು ಕೇಳಿದರೆ, ಅದು ಬಾಬು ಬಿಂಧೇಶ್ವರಿ ಪ್ರಸಾದ್ ಮಂಡಲ್ ಎಂಬ ಬಿ.ಪಿ. ಮಂಡಲ್ ಅವರದ್ದು. ಹಿಂದುಳಿದ ಜಾತಿಗಳ ಬಗ್ಗೆ ಅತೀವ ಉತ್ಸಾಹದಿಂದ ಕೆಲಸ ಮಾಡುತ್ತಿದ್ದ ಬಿಹಾರದ ರಾಜಕಾರಣಿ ಮಂಡಲ್, 1968 ರಲ್ಲಿ ಅಲ್ಪಾವಧಿಗೆ ಮುಖ್ಯಮಂತ್ರಿಯಾಗುವ ಮೂಲಕ ರಾಜ್ಯ ರಾಜಕಾರಣದಲ್ಲಿ ಉತ್ತುಂಗಕ್ಕೆ ತಲುಪಿದ್ದವರು.
ಆದರೆ, ಸಂಸದರಾದ ನಂತರ ಅವರು ಎರಡನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗುತ್ತಾರೆ. ಅದು ಮಂಡಲ್ ಆಯೋಗ ಎಂದೇ ಜನಪ್ರಿಯವಾಗುತ್ತದೆ. ಆ ಮೂಲಕ ಅವರ ಹೆಸರು ದೇಶದ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬದಲಾಗುತ್ತದೆ. ಅದಕ್ಕೆ ಕಾರಣ 1980 ರಲ್ಲಿ ಕೇಂದ್ರ ಸರಕಾರಿ ಸೇವೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿ ಜಾರಿಗೆ ತರಬೇಕು ಎಂದು ಶಿಫಾರಸು ಮಾಡಿದವರು ಅವರಾಗಿದ್ದರು.
ಪ್ರಧಾನಿ ವಿ.ಪಿ. ಸಿಂಗ್ ಮಂಡಿಸಿದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದ ನಂತರ, ವಿರೋಧ ಪಕ್ಷಗಳು ಒಂದು ರೀತಿಯ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತವೆ. ಅದು ಮೀಸಲಾತಿಯನ್ನು ಬೆಂಬಲಿಸಬೇಕೇ ಬೇಡವೇ ಎಂಬ ಸಂದಿಗ್ದತೆಯಾಗಿತ್ತು. ಈ ಮೀಸಲಾತಿಯ ವಿರುದ್ಧ ಮೇಲ್ಜಾತಿಗೆ ಸೇರಿದ ಒಂದಷ್ಟು ಜನರು ಬೀದಿಗಳಿದು ಪ್ರತಿಭಟನೆ ಮಾಡುತ್ತಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಕೂಡ ಬೀದಿಗಿಳಿದು ಸರಕಾರದ ತೀರ್ಮಾನವನ್ನು ಬೆಂಬಲಿಸಿಕೊಂಡು ಜಾಥಾಗಳನ್ನು ನಡೆಸುತ್ತಾರೆ. ಅದರಿಂದಾಗಿ ಕೆಲವು ಕಡೆಗಳಲ್ಲಿ ಸಂಘರ್ಷಗಳು ನಡೆಯುತ್ತವೆ. ಅದರ ನಂತರ ಸುಪ್ರೀಂ ಕೋರ್ಟಿನ ಯುವ ನ್ಯಾಯವಾದಿಯಾಗಿದ್ದ ಇಂದ್ರಾ ಸಾಹ್ನಿ ಎಂಬವರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅವರ ಅರ್ಜಿಯನ್ನು (ಇಂದ್ರಾ ಸಾಹ್ನಿ vs ಯೂನಿಯನ್ ಆಫ್ ಇಂಡಿಯಾ) ಪರಿಗಣಿಸುವ ಆಗಿನ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಅವರು ಮಂಡಲ್ ಆಯೋಗದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿದು ಆದೇಶ ನೀಡುತ್ತಾರೆ. ಅದಾಗಿ ಮೂರು ವರ್ಷಗಳ ನಂತರ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು ಮೀಸಲಾತಿಯ ಪರವಾಗಿ ತೀರ್ಪು ನೀಡುತ್ತದೆ.
1918 ಆಗಸ್ಟ್ 25 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಿ.ಪಿ. ಮಂಡಲ್ ಅವರ ಜನನ. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಜಾತಿ ಆಧಾರಿತ ಸಮಾಜದಲ್ಲಿ ಘನತೆಯಿಂದ ಬದುಕಬೇಕಾದರೆ ಸಂಪತ್ತು ಮಾತ್ರ ಸಾಲುವುದಿಲ್ಲವೆಂದೂ ಪ್ರತಿರೋಧ ಕೂಡ ಅಗತ್ಯವೆಂದೂ ಅರ್ಥ ಮಾಡಿಕೊಂಡಿದ್ದರು.
ಉತ್ತರ ಬಿಹಾರದ ಮಾಧೇಪುರದ ಶ್ರೀಮಂತ ಯಾದವ್ ಭೂಮಾಲೀಕ ಕುಟುಂಬಕ್ಕೆ ಸೇರಿದವರು ಮಂಡಲ್. ಆದರೆ ದರ್ಭಾಂಗದಲ್ಲಿ ಅವರು ಪ್ರೌಢಶಾಲಾ ಹಾಸ್ಟೆಲಲ್ಲಿದ್ದಾಗ ವಾಸ್ತವತೆಯು ಅವರನ್ನು ತೀವ್ರವಾಗಿ ತಟ್ಟುತ್ತದೆ. ಅಲ್ಲಿ ಮೊದಲಿಗೆ ಮೇಲ್ಜಾತಿಯ ಹುಡುಗರಿಗೆ ಆಹಾರವನ್ನು ಬಡಿಸಿದ ನಂತರವೇ ಅವರಿಗೆ ಊಟ ನೀಡಲಾಗುತ್ತಿತ್ತು. ಹಾಗೆ ಕೊನೆಯದಾಗಿ ಬಡಿಸಿಕೊಳ್ಳುವ ಹುಡುಗರಿಗೆ ಕುಳಿತುಕೊಳ್ಳಲು ಬೆಂಚು ಕೂಡ ಸಿಗುತ್ತಿರಲಿಲ್ಲ. ಮಂಡಲ್ ಅವರು ತಮ್ಮ ಗೆಳೆಯರನ್ನು ಒಟ್ಟುಗೂಡಿಸಿ ಅಲ್ಲಿ ಪ್ರತಿಭಟನೆ ಆರಂಭಿಸುತ್ತಾರೆ. ಬದಲಿಸಲಾಗದ ಆ ವ್ಯವಸ್ಥೆಯನ್ನು ಬದಲಾಯಿಸುವಂತೆ ಶಾಲಾ ಅಧಿಕಾರಿಗಳನ್ನು ಒತ್ತಾಯಿಸುತ್ತಾರೆ.
ಪಾಟ್ನಾ ಕಾಲೇಜಿನಿಂದ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಅವರು ಭಾಗಲ್ಪುರದಲ್ಲಿ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಳ್ಳುತ್ತಾರೆ. 1941 ರಲ್ಲಿ ತನ್ನ 23ನೇ ಪ್ರಾಯದಲ್ಲಿ ಅವರು ಭಾಗಲ್ಪುರ ಜಿಲ್ಲಾ ಪಂಚಾಯತ್ ಸದಸ್ಯರಾಗುತ್ತಾರೆ. ತಮ್ಮ ಜೀವನದುದ್ದಕ್ಕೂ ಅವರು ರಾಜಕೀಯ ಮತ್ತು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ವೃತ್ತಿಯಲ್ಲಿ ಕೃಷಿಕರಾಗಿದ್ದ ಮಂಡಲ್ ಅವರು, ಕಾಂಗ್ರೆಸ್, ಸಂಯುಕ್ತ ಸಮಾಜವಾದಿ ಪಕ್ಷ, ಶೋಷಿತ್ ದಳ್ ಮತ್ತು ಜನತಾ ಪಕ್ಷದೊಂದಿಗೆ ಸಂಬಂಧ ಇರಿಸಿಕೊಂಡಿದ್ದರು. ಅವರು ಬಿಹಾರ ವಿಧಾನ ಸಭೆಯ ಎರಡೂ ಸದನಗಳಿಗೆ ಒಟ್ಟು ನಾಲ್ಕು ಬಾರಿ ಮತ್ತು ಲೋಕಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು.
1952 ರಲ್ಲಿ ನಡೆದ ಬಿಹಾರ ವಿಧಾನಸಭೆಯ ಮೊದಲ ಚುನಾವಣೆಯಲ್ಲಿ ಮಂಡಲ್ ಅವರು ಮಾಧೇಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುತ್ತಾರೆ. ಸಮಾಜವಾದಿ ಪಕ್ಷದ ಭೂಪೇಂದ್ರ ನಾರಾಯಣ್ ಮಂಡಲ್ ಅವರನ್ನು ಬಿ.ಪಿ. ಮಂಡಲ್ ಸೋಲಿಸಿದ್ದರು. ಆದರೆ 1957 ರ ಚುನಾವಣೆಯಲ್ಲಿ ಇದು ವ್ಯತಿರಿಕ್ತವಾಗಿ ನಡೆಯುತ್ತದೆ. ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಭೂಪೇಂದ್ರ ನಾರಾಯಣ್ ಮಂಡಲ್ ಅವರು ಬಿ.ಪಿ. ಮಂಡಲ್ ಅವರನ್ನು ಸೋಲಿಸುತ್ತಾರೆ. ಅದರ ನಂತರದಲ್ಲಿ ಇಬ್ಬರೂ ಜೊತೆ ಸೇರಿಕೊಂಡು ಬಿಹಾರದಲ್ಲಿ ಸಮಾಜವಾದ ಚಳುವಳಿಯನ್ನು ಕಟ್ಟುತ್ತಾರೆ.
ಇಬ್ಬರೂ ಕೂಡ ಹಿಂದುಳಿದ ಯಾದವ್ ಜಾತಿಗೆ ಸೇರಿದವರಾಗಿದ್ದರು. ಯಾದವರ ಪ್ರಭಾವ ಆ ಜಿಲ್ಲೆಯಲ್ಲಿ ಅದೆಷ್ಟಿತ್ತೆಂದು ಹೇಳಲು ಬಳಸುವ ಮಾತು ಹೀಗಿದೆ. “ರೋಮ್ ಪೋಪರದ್ದಾಗಿದ್ದರೆ, ಮಾಧೇಪುರ ಗೋಪರದ್ದು (ಯಾದವರದ್ದು)”
1954 ರಲ್ಲಿ ಬಿಹಾರದ ಒಂದು ಹಳ್ಳಿಯ ರಜಪೂತ ಭೂಮಾಲೀಕರು ಕುರ್ಮಿ ಗ್ರಾಮದ ಮೇಲೆ ದಾಳಿ ನಡೆಸುತ್ತಾರೆ. ಇದರ ಪರಿಣಾಮವಾಗಿ ಪೊಲೀಸರು ಹಿಂದುಳಿದ ವರ್ಗಗಳ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಾರೆ. ಈ ಘಟನೆಯ ಮೂಲಕವೇ ಮಂಡಲ್ ಹೆಸರು ಮುನ್ನೆಲೆಗೆ ಬರುವುದು. ಆಡಳಿತ ಪಕ್ಷದ ಶಾಸಕರಾಗಿದ್ದ ಮಂಡಲ್ ಅವರು ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದೂ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದೂ ವಿಧಾನ ಸಭೆಯಲ್ಲಿ ದನಿಯೆತ್ತಿದ್ದರು. ಆ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಮಂಡಲ್ ಅವರ ಮೇಲೆ ಬಿದ್ದ ಅತೀವ ಒತ್ತಡದ ಕಾರಣದಿಂದ ಅವರು ತನ್ನ ಮನವಿಯನ್ನು ಹಿಂಪಡೆಯುವಂತಾಗುತ್ತದೆ. ನಂತರ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಂಡು ತಮ್ಮ ಹೋರಾಟ ಮುಂದುವರಿಸುತ್ತಾರೆ. ಇದು ಆಡಳಿತ ಪಕ್ಷಕ್ಕೆ ಮತ್ತಷ್ಟು ಮುಜುಗರ ಉಂಟು ಮಾಡುತ್ತದೆ.
ಮಂಡಲ್ ಅವರ ಪ್ರತಿಭಟನೆ ಮತ್ತು ಹೋರಾಟಗಳನ್ನು ಗಮನಿಸುತ್ತಿದ್ದ ರಾಮ ಮನೋಹರ್ ಲೋಹಿಯಾ ಅವರು ಮಂಡಲ್ ಅವರನ್ನು ಸಂಯುಕ್ತ ಸಮಾಜವಾದಿ ಪಕ್ಷದ ಬಿಹಾರ ಘಟಕದ ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಸಂಯುಕ್ತ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮಂಡಲ್ ಅದರಲ್ಲಿ ಗೆಲುವು ಕಾಣುತ್ತಾರೆ. ಬಿಹಾರ ರಾಜ್ಯ ವಿಧಾನ ಸಭೆ ಸೇರುವ ಬಗ್ಗೆ ಲೋಹಿಯಾ ಜೊತೆ ಉಂಟಾದ ಭಿನ್ನಾಭಿಪ್ರಾಯದ ಫಲವಾಗಿ ಮಂಡಲ್ ಸಂಯುಕ್ತ ಸಮಾಜವಾದಿ ಪಕ್ಷವನ್ನು ತೊರೆಯುತ್ತಾರೆ. ನಂತರ ಅವರು ಶೋಷಿತ್ ದಳ ಎಂಬ ಪಕ್ಷವನ್ನು ಕಟ್ಟುತ್ತಾರೆ.
1968 ರ ಫೆಬ್ರವರಿ 1 ರಂದು ಮಂಡಲ್ ಅವರು ಬಿಹಾರದ ಏಳನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕೆಂದರೆ, ಅವರು ಮೊದಲಿಗೆ ಬಿಹಾರ ವಿಧಾನ ಸಭೆಯ ಸದಸ್ಯರಾಗಬೇಕಾಗಿತ್ತು. ತಾನು ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗುವ ತನಕದ ನಾಲ್ಕು ದಿನಗಳ ಅವಧಿಗೆ ಅವರು ತನ್ನ ಪಕ್ಷದ ಶಾಸಕರಾಗಿದ್ದ ಸತೀಶ್ ಸಿಂಗ್ ಅವರನ್ನು ಹಂಗಾಮಿ ಮುಖ್ಯಮಂತ್ರಿಯಾಗಿ ನೇಮಿಸಿದ್ದರು.
ಬಿಹಾರದ ಅದುವರೆಗಿನ ಇತಿಹಾಸದಲ್ಲಿ ಮೇಲ್ಜಾತಿ ಸದಸ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಒಬಿಸಿ ಸದಸ್ಯರಿದ್ದ ಮೊದಲ ಸಚಿವ ಸಂಪುಟ ಇದುವೇ ಆಗಿತ್ತು. ಮಂಡಲ್ ಅವರ ಈ ಸರಕಾರ ಕೇವಲ 48 ದಿನಗಳ ಕಾಲ ಮಾತ್ರವೇ ಅಸ್ತಿತ್ವದಲ್ಲಿದ್ದರೂ, ಪ್ರಾತಿನಿಧ್ಯದಲ್ಲಿನ ಅಮೂಲಾಗ್ರ ಬದಲಾವಣೆಯಿಂದಾಗಿ ಅದು ಭಾರತದ ರಾಜಕಾರಣಕ್ಕೆ ಹೊಸದೇ ಆದ ಚೈತನ್ಯವನ್ನು ನೀಡಿತು.
ಹಲವು ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕರುಗಳ ಮೇಲಿನ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸುತ್ತಿದ್ದ ಟಿ.ಎಲ್. ವೆಂಕಟರಾಮ ಅಯ್ಯರ್ ನೇತೃತ್ವದ ಅಯ್ಯರ್ ಆಯೋಗವನ್ನು ಕಾಂಗ್ರೆಸ್ ಮೊಟಕುಗೊಳಿಸಿದ್ದನ್ನು ಪ್ರತಿಭಟಿಸಿಕೊಂಡು ಕೇವಲ 30 ದಿನಗಳಲ್ಲಿ ಮಂಡಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
1968 ರಲ್ಲಿ ಮಾಧೇಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವ ಮಂಡಲ್ ಪುನಹ ಲೋಕಸಭೆ ಪ್ರವೇಶಿಸುತ್ತಾರೆ. 1972 ರಲ್ಲಿ ಅವರು ಬಿಹಾರ ವಿಧಾನ ಸಭೆಗೆ ಆಯ್ಕೆಯಾಗುತ್ತಾರೆ. ಆದರೆ 1975 ರಲ್ಲಿ ಜೆಪಿ ಚಳುವಳಿಯ ಸಮಯದಲ್ಲಿ ರಾಜೀನಾಮೆ ನೀಡುತ್ತಾರೆ.
ಅದರ ನಂತರ ಮಂಡಲ್ ಅವರು ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿ ಆಂದೋಲನದ ಜೊತೆಗೆ ಸೇರಿಕೊಳ್ಳುತ್ತಾರೆ. ಅದನ್ನು ಬಿಹಾರ ಚಳುವಳಿ (1974–75) ಎಂದೂ ಕರೆಯುತ್ತಾರೆ. ಅದು ಅಬ್ದುಲ್ ಗಫೂರ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ವಿರೋಧಿಸುತ್ತಿತ್ತು. 1977 ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಮಾಧೇಪುರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲುವ ಮಂಡಲ್ 1979 ರವರೆಗೆ ಸೇವೆ ಸಲ್ಲಿಸುತ್ತಾರೆ.
ಮಂಡಲ್ ಆಯೋಗ
1978 ಡಿಸೆಂಬರ್ ತಿಂಗಳಿನಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಹಿಂದುಳಿದ ವರ್ಗಗಳ ಆಯೋಗ ಎಂಬ ಐವರು ಸದಸ್ಯರ ಒಂದು ಆಯೋಗವನ್ನು ನೇಮಿಸುತ್ತಾರೆ. ಶೋಷಿತ ವರ್ಗಗಳ ಏಳಿಗೆಗಾಗಿ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದ ಮಂಡಲ್ ಅವರ ಬದ್ಧತೆಯನ್ನು ಗುರುತಿಸಿ ಅವರನ್ನು ಆ ಆಯೋಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. 1980 ರಲ್ಲಿ ಆಯೋಗವು ತನ್ನ ವರದಿ ಸಲ್ಲಿಸುತ್ತದೆ. ಸರಕಾರಿ ಉದ್ಯೋಗಗಳಲ್ಲಿ OBC ವಿಭಾಗಕ್ಕೆ ಗಮನಾರ್ಹ ಮೀಸಲಾತಿಯನ್ನು ನೀಡಬೇಕೆಂದು ವರದಿ ಶಿಫಾರಸು ಮಾಡುತ್ತದೆ.
ಅವಕಾಶದ ಸಮಾನತೆಯನ್ನು ಖಾತರಿಪಡಿಸುವ ವಿಚಾರದಲ್ಲಿ ಒತ್ತು ನೀಡಿದ್ದ ವರದಿಯು, ಸಮಾಜದ ದೊಡ್ಡದೊಂದು ವಿಭಾಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿಯುವಿಕೆಯನ್ನು ಪರಿಹರಿಸುವ ಅಗತ್ಯವನ್ನು ಎತ್ತಿ ತೋರಿಸಿತು. ಆ ಮೂಲಕ ಮಂಡಲ್ ಆಯೋಗದ ವರದಿಯು ಭಾರತದ ಸಾಮಾಜಿಕ ನ್ಯಾಯದ ಹುಡುಕಾಟದಲ್ಲಿ ಹೊಸ ಭರವಸೆಯಾಯಿತು.
1980 ಡಿಸೆಂಬರ್ 13 ರಂದು ತನ್ನ ವರದಿಯನ್ನು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರಿಗೆ ಸಲ್ಲಿಸಲಾಗಿತ್ತಾದರೂ, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಮತ್ತವರ ನಂತರದಲ್ಲಿ ರಾಜೀವ್ ಗಾಂಧಿ ಅದನ್ನು ಸಂಸತ್ತಿನ್ಲಲಿ ಮಂಡಿಸಲಿಲ್ಲ. ವಿ.ಪಿ ಸಿಂಗ್ ಪ್ರಧಾನ ಮಂತ್ರಿಯಾಗುವವರೆಗೂ ಅದಕ್ಕಾಗಿ ಕಾಯಬೇಕಾಯಿತು.
ಮಂಡಲ್ ವರದಿಯ ಶಿಫಾರಸುಗಳ ಅನುಷ್ಠಾನದ ಫಲವಾಗಿ ಹಿಂದುಳಿದ ವರ್ಗಗಳ ಮತ್ತು ಕೆಳಜಾತಿಗಳ ಆಶೋತ್ತರಗಳನ್ನು ಪ್ರತಿನಿಧಿಸುವ ಹೊಸ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರುಗಳು ಹುಟ್ಟಿಕೊಂಡರು. ಮುಲಾಯಂ ಸಿಂಗ್ ಯಾದವ್, ರಾಮ್ ವಿಲಾಸ್ ಪಾಸ್ವಾನ್, ಶರದ್ ಯಾದವ್, ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮತ್ತು ಮಾಯಾವತಿ ಮೊದಲಾದವರು ಅಂತಹ ನಾಯಕರುಗಳು. ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಮಹಿಳೆಯರು ಸೇರಿದಂತೆ ವಿವಿಧ ಕೆಳವರ್ಗಗಳ ನಡುವೆ ಸಾಮಾಜಿಕ ಚಳುವಳಿಗಳು ಮತ್ತು ಮೈತ್ರಿಗಳ ಹೊಸ ಹುಟ್ಟಿಗೆ ಇದು ಕಾರಣೀಭೂತವಾಯಿತು.
ಆದರೂ ಕೂಡ, ಕೋಮು ಧೃವೀಕರಣ ಮತ್ತು ಹಿಂಸಾಚಾರಗಳನ್ನೇ ಆಶ್ರಯಿಸಿಕೊಂಡಿದ್ದ ಮೇಲ್ಜಾತಿಗಳು ಮತ್ತು ಬಲಪಂಥೀಯರು, ಹಿಂದುಳಿದ ವರ್ಗಗಳ ಈ ಏಳಿಗೆಯನ್ನು ಸಹಿಸಲಿಲ್ಲ. ಈ ಅವಧಿಯ ಆರಂಭವನ್ನು 1990 ರ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿಯವರ ರಾಮ ಜನ್ಮಭೂಮಿ ಹೋರಾಟದೊಂದಿಗೆ ಗುರುತಿಸಬಹುದು. ಇದು “ಮಂಡಲ್ vs ಕಮಂಡಲ್ ರಾಜಕಾರಣ” ಎಂಬುದಾಗಿ ಗುರುತಿಸಿಕೊಂಡಿತು.
ಮಂಡಲ್ ಅವರನ್ನು ಬಿಹಾರದಲ್ಲಿ ಹಿಂದುಳಿದ ವರ್ಗಗಳ ದೇವಪುತ್ರನೆಂದು ಕೊಂಡಾಡಲಾಯಿತು. ಅವರ ನೆನಪಿಗಾಗಿ ಪ್ರತಿಮೆಗಳನ್ನು ಮತ್ತು ಸ್ಮಾರಕಗಳನ್ನು ನಿರ್ಮಿಸಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸಂದೀಪ್ ಯಾದವ್ ಹೀಗೆ ಹೇಳುತ್ತಾರೆ. “ಬಿ.ಪಿ. ಮಂಡಲ್ ಧೈರ್ಯ ಮತ್ತು ದೃಢನಿಶ್ಚಯದ ವ್ಯಕ್ತಿಯಾಗಿದ್ದರು. ಅವರು ತುಳಿತಕ್ಕೊಳಗಾದ ಮತ್ತು ಶೋಷಿತ ಜನರ ಪರವಾಗಿ ನಿಂತರು. ಅವರು ಭಾರತದ ಸಾಮಾಜಿಕ ರಚನೆ ಮತ್ತು ರಾಜಕಾರಣದ ಆಮೂಲಾಗ್ರ ಬದಲಾವಣೆಯ ಅಗತ್ಯವನ್ನು ತೋರಿಸಿಕೊಟ್ಟ ದಾರ್ಶನಿಕರಾಗಿದ್ದರು. ಅವರು ಹೆಚ್ಚು ಸಮಗ್ರ ಮತ್ತು ಸಮಾನತೆಯ ಸಮಾಜಕ್ಕಾಗಿ ಪ್ರತಿಪಾದಿಸಿದ ಸುಧಾರಕರಾಗಿದ್ದರು. ಲಕ್ಷಾಂತರ ಜನರನ್ನು ತಮ್ಮ ಹಕ್ಕುಗಳು ಮತ್ತು ಘನತೆಗಾಗಿ ಹೋರಾಡಲು ಪ್ರೇರೇಪಿಸಿದ ನಾಯಕರಾಗಿದ್ದರು. ಅವರು ದೇಶದ ದಿಕ್ಕನ್ನು ರೂಪಿಸುವ ಮಹಾ ಮಾದರಿಯನ್ನು ಬಿಟ್ಟುಹೋದ ಮಹಾನ್ ಮನುಷ್ಯರಾಗಿದ್ದರು.”
ಮಂಡಲ್ ಅವರು ತಮ್ಮ ವರದಿಯ ಐತಿಹಾಸಿಕ ಪರಿಣಾಮವನ್ನು ಕಾಣಲು ಬದುಕಿರಲಿಲ್ಲ. ವರದಿ ಜಾರಿಗೆ ಬರುವ ಬಹಳ ಹಿಂದೆಯೇ 1982 ಏಪ್ರಿಲ್ 13 ರಂದು ಅವರು ನಿಧನರಾದರು.
ಆದರೂ ಕೂಡ, ಆಯೋಗದ ವರದಿಯ ರೋಮಾಂಚನಕಾರಿ ಆರಂಭಿಕ ಸಾಲುಗಳು ಸಾಮಾಜಿಕ ನ್ಯಾಯದ ಬಗೆಗೆ ಅವರ ನಿರಂತರ ಬದ್ಧತೆ ಮತ್ತು ದೃಢಸಂಕಲ್ಪಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. “ಸಮಾನತೆ ಎಂಬುದು ಸಮಾನರಲ್ಲಿ ಮಾತ್ರವೇ ಇರುತ್ತದೆ. ಅಸಮಾನರನ್ನು ಸಮಾನಗೊಳಿಸುವುದೆಂದರೆ, ಅಸಮಾನತೆಯನ್ನು ಮಾನ್ಯಗೊಳಿಸುವುದು ಎಂದರ್ಥ.”
ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರಾಗಿದ್ದು, ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ ಮತ್ತು ಈಗ ದೇಶದಲ್ಲಿ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುತ್ತಿದ್ದಾರೆ.
