ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ಮೇಲಿರುವ ಗಂಭೀರ ಆರೋಪ “ಓಟ್ ಚೋರಿ” (ಮತಕಳ್ಳತನ)ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಸಮಾಜದ ಮುಂದೆ ತಂದಿಟ್ಟಿದೆ.
ಕರ್ನಾಟಕ ರಾಜಕೀಯದಲ್ಲಿ ಮಹತ್ವದ ತಿರುವು ಮೂಡಿಸಿರುವ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರ ಸದಸ್ಯತ್ವವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದ್ದು, ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ನಾಲ್ಕು ವರ್ಷಗಳ ಕಾನೂನು ಹೋರಾಟಕ್ಕೆ ಅಂತಿಮ ಜಯ ದೊರೆತಿದೆ.
ಆದರೆ ಇದು ಕೇವಲ ಒಬ್ಬ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ ಪ್ರಕರಣವಾಗಿ ಮಾತ್ರ ನೋಡದೇ, ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ಮೇಲಿರುವ ಗಂಭೀರ ಆರೋಪ “ಓಟ್ ಚೋರಿ” (ಮತಕಳ್ಳತನ)ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಸಮಾಜದ ಮುಂದೆ ತಂದಿಟ್ಟಿದೆ.
ಪ್ರಕರಣದ ಹಿನ್ನೆಲೆ
2021ರ ಡಿಸೆಂಬರ್‌ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು 2,410 ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 39 ಮತಗಳು ಅಸಿಂಧುವಾಗಿದ್ದವು. ಅಂತಿಮ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ 1,188 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರನ್ನು ಕೇವಲ 6 ಮತಗಳ ಅಂತರದಿಂದ ಸೋಲಿಸಿದ್ದರು. ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಪಡೆದಿದ್ದರು.
ಈ ಫಲಿತಾಂಶದ ಬಳಿಕ ಚುನಾವಣೆಯಲ್ಲಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ಮೂಡಿಗೆರೆ ಪಟ್ಟಣ ಪಂಚಾಯಿತಿಗಳ 12 ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿರುವುದು ವಿವಾದದ ಕೇಂದ್ರಬಿಂದುವಾಯಿತು.
ವಿವಾದದ ಮೂಲ
ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕೇ ಇಲ್ಲ ಎಂಬ ವಾದವನ್ನು ಮುಂದಿಟ್ಟು ಗಾಯತ್ರಿ ಶಾಂತೇಗೌಡ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ನಾಮನಿರ್ದೇಶಿತ ಸದಸ್ಯರ ಮತದಾನ ಕಾನೂನುಬಾಹಿರ ಎಂದು ತೀರ್ಪು ನೀಡಿತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೂ, ಸರ್ವೋಚ್ಚ ನ್ಯಾಯಾಲಯವೂ ಹೈಕೋರ್ಟ್ ಆದೇಶವನ್ನೇ ಎತ್ತಿಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿತು. ಪರಿಣಾಮವಾಗಿ ಪ್ರಾಣೇಶ್ ಅವರ ಸದಸ್ಯತ್ವ ರದ್ದಾಯಿತು.
ಗಾಯತ್ರಿ ಶಾಂತೇಗೌಡಗೆ ಸಿಕ್ಕಿ ನ್ಯಾಯ.. ಆದರೆ!
ಈ ಪ್ರಕರಣದ ಅತ್ಯಂತ ದೊಡ್ಡ ವಿಷಾದವೆಂದರೆ ನ್ಯಾಯ ಸಿಕ್ಕ ಸಮಯ. ಚುನಾವಣೆ ನಡೆದಿದ್ದು 2021ರಲ್ಲಿ. ಅಂತಿಮ ತೀರ್ಪು ಬಂದಿರುವುದು ಸುಮಾರು ನಾಲ್ಕು ವರ್ಷಗಳ ನಂತರ. ವಿಧಾನ ಪರಿಷತ್ ಸದಸ್ಯರ ಅವಧಿ ಆರು ವರ್ಷಗಳಾಗಿದ್ದರೂ, ಈಗ ಗಾಯತ್ರಿ ಶಾಂತೇಗೌಡ ಅವರಿಗೆ ಉಳಿದಿರುವುದು ಕೇವಲ ಸುಮಾರು ಒಂದೂವರೆ ವರ್ಷಗಳ ಅವಧಿ ಮಾತ್ರ.
ಅಂದರೆ, ನ್ಯಾಯಾಲಯ ಅವರ ವಾದವನ್ನು ಒಪ್ಪಿಕೊಂಡಿದ್ದರೂ, ಅವರು ಕಳೆದುಕೊಂಡ ನಾಲ್ಕು ವರ್ಷಗಳ ಶಾಸಕತ್ವದ ಅವಕಾಶವನ್ನು ಯಾರೂ ಮರಳಿ ನೀಡಲು ಸಾಧ್ಯವಿಲ್ಲ. ಈ ಕಾರಣದಿಂದಲೇ “ತಡವಾದ ನ್ಯಾಯವೂ ಒಂದು ರೀತಿಯ ಅಪೂರ್ಣ ನ್ಯಾಯ” ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಚುನಾವಣಾ ವ್ಯಾಜ್ಯಗಳು ಇಷ್ಟು ವರ್ಷ ಏಕೆ?
ಈ ಪ್ರಕರಣದ ಮತ್ತೊಂದು ಮೂಲಭೂತ ಪ್ರಶ್ನೆ ಏನೆಂದರೆ, ಚುನಾವಣಾ ಫಲಿತಾಂಶವನ್ನು ಪ್ರಶ್ನಿಸುವ ಅರ್ಜಿಗಳು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ಬಾಕಿ ಉಳಿದರೆ, ಅಂತಿಮವಾಗಿ ನಿಜವಾದ ಹಕ್ಕುದಾರನಿಗೆ ಸಿಗುವ ನ್ಯಾಯ ಎಷ್ಟು ಪರಿಣಾಮಕಾರಿ?
ಪ್ರಕರಣದ ಅಂತಿಮ ತೀರ್ಪು ಬರುವಷ್ಟರಲ್ಲಿ ಅಧಿಕಾರಾವಧಿಯ ಬಹುಪಾಲು ಮುಗಿದು ಹೋಗುವ ಪರಿಸ್ಥಿತಿ ಪ್ರಜಾಪ್ರಭುತ್ವದ ಉದ್ದೇಶವನ್ನೇ ದುರ್ಬಲಗೊಳಿಸುವುದಿಲ್ಲವೇ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.
ಪ್ರಾಣೇಶ್ ಅನುಭವಿಸಿದ ಸವಲತ್ತುಗಳ ಬಗೆಗಿನ ಕಾನೂನಾತ್ಮಕ ಪ್ರಶ್ನೆಗಳಿವು
ಸುಪ್ರೀಂ ಕೋರ್ಟ್ ತೀರ್ಪಿನಿಂದ ಪ್ರಾಣೇಶ್ ಅವರ ಆಯ್ಕೆ ಅಸಿಂಧು ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಎದುರಾಗಿದೆ. 2021ರಿಂದ ಇಲ್ಲಿಯವರೆಗೆ ಅವರು ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಉಪಸಭಾಪತಿಯಾಗಿ ವೇತನ, ಭತ್ಯೆ, ಸರ್ಕಾರಿ ವಾಹನ, ಸಿಬ್ಬಂದಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ. ಈಗ ಅವರ ಸದಸ್ಯತ್ವವೇ ರದ್ದಾಗಿರುವ ಹಿನ್ನೆಲೆಯಲ್ಲಿ ಆ ಅವಧಿಯಲ್ಲಿ ಪಡೆದ ಸರ್ಕಾರಿ ಸೌಲಭ್ಯಗಳ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ.
ಆದಾಗ್ಯೂ, ಈ ಕುರಿತು ಸುಪ್ರೀಂ ಕೋರ್ಟ್ ಯಾವುದೇ ನಿರ್ದೇಶನ ನೀಡಿಲ್ಲ. ಹೀಗಾಗಿ ಸವಲತ್ತುಗಳನ್ನು ವಾಪಸ್ ಪಡೆಯುವ ಅಥವಾ ವಸೂಲಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಹೇಳಲು ಸಾಧ್ಯವಿಲ್ಲ. ಇದು ಮುಂದಿನ ದಿನಗಳಲ್ಲಿ ಪ್ರತ್ಯೇಕ ಕಾನೂನು ಚರ್ಚೆಯ ವಿಷಯವಾಗುವ ಸಾಧ್ಯತೆ ಇದೆ.
ರಾಜಕೀಯ ನೈತಿಕತೆ
ಈ ಪ್ರಕರಣ ರಾಜಕೀಯ ನೈತಿಕತೆಯ ಕುರಿತ ಚರ್ಚೆಯನ್ನೂ ಹುಟ್ಟುಹಾಕಿದೆ. ನಾಮನಿರ್ದೇಶಿತ ಸದಸ್ಯರ ಮತದಾನದ ಮಾನ್ಯತೆಯ ಕುರಿತ ಕಾನೂನು ವಿವಾದ ಇದ್ದರೂ, ಆ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿವೆ ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಇಂತಹ ವಿವಾದಾತ್ಮಕ ಪರಿಸ್ಥಿತಿಗಳನ್ನು ತಪ್ಪಿಸಲು ಹೆಚ್ಚಿನ ಎಚ್ಚರಿಕೆ ವಹಿಸಬೇಕಿತ್ತೇ ಎಂಬುದು ಈಗ ಎದ್ದಿರುವ ಪ್ರಶ್ನೆ.
ಇನ್ನೊಂದೆಡೆ, ಕಾಂಗ್ರೆಸ್ ಈ ಪ್ರಕರಣವನ್ನು ಬಿಜೆಪಿ ವಿರುದ್ಧ ತೀವ್ರ ರಾಜಕೀಯ ಅಸ್ತ್ರವಾಗಿ ಬಳಸಲು ಮುಂದಾಗಿದೆ. ದೇಶದಲ್ಲಿ ಬಿಜೆಪಿ ಮೇಲಿರುವ ಗಂಭೀರ ಆರೋಪವಾದ ಓಟ್ ಚೋರಿ(ಮತಕಳ್ಳತನ) ಗೆ ಸ್ಪಷ್ಟ ಉದಾಹರಣೆ ಎಂದು ಕಾಂಗ್ರೆಸ್ ವಾದಿಸಲು ಮುಂದಾಗಿದೆ.
ಕೆಲವೇ ದಿನಗಳ ಹಿಂದೆ ಶೃಂಗೇರಿ ಕ್ಷೇತ್ರದ ಅಂಚೆ ಮರುಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ ನಡೆಸಿದ ಹೈಡ್ರಾಮಾ ಮತ್ತು ರಾಜ್ಯಪಾಲರ ಮುಂದಿಟ್ಟುಕೊಂಡು ಬಿಜೆಪಿ ಪರಾಜಿತ ಅಭ್ಯರ್ಥಿ ಡಿಎನ್ ಜೀವರಾಜ್ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಮತ್ತು ಸರ್ವೋಚ್ಚ ನ್ಯಾಯಾಲಯ ಕಾಂಗ್ರೆಸ್ ಹಾಲಿ ಶಾಸಕ ಟಿಡಿ ರಾಜೇಗೌಡರ ಪರವಾಗಿ ಕೊಟ್ಟ ತೀರ್ಪನ್ನೂ ಕಾಂಗ್ರೆಸ್ ಮರು ಪ್ರಸ್ತಾಪಿಸಲು ಹೊರಟಿದೆ.
ಆದರೆ ಬಿಜೆಪಿ ಮಾತ್ರ ಇದನ್ನು ಕಾನೂನು ವ್ಯಾಖ್ಯಾನದ ವಿಷಯ ಎಂದು ಸಮರ್ಥಿಸಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಈ ಚರ್ಚೆ ಮುಂದಿನ ದಿನಗಳಲ್ಲಿಯೂ ರಾಜಕೀಯವಾಗಿ ಮುಂದುವರಿಯುವ ಎಲ್ಲಾ ಲಕ್ಷಣಗಳು ಮುನ್ನೆಲೆಗೆ ಬಂದಿದೆ.
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ!
ಈ ಪ್ರಕರಣ ಮತ್ತೊಂದು ಮಹತ್ವದ ವಿಚಾರವನ್ನೂ ನೆನಪಿಸಿದೆ. ಚುನಾವಣಾ ವ್ಯಾಜ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಪಡಿಸುವ ವ್ಯವಸ್ಥೆ ಬೇಕೇ? ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳನ್ನು ವಿಶೇಷ ನ್ಯಾಯಪೀಠಗಳ ಮೂಲಕ ತ್ವರಿತವಾಗಿ ವಿಚಾರಣೆ ನಡೆಸಬೇಕೇ? ನ್ಯಾಯ ತಡವಾಗುವುದರಿಂದ ಪ್ರಜಾಪ್ರಭುತ್ವದ ಆಶಯವೇ ಕುಂದುತ್ತಿದೆಯೇ?
ಇವು ಕೇವಲ ಈ ಒಂದು ಪ್ರಕರಣಕ್ಕೆ ಸೀಮಿತವಾದ ಪ್ರಶ್ನೆಗಳಲ್ಲ. ದೇಶದ ಚುನಾವಣಾ ವ್ಯವಸ್ಥೆಯ ಭವಿಷ್ಯದ ಕುರಿತ ಚರ್ಚೆಗಳಾಗಿವೆ. ಬಿಜೆಪಿ ಇಂತಹ ಸಣ್ಣಪುಟ್ಟ (ಗಂಭೀರ) ಲೋಪಗಳನ್ನೇ ತನ್ನ ಅಧಿಕಾರ ಹಿಡಿಯುವ ದಾರಿಯ ಮೂಲವಾಗಿಸುವಲ್ಲಿ ಯಶಸ್ವಿಯಾಗಿದೆ. ದೇಶಾದ್ಯಂತ ಇರುವ ಚುನಾವಣಾ ರಾಜಕೀಯ ವ್ಯಾಜ್ಯಗಳ ಹಿನ್ನೆಲೆ ಹುಡುಕಿದರೂ ಬಹುತೇಕ ಇದೇ ಮಾದರಿಯ ವ್ಯವಸ್ಥೆಯನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡು ಅಧಿಕಾರ ಅನುಭವಿಸುತ್ತಿದೆ.
ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಕೆ. ಪ್ರಾಣೇಶ್ ಅವರ ಸದಸ್ಯತ್ವ ರದ್ದು ಮತ್ತು ಗಾಯತ್ರಿ ಶಾಂತೇಗೌಡ ಅವರಿಗೆ ದೊರೆತ ತಡವಾದ ನ್ಯಾಯ ಕರ್ನಾಟಕ ರಾಜಕೀಯದ ಮಹತ್ವದ ಬೆಳವಣಿಗೆಯಾಗಿದೆ. ಆದರೆ ಈ ತೀರ್ಪು ಒಂದೇ ವೇಳೆ ಅನೇಕ ಪ್ರಶ್ನೆಗಳನ್ನೂ ಸಾರ್ವಜನಿಕವಾಗಿ ಮುಂದಿಟ್ಟಿದೆ.
ನ್ಯಾಯ ಸಿಕ್ಕರೂ ಅದು ನಾಲ್ಕು ವರ್ಷಗಳ ನಂತರ ಸಿಕ್ಕರೆ ಅದನ್ನು ಸಂಪೂರ್ಣ ನ್ಯಾಯ ಎಂದು ಕರೆಯಲಾದೀತೇ? ಅನರ್ಹ ಎಂದು ನಂತರ ಘೋಷಿಸಲ್ಪಟ್ಟ ಆಯ್ಕೆಯ ಆಧಾರದಲ್ಲಿ ಪಡೆದ ಅಧಿಕಾರ ಮತ್ತು ಸವಲತ್ತುಗಳ ಬಗ್ಗೆ ಕಾನೂನು ಏನು ಹೇಳುತ್ತದೆ? ಚುನಾವಣಾ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಹೊಸ ವ್ಯವಸ್ಥೆ ಅಗತ್ಯವಿದೆಯೇ? ರಾಜಕೀಯ ಪಕ್ಷಗಳ ನೈತಿಕ ಹೊಣೆಗಾರಿಕೆ ಎಲ್ಲಿಂದ ಆರಂಭವಾಗುತ್ತದೆ? ಓಟ್ ಚೋರಿ ಬಗೆಗಿನ ಬಿಜೆಪಿ ಮೇಲಿರುವ ಆರೋಪಕ್ಕೆ ಚುನಾವಣಾ ಆಯೋಗದ ಉತ್ತರವೇ ಅಂತಿಮ. ಆದರೆ ಚುನಾವಣಾ ಆಯೋಗ ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸೂಕ್ತ ಮತ್ತು ಕಾನೂನು ಬದ್ಧ ಉತ್ತರ ನೀಡುತ್ತದೆ ಎಂಬ ನಂಬಿಕೆ ಈಗ ದೇಶದ ಜನರಿಗೆ ಇಲ್ಲವೇ ಇಲ್ಲ. ಅದು ಎಷ್ಟರ ಮಟ್ಟಿಗೆ ಎಂದರೆ ನೀವು ಎಷ್ಟೇ ಮತ ಪಡೆದರೂ ಅಧಿಕಾರ ಅನುಭವಿಸುವುದು ಬಿಜೆಪಿ ಮಾತ್ರ ಎಂಬ ರೀತಿಯಲ್ಲಿ ಹೊಸ (ಅ)ವ್ಯವಸ್ಥೆ ರೂಪುಗೊಂಡಿತಾಗಿದೆ.
ಈ ಮೇಲೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಸಿಗುವುದು ಮುಂದಿನ ಕಾನೂನು ಬೆಳವಣಿಗೆಗಳು, ಸರ್ಕಾರದ ನಿಲುವು ಮತ್ತು ರಾಜಕೀಯ ಪಕ್ಷಗಳ ಪ್ರತಿಕ್ರಿಯೆಗಳ ಮೇಲೆ ಅವಲಂಬಿತವಾಗಿದೆ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟ.. ಈ ತೀರ್ಪು ಕರ್ನಾಟಕದ ರಾಜಕೀಯ ಮತ್ತು ಚುನಾವಣಾ ಕಾನೂನು ಚರ್ಚೆಯಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುವ ಮಹತ್ವದ ಮೈಲಿಗಲ್ಲಾಗಿ ದಾಖಲಾಗಲಿದೆ.
