Home ದೇಶ ಕೆನ್-ಬೆಟ್ವಾ ಯೋಜನೆ: ಕೊರಳಿಗೆ ಉರುಳು ಹಾಕಿಕೊಂಡು, ಚಿತೆಯ ಮೇಲೆ ಮಲಗಿ ಪ್ರತಿಭಟನೆ ವ್ಯಕ್ತಪಡಿಸಿದ ಆದಿವಾಸಿ ಜನರು

ಕೆನ್-ಬೆಟ್ವಾ ಯೋಜನೆ: ಕೊರಳಿಗೆ ಉರುಳು ಹಾಕಿಕೊಂಡು, ಚಿತೆಯ ಮೇಲೆ ಮಲಗಿ ಪ್ರತಿಭಟನೆ ವ್ಯಕ್ತಪಡಿಸಿದ ಆದಿವಾಸಿ ಜನರು

0

ಭೋಪಾಲ್: ಆದಿವಾಸಿ ಸಮುದಾಯದ ಜನರು, ವಿಶೇಷವಾಗಿ ಮಹಿಳೆಯರು ಕಳೆದ ಕೆಲವು ದಿನಗಳಿಂದ ಅತ್ಯಂತ ವಿನೂತನ ಹಾಗೂ ತೀವ್ರ ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಮೊದಲ ನದಿ ಜೋಡಣೆ ಯೋಜನೆಯಿಂದಾಗಿ ತಾವು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ತಮ್ಮ ಕುತ್ತಿಗೆಗೆ ಉರುಳು ಹಗ್ಗಗಳನ್ನು ಬಿಗಿದುಕೊಳ್ಳುವುದು, ಚಿತೆಯ ಮೇಲೆ ಮಲಗುವುದು ಮತ್ತು ನದಿಯ ಸೊಂಟದ ಮಟ್ಟದ ನೀರಿನಲ್ಲಿ ಗಂಟಗಟ್ಟಲೆ ನಿಲ್ಲುವ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಇವರು ಪ್ರಯತ್ನಿಸುತ್ತಿದ್ದಾರೆ. ದೇಶದ ಮೊದಲ ನದಿ ಜೋಡಣೆ ಕಾರ್ಯಕ್ರಮವಾದ 44,605 ಕೋಟಿ ರೂಪಾಯಿ ವೆಚ್ಚದ ‘ಕೆನ್-ಬೆಟ್ವಾ’ ನದಿ ಜೋಡಣೆ ಯೋಜನೆಯು ಸದ್ಯ ವೇಗ ಪಡೆದುಕೊಳ್ಳುತ್ತಿದೆ.

ಮಧ್ಯಪ್ರದೇಶದ ಛತರ್‌ಪುರ ಜಿಲ್ಲೆಯ ಗಿರಿಜನರು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಯೋಜನೆಯಿಂದಾಗಿ ತಮ್ಮ ಕೃಷಿ ಭೂಮಿ, ಕಾಡುಗಳು, ನೀರಿನ ಮೂಲಗಳು, ಜೀವನೋಪಾಯ ಮತ್ತು ಸಾಂಸ್ಕೃತಿಕ ಗುರುತನ್ನು ತಾವು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತಮಗೆ ಸೂಕ್ತ ಹಾಗೂ ಪೂರ್ಣ ಪ್ರಮಾಣದ ಪರಿಹಾರವನ್ನು ನೀಡದೆಯೇ ಅಧಿಕಾರಿಗಳು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ, ಹಕ್ಕುಗಳಿಗಾಗಿ ಹೋರಾಡುತ್ತಿರುವ ತಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಮತ್ತು ಹಲವು ಕುಟುಂಬಗಳನ್ನು ಅಧಿಕೃತ ಪುನರಾವಸತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಭೂಮಿ ಕಳೆದುಕೊಳ್ಳುತ್ತಿರುವ ಸಂತ್ರಸ್ತರಿಗೆ ನ್ಯಾಯಯುತ ಪುನರಾವಸತಿ ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ‘ಜೈ ಕಿಸಾನ್ ಆರ್ಗನೈಸೇಶನ್’ ನಾಯಕ ಅಮಿತ್ ಭಟ್ನಾಗರ್ ನೇತೃತ್ವದಲ್ಲಿ ಈ ಭಾಗದ ಗಿರಿಜನರು ಕಳೆದ ಕೆಲವು ದಿನಗಳಿಂದ ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ. ಕೊರಳಿಗೆ ಉರುಳು ಹಾಕಿಕೊಂಡು, ಚಿತೆಯ ಮೇಲೆ ಮಲಗಿ ಹಾಗೂ ಬರನ್ ನದಿಯ ನೀರಿನಲ್ಲಿ ನಿಂತು ನಡೆಸುತ್ತಿರುವ ಇವರ ಹೋರಾಟ ದೇಶದ ಗಮನ ಸೆಳೆದಿದೆ. ತಾವು ಕೇವಲ ಹಣದ ರೂಪದ ಪರಿಹಾರಕ್ಕಾಗಿ ಹೋರಾಡುತ್ತಿಲ್ಲ, ಬದಲಿಗೆ ತಲೆಮಾರುಗಳಿಂದ ಈ ಭೂಮಿಯೊಂದಿಗೆ ಬೆಸೆದುಕೊಂಡಿರುವ ತಮ್ಮ ಮೂಲ ಹಕ್ಕು ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ಗಿರಿಜನರು ಹೇಳುತ್ತಿದ್ದಾರೆ.

ಈ ಭಾಗದ ಆದಿವಾಸಿ ಜನರ ಆಂದೋಲನ ಮತ್ತು ಹೋರಾಟಕ್ಕೆ ವಿರೋಧ ಪಕ್ಷಗಳು ಸಹ ತಮ್ಮ ಬೆಂಬಲವನ್ನು ಘೋಷಿಸಿದ್ದು, ಇದರಿಂದಾಗಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಆದರೆ, ಅಧಿಕಾರಿಗಳು ಗಿರಿಜನರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ (ಕಲೆಕ್ಟರ್) ತಿಳಿಸಿದ್ದಾರೆ.

You cannot copy content of this page

Exit mobile version