Home ದೇಶ ಇ20 ಪೆಟ್ರೋಲ್‌ ಬಳಸಿ ಕಾರಿನ ಇಂಜಿನ್ ಜಖಂ | ಹೊಸ ಕಾರು ಕೊಡಿ ಇಲ್ಲವೇ ದಂಡ...

ಇ20 ಪೆಟ್ರೋಲ್‌ ಬಳಸಿ ಕಾರಿನ ಇಂಜಿನ್ ಜಖಂ | ಹೊಸ ಕಾರು ಕೊಡಿ ಇಲ್ಲವೇ ದಂಡ ಸೇರಿಸಿ ಹಣ ವಾಪಸ್‌ ಕೊಡಿ: ಮಾರುತಿ ಸುಜುಕಿ ಕಂಪನಿಗೆ ಗ್ರಾಹಕರ ಆಯೋಗದಿಂದ ಆದೇಶ

0

ದೇಶಾದ್ಯಂತ ಇ20 ಪೆಟ್ರೋಲ್ (ಶೇ. 20 ರಷ್ಟು ಎಥನಾಲ್ ಮಿಶ್ರಿತ ಇಂಧನ) ಬಳಕೆಯ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ವಿಮರ್ಶೆಗಳು ಹಾಗೂ ಆತಂಕಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ವಾಹನ ತಯಾರಿಕಾ ಸಂಸ್ಥೆಯೊಂದಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಇ20 ಇಂಧನ ಬಳಕೆಯಿಂದಾಗಿ ಕಾರಿನ ಇಂಜಿನ್ ಪದೇ ಪದೇ ಕೈಕೊಟ್ಟು ಸಂಪೂರ್ಣವಾಗಿ ಹಾಳಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗವು ದೇಶದಲ್ಲೇ ಅತ್ಯಂತ ಮಹತ್ವದ ಹಾಗೂ ಮೊದಲ ತೀರ್ಪನ್ನು ಪ್ರಕಟಿಸಿದೆ.

ಇ20 ಇಂಧನ ಬಳಕೆಯಿಂದಾಗಿ ವಾಹನದಲ್ಲಿ ಪದೇ ಪದೇ ಇಂಜಿನ್ ಸಮಸ್ಯೆಗಳು ತಲೆದೋರಿದ ಹಿನ್ನೆಲೆಯಲ್ಲಿ ಗ್ರಾಹಕರು ಹೂಡಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗವು, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮತ್ತು ಅದರ ಅಧಿಕೃತ ಡೀಲರ್ ಅನ್ನು ಜವಾಬ್ದಾರರನ್ನಾಗಿ ಮಾಡಿದೆ. ಈ ನಿರ್ದಿಷ್ಟ ವಾಹನದ ಇಂಜಿನ್ ಇ20 ಇಂಧನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲದಿದ್ದರೂ, ಕಂಪನಿಯು ಈ ಕಾರನ್ನು ಗ್ರಾಹಕರಿಗೆ ಮಾರಾಟ ಮಾಡಿದೆ ಎಂದು ಆಯೋಗವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಮುಂದಿನ 45 ದಿನಗಳ ಒಳಗಾಗಿ ಗ್ರಾಹಕರಿಗೆ ಅದೇ ಮಾಡೆಲ್‌ನ ಹೊಸ ಇ20 ಹೊಂದಾಣಿಕೆಯಾಗುವ ವಾಹನವನ್ನು ಒದಗಿಸಬೇಕು, ಇಲ್ಲವೇ ಹೆಚ್ಚುವರಿ ಪರಿಹಾರದೊಂದಿಗೆ ವಾಹನದ ಮೂಲ ಖರೀದಿ ಬೆಲೆಯಾದ 20.5 ಲಕ್ಷ ರೂಪಾಯಿಗಳನ್ನು ಸಂಪೂರ್ಣವಾಗಿ ಮರುಪಾವತಿಸಬೇಕು ಎಂದು ಮಾರುತಿ ಸುಜುಕಿ ಸಂಸ್ಥೆಗೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ

ಪ್ರೇಮ್‌ರಾಜ್ ದೇವ್ತಾ ಎಂಬುವವರು 2024 ರ ಜೂನ್ 3 ರಂದು ಮಾರುತಿ ಸಂಸ್ಥೆಯ ಎಸ್‌ಯುವಿ (SUV) ಕಾರೊಂದನ್ನು ಖರೀದಿಸಿದ್ದರು. ಕಾರು ಖರೀದಿಸಿದ ಸುಮಾರು ಐದು ತಿಂಗಳ ನಂತರ, ಅಂದರೆ ನವೆಂಬರ್ 11 ರಂದು ವಾಹನದಲ್ಲಿ ಮೊದಲ ಬಾರಿಗೆ ತಾಂತ್ರಿಕ ದೋಷ ಕಾಣಿಸಿಕೊಂಡು ಕಾರು ಪದೇ ಪದೇ ಆಫ್ ಆಗಲು ಶುರುವಾಗಿತ್ತು.

ಕಂಪನಿಯ ಅಧಿಕೃತ ವರ್ಕ್‌ಶಾಪ್ ಸಿಬ್ಬಂದಿ ಮೊದಲಿಗೆ ಈ ಸಮಸ್ಯೆಗೆ ಕಲಬೆರಕೆ ಇಂಧನವೇ ಕಾರಣ ಎಂದು ಭಾವಿಸಿ, ಪೆಟ್ರೋಲ್ ಟ್ಯಾಂಕನ್ನು ಸ್ವಚ್ಛಗೊಳಿಸಿ ವಾಹನವನ್ನು ಗ್ರಾಹಕರಿಗೆ ಮರಳಿ ನೀಡಿದ್ದರು. ಆದಾಗ್ಯೂ ವಾಹನದಲ್ಲಿ ಸಮಸ್ಯೆಗಳು ಬಗೆಹರಿಯಲಿಲ್ಲ.

ಎರಡನೇ ಬಾರಿ ವರ್ಕ್‌ಶಾಪ್‌ಗೆ ಭೇಟಿ ನೀಡಿದಾಗ ತಂತ್ರಜ್ಞರು ಇಂಧನ ಟ್ಯಾಂಕ್‌ನ ಒಳಗೆ ಬಿಳಿ ಬಣ್ಣದ ಜೆಲ್ಲಿಯಂತಹ ಪದಾರ್ಥ ಇರುವುದನ್ನು ಪತ್ತೆಹಚ್ಚಿದರು. ಮೊದಲ ಬಾರಿಗೆ ದುರಸ್ತಿ ಮಾಡುವಾಗ ಟ್ಯಾಂಕನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ರಸಾಯನಿಕವಾಗಿ ಕಲುಷಿತಗೊಂಡ ಇಂಧನದ ಅವಶೇಷಗಳು ಒಳಗೆ ಉಳಿದುಕೊಂಡಿವೆ ಎಂದು ಕಂಪನಿ ಒಪ್ಪಿಕೊಂಡಿತು. ತದನಂತರ ಮೂರನೇ ಬಾರಿ ವರ್ಕ್‌ಶಾಪ್ ಪರಿಶೀಲನೆ ನಡೆಸಿದಾಗಲೂ ಪೆಟ್ರೋಲ್ ಟ್ಯಾಂಕ್, ‌ಪೆಟ್ರೋಲ್ ಪೈಪ್‌ಗಳು ಮತ್ತು ‌ಫಿಲ್ಟರ್‌ಗಳಲ್ಲಿ ಫಿಲ್ಟರ್‌ಗಳಲ್ಲಿ ಮತ್ತೆ ಬಿಳಿ ಬಣ್ಣದ ಅವಶೇಷಗಳು ಕಂಡುಬಂದವು.

ನಾಲ್ಕನೇ ಬಾರಿ ಭೇಟಿ ನೀಡಿದಾಗ ಡ್ಯಾಶ್‌ಬೋರ್ಡ್‌ನಲ್ಲಿ ಇಂಜಿನ್ ದೋಷದ ಮುನ್ನೆಚ್ಚರಿಕೆ ಸಂದೇಶ ಕಾಣಿಸಿಕೊಂಡಿತು ಮತ್ತು ವಾಹನದ ಇವಿ (EV) ಮೋಡ್ ಕಾರ್ಯನಿರ್ವಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿತು. ಐದನೇ ಬಾರಿ ಪರಿಶೀಲಿಸುವಷ್ಟರಲ್ಲಿ ಕಾರಿನ ಇಂಜಿನ್ ಸಂಪೂರ್ಣವಾಗಿ ಜಖಂಗೊಂಡು ವಾಹನವು ಬಳಕೆಗೆ ಬಾರದಂತಾಯಿತು. ಕಂಪನಿಯಿಂದ ಪದೇ ಪದೇ ಇಂತಹ ತಾಂತ್ರಿಕ ವೈಫಲ್ಯಗಳು ಎದುರಾದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಹಕರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

You cannot copy content of this page

Exit mobile version