Wednesday, May 1, 2024

ಸತ್ಯ | ನ್ಯಾಯ |ಧರ್ಮ

ದುರಭಿಮಾನ ಕೊಲೆಗಳ ಮುಂದುವರಿಕೆ : ಹಿಂದುತ್ವ ರಾಜಕಾರಣದ ಕಥೆ – 12

ಅಷ್ಟೇ ಅಲ್ಲ, ಮದನ್‌ ಲಾಲ್‌ ಡಿಂಗ್ರನ ಅಣ್ಣ ಕೆ.ಎಲ್‌. ಡಿಂಗ್ರ, ತನ್ನ ತಮ್ಮ ಇಂಗ್ಲೆಂಡಿನಲ್ಲಿದ್ದಾನೆಂದೂ ಅವನನ್ನು ಚೂರು ನೋಡಿಕೊಳ್ಳಿ ಎಂದೂ ಕೋರಿದ್ದನ್ನು ಪರಿಗಣಿಸಿ ಮದನ್‌ ಲಾಲ್‌ ಡಿಂಗ್ರನಿಗೆ ಪತ್ರವನ್ನೂ ಬರೆದಿದ್ದ. ಆ ಕಾರಣದಿಂದಲೂ ಅಂದು ಆ ಸತ್ಕಾರಕೂಟದಲ್ಲಿ ಡಿಂಗ್ರನ ಜೊತೆ ದೀರ್ಘ ಹೊತ್ತು ಮಾತಕತೆ ನಡೆಸಿದ್ದ. ಆ ಮಾತುಕತೆಯ ಕೊನೆಗೆ ಸಣ್ಣ ಕೋಲ್ಟ್‌ ಪಿಸ್ಟಲ್‌ ಬಳಸಿ ವಿಲ್ಲಿಯ ಕಣ್ಣಿಗೆ ಗುಂಡು ಹೊಡೆದ ಡಿಂಗ್ರನನ್ನು ಪಾರ್ಟಿಯಲ್ಲಿ ಭಾಗವಹಿಸಿದ್ದವರು ಕಾಣುತ್ತಾರೆ. ಡಿಂಗ್ರ ನಾಲ್ಕು ಗುಂಡುಗಳನ್ನು ವಿಲ್ಲಿಯ ಮೆದುಳಿಗೆ ಹೊಡೆದಿದ್ದ. ವಿಲ್ಲಿ ಅಲ್ಲಿಯೇ ಕುಸಿದು ಬಿದ್ದ. ಅಲ್ಲಿಯೇ ಮರಣ ಹೊಂದಿದ.

ಸಾವರ್ಕರ್‌ ಲಂಡನ್ ವಾಸ ಬ್ರಾಹ್ಮಣಿಸಮ್ಮಿಗೆ ಕ್ರಾಂತಿಕಾರಕವಾದ ಆವೇಶವೊಂದನ್ನು ನೀಡಲು ಸಹಕಾರಿಯಾಯಿತು. ಲಂಡನ್‌ ಅಂದು ಅಂತರಾಷ್ಟ್ರೀಯ ಕ್ರಾಂತಿಕಾರಿಗಳ ರಾಜಧಾನಿಯಾಗಿತ್ತು. ಸಾಮ್ರಾಜ್ಯಶಾಹಿ ದೇಶಗಳಲ್ಲಿಯೇ ಅತ್ಯಂತ ದೊಡ್ಡ ದೇಶವಾಗಿತ್ತು ಬ್ರಿಟನ್.‌ ಆದರೂ, ತಮ್ಮ ನಾಡಿನಲ್ಲಿ ಒಂದು ಹಂತದವರೆಗೆ ಪ್ರಜಾಪ್ರಭುತ್ವವನ್ನೂ ಮಾನವ ಹಕ್ಕುಗಳನ್ನೂ ಸಂರಕ್ಷಿಸಲು ಅವರು ಕಟಿಬದ್ಧರಾಗಿದ್ದರು. ವಸಾಹತು ದೇಶಗಳಲ್ಲಿ ಅವರ ಕಾನೂನುಗಳು ಅತಿ ಕಠಿಣವೂ ಜನದ್ರೋಹಿಯೂ ಆಗಿದ್ದರು ಕೂಡ ತಮ್ಮ ದೇಶದಲ್ಲಿ ಆ ಕಾನೂನುಗಳು ಸಡಿಲವೂ ವೈಚಾರಿಕವೂ ಆಗಿದ್ದವು. ಆದ್ದರಿಂದಲೇ ಐರಿಷ್‌ ಕ್ರಾಂತಿಕಾರಿಗಳೂ ರಷ್ಯನ್‌ ಕ್ರಾಂತಿಕಾರಿಗಳೂ ಲಂಡನ್ನಿನಲ್ಲಿ ಬೇರುಬಿಟ್ಟಿದ್ದರು. ಸ್ವಂತ ದೇಶಗಳಿಗಿಂತ ಚೂರು ಹೆಚ್ಚೇ ಸ್ವಾತಂತ್ರ್ಯವನ್ನು ಬ್ರಿಟನ್‌ ಎಂಬ ಸಾಮ್ರಾಜ್ಯವಾದಿ ದೇಶ ತನ್ನ ಗಡಿಯೊಳಗೆ ಅವರಿಗೆಲ್ಲ ನೀಡಿತ್ತು ಎಂಬುದು ವಾಸ್ತವ.

ಹಲವು ದೇಶಗಳಿಂದ ಬರುವ ಕ್ರಾಂತಿಕಾರಿಗಳ ಎದುರು, ತಮ್ಮ ಧಾರ್ಮಿಕವೂ ಜಾತಿವಾದಿಯೂ ಆದ ಆಲೋಚನೆಗಳನ್ನು ಮರೆಮಾಚಿಕೊಂಡು, ಸಾಮ್ರಾಜ್ಯವಾದದ ವಿರೋಧಿಗಳಾಗಿ ಮಾತ್ರ ತಮ್ಮನ್ನು ಗುರುತಿಸಿಕೊಳ್ಳಲು ಇಂಡಿಯಾ ಹೌಸಿನ ಸಾವರ್ಕರ್‌ ಸಹಿತದ ಅಭಿನವ್‌ ಭಾರತ್‌ ಕಾರ್ಯಕರ್ತರಿಗೆ ಸಾಧ್ಯವಾಗಿತ್ತು. ಭಾರತದ ಧಾರ್ಮಿಕ ರೀತಿಗಳೋ ಜಾತಿ ಪದ್ದತಿಗಳೋ ಅವರಿಗೆ ತಿಳಿದಿರಲಿಲ್ಲ. ಬದಲಿಗೆ, ಲೋಕವೆಲ್ಲ ಆ ಕಾಲದಲ್ಲಿ ಸಶಸ್ತ್ರ ಕ್ರಾಂತಿಗೆ ಸಜ್ಜಾಗುತ್ತಿದ್ದ ಹೊತ್ತಲ್ಲಿ, ಅದರಲ್ಲೂ ಯುವಜನರ ನಡುವೆ ಇದ್ದ ಸೈದ್ಧಾಂತಿಕ ಅಂಗೀಕಾರವೂ ಸಾಮ್ರಾಜ್ಯವಾದಿ ಮಾದರಿಯ ಮೇಲಿದ್ದ ವಿರೋಧದ ಕಾರಣದಿಂದಲೂ ಪಾಶ್ಚಿಮಾತ್ಯ ಲೋಕದಲ್ಲಿ ಹೊಸ ಲೋಕಕ್ಕಾಗಿ ಹೋರಾಡುವ ಕ್ರಾಂತಿಕಾರಿಗಳಾಗಿ ಅವರೆಲ್ಲ ಅರಿಯಲ್ಪಟ್ಟರು. ಭಾರತದೊಳಗೆ ವಿಭಿನ್ನ ಧರ್ಮ ಮತ್ತು ಜಾತಿಗಳ ನಡುವೆ ಅವರು ತೋರಿಸುತ್ತಿದ್ದ ಮನೋಭಾವವನ್ನು ಉಳಿದವರು ಅರ್ಥಮಾಡಿಕೊಳ್ಳುವುದು ಅಸಾಧ್ಯವಾಗಿತ್ತು; ವಿಶೇಷವಾಗಿ ಭಾರತದ ಜಾತಿಪದ್ಧತಿಯ ಸಂಕೀರ್ಣತೆಗಳು ಪಾಶ್ಚಿಮಾತ್ಯ ದೇಶಗಳಿಗೆ ತೀರಾ ಅಪರಿಚಿತವಾಗಿದ್ದ ಕಾಲದಲ್ಲಿ.

೧೯೦೯ರಲ್ಲಿ ನಡೆದಿತ್ತು ಎಂದು ಹೇಳಲ್ಪಡುವ ಘಟನೆಯೊಂದು ಈ ಹಿನ್ನೆಲೆಯಲ್ಲೇ ನಡೆದಿತ್ತು ಎಂದು ಹೇಳಬಹುದು. ಮಾರ್ಚ್‌ ಮಧ್ಯದಲ್ಲಿ ಗಯ್ ಎ. ಆಲ್ಡ್ರೆಡ್‌ ಎಂಬ ಕಮ್ಯುನಿಸ್ಟ್‌ ಒಬ್ಬ ರಷ್ಯನ್ ಕ್ರಾಂತಿಕಾರಿಯನ್ನು ಇಂಡಿಯಾಹೌಸಿಗೆ ಕರೆದುಕೊಂಡು ಬಂದಿದ್ದನಂತೆ. ಮದನ್‌ ಲಾಲ್‌ ಡಿಂಗ್ರನೊಂದಿಗೆ ಸಾವರ್ಕರ್‌ ಆ ಕ್ರಾಂತಿಕಾರಿಯನ್ನು ಭೇಟಿಯಾಗಿದ್ದರು ಎಂದು ಹೇಳುಲಾಗುತ್ತದೆ. ಜೊತೆಗೆ ಆ ರಷ್ಯನ್‌ ಕ್ರಾಂತಿಕಾರಿ ವ್ಲಾದಿಮಿರ್‌ ಇಲ್ಲಿಚ್‌ ಲೆನಿನ್‌ ಎಂದೂ. ಈ ಕಥೆಗಳೆಲ್ಲ ಕಥೆಗಳಾಗಿ ಮಾತ್ರವೇ ಯಾಕೆ ಉಳಿದು ಬಿಟ್ಟವು? ಅದಕ್ಕೆ ಒಂದು ಕಾರಣ, ಅವರು ಅಂದು ಏನನ್ನು ಚರ್ಚಿಸಿದರು ಎಂಬುದರ ಕುರಿತಾಗಲಿ, ಕೇವಲ ಒಂದು ಭೇಟಿಗೆ ಮಾತ್ರವೇ ಅವರ ನಡುವಿನ ಸಂಬಂಧ ಯಾಕೆ ಮುಗಿಯಿತು ಎಂಬುದರ ಕುರಿತಾಗಲಿ ಯಾವ ಸಾಕ್ಷಿಯೂ ಬಾಕಿಯಾಗಲಿಲ್ಲ ಎಂಬುದು. ಸಾವರ್ಕರ್‌ ವಿಷಯದಲ್ಲಿ ತಾನೇ ಬರೆದಿಟ್ಟ ಲೇಖನಗಳು ಮತ್ತು ಅನುಭವಗಳು ಮಾತ್ರವೇ ಪ್ರಾಥಮಿಕ ಸಾಕ್ಷಿ ಎಂಬುದು ಕೂಡ ಈ ಕುರಿತ ತನಿಖೆಗೆ ಮಿತಿಯೊಡ್ಡತ್ತವೆ.

ಸೈದ್ಧಾಂತಿಕ ಪ್ರಚಾರ ಕಾರ್ಯಕ್ಕಿಂತಲೂ ಶಸ್ತ್ರ ಸಂಗ್ರಹಣೆಯೇ ಅಭಿನವ್‌ ಭಾರತ್ನ ವಿದೇಶಿ ಶಾಖೆಯಾಗಿದ್ದ ಫ್ರೀ ಇಂಡಿಯಾ ಸೊಸೈಟಿಯ ಪ್ರಧಾನ ಗುರಿಯಾಗಿತ್ತು. ಆ ಕಾಲದ ಸಾವರ್ಕರ್‌ ಬರಹಗಳೆಲ್ಲವೂ, ಅವು ಮಸ್ಸಿನಿಯ ಕುರಿತಾಗಿರಲಿ, ೧೮೫೭ರ ʼಯುದ್ಧʼದ ಕುರಿತಾಗಿರಲಿ ತನ್ನ ಅನುಯಾಯಿಗಳ ಶೌರ್ಯವನ್ನು ಕಾಯ್ದಿಟ್ಟುಕೊಳ್ಳಲು ಮಾತ್ರ ಉಳ್ಳವಾಗಿದ್ದವು. ಧಾರ್ಮಿಕವೂ ರಾಷ್ಟ್ರೀಯವೂ ಆದ ದುರಭಿಮಾನವನ್ನು ಮೇಲ್ಮಟ್ಟಕ್ಕೇರಿಸುವ ಗುರಿಯನ್ನು ಮಾತ್ರವೇ ಅವು ಬಹಳ ಸಲ ಹೊಂದಿರುತ್ತಿದ್ದವು. ಸ್ಪೆನ್ಸರನ ಯುಟಿಲಿಟೇರಿಯನ್‌ ಥಿಯರಿ ತರಹದ ಪಾಶ್ಚಾತ್ಯ ಸಿದ್ಧಾಂತಗಳನ್ನು ಪ್ರಯೋಗಿಸಲು ಅವರು ಮುಂದಾಗಿದ್ದರು. ಬ್ರಾಹ್ಮಣಿಸಮ್ಮಿನ ಸಾರ್ವಕಾಲಿಕ ಗ್ರಂಥವಾದ ಗೀತೆಯನ್ನು ತಿಲಕ್‌ ಉಪಯೋಗಿಸಿದರು. ಇತ್ತ ಸಾವರ್ಕರ್‌ ಯುದ್ಧಸನ್ನಾಹ, ಬ್ರಾಹ್ಮಣ ಶೌರ್ಯ, ಕೊಲ್ಲುವುದು, ಸಾಯುವುದು ಅಂತೆಲ್ಲ ಆಧುನಿಕಪೂರ್ವ ಕುಲಾಭಿಮಾನವನ್ನು ಮಾತ್ರ ಬಿತ್ತುತ್ತಿದ್ದರು. ಆದರೆ, ಸಾಮ್ರಾಜ್ಯಶಾಹಿ ವಿರೋಧಿಗಳು ಎಂಬ ಅಂತರಾಷ್ಟ್ರೀಯ ಮಾನವತಾವಾದಿಗಳ ಅಜೆಂಡಾದೊಳಗೆ ತಮ್ಮನ್ನು ತಾವು ತೂರಿಸಿಕೊಳ್ಳಲೂ ಒಂದು ಹಂತದವರೆಗೆ ಅವರಿಂದ ಸಾಧ್ಯವಾಗಿತ್ತು.

ಇದರ ನಡುವೆ ಇಂಡಿಯಾ ಹೌಸಿನ ಉಸ್ತುವಾರಿ ಶ್ಯಾಂಜಿಯಿಂದ ಸಾವರ್ಕರ್‌ ಕೈಗೆ ಬಂದು ಬಿದ್ದಿತು. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಐವತ್ತನೇ ವರ್ಷದ ನೆನಪಿನಲ್ಲಿ ಬಂದ ಇಂಡಿಯನ್‌ ಸೋಶ್ಯಲಜಿಸ್ಟ್‌ನಲ್ಲಿ ಪ್ರಕಟವಾದ ಲೇಖನವೊಂದು ಅದಕ್ಕೆ ದಾರಿ ಮಾಡಿಕೊಟ್ಟಿತ್ತು. ೧೯೦೭ರಲ್ಲಿ ಲಾಲಾ ಲಜಪತ್‌ ರಾಯ್‌ ಅವರನ್ನು ಅರೆಸ್ಟ್‌ ಮಾಡಿ ಮಂಡಾಲೆ ಜೈಲಿಗೆ ಕಳುಹಿಸಿದ್ದು ಶ್ಯಾಂಜಿಯನ್ನು ಕೋಪೋದ್ರಿಕ್ತಗೊಳಿಸಿತ್ತು. ಅದರ ವಿರುದ್ಧ ಇಂಡಿಯಾ ಹೌಸ್‌ನಲ್ಲಿ ಒಂದು ಪ್ರತಿಭಟನಾ ಸಭೆಯನ್ನು ಶ್ಯಾಂಜಿ ಕರೆಯುತ್ತಾರೆ. ಅಷ್ಟೇ ಅಲ್ಲದೆ, ತನ್ನ ಪರಿಚಿತ ವಲಯವಾದ ಆರ್ಥಿಕ ಕ್ಷೇತ್ರದಲ್ಲಿ ಬ್ರಿಟನ್ನಿಗೆದುರಾಗಿ ನಿಲುವು ತೆಗೆದುಕೊಂಡು ಲೇಖನವನ್ನು ಬರೆಯುತ್ತಾರೆ. ಇಂಡಿಯನ್‌ ಸೆಕ್ಯೂರಿಟಿಗಳಲ್ಲಿ ಹಣ ತೊಡಗಿಸಿಕೊಳ್ಳುವುದು ಅಪಾಯಕಾರಿ ಎಂದು ಹೇಳುತ್ತಾ ಬಂಡವಾಳಗಾರರನ್ನು ಅದರಿಂದ ಹಿಂದೇಟು ಹಾಕಲು ಪ್ರೇರೇಪಿಸುವ ರೀತಿಯಲ್ಲಿತ್ತು ಆ ಲೇಖನ. ಇದು ಬ್ರಿಟಿಷ್‌ ಅಧಿಕಾರಿಗಳನ್ನು ಇನ್ನಿಲ್ಲದಂತೆ ಸಿಟ್ಟಿಗೇಳಿಸಿತು. ಅದರೊಂದಿಗೆ ಭಾರತದಲ್ಲಿ ವಿತರಣೆಗೆಂದು ಕಳುಹಿಸಿದ್ದ ಇಂಡಿಯನ್‌ ಸೋಶ್ಯಲಜಿಸ್ಟ್‌ ನ ಆ ಸಂಚಿಕೆಯನ್ನು ಮುಟ್ಟುಗೋಲು ಹಾಕಲಾಯಿತು.

ಇಂಗ್ಲೆಂಡಿನಲ್ಲಿ ಉಳಿಯುವುದು ಅಸಾಧ್ಯವೆಂದರಿತ ಶ್ಯಾಂಜಿ ಕೃಷ್ಣವರ್ಮ ೧೯೦೭ರ ಸೆಪ್ಟಂಬರಿನಲ್ಲಿ ಇಂಗ್ಲೆಂಡ್‌ ತೊರೆದು ಪ್ಯಾರಿಸ್‌ಗೆ ಹೋಗುತ್ತಾರೆ. ಮೇಡಂ ಬಿಕ್ಕಾಜಿ ಕಾಮ ಅದಕ್ಕೂ ಮೊದಲೇ ಪ್ಯಾರಿಸ್‌ ತಲುಪಿರುತ್ತಾರೆ. ೧೯೦೭ರ ಅಕ್ಟೋಬರ್‌ ಸಂಚಿಕೆಯಿಂದ ಇಂಡಿಯನ್‌ ಸೋಶ್ಯಲಜಿಸ್ಟ್‌ ಪ್ಯಾರಿಸಿನಿಂದ ಪ್ರಕಟವಾಗತೊಡಗಿತು.

ಹಲವು ಯುರೋಪಿಯನ್‌ ದೇಶಗಳ ಕ್ರಾಂತಿಕಾರಿಗಳೊಂದಿಗೆ ಇದ್ದ ಸಂಪರ್ಕದ ಕಾರಣದಿಂದ ಭಾರತದ ಬಂಡಾಯಗಾರರಿಗೆ ೧೯೦೭ ಆಗಸ್ಟ್‌ ೧೮ರಿಂದ ೨೪ರವರೆಗೆ ಜರ್ಮಿನಿಯ ಸ್ಟುಟ್‌ಗರ್ಟಿನಲ್ಲಿ ನಡೆದ ಅಂತರಾಷ್ಟ್ರೀಯ ಸೋಶ್ಯಲಿಸ್ಟ್‌ ಕಾಂಗ್ರೆಸ್‌ನಲ್ಲಿ ಭಾಗವಹಿಸಲು ಅವಕಾಶ ಲಭಿಸಿತ್ತು. ಮೇಡಂ ಬಿಕ್ಕಾಜಿ ಕಾಮ ಮತ್ತು ಸರ್ದಾರ್‌ ಸಿಂಗ್‌ ರಾಣ ಅದರಲ್ಲಿ ಭಾಗವಹಿಸಿದ್ದರು. ಇವರಿಬ್ಬರು ಬ್ರಾಹ್ಮಣಿಸಮ್ಮಿನ ಪ್ರವರ್ತಕರಾಗಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಒಬ್ಬರು ಪಾರ್ಸಿ ಇನ್ನೊಬ್ಬರು ಸಿಖ್.‌ ಮೇಡಂ ಬಿಕ್ಕಾಜಿ ಕಾಮ ಅಲ್ಲಿ ತಾನು ತಯಾರಿಸಿದ್ದ ಭಾರತದ ಧ್ವಜವನ್ನು ಅನಾವರಣಗೊಳಿಸುತ್ತಾರೆ. ಬ್ರಿಟಿಷ್‌ ರಾಜಕೀಯ ನಾಯಕನಾಗಿದ್ದ ರಾಮ್ಸೇ ಮ್ಯಾಕ್‌ಡೊನಾಲ್ಡ್‌ ಅದನ್ನು ಪ್ರತಿಭಟಿಸಿ ವೇದಿಕೆ ತೊರೆಯುತ್ತಾನೆ.

ಅಂದು ಮೇಡಂ ಬಿಕ್ಕಾಜಿ ಕಾಮ ಅಲ್ಲಿ ನಡೆಸಿದ ಭಾಷಣ ತಿಲಕ್ ಅಥವಾ ಸಾವರ್ಕರ್ ಚಿಂತನೆಗಳನ್ನು ಬೆಂಬಲಿಸಿಕೊಂಡದ್ದಾಗಿರಲಿಲ್ಲ. ಬದಲಿಗೆ ಭಾರತೀಯ ನಾಗರೀಕರಿಗೆ ಸ್ವಯಂ ಆಡಳಿತ ಸಿಗಲು ಎಲ್ಲ ದೇಶಗಳ ಬೆಂಬಲವನ್ನು ಕೋರಿದ್ದರು. ಅದರ ನಂತರ ಅಮೆರಿಕಾ ಪ್ರವಾಸದಲ್ಲೂ ಆಕೆ ಎತ್ತಿ ಹಿಡಿದ ಮಾತುಗಳು ಇವೇ ಆಗಿದ್ದವು.

ʼನಾವು ಶಾಂತಿಯ ಪ್ರತಿಪಾದಕರು. ನಾವು ಯಾವ ರೀತಿಯ ರಕ್ತಸಿಕ್ತ ಹಿಂಸಾತ್ಮಕ ಕ್ರಾಂತಿಯನ್ನೂ ಬಯಸುವುದಿಲ್ಲ. ಆದರೆ, ಸರ್ವಾಧಿಕಾರವನ್ನು ಕಿತ್ತೆಸೆಯಲು ಜನರಿಗೆ ಇರುವ ಹಕ್ಕಿನ ಬಗ್ಗೆ ಅವರನ್ನು ಜಾಗೃತಗೊಳಿಸುತ್ತೇವೆ.ʼ

ಆದರೆ, ಸಾವರ್ಕರ್‌ ಮತ್ತು ಸಂಗಡಿಗರು ಆಯುಧ ಸಂಗ್ರಹದಲ್ಲಿಯೇ ಮುಳುಗಿದ್ದರು. ರಷ್ಯಾ, ಚೀನಾ, ಐರ್ಲೆಂಡ್, ಈಜಿಪ್ಟ್‌ ಮೊದಲಾದ ದೇಶಗಳ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವಾಗ ಅದು ಯಾವ ರೀತಿಯಲ್ಲೂ ಸೈದ್ಧಾಂತಿಕ ಹೊಂದಾಣಿಕೆಯಿಂದಾಗಿರಲಿಲ್ಲ. ಸಾವರ್ಕರ್‌ ಮತ್ತು ವಿ.ವಿ.ಎಸ್.‌ ಅಯ್ಯರ್‌ ಟರ್ಕಿಯ ಮುಸ್ತಫಾ ಕಮಾಲ್‌ನನ್ನು ಭೇಟಿಯಾಗಿದ್ದರು ಎಂದು ಹೇಳಲಾಗುತ್ತದೆ. ಹೇಮಚಂದ್ರ ದಾಸ್‌ ಮತ್ತು ಸೇನಾಪತಿ ಬಾಪುಟ್‌ರನ್ನು ಬಾಂಬ್‌ ತಯಾರಿಸುವ ಮ್ಯಾನುವೆಲ್‌ ತರಲೆಂದು ಸಾವರ್ಕರ್‌ ಪ್ಯಾರಿಸ್‌ಗೆ ಕಳುಹಿಸಿದ್ದ. ರಷ್ಯನ್‌ ಭಾಷೆಯ ಬಾಂಬ್‌ ಮ್ಯಾನುವೆಲ್‌ ಅನ್ನು ಅವರು ಅಲ್ಲಿಂದ ತಂದಿದ್ದರು. ನಂತರ ಅದನ್ನು ಇಂಗ್ಲೀಷಿಗೆ ಅನುವಾದ ಮಾಡಿ ಭಾರತಕ್ಕೆ ಕಳುಹಿಸಿ ಕೊಡಲಾಗಿತ್ತು.

ಇದರ ನಂತರವೇ ನಾವು ಹಿಂದೆ ಚರ್ಚಿಸಿದ ಮುಜಾಫರ್‌ ಪುರದ ಬಾಂಬ್‌ ದಾಳಿ ನಡೆಯುವುದು. ಖುದಿರಾಂ ಬೋಸ್‌ ಮತ್ತು ಪ್ರಫುಲ್ಲ ಚಕ್ರವರ್ತಿ ಎಂಬ ಪ್ರಫುಲ್ಲ ಚಕ್ಕಿ ಕಲ್ಕತ್ತಾದ ಮ್ಯಾಜಿಸ್ಟ್ರೇಟ್‌ ಆಗಿದ್ದ ಡಗ್ಲಾಸ್‌ ಕಿಂಗ್‌ ಫೋರ್ಡ್‌ನ ವಾಹನವೆಂದು ಭಾವಿಸಿ ಬೇರೆಯೊಂದು ವಾಹನದ ಮೇಲೆ ಬಾಂಬನ್ನು ಎಸೆಯುತ್ತಾರೆ. ಅದರಲ್ಲಿ ಇಬ್ಬರು ಯುವತಿಯರು ಸಾವಿಗೀಡಾಗುತ್ತಾರೆ. ಪ್ರಫುಲ್ಲ ಚಕ್ಕಿ ನಂತರ ಆತ್ಮಹತ್ಯೆ ಮಾಡಿಕೊಂಡ. ಖುದಿರಾಂ ಬೋಸ್‌ನನ್ನು ವಿಚಾರಣೆಯ ನಂತರ ಗಲ್ಲಿಗೇರಿಸಲಾಯಿತು. ಈ ಘಟನೆಯ ಸಂಬಂಧ ತಿಲಕರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಂಡಾಲೆ ಜೈಲಿಗೆ ಹಾಕಲಾಯಿತು. ಇಂಡಿಯಾ ಹೌಸ್‌ ಪೊಲೀಸರ ಕಣ್ಗಾವಲಿಗೆ ಒಳಪಟ್ಟಿತು.

ಇದರ ನಡುವೆ ಸಾವರ್ಕರ್‌ ಇಪ್ಪತ್ತು ಅಟೋಮ್ಯಾಟಿಕ್‌ ಬ್ರೌನಿಂಗ್‌ ಪಿಸ್ತೂಲುಗಳನ್ನು ಏಜೆಂಟರ ಮುಖಾಂತರ ಖರೀದಿಸಿ ಭಾರತಕ್ಕೆ ಕಳಿಸಿಕೊಡುತ್ತಾರೆ. ಇಂಡಿಯಾ ಹೌಸಿನ ಅಡುಗೆಯವನಾಗಿದ್ದ ಚತುರ್ಭುಜ್‌ ಅಮೀನ್‌ ೧೯೦೯ ಫೆಬ್ರವರಿ ೧೫ರಂದು ಅವನ್ನು ಭಾರತಕ್ಕೆ ತಲುಪಿಸಲು ಯಾತ್ರೆ ಹೊರಟಿದ್ದ. ಮಾರ್ಚ್‌ ೬ರಂದು ಅಮೀನ್‌ ಅಧಿಕಾರಿಗಳ ಕಣ್ಣು ತಪ್ಪಿಸಿ ಆ ಆಯುಧಗಳನ್ನು ಭಾರತದ ಅಭಿನವ್‌ ಭಾರತ್‌ ಕಾರ್ಯಕರ್ತರಿಗೆ ಹಸ್ತಾಂತರಿಸಿ ಮರಳುತ್ತಾನೆ.

ಬಾಬುರಾವ್‌ ಇದನ್ನು ಬೇರೆಲ್ಲೋ ಹೇಳಿಕೊಂಡ ಪರಿಣಾಮ ೧೯೦೯ ಫೆಬ್ರವರಿ ೨೮ರಂದು ಪೊಲೀಸ್‌ ಕಸ್ಟಡಿಗೆ ಒಳಗಾಗುತ್ತಾನೆ. ಅದರ ಭಾಗವಾಗಿ ಆತನ ಮನೆಯಲ್ಲಿ ನಡೆದ ತಪಾಸಣೆಯಲ್ಲಿ ಸಾವರ್ಕರ್‌ ಮತ್ತು ಸಂಗಡಿಗರು ಭಾರತಕ್ಕೆ ಕಳುಹಿಸಿದ್ದ ಬಾಂಬ್‌ ಮ್ಯಾನುವೆಲ್‌ ದೊರೆಯುತ್ತದೆ. ಮುಜಾಫರ್‌ಪುರ ಬಾಂಬ್‌ ದಾಳಿಯ ಆರೋಪಿಗಳಿಂದ ಇದೇ ಬಾಂಬ್‌ ಮ್ಯಾನುವೆಲ್‌ನ ಪ್ರತಿಗಳು ದೊರೆತಿದ್ದವು.

ಬಾಬುರಾವನ ವಿಚಾರಣೆ ನಾಸಿಕ್‌ ಜಿಲ್ಲಾ ಕಲೆಕ್ಟರ್ ಆಗಿದ್ದ ಆರ್ಥರ್‌ ಮೇಸನ್‌ ಟಿಪ್ಸ್‌ ಜಾಕ್ಸನ್‌ ಎಂಬ ವ್ಯಕ್ತಿಯ ಸುಮ್ಮುಖದಲ್ಲಿ ನಡೆದಿತ್ತು. ಎಂ.ಎಂ.ಟಿ. ಜಾಕ್ಸನ್‌ ಅದಾಗಲೇ ಜನರ ಪ್ರೀತಿ ಗಳಿಸಿದ್ದ ಕಲೆಕ್ಟರ್ ಆಗಿದ್ದ. ‌೧೯೦೯ ಜೂನ್‌ ೮ರಂದು ಜಸ್ಟಿಸ್‌ ಬಿ.ಸಿ.ಕೆನಡಿ ಬಾಬುರಾವ್‌ಗೆ ಜೀವಪರ್ಯಂತ ಜೈಲು ಶಿಕ್ಷೆ ವಿಧಿಸಿ ಅಂಡಮಾನಿನ ಸೆಲ್ಯುಲಾರ್‌ ಜೈಲಿಗೆ ಕಳುಹಿಸಲು ಆದೇಶಿಸುತ್ತಾನೆ. ಕಾಲಾಪಾನಿ ಎಂಬ ಹೆಸರಿನಲ್ಲಿ ಕುಪ್ರಸಿದ್ದವಾಗಿದ್ದ ಅಂಡಮಾನಿನ ಜೈಲುವಾಸ ಅತ್ಯಂತ ಕಠಿಣವೂ ಕ್ರೂರವೂ ಆಗಿತ್ತು. ೧೯೦೯ ನವೆಂಬರ್‌ ೨೧ರಂದು ಎಸ್.‌ಎಸ್‌. ಮಹಾರಾಜ ಎಂಬ ಹಡಗಿನಲ್ಲಿ ಬಾಬುರಾವ್‌ನನ್ನು ಅಂಡಮಾನಿಗೆ ಕರೆದುಕೊಂಡು ಹೋಗಲಾಯಿತು.

ಅದು ಇನ್ನೊಂದು ದುರಭಿಮಾನ ಕೊಲೆಗೆ ದಾರಿ ಮಾಡಿಕೊಟ್ಟಿತು. ಬಾಬುರಾವ್‌ನ ಅರೆಸ್ಟ್‌ ಈ ಕೊಲೆಗೆ ಮೊದಲ ಕಾರಣ ಆಗಿತ್ತು. ಎರಡನೇ ಕಾರಣ ಬ್ಯಾರಿಸ್ಟರ್‌ ಆಗಿ ಬಾರಲ್ಲಿ ರಿಜಿಸ್ಟರ್‌ ಮಾಡಲು ಸಾವರ್ಕರ್‌ಗೆ ಅವಕಾಶ ನೀಡಿರಲಿಲ್ಲ. ಇವೆರಡಕ್ಕೂ ಪ್ರತಿಕಾರ ತೀರಿಸಲು ಸಾವರ್ಕರ್‌ ತೀರ್ಮಾನಿಸುತ್ತಾರೆ. ಇದೊಂದು ರಾಜಕೀಯ ತೀರ್ಮಾನ ಎಂಬುದಕ್ಕಿಂತ ತನ್ನ ಮತ್ತು ಕುಟುಂಬದ ಮೇಲೆ ಬ್ರಿಟಿಷರು ನಡೆಸಿದ ಕ್ರೌರ್ಯಕ್ಕೆ ಅದಕ್ಕಿಂತಲೂ ದೊಡ್ಡದಾದ ತಿರುಗೇಟು ನೀಡುವ ಯೋಚನೆಯೇ ಆಗಿತ್ತು. ಸಾವರ್ಕರ್‌ ತನ್ನ ಬದುಕಿನುದ್ದಕ್ಕೂ ಉಳಿದವರನ್ನು ಬಲಿಕೊಟ್ಟು ತನ್ನನ್ನು ಸುರಕ್ಷಿತವಾಗಿಡುವ ಕೆಲಸವನ್ನೇ ಮಾಡಿದ್ದರು. ಅದು ಶುರುವಾದದ್ದು ೧೯೦೯ ಜುಲೈ ೧ರಂದು. ನಾವು ಆಗಲೇ ಗಮನಿಸಿದ ಮದನ್‌ಲಾಲ್‌ ಡಿಂಗ್ರ ಎಂಬ ಪಂಜಾಬಿ ಯುವಕ ಅದರ ಮೊದಲ ಬಲಿಯಾಗಿದ್ದ.

ಅಂದು ನ್ಯಾಷನಲ್‌ ಇಂಡಿಯನ್‌ ಅಸೋಸಿಯೇಷನ್ನಿನ ಸತ್ಕಾರ ನಡೆಯುವ ದಿನ. ಭಾರತೀಯರ ಮತ್ತು ಬ್ರಿಟಿಷರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಅಂತಹ ಪಾರ್ಟಿಗಳು ಆ ಕಾಲದಲ್ಲಿ ಲಂಡನ್ನಿನಲ್ಲಿ ನಡೆಯುವುದು ಸಾಮಾನ್ಯವಾಗಿತ್ತು. ಲಂಡನ್ನಿನ ಸೌತ್‌ ಕೆನ್ಸಿಂಗ್ಟನ್ನಿನ ಜಹಾಂಗೀರ್‌ ಹಾಲ್‌ನಲ್ಲಿ ಈ ಸಮ್ಮಿಲನ ನಡೆದಿತ್ತು. ಅಲ್ಲಿಗೆ ಸುಮಾರು ಒಂಭತ್ತೂವರೆ ಹೊತ್ತಿಗೆ ಮದನ್‌ಲಾಲ್ ಡಿಂಗ್ರ ಬರುತ್ತಾನೆ. ನ್ಯಾಷನಲ್‌ ಇಂಡಿಯನ್‌ ಅಸೋಸಿಯೇಷನ್ನಿನ ಸೆಕ್ರೆಟರಿಯಾಗಿದ್ದ ಮಿಸ್‌ ಬೆಕ್‌ ನಂತರದ ದಿನಗಳಲ್ಲಿ ಆತ ಬಂದಿದ್ದರ ಕುರಿತು ನೆನಪಿಸಿಕೊಂಡಿದ್ದಳು.‌ ಜೊತೆಗೆ ಆತನ ಜೊತೆ ನಡೆಸಿದ ಉಭಯಕುಶಲೋಪರಿಯನ್ನೂ. ತನ್ನ ಇಂಜಿನಿಯರಿಂಗ್‌ ಡಿಪ್ಲೋಮಾ ಮುಗಿಯಿತೆಂದೂ ಇನ್ಸ್ಟಿಟ್ಯೂಟ್‌ ಆಫ್‌ ಸಿವಿಲ್‌ ಇಂಜಿನಿಯರ್ಸಲ್ಲಿ ಅಸೋಸಿಯೇಟ್‌ ಮೆಂಬರ್‌ ಆಗಲು ಬಯಸುತ್ತಿದ್ದೇನೆಂದೂ ಅದಕ್ಕೆ ಬೇಕಾದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆಂದೂ ಆ ಪಂಜಾಬಿ ಯುವಕ ಹೇಳಿದ್ದ. ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಸರ್‌ ಕರ್ಜನ್‌ ವಿಲ್ಲಿ ಅಲ್ಲಿಗೆ ಬಂದಿದ್ದ.

ಸರ್‌ ವಿಲಿಯಂ ಕರ್ಜನ್‌ ವಿಲ್ಲಿ ಭೂಸೇನೆಯಲ್ಲಿ ಆಫೀಸರ್‌ ಆಗಿ ತನ್ನ ವೃತ್ತಿಜೀವನ ಆರಂಭಿಸಿದ್ದ. ನಂತರ ಲೆಫ್ಟಿನೆಂಟ್‌ ಕರ್ನಲ್‌ ಆಗಿ ಬಡ್ತಿ ಹೊಂದುತ್ತಾನೆ. ಭಾರತ ಮತ್ತು ನೇಪಾಳದಲ್ಲಿ ಸೇವೆ ಸಲ್ಲಿಸುತ್ತಾನೆ. ಭಾರತೀಯ ಕಾರ್ಯಗಳ ಕಾರ್ಯದರ್ಶಿಯಾಗಿ ಲಂಡನ್ನಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಾರ್ಡ್‌ ಹ್ಯಾಮಿಲ್ಟನ್‌ಗೆ ಸಹಾಯಕನಾಗಿ ವಿಲ್ಲಿ ಕರ್ತವ್ಯ ನಿರ್ವಹಿಸುತಿದ್ದ. ಇಂಗ್ಲೆಂಡಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸೌಹಾರ್ದತೆ ಬೆಳೆಸಿಕೊಂಡಿದ್ದ ಕೆಲವೇ ಕೆಲವು ಬ್ರಿಟಿಷ್‌ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ. ವಿನಾಯಕ್‌ ದಾಮೋದರ್‌ ಸಾವರ್ಕರ್ ಲಂಡನ್‌ ತಲುಪಿದ ಶುರುವಿನಲ್ಲಿ ಬ್ರಿಟಿಷ್‌ ಪಾರ್ಲಿಮೆಂಟಿನ ಬಜೆಟ್‌ ಮಂಡನೆಯನ್ನು ಕಾಣಬೇಕೆಂದು ಬಯಸಿದಾಗ, ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟವನು ಇದೇ ವಿಲ್ಲಿಯಾಗಿದ್ದ.

ಅಷ್ಟೇ ಅಲ್ಲ, ಮದನ್‌ ಲಾಲ್‌ ಡಿಂಗ್ರನ ಅಣ್ಣ ಕೆ.ಎಲ್‌. ಡಿಂಗ್ರ, ತನ್ನ ತಮ್ಮ ಇಂಗ್ಲೆಂಡಿನಲ್ಲಿದ್ದಾನೆಂದೂ ಅವನನ್ನು ಚೂರು ನೋಡಿಕೊಳ್ಳಿ ಎಂದೂ ಕೋರಿದ್ದನ್ನು ಪರಿಗಣಿಸಿ ಮದನ್‌ ಲಾಲ್‌ ಡಿಂಗ್ರನಿಗೆ ಪತ್ರವನ್ನೂ ಬರೆದಿದ್ದ. ಆ ಕಾರಣದಿಂದಲೂ ಅಂದು ಆ ಸತ್ಕಾರಕೂಟದಲ್ಲಿ ಡಿಂಗ್ರನ ಜೊತೆ ದೀರ್ಘ ಹೊತ್ತು ಮಾತಕತೆ ನಡೆಸಿದ್ದ. ಆ ಮಾತುಕತೆಯ ಕೊನೆಗೆ ಸಣ್ಣ ಕೋಲ್ಟ್‌ ಪಿಸ್ಟಲ್‌ ಬಳಸಿ ವಿಲ್ಲಿಯ ಕಣ್ಣಿಗೆ ಗುಂಡು ಹೊಡೆದ ಡಿಂಗ್ರನನ್ನು ಪಾರ್ಟಿಯಲ್ಲಿ ಭಾಗವಹಿಸಿದ್ದವರು ಕಾಣುತ್ತಾರೆ. ಡಿಂಗ್ರ ನಾಲ್ಕು ಗುಂಡುಗಳನ್ನು ವಿಲ್ಲಿಯ ಮೆದುಳಿಗೆ ಹೊಡೆದಿದ್ದ. ವಿಲ್ಲಿ ಅಲ್ಲಿಯೇ ಕುಸಿದು ಬಿದ್ದ. ಅಲ್ಲಿಯೇ ಮರಣ ಹೊಂದಿದ.

ಕೊಲೆಗಾರನನ್ನು ಹಿಡಿಯಲು ಮುಂದೆ ಬಂದ ಕವಾಸ್‌ ಲಾಲ್‌ ಚಾಚ ಎಂಬ ಪಾರ್ಸಿ ಡಾಕ್ಟರ್‌ ಮೇಲೆಯೂ ಡಿಂಗ್ರ ಗುಂಡಿನ ದಾಳಿ ಮಾಡಿದ. ಆತನೂ ನಂತರ ಮರಣ ಹೊಂದಿದ.

ನಂತರದ ಕಾಲದಲ್ಲಿ ತನ್ನ ಆತ್ಮಕಥೆ ಬರೆಯಲು ಬಂದಿದ್ದ ಧನಂಜಯ್‌ ಕೀರ್‌ ಜೊತೆಗೆ ಸಾವರ್ಕರ್‌ ನೆನಪಿಸಿಕೊಂಡಿದ್ದರು. ʼಈ ಬಾರಿ ನೀನು ಸೋತರೆ, ಮತ್ತೆ ನಿನ್ನ ಮುಖವನ್ನು ನನಗೆ ತೋರಿಸಬೇಡ.ʼ ಡಿಂಗ್ರ ತನ್ನ ನಾಯಕನ ಆಜ್ಞೆಯನ್ನು ನಡೆಸಿಕೊಡಲು ಯಾವ ಹಂತಕ್ಕೂ ಹೋಗಲು ವಿಧಿಸಲ್ಪಟ್ಟಿದ್ದ ಅನುಯಾಯಿಯಾಗಿದ್ದ. ಸಾವರ್ಕರ್ ಜೀವನ ಪೂರ್ತಿ ಇಂತಹ ಅರ್ಪಣಾ ಮನೋಭಾವದ ಅನುಯಾಯಿಗಳಿದ್ದರು. ಸಾವರ್ಕರ್ ಮಾತ್ರ ಅವರನ್ನೆಲ್ಲ ಚೆನ್ನಾಗಿಯೇ ಬಳಸಿಕೊಂಡರು. ಜೀವ ತೆಗೆಯಲೂ ಜೀವ ಕೊಡಲೂ. ದಸ್ತೋವೆಸ್ಕಿಯ ದಿ ಡೆಮನ್ಸ್‌ ಕಾದಂಬರಿಯ ಪೀಟರನ ಹಾಗೆ.

ಕರ್ಜನ್‌ ವಿಲ್ಲಿಯ ಕೊಲೆ ಇಂಗ್ಲೆಂಡನ್ನು ಅಲ್ಲೋಲಕಲ್ಲೋಲಗೊಳಿಸಿತು. ಸಾವರ್ಕರ್ ನೇತೃತ್ವದ ಭಯೋತ್ಪಾದನಾ ಕೃತ್ಯಗಳನ್ನು ಸಮರ್ಥಿಸುವವರನ್ನು ಬಿಟ್ಟು, ಉಳಿದ ಬಹುತೇಕ ಭಾರತೀಯರು ಈ ಕೊಲೆಯನ್ನು ಖಂಡಿಸಿದರು. ಡಿಂಗ್ರನ ತಂದೆ (ಡಾ. ದತ್ತ ಡಿಂಗ್ರ) ಮತ್ತು ಸಹೋದರರು (ಭಜನ್‌ ಲಾಲ್‌ ಡಿಂಗ್ರ, ಬಿಹಾರಿ ಲಾಲ್‌ ಡಿಂಗ್ರ) ಈ ಕೊಲೆಯನ್ನು ಖಂಡಿಸಿದರೆಂದು ಮಾತ್ರವಲ್ಲ ತಮ್ಮ ಮಗ/ಸಹೋದರನನ್ನು ಕೈ ಬಿಟ್ಟರು. ಸುರೇಂದ್ರನಾಥ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ ಮೊದಲಾದವರೂ ಡಿಂಗ್ರನ ಕೃತ್ಯವನ್ನು ಖಂಡಿಸಿದರು. ಆದರೆ, ಮೇಡಂ ಕಾಮಾ ಅವರ ಬಂದೇಮಾತರಂ ಮತ್ತು ತಲ್ವಾರ್‌ ಪತ್ರಿಕೆಗಳು ಡಿಂಗ್ರನನ್ನು ಬೆಂಬಲಿಸಿ ಬರೆದವು. ಗೋಖಲೆಯ ಜಾತ್ಯಾತೀತ ಆಧುನಿಕ ಚಿಂತನೆಯನ್ನು ಅಪಹಾಸ್ಯ ಮಾಡಲು ಬಂದೇಮಾತರಂ ಈ ಸಂದರ್ಭವನ್ನು ಬಳಸಿಕೊಂಡಿತು. ʼಪ್ರಜ್ಞೆಯೂ ಲಜ್ಜೆಯೂ ಇಲ್ಲದ ಹೇಡಿʼ ಎಂದು ಗೋಖಲೆಯನ್ನು ಛೇಡಿಸಲಾಯಿತು. ಯುವಜನರ ಶೌರ್ಯವನ್ನು ಪರಿಹಾಸ ಮಾಡುವ ಗೋಖಲೆ ಮತ್ತು ಸಹಚರರನ್ನು ʼನಕಲಿ ದೇಶಭಕ್ತರುʼ ಎಂದು ಮುದ್ರೆಯೊತ್ತಲಾಯಿತು. ಗೋಖಲೆ ಮತ್ತು ಸಹಚರರ ಮಂದವಾದ ನುಚ್ಚು ನೂರಾಗುತ್ತಿರುವ ಸಿದ್ಧಾಂತವೆಂದು ಹೇಳಿಕೊಂಡರು. ಒಂದು ಭವನ ಅದಕ್ಕೆದುರಾಗಿ ಒಡೆಯತೊಡಗಿದರೆ, ಮತ್ತದು ಉಳಿಯುವುದಿಲ್ಲ. ಈಗಾಗಲೇ ಈ ಮಂದಗಾಮಿಗಳು ಒಗ್ಗಟ್ಟಿಲ್ಲದಿರುವಿಕೆ ಮತ್ತು ಆಂತರಿಕ ಒಡಕಿನ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. ಗೋಖಲೆ ಜನರನ್ನು ತನ್ನ ಸುಂದರ ಭಾಷಣಗಳ ಮೂಲಕ ರಂಜಿಸುತ್ತಿದ್ದಾರೆ. ಕೆಡುಕು ತುಂಬಿದ ಮೂರ್ಖತನದ ಮೇಲೆ ಏರುದನಿಯ ಭಾಷಣಗಳನ್ನು ಹೊದೆಸುವ ಕಲೆಯಲ್ಲಿ ಅವರು ಅಗ್ರಗಣ್ಯರು. ಇತ್ತ ಸುರೇಂದ್ರನಾಥ ಬ್ಯಾನರ್ಜಿಯವರಾದರೋ, ಬ್ರಿಟಿಷರ ಬೂಟು ನೆಕ್ಕುವ ಮೂಲಕ ಎಲ್ಲರ ಮುಂದೆ ತನ್ನನ್ನು ತಾನೇ ನಗೆಪಾಟಲಿಗೀಡು ಮಾಡುತ್ತಿದ್ದಾರೆ.ʼ ತಿಲಕರ ಮತ್ತು ನವಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ವಿರೋಧಿಗಳ ಮೇಲೆ ಬಂದೇಮಾತರಂ ಬೆಂಕಿ ಕಾರಿತು.

ಅದೇ ಹೊತ್ತು ವ್ಯಾಲೆಂಟೈನ್‌ ಚಿರೋಲ್‌ ಎತ್ತಿ ತೋರಿಸಿದ ʼಪ್ರಾಯೋಗಿಕ ಚಿಂತನೆಯ ಬುದ್ಧಿ ಇರುವ, ಮೌನವಾಗಿಯೇ ಕೆಲಸಗಳನ್ನು ಸಾಧಿಸುವʼ ಚಿತ್ಪಾವನ ಬ್ರಾಹ್ಮಣನ ಕೌಶಲ್ಯವನ್ನು ಸಾವರ್ಕರ್‌ ಒಳಗೆ ಕಾಣಲು ಜೊತೆಗೊದ್ದ ಕೆಲವರಾದರೂ ಬಯಸಿದ್ದರೆಂದು ಕಾಣುತ್ತದೆ. ಬಾಬಾರಾವ್‌ನನ್ನು ಗಡೀಪಾರು ಶಿಕ್ಷೆಗೆ ಗುರಿಪಡಿಸಿದ ದಿನವೇ (ಜೂನ್‌ ೮) ಬಂಗಾಲ ವಿಭಜನೆಗೆ ಕಾರಣನಾಗಿದ್ದ ಲಾರ್ಡ್‌ ಕರ್ಜನ್‌ನನ್ನು ಕೊಲ್ಲಲು ಡಿಂಗ್ರನಿಗೆ ವಹಿಸಿದ್ದ. ಆತ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ನಡೆಯುತ್ತಿದ್ದ ಕಲೋನಿಯಲ್‌ ಇನ್ಸ್ಟಿಟೂಟಿಗೆ ಆಯುಧದಾರಿ ಡಿಂಗ್ರ ಹೋದನಾದರೂ, ತಡವಾಗಿದ್ದರಿಂದ ಸಮ್ಮೇಳನದ ಸಭಾಂಗಣದ ಬಾಗಿಲುಗಳು ಮುಚ್ಚಿದ್ದವು. ಖಿನ್ನನಾಗಿ ಮರಳಿ ಬಂದ ಡಿಂಗ್ರನನ್ನು ಹುರಿದುಂಬಿಸಿ ತನ್ನ ಗುರಿ ಸಾಧಿಸಲೆಂದೇ, ಕರ್ಜನ್‌ ವಿಲ್ಲಿಯನ್ನು ಕೊಲ್ಲಲು ಹೊರಡುವಾಗ ʼಈ ಸಲ ಗುರಿ ಸಾಧಿಸದಿದ್ದರೆ ಮತ್ತೆ ನಿನ್ನ ಮುಖ ತೋರಿಸಬೇಡʼ ಎಂದು ಬರೀ ಇಪ್ಪತ್ತರ ಪ್ರಾಯ ತಲುಪಿದ್ದ ಯುವಕನ ಬಳಿ ಸಾವರ್ಕರ್‌ ಹೇಳುವುದು. ಅದರಂತೆ ಬಾಬಾರಾವ್‌ನ ತೀರ್ಪು ಬಂದು ಇಪ್ಪತ್ತಮೂರು ದಿನಗಳ ನಂತರ ಸಾವರ್ಕರನಿಗೋಸ್ಕರ, ಒಂದರ್ಥದಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ವಿದೇಶದಲ್ಲಿ ನಡೆದ ದುರಭಿಮಾನ ಕೊಲೆಯ ಹೊಣೆಯನ್ನು ಡಿಂಗ್ರ ಹೊತ್ತುಕೊಳ್ಳುತ್ತಾನೆ.

ಕರ್ಜನ್‌ ವಿಲ್ಲಿ ತರಹದ ಅಷ್ಟೇನೂ ಪ್ರಮುಖನಲ್ಲದ, ಆದರೆ ಎಲ್ಲರ ಕೈಗೂ ಸಿಗುತ್ತಿದ್ದ ವ್ಯಕ್ತಿಯನ್ನು ಕೊಲೆಗೆ ಆಯ್ದುಕೊಂಡ ಬಗ್ಗೆ ಹಲವು ಕಾರಣಗಳನ್ನು ದಾಖಲಿಸಲಾಗಿದೆ. ಬಾಬಾರಾವ್‌ನ ಶಿಕ್ಷೆಗೆ ತಕ್ಷಣ ಪ್ರತಿಕಾರ ತೀರಸಬೇಕು ಎಂದು ಸಾವರ್ಕರ್‌ಗೆ ಇದ್ದ ತೀರಾ ವೈಯಕ್ತಿಕ ಇಚ್ಛೆಯೇ ಅವುಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅದರ ಜೊತೆಗೆ ಇಂಡಿಯಾ ಹೌಸಿನಲ್ಲಿ ಉಂಟಾದ ವಿಭಾಗೀಯತೆ ಇನ್ನೊಂದು ಕಾರಣವೆಂದು ಸಾವರ್ಕರ್ ಆತ್ಮಕತೆ ಬರೆದ ವೈಭವ್‌ ಪುರಂದರೆ ಎತ್ತಿ ತೋರಿಸುತ್ತಾರೆ. ೫೦ ವಿದ್ಯಾರ್ಥಿಗಳಿಗೆ ವಾಸಿಸಲು ಬೇಕಾದ ವ್ಯವಸ್ಥೆಯಿದ್ದ ಹಾಸ್ಟೆಲ್‌ನಲ್ಲಿ ಬರೀ ಐದು ಜನರಷ್ಟೇ ಉಳಿದುಕೊಂಡಿದ್ದರು. ಬರೀ ಬಾಯಿ ಮಾತಲ್ಲದೆ ರಾಜಕೀಯವಾಗಿ ಏನೂ ನಡೆಯುವುದಿಲ್ಲವೆಂಬ ವಾಸ್ತವ ಹಲವು ವಿದ್ಯಾರ್ಥಿಗಳ ಅರಿವಿಗೆ ಬಂದಿತ್ತು. ಇದು ಸಾವರ್ಕರ್‌ಗೆ ತಲೆನೋವಾಗಿತ್ತು. ಮದನ್‌ ಲಾಲ್‌ ಡಿಂಗ್ರನಂತಹ ತನ್ನ ಪ್ರಭಾವಲಯದಲ್ಲಿ ಸಂಪೂರ್ಣವಾಗಿ ಬಿದ್ದಿರುವ ಒಬ್ಬನನ್ನು ರಾಜಕೀಯವಾಗಿ ಬಳಸಲು ಸಾವರ್ಕರ್‌ ತೀರ್ಮಾನಿಸುವುದು ಇದರಿಂದಲೇ ಆಗಿರಬಹುದೆಂದು ಅನುಮಾನಿಸಬಹುದು. ಧನಂಜಯ್‌ ಕೀರ್‌ ಬರೆದ ಸಾವರ್ಕರ್ ಆತ್ಮಕತೆಯಲ್ಲಿ ಒಂದು ಭಾಗ ಮದನ್‌ ಲಾಲ್‌ ಡಿಂಗ್ರನ ಮನಸ್ಥಿತಿಯನ್ನು ವಿವರಿಸುತ್ತದೆ. ಕರ್ಜನ್‌ ವಿಲ್ಲಿಯನ್ನು ಕೊಲ್ಲುವ ಕೆಲವು ದಿನಗಳ ಮುಂಚೆ ಡಿಂಗ್ರ ಶಹೀದ್‌ ಆಗಲು ಸಮಯವಾಯಿತೇ ಎಂದು ಸಾವರ್ಕರ್‌ ಬಳಿ ಕೇಳುತ್ತಾನೆ. ಅದಕ್ಕೆ ಸಾವರ್ಕರ್‌ ನೀಡಿದ ಉತ್ತರ ಹೀಗಿತ್ತು. ʼಒಬ್ಬ ವೀರ ತಾನು ಶಹೀದ್‌ ಆಗಲು ತಯಾರಾಗಿದ್ದೇನೆಂದು ತೀರ್ಮಾನಿಸಿದರೆ, ಶಹೀದ್‌ ಆಗುವ ಸಮಯ ಆಗಿದೆಯೆಂದೇ ಅರ್ಥ.ʼ

ಆದರೆ, ಡಿಂಗ್ರನ ಕೃತ್ಯ ಸಾವರ್ಕರ್‌ ಯೋಜಿಸಿದ್ದಕ್ಕಿಂತ ವಿಪರೀತವಾದ ಪ್ರತಿಕ್ರಿಯೆಯನ್ನು ಸೃಷ್ಠಿಸಿತ್ತು ಎಂದು ನೋಡಿದೆವು. ಕೆಲವೇ ಕೆಲವರನ್ನು ಬಿಟ್ಟು, ಬಹುತೇಕ ಭಾರತೀಯರು, ಡಿಂಗ್ರನ ಕುಟುಂಬಿಕರು ಸಹಿತ ಆ ಕೊಲೆಯನ್ನು ತೀವ್ರವಾಗಿ ಖಂಡಿಸಿದರು. ೧೯೦೯ ಜುಲೈ ೫ರಂದು ಭಾರತೀಯರು ಲಂಡನ್ನಿನ ಕಾಕ್‌ಸ್ಟನ್‌ ಹಾಲಲ್ಲಿ ಡಿಂಗ್ರನ ಕೃತ್ಯವನ್ನು ಖಂಡಿಸಲು ಸಭೆ ಸೇರಿದ್ದರು. ಅವರಲ್ಲಿ ಬಹುತೇಕರು ಬ್ರಿಟಿಷ್‌ ವಿರೋಧಿಗಳಾಗಿದ್ದರು. ಮುಸ್ಲಿಂ ಲೀಗ್‌ ನಾಯಕ ಅಗಖಾನ್, ಕಾಂಗ್ರೆಸ್‌ ನಾಯಕ ಸುರೇಂದ್ರನಾಥ್‌ ಬ್ಯಾನರ್ಜಿ, ತಿಲಕರ ಸಹವರ್ತಿಗಳಾಗಿದ್ದ ಬಿಪಿನ್‌ ಚಂದ್ರಪಾಲ್‌, ಖಪಾರ್ಡೇ ಮೊದಲಾದವರು ಆ ಸಭೆಯಲ್ಲಿ ಭಾಗವಹಿಸಿದರು. ಡಿಂಗ್ರನ ಸಹೋದರ ಕೂಡ ಆ ಸಭೆಯಲ್ಲಿದ್ದ. ಸುಖಾಸುಮ್ಮನೆ ಶಹೀದ್‌ಗಳನ್ನು ಸೃಷ್ಠಿಸಲಾಗುತ್ತಿದೆ ಎಂಬ ಆರೋಪವನ್ನು ತನ್ನ ತಲೆಯಿಂದ ತೊಳೆದುಕೊಳ್ಳಲು ಸಾವರ್ಕರ್‌ ಏನಾದರು ಮಾಡಲೇಬೇಕಾಗಿತ್ತು. ಹಾಗಾಗಿ ಆ ಸಭೆ ಐಕ್ಯಕಂಠದಿಂದ ಡಿಂಗ್ರನ ಕೃತ್ಯವನ್ನು ಖಂಡಿಸುತ್ತದೆ ಎಂದು ಘೋಷಿಸಿದಾಗ ಸಾವರ್ಕರ್‌ ಏನಾದರು ಮಾಡಲೇಬೇಕಾದ ಒತ್ತಡಕ್ಕೆ ಸಿಲುಕುತ್ತಾರೆ. ಆತ ಎದ್ದು ನಿಂತು ವಿರೋಧ ವ್ಯಕ್ತಪಡಿಸುತ್ತಾರೆ. ಸಭೆಯಲ್ಲಿದ್ದವರು ಕೋಪಗೊಂಡ ಆತನ ಮೇಲೆ ಹಲ್ಲೆಗೆ ಮುಂದಾದಾಗ ರಕ್ಷಣೆಗೆ ಬರುವುದು ವಿ.ವಿ.ಎಸ್‌. ಅಯ್ಯರ್‌. ಆತ ಪಿಸ್ತೂಲ್‌ ತೆಗೆದು ಸಭಿಕರ ಮೇಲೆ ದಾಳಿ ಮಾಡಲು ಮುಂದಾದಾಗ ಸಾವರ್ಕರ್‌ ತಡೆಯುತ್ತಾರೆ. ಅಷ್ಟು ದಿನಗಳ ಕಾಲವೂ ತಮ್ಮ ನಾಯಕರೆಂದು ಪರಿಗಣಿಸಿದ್ದ ಬಿಪಿನ್‌ ಚಂದ್ರಪಾಲ್‌ ಕೂಡ ಡಿಂಗ್ರನನ್ನು ಒಬ್ಬ ಹೇಡಿ ಕೊಲೆಗಾರ ಎಂದು ಕರೆದಾಗ ಅವರು ತೀರಾ ನಿರಾಸೆಗೊಂಡರು. ಸಾವರ್ಕರ್ ಶಿಷ್ಯನಾಗಿದ್ದ ಎಂ.ಪಿ.ಟಿ. ಆಚಾರ್ಯ ಬಿಪಿನ್‌ ಚಂದ್ರಪಾಲರ ಹಿಂದಿನ ಚಟುವಟಿಕೆಗಳ ಬಗ್ಗೆ ಗೌರವವಿದ್ದರೂ ಇನ್ನು ಮುಂದೆ ಬಹಿಷ್ಕರಿಸುತ್ತೇವೆ ಎಂದು ಇಂಡಿಯನ್‌ ಸೋಶ್ಯಲಜಿಸ್ಟ್ ನಲ್ಲಿ ಬರೆದ ಪತ್ರದ ಮೂಲಕ ಸಾರಿದ.

ಈ ಪ್ರಯತ್ನದಲ್ಲಿ ಗುರಿ ಸಾಧಿಸದಿದ್ದರೆ ನಿನ್ನ ಮುಖ ತೋರಿಸಬೇಡ ಎಂದು ಹೇಳಿ ಕರ್ಜನ್‌ ವಿಲ್ಲಿಯನ್ನು ಕೊಲ್ಲಲು ಡಿಂಗ್ರನನ್ನು ಕಳುಹಿಸಿದ ಸಾವರ್ಕರ್‌ ಅವರ ಕುಟಿಲ ಮಾನಸಿಕತೆಯನ್ನು ತೋರಿಸುವ ಒಂದು ಘಟನೆಯೂ ಈ ಸಭೆಯಲ್ಲಿ ನಡೆಯಿತು. ಸತ್ತು ಬಿದ್ದಿದ್ದ ವಿಲ್ಲಿಯ ಮೇಲೆ ಆತನ ಹೆಂಡತಿ ಆರ್ತನಾದದೊಂದಿಗೆ ಬಂದು ಬಿದ್ದ ಘಟನೆಯನ್ನು ಒಬ್ಬ ಭಾರತೀಯ ವಿದ್ಯಾರ್ಥಿ ನಗುತ್ತಾ ವಿವರಿಸುತ್ತಿದ್ದನಂತೆ. ಆಗ ಸಾವರ್ಕರ್‌ ಹೀಗೆ ಹೇಳಿದರಂತೆ. ʼತನ್ನ ಗಂಡನ ಸಾವು ಕಂಡು ಆಕ್ರಂದನ ಮಾಡುತ್ತಿರುವ ಒಬ್ಬ ಹೆಣ್ಣನ್ನು ಅಪಹಾಸ್ಯ ಮಾಡುತ್ತಿರುವ ನಿನ್ನನ್ನು ನಾನು ನಂಬಿಕಸ್ಥನೆಂದು ಪರಿಗಣಿಸುವುದಿಲ್ಲ.ʼ ನಿರಂಜನ್‌ ಪಾಲ್‌ ಎಂಬ ಇಂಡಿಯಾ ಹೌಸಿನ ಇನ್ನೊಬ್ಬ ವಿದ್ಯಾರ್ಥಿ ಈ ಘಟನೆಯನ್ನು ಎತ್ತಿ ತೋರಿಸಿ ಸಾವರ್ಕರ್‌ ಒಳಗಿದ್ದ ಮನುಷ್ಯತ್ವವನ್ನು ಹೊಗಳುತ್ತಾನೆ. ಆತನೊಳಗಿನ ಕವಿಯನ್ನೂ ತತ್ವಜ್ಞಾನಿಯನ್ನೂ ಆತನೊಳಗೆ ತುಂಬಿ ತುಳುಕುತ್ತಿರುವ ಮನುಷ್ಯತ್ವವನ್ನೂ ತೋರಿಸುವ ಸಂದರ್ಭ ಅದಾಗಿತ್ತು ಎಂದು ನಿರಂಜನ್‌ ಪಾಲ್‌ ಹೇಳುತ್ತಾನೆ. ಕ್ರೂರ ಕೊಲೆಯ ನಂತರದ ಮನುಷ್ಯತ್ವ!

ಇತ್ತ ಭಾರತದಲ್ಲೂ ಕರ್ಜನ್‌ ವಿಲ್ಲಿಯ ಕೊಲೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು. ತಿಲಕರ ತೀವ್ರ ಅನುಯಾಯಿಯಾಗಿದ್ದ ಎನ್.‌ಸಿ. ಕೇಲ್ಕರ್‌ ಬೃಹತ್‌ ಪ್ರತಿಭಟನೆಯನ್ನು ದಾಖಲಿಸಿದರು. ಡಿಂಗ್ರನ ಕೃತ್ಯ ಒಂದು ವಿಷವೃಕ್ಷವನ್ನು ಬೊಟ್ಟು ಮಾಡುತ್ತಿದೆ, ಅದು ತೀರಾ ಅನಗತ್ಯ ಮೂಲೆಯಲ್ಲೂ ಚಿಗುರೊಡೆಯಲು ಬಿಡಬಾರದೆಂದು ಅವರು ಅಭಿಪ್ರಾಯಪಟ್ಟರು. ಗೋಖಲೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸುಮಾರು ಐವತ್ತರಷ್ಟು ವಿದ್ಯಾರ್ಥಿಗಳ ಮೇಲೆ ಇಂತಹ ಭಾವನೆಗಳನ್ನು ಹೇರುತ್ತಿರುವ ಸಾವರ್ಕರ್‌ ಬಂಧನವಾಗದಿದ್ದರೆ ಇಂತಹ ಕೊಲೆಗಳು ನಿಲ್ಲುವುದಿಲ್ಲ ಎಂದು ಹೇಳಿದರು.

೧೯೦೯ ಜುಲೈ ೨೨ರಂದು ಸಾವರ್ಕರ್‌ ಡಿಂಗ್ರನನ್ನು ಜೈಲಿನಲ್ಲಿ ಭೇಟಿಯಾಗುತ್ತಾರೆ. ʼನಾನು ನಿನ್ನ ದರ್ಶನ ಪಡೆಯಲು ಬಂದಿದ್ದೇನೆʼ ಎಂಬ ಸಾವರ್ಕರ್ ಮಾತು ತನ್ನ ಅನುಯಾಯಿಗೆ ಅತೀವ ಸಂತೋಷ ನೀಡಿತ್ತು.

ನಿರೀಕ್ಷಿಸಿದಂತೆ ಡಿಂಗ್ರನಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ಹಿಂದೂಗಳಲ್ಲದೆ ಬೇರೆ ಯಾರು ಕೂಡ ತನ್ನ ಮೃತದೇಹವನ್ನು ಮುಟ್ಟಬಾರದೆಂದು ಹೇಳಿಕೊಂಡು ಕೊನೆಯವರೆಗು ತನ್ನ ಹಿಂದುತ್ವವನ್ನು ಪಾಲಿಸಿದ. ತನ್ನ ನಾಯಕನ ವಿನೀತ ಹಿಂಬಾಲಕನಾದ.

ಮುಂದುವರೆಯುವುದು… To be continued…

Related Articles

ಇತ್ತೀಚಿನ ಸುದ್ದಿಗಳು