ಹೊಸದೆಹಲಿ: ಕೇಂದ್ರ ಸರ್ಕಾರದ 45 ಪ್ರಮುಖ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಖಾಸಗಿ ವ್ಯಕ್ತಿಗಳನ್ನು ನೇಮಿಸಲು ಯುಪಿಎಸ್‌ಸಿ ಹೊರಡಿಸಿರುವ ‘ಲ್ಯಾಟರಲ್ ಎಂಟ್ರಿ’ ಅಧಿಸೂಚನೆ ವಿವಾದಕ್ಕೀಡಾಗುತ್ತಿದೆ. ಈ ಅಧಿಸೂಚನೆಯನ್ನು ಕೇಂದ್ರ ಸಚಿವರು, ಎನ್‌ಡಿಎ ಪಾಲುದಾರ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಮತ್ತು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ.
ಈ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಚಿರಾಗ್ ಪಾಸ್ವಾನ್ ʼಲ್ಯಾಟರಲ್ ಎಂಟ್ರಿ ಘೋಷಣೆ ಸಂಪೂರ್ಣ ತಪ್ಪು ಮತ್ತು ಇದರಲ್ಲಿ ಯಾವುದೇ ಅರ್ಥ ಇಲ್ಲʼ ಎಂದು ತಿಳಿಸಿದರು.
ಈ ಕ್ರಮವನ್ನು ತಮ್ಮ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಹೇಳಿದರು. ಎಲ್ಲಾ ಸರ್ಕಾರಿ ನೇಮಕಾತಿಗಳು ಮೀಸಲಾತಿ ನಿಯಮಗಳನ್ನು ಅನುಸರಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು. ಭಾನುವಾರವಷ್ಟೇ ಈ ಘೋಷಣೆಯ ಬಗ್ಗೆ ತಿಳಿದು ಬಂದಿದ್ದು, ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಮೀಸಲಾತಿ ಕದಿಯಲು ಸಂಚು: ವಿರೋಧ ಪಕ್ಷಗಳು
ಲ್ಯಾಟರಲ್ ಎಂಟ್ರಿ ವಿಧಾನದ ಮೂಲಕ ನೇಮಕಾತಿ ನಡೆಸುವುದು ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳ ಮೇಲಿನ ದಾಳಿ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಬಿಜೆಪಿ ಬಹುಜನರಿಂದ ಮೀಸಲಾತಿಯನ್ನು ಕಸಿದುಕೊಳ್ಳಲು ಮತ್ತು ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಹಿಂದುಳಿದ ವರ್ಗದವರನ್ನು ಸರ್ಕಾರಿ ನೌಕರಿಯಿಂದ ದೂರವಿಡುವ ಯೋಜಿತ ಷಡ್ಯಂತ್ರ ಇದಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಲ್ಯಾಟರಲ್ ಎಂಟ್ರಿ ನೀತಿಯನ್ನು ಟೀಕಿಸಿದ್ದಾರೆ.
ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಯುಪಿಎ ಸರ್ಕಾರದ ಅವಧಿಯಲ್ಲಿ ಎರಡನೇ ಆಡಳಿತ ಸುಧಾರಣಾ ಆಯೋಗವು ಈ ನೀತಿಯನ್ನು ಪ್ರಸ್ತಾಪಿಸಿತ್ತು ಎಂದು ಹೇಳಿದ್ದಾರೆ.
ಲ್ಯಾಟರಲ್ ಎಂಟ್ರಿ ಎಂದರೇನು?
ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಮಧ್ಯಮ ಮಟ್ಟದ ಮತ್ತು ಹಿರಿಯ ಹಂತದ ಹುದ್ದೆಗಳು ಸಾಮಾನ್ಯವಾಗಿ ಐಎಎಸ್‌ನಂತಹ ನಾಗರಿಕ ಸೇವೆಗಳ ಅಧಿಕಾರಿಗಳಿಂದ ತುಂಬಿರುತ್ತವೆ. ಗುತ್ತಿಗೆ ಆಧಾರದ ಮೇಲೆ ನಾಗರಿಕ ಸೇವೆಗಳಿಗೆ ಸಂಬಂಧಿಸದ ಹೊರಗಿನವರು ಮತ್ತು ತಜ್ಞರನ್ನು ಈ ಹುದ್ದೆಗಳಿಗೆ ಭರ್ತಿ ಮಾಡುವುದನ್ನು ‘ಲ್ಯಾಟರಲ್ ಎಂಟ್ರಿ’ ಎಂದು ಕರೆಯಲಾಗುತ್ತದೆ. ಅವರನ್ನು ಮೂರು ವರ್ಷ ಅಥವಾ ಐದು ವರ್ಷಗಳ ಒಪ್ಪಂದದ ಮೇಲೆ ನೇಮಿಸಲಾಗುತ್ತದೆ. ಈ ವಿಧಾನವನ್ನು 2018ರಲ್ಲಿ ಮೊದಲ ಬಾರಿಗೆ ಅಳವಡಿಸಲಾಗಿದೆ.
ಪ್ರಸ್ತುತ ಯುಪಿಎಸ್ ಸಿ ವಿವಿಧ ಇಲಾಖೆಗಳಲ್ಲಿ ಜಂಟಿ ನಿರ್ದೇಶಕ, ನಿರ್ದೇಶಕ, ಉಪ ಕಾರ್ಯದರ್ಶಿ ಇತ್ಯಾದಿ 45 ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ಹೊರಡಿಸಿದೆ.