Home ದೇಶ ಸಿಇಸಿಗೆ ಕಾನೂನು ರಕ್ಷಣೆ ಕವಚ: ಕಾಯ್ದೆಯ ಸೆಕ್ಷನ್ 16 ರದ್ದುಪಡಿಸಲು ವಿಪಕ್ಷಗಳ ಆಗ್ರಹ; ಸುಪ್ರೀಂ ಕೋರ್ಟ್...

ಸಿಇಸಿಗೆ ಕಾನೂನು ರಕ್ಷಣೆ ಕವಚ: ಕಾಯ್ದೆಯ ಸೆಕ್ಷನ್ 16 ರದ್ದುಪಡಿಸಲು ವಿಪಕ್ಷಗಳ ಆಗ್ರಹ; ಸುಪ್ರೀಂ ಕೋರ್ಟ್ ನೋಟಿಸ್!

0

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ವಿಪಕ್ಷಗಳು ನಡೆಸುತ್ತಿರುವ ಹೋರಾಟದ ನಡುವೆ, ಚುನಾವಣಾ ಆಯುಕ್ತರಿಗೆ ಲಭ್ಯವಿರುವ ‘ಕಾನೂನು ರಕ್ಷಣೆ’ (Legal Immunity) ಕುರಿತ ವಿವಾದ ದೇಶವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಮೂಲಕ ನಾಗರಿಕರ ಸಾಮೂಹಿಕ ಮತದಾನದ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ ಸಿಇಸಿ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದರೂ, ಕೇಂದ್ರ ಸರ್ಕಾರ ತಂದಿರುವ ಕಾಯ್ದೆಯು ಅವರ ಮೇಲೆ ಯಾವುದೇ ಕ್ರಿಮಿನಲ್ ಅಥವಾ ಸಿವಿಲ್ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡುತ್ತಿದೆ.

2023ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ’ಯು, ಆಯುಕ್ತರು ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ ಕೈಗೊಂಡ ಯಾವುದೇ ಕ್ರಮಗಳು, ನಿರ್ಧಾರಗಳು ಅಥವಾ ನೀಡಿದ ಹೇಳಿಕೆಗಳ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡದಂತೆ ಸಂಪೂರ್ಣ ರಕ್ಷಣೆ ಒದಗಿಸುತ್ತದೆ.

ಈ ಕಾಯ್ದೆಯ ‘ಸೆಕ್ಷನ್ 16’ ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯವು ವಿಚಾರಣೆಗೆ ಸಮ್ಮತಿಸಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಅಕ್ಟೋಬರ್ 5 ರಂದು ಎಸ್‌ಐಆರ್ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, “ಸಂವಿಧಾನಿಕ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಸಿಗುವ ರಕ್ಷಣೆಗಿಂತಲೂ ಚುನಾವಣಾ ಆಯುಕ್ತರಿಗೆ ನೀಡಿರುವ ರಕ್ಷಣೆ ಮತ್ತಷ್ಟು ವ್ಯಾಪಕವಾಗಿದೆ,” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತ್ತು.

ಚರ್ಚೆಯಿಲ್ಲದೆ ಕಾಯ್ದೆಗೆ ಸೇರ್ಪಡೆಯಾಗಿದ್ದ ಸೆಕ್ಷನ್ 16:

2023ರ ಆಗಸ್ಟ್‌ನಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದಾಗ, ಸಿಇಸಿ ಮತ್ತು ಆಯುಕ್ತರ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮಟ್ಟದಿಂದ ಸಂಪುಟ ಕಾರ್ಯದರ್ಶಿ (ಕ್ಯಾಬಿನೆಟ್ ಸೆಕ್ರೆಟರಿ) ಮಟ್ಟಕ್ಕೆ ಇಳಿಸಲು ಪ್ರಸ್ತಾಪಿಸಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ, ಸಂಸತ್ತಿನ ಸದಸ್ಯರಿಗೆ ಆರಂಭದಲ್ಲಿ ನೀಡಿದ್ದ ಕರಡು ಪ್ರತಿಯಲ್ಲಿ ಈ ಕಾನೂನು ವಿನಾಯಿತಿ ನಿಬಂಧನೆ ಇರಲಿಲ್ಲ.

ಬಳಿಕ 2023ರ ಡಿಸೆಂಬರ್ 12ರಂದು ಮಸೂದೆಯ ಚರ್ಚೆಯ ಅಂತಿಮ ಹಂತದಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ‘ಕ್ಲಾಸ್ 15ಎ’ ಹೆಸರಿನಲ್ಲಿ ಹೊಸ ತಿದ್ದುಪಡಿಯನ್ನು ಮಂಡಿಸಿದರು. ಯಾವುದೇ ಚರ್ಚೆಯಿಲ್ಲದೆ ತರಾತುರಿಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲ್ಪಟ್ಟ ಈ ಅಂಶವೇ ಕೊನೆಗೆ ಕಾಯ್ದೆಯ ‘ಸೆಕ್ಷನ್ 16’ ಆಗಿ ಮಾರ್ಪಟ್ಟಿತು.

ಏನಿದು ಸೆಕ್ಷನ್ 16?:

ಈ ಸೆಕ್ಷನ್ ಪ್ರಕಾರ— “ಚಾಲ್ತಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಇದ್ದರೂ, ಪ್ರಸ್ತುತ ಅಥವಾ ಈ ಹಿಂದೆ ಮುಖ್ಯ ಚುನಾವಣಾ ಆಯುಕ್ತರಾಗಿ ಇಲ್ಲವೇ ಚುನಾವಣಾ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ ಯಾವುದೇ ವ್ಯಕ್ತಿಯು, ತನ್ನ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ಅಥವಾ ನಿರ್ವಹಿಸುತ್ತಿರುವುದಾಗಿ ಭಾವಿಸಿ ತೆಗೆದುಕೊಂಡ ಯಾವುದೇ ಕ್ರಮ, ತೀರ್ಮಾನ ಅಥವಾ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯವು ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಳ್ಳುವಂತಿಲ್ಲ ಅಥವಾ ಮುಂದುವರಿಸುವಂತಿಲ್ಲ.”

ಈ ನಿಬಂಧನೆಯಿಂದಾಗಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲಕ್ಷಾಂತರ ಹೆಸರುಗಳು ಮತದಾರರ ಪಟ್ಟಿಯಿಂದ ರದ್ದಾಗಿದ್ದರೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಆಪಾದಿಸಿರುವ ಸಿಜೆಪಿ ಹಾಗೂ ವಿಪಕ್ಷಗಳು, ಈ ರಕ್ಷಣಾ ಕವಚ ಪ್ರಜಾಪ್ರಭುತ್ವದ ಜವಾಬ್ದಾರಿತನವನ್ನೇ ಹಾಳುಗೆಡವುತ್ತಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿವೆ.

You cannot copy content of this page

Exit mobile version