ಬೆಂಗಳೂರು: ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕದ ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಮೊದಲ ಭಾಗವಾಗಿ ಜು.22ಕ್ಕೆ ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ(ಎಲ್ಕೆಜಿ, ಯುಕೆಜಿ)ತರಗತಿಗಳನ್ನು ಸಾಂಕೇತಿಕವಾಗಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಮಡಿವಾಳದ ಸ್ತ್ರೀಶಕ್ತಿ ಭವನದಲ್ಲಿ ನಡೆದ ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಜಾರಿಯಾಗಲಿ, ಐಸಿಡಿಎಸ್ ಉಳಿಸಿ ಮಕ್ಕಳನ್ನು ರಕ್ಷಿಸಿ, ಸಂಘಟನೆ-ಸಂಘರ್ಷ-ಶಿಕ್ಷಣ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಇಲಾಖೆ ವತಿಯಿಂದಲೇ ಬ್ಯಾಗ್, ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಗುವುದು ಎಂದರು.
ಸರಕಾರಿ ಮಾಂಟೆಸ್ಸರಿ: ಮೊದಲ ಹಂತದಲ್ಲಿ 15 ರಿಂದ 20 ಸಾವಿರ ಶಾಲೆಗಳಲ್ಲಿ ಸರಕಾರಿ ಮಾಂಟೆಸ್ಸರಿ ಆರಂಭಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣ ಮಾಡುವುದೇ ಇಲಾಖೆಯ ಉದ್ದೇಶ. ಈಗಾಗಲೇ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಗುಣಮಟ್ಟದ ಆಹಾರ, ಶಿಕ್ಷಕಿಯರಿಗೆ ಸೀರೆ ನೀಡಲಾಗಿದೆ. ಅಂಗನವಾಡಿ ಶಿಕ್ಷಕಿಯರನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
30 ವರ್ಷಕ್ಕಿಂತ ಮೇಲ್ಪಟ್ಟ ಅಂಗನವಾಡಿ ಕೇಂದ್ರಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು. ನನ್ನ ಅಧಿಕಾರ ಅವಧಿಯಲ್ಲಿ ಇಲಾಖೆಗೆ ಕೈಲಾದಷ್ಟು ಉತ್ತಮ ಕೆಲಸ ಮಾಡುವೆ. ಕಾರ್ಯಕರ್ತೆಯರ ಹೋರಾಟದ ಶಕ್ತಿಯೇ ಅಂಗನವಾಡಿ ಉನ್ನತೀಕರಣಕ್ಕೆ ಕಾರಣ. ಸಮಾಜಕ್ಕೆ ಅಂಗನವಾಡಿ ಕೊಡುಗೆ ಅಪಾರ. 50 ವರ್ಷಗಳಿಂದ ಈ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿವೆ. ಇನ್ನೂ ಮುಂದೆ ಸರಕಾರಿ ಮಾಂಟೆಸ್ಸರಿ ಆಗಿ ಬದಲಾಗಲಿದ್ದು, ಇತರ ಶಾಲೆಗಳಿಗಿಂತ ಅಂಗನವಾಡಿ ಕೇಂದ್ರದ ಮಕ್ಕಳು ಹೆಚ್ಚು ಸುರಕ್ಷಿತವಾಗಿರುತ್ತವೆ ಎಂದು ಹೆಬ್ಬಾಳ್ಕರ್ ಹೇಳಿದರು.
ಗುಣಮಟ್ಟದ ಶಿಕ್ಷಣ ಗುರಿ: ಗುಣಮಟ್ಟದ ಶಿಕ್ಷಣವನ್ನು ಬಯಸುವುದು ಪ್ರತಿಯೊಬ್ಬ ಪಾಲಕರ ಕನಸಾಗಿರುತ್ತದೆ. ಗುಣಮಟ್ಟದ ಶಿಕ್ಷಣದ ಬಗ್ಗೆ ಶಿಕ್ಷಣ ಇಲಾಖೆ ಯೋಚಿಸುವುದು ತಪ್ಪಲ್ಲ. ಆದರೆ, ಅಂಗನವಾಡಿಗೆ ಪೆಟ್ಟು ಬೀಳಬಾರದು. ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ಮುಂದಾಗೋಣ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ, ಗುಣಮಟ್ಟಕ್ಕೆ ಆದ್ಯತೆ ನೀಡೋಣ ಎಂದರು.
ಶೀಘ್ರವೇ ವಿಮಾ ತೀರ್ಮಾನ: ಅಂಗನವಾಡಿ ಕಾರ್ಯಕರ್ತರಿಗೆ ಇನ್ಯುರೆನ್ಸ್ ನೀಡುವ ಕುರಿತು ಶೀಘ್ರವೇ ತೀರ್ಮಾನಿಸಲಾಗುವುದು. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಲಾಗುವುದು. ಗೌರವ ಧನ ಹೆಚ್ಚಳದ ಬಗ್ಗೆಯೂ ಸಿಎಂ ಜೊತೆಗೆ ಚರ್ಚಿಸಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರುವ ಕೆಲಸ ಆಗಲಿದೆ ಎಂದು ಅವರು ತಿಳಿಸಿದರು.
ಹಂಪಿ ಕನ್ನಡ ವಿ.ವಿಯ ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್, ಸಿಐಟಿಯು ಹಾಗೂ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಕಾರ್ಯದರ್ಶಿ ಯಮುನಾ ಗಾಂವ್ಕರ್, ಕಾರ್ಯಾಧ್ಯಕ್ಷೆ ಶಾಂತ ಎನ್. ಘಂಟೆ, ಖಜಾಂಚಿ ಜಿ.ಕಮಲಾ, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಸೇರಿದಂತೆ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.