ಮಂಗಳೂರು: ನಗರದ ಗರೋಡಿಯಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಯು ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಶಾರೀಕ್ ಎಂದು ಗುರುತಿಸಿದ್ದಾರೆ.
ಶಂಕಿತ ಆರೋಪಿಯು ನಗರದಲ್ಲಿ ಆಟೋ ರಿಕ್ಷಾ ಮೂಲಕ ಕುಕ್ಕರ್ ಬಾಂಬ್ ಸಾಗುಸುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡು ಗಾಯಗೊಂಡಿದ್ದ ಕಾರಣ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೀಗಾಗಿ ಆತ ಯಾರೆಂಬ ಪ್ರಶ್ನೆ ಪೊಲೀಸರಿಗೆ ಕಾಡುತಿತ್ತು. ಇದೀಗ ಆ ಪ್ರಶ್ನೆಗೆ ಬ್ರೇಕ್ ಬಿದ್ದಂತಾಗಿದ್ದು, ವ್ಯಕ್ತಿಯು ಶಾರೀಕ್ ಎಂದು ಆತನ ಕುಟುಂಬದವರು ದೃಢ ಪಡಿಸಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಆದರೆ ಈ ಕೃತ್ಯದ ಹಿಂದೆ ನಿಜಕ್ಕೂ ಯಾರಿದ್ದಾರೆ ಎಂದು ತನಿಖೆ ಜಾರಿಯಲ್ಲಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರ ನಗರದ ಗರೋಡಿಯಲ್ಲಿ ರಿಕ್ಷಾ ಮೂಲಕ ಕುಕ್ಕರ್ ಬಾಂಬ್ ಸಾಗಿಸುತ್ತಿರುವ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯು ನಗರದ ಖಾಸಗಿ ಆಸ್ಪತ್ರೆಯಲ್ಲಿ (ಮಲ್ಲರ್ ಆಸ್ಪತ್ರೆ) ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಯಾರೆಂಬುವುದನ್ನು ತಿಳಿಯಲು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಬಳಿಕ ಆ ವ್ಯಕ್ತಿಯು ಶಾರೀಕ್ ಎಂದು ಆತನ ಕುಟುಂಬದವರು ಖಚಿತಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಾಂಬ್ ಸ್ಪೋಟಿಸಿದ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಮೈಸೂರಿನ ಲೋಕನಾಯಕ ನಗರ, ಮೇಟಗಳ್ಳಿಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಶಂಕಿತ ಆರೋಪಿ ವಾಸವಾಗಿದ್ದ ಎಂದು ಸುಳಿವು ತಿಳಿದುಬಂದಿದೆ. ಆಗ ಸ್ಫೋಟದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಪೋಟೋವನ್ನು ಮನೆಯ ಮಾಲಿಕನಿಗೆ ತೋರಿಸಿದಾಗ ಆತನು, ಅದೇ ಮನೆಯಲ್ಲಿ ವಾಸವಿದ್ದ ಎಂದು ಹೇಳಿದ್ದಲ್ಲದೆ ನಂತರ ಪೊಲೀಸರು ಮನೆಯ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ, ಆತನ ಕೋಣೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ, ಜೊತೆಗೆ ಎರೆಡು ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡೆಬಿಟ್ ಕಾರ್ಡ್, ಮೊಬೈಲ್, ದೊರಕಿವೆ ಎಂದು ತಿಳಿಸಿದ್ದಾರೆ.
‘ಮನೆ ಬಾಡಿಗೆ ತೆದುಕೊಳ್ಳುವಾಗ ನೀಡಿದ ಮನೆ ವಿಳಾಸವನ್ನು ವಿಚಾರಿಸಿದಾಗ, ಆತ ನೀಡಿರುವ ವಿಳಾಸ ಸುಳ್ಳು, ಹಾಗೂ ಶಾರೀಕ್ ಅಂತರಾಷ್ಟ್ರೀಯ ಮಟ್ಟದಲ್ಲಿರುವ ಉಗ್ರ ಸಂಘಟನೆಯೊಂದರಿಂದ ಪ್ರೇರಣೆ ಹೊಂದಿದ್ದ ಎಂದು ತಿಳಿದು ಬಂದಿದೆ’ ಎಂದು ಪೊಲೀಸರು ಶಂಕಿಸಿದ್ದಾರೆ.
‘ಶಾರೀಕ್, ನಗರದಲ್ಲಿ ಸ್ಪೋಟಿಸುವ ಉದ್ದೇಶದಿಂದಾಗಿ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದ, ಆದರೆ ಬಾಂಬ್ ತಯಾರಿಯಲ್ಲಿ ಅಷ್ಟೋಂದು ಪರಿಣಿತಿ ಇಲ್ಲದ ಕಾರಣ, ಬಾಂಬ್ ಸ್ಫೋಟಗೊಳಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ’ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಶಾರೀಕ್ ಆರೋಪಿ ಎಂದು ಗುರುತಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದವರು ಎಂದು ಆರೋಪಿಸಲಾದ ಇನ್ನೂ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಲಾಗುತ್ತಿದೆ.