ಅಮೆರಿಕದ 47 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ರಾತ್ರಿ 10.30 ಕ್ಕೆ ಡೊನಾಲ್ಟ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಟ್ರಂಪ್ ಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಪ್ರಮಾಣವಚನದ ನಂತರ ಟ್ರಂಪ್ ತಮ್ಮ ಹೊಸ ಅವಧಿಯ ಮೊದಲ ಭಾಷಣವನ್ನು ಮಾಡುವ ನಿರೀಕ್ಷೆಯಿದೆ. ಪ್ರಮುಖವಾಗಿ ಮುಂದಿನ 4 ವರ್ಷಗಳವರೆಗಿನ ಯೋಜನೆಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೆ ಮೊದಲ ಕಾರ್ಯಾದೇಶಗಳಿಗೆ ಸಹಿ ಹಾಕಿ, ಗಣ್ಯರ ಜತೆ ಔತಣದಲ್ಲಿ ಭಾಗಿಯಾಗಲಿದ್ದಾರೆ. ಪದಗ್ರಹಣದ ವಿಶೇಷ ಅತಿಥಿಗಳಾಗಿ ಟೆಸ್ಲಾ, ಅಮೆಜಾನ್ ಮತ್ತು ಮೆಟಾ ಸಿಇಒಗಳಾದ ಎಲೋನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್ಬರ್ಗ್ ಭಾಗಿಯಾಗಲಿದ್ದಾರೆ.
ಟ್ರಂಪ್ ಅವರ ಕ್ಯಾಬಿನೆಟ್ ನಾಮನಿರ್ದೇಶಿತರು ಮತ್ತು ಇತರ ಚುನಾಯಿತ ಅಧಿಕಾರಿಗಳೊಂದಿಗೆ ಪದಗ್ರಹಣದ ವಿಶೇಷ ಸಂದರ್ಭಗಳಲ್ಲಿ ಕುಳಿತುಕೊಳ್ಳಲಿದ್ದಾರೆ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ.
ವಿದೇಶಿ ಗಣ್ಯರಿಗೂ ಆಹ್ವಾನಿಸಲಾಗಿದ್ದು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ- ಭಾಗವಹಿಸುವವರಲ್ಲಿ ಪ್ರಮುಖರು. ಭಾರತದಿಂದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿನಿಧಿಯಾಗಿದ್ದಾರೆ.