ಉಡುಪಿ: ಈ ಹಿಂದೆ ಬಹಳಷ್ಟು ಸಂಚಲನ ಮೂಡಿಸಿದ್ದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ನಾಪತ್ತೆ ಮತ್ತು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅತುಲ್ ರಾವ್ ಎನ್ನುವ ವ್ಯಕ್ತಿಗೆ ಉಡುಪಿ ಜಿಲ್ಲಾ (Udupi court) ಸಿಜೆಎಂ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಈ ಹಿಂದೆ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ಪತ್ತೆಯಾಗಿದ್ದರು. ಈ ಪ್ರಕರಣ ಆ ದಿನಗಳಲ್ಲಿ ರಾಜಕೀಯವಾಗಿ ಬಹಳಷ್ಟು ಸಂಚಲನಕ್ಕೆ ಹಾಗೂ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. 2008ರ ಜೂನ್ 10ರಂದು ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಟಿ ಆರೋಪದಡಿ ದೂರು ದಾಖಲಾಗಿತ್ತು. ಪದ್ಮಪ್ರಿಯ ದೆಹಲಿಗೆ ತೆರಳಲು ಅತುಲ್ ರಾವ್ ಸಹಕಾರ ನೀಡಿದ್ದ ಎನ್ನಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಠಾಣಾ ಪೊಲೀಸ್ ಹಾಗೂ ಸಿಒಡಿ ಅಧಿಕಾರಿಗಳು ತನಿಖೆ ನಡೆಸಿದ್ದರು.
ಈ ಕುರಿತು ತನಿಖೆ ಮುಗಿಸಿ 2009ರಲ್ಲಿ ಅಂತಿಮ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಅಂದಿನ ಶಾಸಕ ರಘುಪತಿ ಭಟ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪದ್ಮಪ್ರಿಯ ಅಪಹರಣವಾಗಿದೆ ಎಂಬಂತೆ ಬಿಂಬಿಸಿ ಆಕೆಯನ್ನು ಅತುಲ್ ದೆಹಲಿಗೆ ಕರೆದೊಯ್ದಿದ್ದ. ಪದ್ಮಪ್ರಿಯ ದೆಹಲಿಗೆ ತೆರಳಲು ಅತುಲ್ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ನಂತರ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪದ್ಮಪ್ರಿಯ ಪತ್ತೆಯಾಗಿದ್ದರು. ಇದೀಗ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆಯಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್, ಆರೋಪಿಯ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಒಂದು ವರ್ಷ ಜೈಲು ಶಿಕ್ಷೆ, 5 ಸಾವಿರ ರೂ ದಂಡ, ಐಪಿಸಿ 417, 465, 471 ಕಾಯಿದೆಯಡಿ ತಲಾ ಆರು ತಿಂಗಳು ಜೈಲು ಮತ್ತು 5 ಸಾವಿರ ರೂ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸಿಒಡಿ ಪರ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಶಿವಪ್ರಸಾದ್ ಆಳ್ವ ವಾದಿಸಿದ್ದರು.
ನಡೆದಿದ್ದೇನು?
2008ರ ಜೂನ್ ತಿಂಗಳಿನಲ್ಲಿ ಕರಂಬಳ್ಳಿಯ ಅವರ ಮನೆಯಿಂದ ಬಿಜೆಪಿ ನಾಯಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ನಾಪತ್ತೆಯಾಗಿದ್ದರು. ಅದೇ ಊರಿನವನಾದ ರುಘುಪತಿ ಭಟ್ಟರ ಬಾಲ್ಯ ಸ್ನೇಹಿತ ಅತುಲ್ ರಾವ್ ಪದ್ಮಪ್ರಿಯಾರನ್ನು ಕರೆದುಕೊಂಡು ಹೋಗಿ, ಕುಂಜಾರುಗಿರಿ ಬಳಿ ಅವರ ಅಪಹರಣವಾಗಿರುವಂತೆ ಸನ್ನಿವೇಶ ಸೃಷ್ಟಿಸಿ ಕಾರನ್ನು ಅಲ್ಲೇ ಬಿಟ್ಟು, ನಂತರ ತನ್ನ ಕಾರಿನಲ್ಲಿ ಪದ್ಮಪ್ರಿಯರನ್ನು ಕುಮಟಾ ಕರೆದುಕೊಂಡು ಹೋಗಿ, ಅಲ್ಲಿಂದ ತನ್ನ ಕಾರನ್ನು ಇನ್ನೊಬ್ಬ ಚಾಲಕನನ್ನು ನೇಮಿಸಿಕೊಂಡು ಅವನ ಮೂಲಕ ಕಾರನ್ನು ಬೆಂಗಳೂರು ತಲುಪಿಸಿದ್ದ.
ಇನ್ನೊಂದೆಡೆ ಪದ್ಮಪ್ರಿಯಾರನ್ನು ಅತುಲ್ ಬಾಡಿಗೆ ಕಾರಿನಲ್ಲಿ ಕುಮಟಾದಿಂದ ಗೋವಾ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, ತನ್ನ ಪತ್ನಿ ಮೀರಾ ಡ್ರೈವಿಂಗ್ ಲೈಸನ್ಸಿಗೆ ಪದ್ಮಪ್ರಿಯಾ ಅವರ ಫೊಟೋ ಅಂಟಿಸಿ, ಮೀರಾ ಹೆಸರಲ್ಲಿ ಪದ್ಮಪ್ರಿಯಾ ಅವರನ್ನು ಗೋವಾ ವಿಮಾನ ನಿಲ್ದಾಣ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿದ್ದ. ಈ ಘಟನೆ ನಡೆಯುವ ಮೊದಲು ದೆಹಲಿಗೆ ಹೋಗಿ ನಕಲಿ ದಾಖಲೆ ನೀಡಿ ಅಲ್ಲೊಂದು ಬಾಡಿಗೆ ಮನೆ ಪಡೆದಿದ್ದಾಗಿ ಆರೋಪಿಸಲಾಗಿತ್ತು.
ಜೂನ್ 10ರಂದು ದೆಹಲಿಗೆ ಹೋಗಿದ್ದ ಅತುಲ್, ಮರುದಿನ ಬೆಂಗಳೂರಿಗೆ ಬಂದು, ಲಾಡ್ಜ್ ನಲ್ಲಿ ತಿಂಗಿದ್ದು, ಅಲ್ಲಿಂದ ಜೂನ್ 12ಕ್ಕೆ ಹೊರಟು, ಮರುದಿನ ಉಡುಪಿ ತಲುಪಿ, ರಘುಪತಿ ಭಟ್ ಜತೆ ಪದ್ಮಪ್ರಿಯಾ ಅವರನ್ನು ಹುಡುಕುವ ನಾಟಕ ಮಾಡಿದ್ದಾಗಿ ಭಟ್ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.