ಬೆಂಗಳೂರಿನ ನಿವಾಸಿ ಹಾಗೂ ಆರ್‌ಎಸ್‌ಎಸ್ ಸ್ವಯಂಸೇವಕ ತೇಜಸ್ ಎಂಬುವವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ನೋಟಿಸ್ ನೀಡಲು ಆದೇಶಿಸಿದೆ.
ದೂರಿನ ಹಿನ್ನೆಲೆ: ದೂರುದಾರರ ಪ್ರಕಾರ, ಅಕ್ಟೋಬರ್ 2025ರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಶಾಲೆ ಮತ್ತು ಕಚೇರಿಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಾಗ ಸಂಘದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಸಚಿವ ದಿನೇಶ್ ಗುಂಡೂರಾವ್ ಅವರು ಈ ನಿಲುವನ್ನು ಬೆಂಬಲಿಸಿದ್ದಲ್ಲದೆ, ದಕ್ಷಿಣ ಕನ್ನಡ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಅದೇ ಹೇಳಿಕೆಗಳನ್ನು ಪುನರಾವರ್ತಿಸಿದ್ದರು ಎನ್ನಲಾಗಿದೆ.
ಇದೇ ವೇಳೆ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹೇಳಿಕೆಗಳು ಸಾರ್ವಜನಿಕರಲ್ಲಿ ಸಂಘದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುತ್ತವೆ ಮತ್ತು ಸ್ವಯಂಸೇವಕರ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ತೇಜಸ್ ದೂರಿದ್ದಾರೆ.
ನ್ಯಾಯಾಲಯವು ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಆರೋಪಿಗಳ ವಾದವನ್ನು ಆಲಿಸಲು ಪ್ರಕರಣವನ್ನು ಜನವರಿ 14ಕ್ಕೆ ಮುಂದೂಡಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 223ರ ಅಡಿಯಲ್ಲಿ ಪ್ರಕರಣವನ್ನು ಪರಿಗಣಿಸುವ ಮುನ್ನ ಆರೋಪಿಗಳಿಗೆ ನೋಟಿಸ್ ನೀಡುವುದು ಕಡ್ಡಾಯವಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
