ಬೆಂಗಳೂರು : ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್‌ಟಿಸಿ (KSRTC) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ (strike) ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಂದು (ಆ.5) ನಡೆಸಿರುವ ಕರ್ನಾಟಕ ಹೈಕೋರ್ಟ್ (Karnataka High Court), ಎಲ್ಲಾ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ಜಾರಿಮಾಡಿ ಆದೇಶಿಸಿದೆ. ಇದರೊಂದಿಗೆ ರಾಜಿ ಸಂಧಾನದ ಮಾಹಿತಿಯನ್ನು ಹೈಕೋರ್ಟ್ ವಿಚಾರಣೆ ವೇಳೆ ಕೋರಿತು.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠಿದಲ್ಲಿ ವಿಚಾರಣೆ ನಡೆದಿದ್ದು, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು, ‘ಒಂದು ದಿನದ ಮಟ್ಟಿಗೆ ಮುಷ್ಕರ ಮುಂದೂಡುವಂತೆ ನ್ಯಾಯಾಲಯ ಸೂಚಿಸಿದ್ದರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಧಾನದ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ’ ಎಂದು ಪೀಠಕ್ಕೆ ತಿಳಿಸಿದರು. ಇನ್ನು ಒಕ್ಕೂಟದ ಪರ ವಕೀಲರು ಪ್ರತಿವಾದಿಸಿ, ನಿನ್ನೆ ಸಂಜೆ ನೋಟಿಸ್ ನೀಡಲಾಗಿದೆ. ಎರಡು ದಿನ ಕಾಲಾವಕಾಶ ನೀಡಬೇಕು. ನಾಳೆ ಮುಷ್ಕರ ನಡೆಸುವುದಿಲ್ಲ. ನಾವು ಮುಷ್ಕರ ನಿಲ್ಲಿಸುತ್ತೇವೆ ಎಂದು ವಿವರಿಸಿದರು.
ಮುಷ್ಕರ ನಿಲ್ಲಿಸಲಾಗಿದೆಯೇ? ಎಸ್ಮಾ ಅಡಿ ಮುಷ್ಕರ ನಡೆಸುವುದು ಕಾನೂನುಬಾಹಿರ ಕ್ರಮವಾಗಿದೆ. ಅಲ್ಲದೇ ನಿನ್ನೆಯಷ್ಟೇ ಕೋರ್ಟ್ ಒಂದು ದಿನದ ಮಟ್ಟಿಗೆ ಮುಷ್ಕರ ಮುಂದೂಡುವಂತೆ ಆದೇಶಿಸಿತ್ತು. ಹೀಗಿದ್ದೂ ಮುಷ್ಕರ ಮಾಡಿದರೆ ಇದು ನ್ಯಾಯಾಂಗ ನಿಂದನೆ ಅಲ್ಲವೇ? ಒಕ್ಕೂಟದ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಲಿದೆ. ಅವರನ್ನು ಪೊಲೀಸರು ಬಂಧಿಸಲಿದ್ದಾರೆ. ಜನಸಾಮಾನ್ಯರಿಗೆ ಜನರಿಗೆ ಸಮಸ್ಯೆ ಮಾಡಕೂಡದ. ನ್ಯಾಯಾಲಯ ಸೂಚಿಸಿದ ಮೇಲೂ ಮುಷ್ಕರ ನಿರ್ಧಾರ ಕಾನೂನುಬಾಹಿರ ಕ್ರಮವಾಗಿದೆ.
ಎಲ್ಲಾ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ಜಾರಿ ಮಾಡಲಾಗುವುದು. ಮುಷ್ಕರ ಮುಂದುವರಿಸಿದರೆ ಎಸ್ಮಾ ಅಡಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೇ ಮುಷ್ಕರಕ್ಕೆ ತಡೆ ನೀಡಿದ್ದ ಮಧ್ಯಂತರ ಆದೇಶವನ್ನು ಎರಡು ದಿನ ವಿಸ್ತರಿಸಿದ ನ್ಯಾಯಾಲಯವು, ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿತು. ಜಂಟಿ ಕ್ರಿಯಾ ಸಮಿತಿಯು ಎಲ್ಲಾ ನಿಗಮಗಳ ಸಾರಿಗೆ ಸಿಬ್ಬಂದಿಯನ್ನು ಒಳಗೊಂಡಿದೆ ಎಂದು ಪೀಠಕ್ಕೆ ಎಜಿ ಮತ್ತು ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ಅವರು ವಿವರಿಸಿದರು.