ಬೆಂಗಳೂರು: ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಪ್ಪಿತಸ್ಥರೋ ಅಲ್ಲವೋ ಎನ್ನುವುದನ್ನು ಕೋರ್ಟು ತೀರ್ಮಾನಿಸುತ್ತದೆ, ಈ ವಿಷಯದ ಕುರಿತಾಗಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಕೇಂದ್ರ ಗಣಿ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಆದಿಚುಂಚನಗಿರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು “ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ನಾನೂ ಭಾಗವಹಿಸಿದ್ದೆ. ಜನರನ್ನು ಎಚ್ಚರಿಸುವ ಕರ್ತವ್ಯ ನನ್ನದು. ಹೀಗಾಗಿ ಅದರಲ್ಲಿ ಪಾಲ್ಗೊಂಡಿದ್ದೆ. ನನ್ನ ನೈತಿಕತೆ ಏನು ಎನ್ನುವುದು ತೀರ್ಮಾನವಾಗಲಿ. ನನ್ನ ಪಾತ್ರವಿಲ್ಲದೆ ಇದ್ದರೂ ನನ್ನನ್ನು ಒಂದು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದ್ದಾರೆ. ಇದೆಲ್ಲ ಒಮ್ಮೆ ಮುಗಿಯಲಿ ನಂತರ ನಾನು ಮಾತನಾಡುತ್ತೇನೆ” ಎಂದು ಅವರು ಹೇಳಿದರು.
“ನಾನು ಕೇಂದ್ರ ಸಚಿವನಾಗಿರುವುದನ್ನು ಸಹಿಸಲಾಗದೆ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ನಾಲ್ಕೈದು ಮಂದಿ ಬೀಡಾಡಿ ಮಂತ್ರಿಗಳು ಮಾಡಿರುವ ಆರೋಪಕ್ಕೆಲ್ಲ ಉತ್ತರಿಸುವ ಅಗತ್ಯ ನನಗಿಲ್ಲ” ಎಂದು ಅವರು ಹೇಳಿದರು.
ಇನ್ನು ಎಚ್‌ಎಮ್‌ಟಿ ಕಾರ್ಖಾನೆಯ ಜಾಗದ ಪರಭಾರೆ ವಿಷಯದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕುಮಾರಸ್ವಾಮಿಯವರ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಜಾಗದ ಪರಭಾರೆ ವಿಷಯಕ್ಕೆ ಸಂಬಂಧಿಸಿದಂತೆ ಈಶ್ವರ ಖಂಡ್ರೆ ಹಲವು ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಿರುವುದಾಗಿ ಹೇಳಿದ್ದಾರೆ.