ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 5, 2026 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನೀರಾವರಿ, ಸಾರಿಗೆ ಮತ್ತು ಪೊಲೀಸ್ ಆಧುನೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯ ಅತ್ಯಂತ ಗಮನಾರ್ಹ ವಿಷಯವೆಂದರೆ ನೇರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ (SC) ಒಳಮೀಸಲಾತಿ ಜಾರಿಗೊಳಿಸುವ ಕುರಿತಾದ ಚರ್ಚೆ. ಈ ವಿಷಯದಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆಯಾದರೂ, ಇಂದಿನ ಸಭೆಯಲ್ಲಿ ಈ ಬಗ್ಗೆ ನಡೆದ ಸುದೀರ್ಘ ಚರ್ಚೆಯು ಇನ್ನೂ ಅಪೂರ್ಣವಾಗಿದೆ.
ಹಲವು ಸಚಿವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ಬಾಕಿ ಇರುವ ಕಾರಣ, ಮುಂದಿನ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಮತ್ತಷ್ಟು ತೀವ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಸಮಯ ನಿಗದಿಪಡಿಸಲು ಸಭೆ ತೀರ್ಮಾನಿಸಿದೆ.
ಸಾರಿಗೆ ಮತ್ತು ನೀರಾವರಿ ವಲಯಕ್ಕೆ ಸಭೆಯು ಬೃಹತ್ ಅನುದಾನದ ಒಪ್ಪಿಗೆ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (KSRTC) 62 ಕೋಟಿ ರೂಪಾಯಿಗಳ ಅಂದಾಜು ಮೊತ್ತದಲ್ಲಿ 144 ಹೊಸ BS-VI ನಗರ ಸಾರಿಗೆ ಡೀಸೆಲ್ ಬಸ್ಸುಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಕೃಷಿ ಮತ್ತು ನೀರಾವರಿಗೂ ಒತ್ತು ನೀಡಲಾಗಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ವಿರಿಜಾ, ದೇವರಾಯ, ಆರ್.ಬಿ.ಎಲ್.ಎಲ್ ಮತ್ತು ಬಂಗಾರದೊಡ್ಡಿ ನಾಲೆಗಳ ವಿತರಣಾ ನಾಲೆಗಳ ಅಭಿವೃದ್ಧಿ ಕಾಮಗಾರಿಗಳನ್ನು 60 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲು ಹಸಿರು ನಿಶಾನೆ ತೋರಿಸಲಾಗಿದೆ.
ಬೀದರ್ ಜಿಲ್ಲೆಯ ರೈತರಿಗೂ ಸಂಪುಟ ಸಭೆಯು ಶುಭ ಸುದ್ದಿ ನೀಡಿದೆ. ಮಾಂಜ್ರಾ ನದಿಗೆ ಅಡ್ಡಲಾಗಿ ಭಾಲ್ಕಿ ತಾಲ್ಲೂಕಿನಲ್ಲಿ ನಿರ್ಮಿಸಿರುವ ಜೀರಗಿಯಾಳ್, ಮಾಣಿಕೇಶ್ವರ ಮತ್ತು ಚಂದಾಪುರ ಹಾಗೂ ಔರಾದ್ ತಾಲ್ಲೂಕಿನ ಹಾಲ್ಹಳ್ಳಿ ಸೇರಿದಂತೆ ಒಟ್ಟು ನಾಲ್ಕು ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಪುನಶ್ಚೇತನ ಕಾಮಗಾರಿಗಳನ್ನು 151.70 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಇನ್ನು ನಗರ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ, ಗ್ರೇಟರ್ ಬೆಂಗಳೂರು ಕಾಯ್ದೆ-2025ರ ಮಾದರಿಯಲ್ಲೇ ರಾಜ್ಯದ ಎಲ್ಲಾ ನಗರ ಸಂಸ್ಥೆಗಳು ಜಾಹೀರಾತುಗಳಿಗೆ ಶುಲ್ಕ ವಿಧಿಸಲು ಅನುವು ಮಾಡಿಕೊಡುವ ಕರ್ನಾಟಕ ಮುನ್ಸಿಪಾಲಿಟೀಸ್ ಮತ್ತು ಇತರ ಕಾನೂನು ತಿದ್ದುಪಡಿ ವಿಧೇಯಕ-2026ಕ್ಕೆ ಸಂಪುಟ ಅನುಮೋದನೆ ನೀಡಿದೆ.
ಆಧುನಿಕ ತಂತ್ರಜ್ಞಾನ ಮತ್ತು ಸಾರ್ವಜನಿಕ ಸೇವೆಯ ದೃಷ್ಟಿಯಿಂದಲೂ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದ ಪೊಲೀಸ್ ಗಣಕ ವಿಭಾಗಕ್ಕೆ ಪರಸ್ಪರ ಕಾರ್ಯನಿರ್ವಹಿಸಬಹುದಾದ ಅಪರಾಧ ನ್ಯಾಯ ವ್ಯವಸ್ಥೆ (ICJS) ಹಾಗೂ ಐಟಿ ಸೇವೆಗಳ ಅನುಷ್ಠಾನಕ್ಕೆ 227.58 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿವಿಧ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳನ್ನು ಪೊಲೀಸ್ ಆಧುನೀಕರಣ ಯೋಜನೆಯಡಿ ಖರೀದಿಸಲು ಒಪ್ಪಿಗೆ ನೀಡಲಾಗಿದೆ. ಇನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಮತ್ತು ನೌಕರರ ಸೇವೆಯನ್ನು ‘ಅತ್ಯವಶ್ಯಕ ಸೇವೆ’ ಎಂದು ಪರಿಗಣಿಸುವ ವಿಷಯದ ಕುರಿತು ಆರೋಗ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲು ಸಂಪುಟ ತೀರ್ಮಾನಿಸಿದೆ.
