ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮಂತ್ರಿಮಂಡಲವನ್ನು (ಜುಲೈ 22) ನಾಳೆ ವಿಸ್ತರಿಸಿ 18 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.
ಲೋಕಭವನದ ಗಾಜಿನಮನೆಯಲ್ಲಿ ಮಧ್ಯಾಹ್ನ 2.20ಕ್ಕೆ ನಡೆಯುವ ಸರಳ ಸಮಾರಂಭದಲ್ಲಿ ನೂತನ ಸದಸ್ಯರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಲಿದ್ದಾರೆ. ಶಿವಕುಮಾರ್ ಸಂಪುಟಕ್ಕೆ ಸೇರ್ಪಡೆಗೊಳ್ಳವವರ ಪಟ್ಟಿ ಇಂದು ತಡರಾತ್ರಿ ಬಿಡುಗಡೆ ಆಗಲಿದೆ.
ಸಂಪುಟದಲ್ಲಿ ಖಾಲಿ ಇರುವ 20 ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ, ಕಳೆದ ವಾರವೇ ದೆಹಲಿಗೆ ತೆರಳಿ ವರಿಷ್ಠರ ಭೇಟಿ ಮಾಡಿ ತಮ್ಮ ಸಚಿವಾಕಾಂಕ್ಷಿಗಳ ಪಟ್ಟಿ ನೀಡಿದ್ದರು. ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನೂ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಶಿವಕುಮಾರ್ ನೀಡಿದ ಪಟ್ಟಿಯಲ್ಲಿರುವವರ ಪ್ರಾಮಾಣಿಕತೆ, ಪಕ್ಷ ನಿಷ್ಠೆ ಹಾಗೂ ಸಂಘಟನಾ ಚತುರತೆ ಕುರಿತು ಮಾಹಿತಿ ನೀಡಲು ಸಂಸದ ಸಸಿಕಾಂತ್ ಸೆಂಥಿಲ್ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಸೆಂಥಿಲ್ ಕಳೆದ ಸೋಮವಾರ ಎಐಸಿಸಿಗೆ ವರದಿ ನೀಡಿದ್ದರು, ಇದನ್ನು ಪರಿಶೀಲಿಸಿದ ಖರ್ಗೆ, ಯುವಪಡೆ ಜೊತೆಗೆ ಹಿರಿಯರಿಗೂ ಅವಕಾಶ ಮಾಡಿಕೊಡಬೇಕೆಂದು ಕೆಲವು ಬದಲಾವಣೆ ಮಾಡಿದರು.
ಸೆಂಥಿಲ್ ವರದಿ ಬರುತ್ತಿದ್ದಂತೆ ಮುಖ್ಯಮಂತ್ರಿ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ವರಿಷ್ಠರು ಇಂದು ದೆಹಲಿಗೆ ಕರೆಸಿಕೊಂಡರು. ದೆಹಲಿಯಲ್ಲಿನ ಖರ್ಗೆ ನಿವಾಸದಲ್ಲಿ ಮಂಗಳವಾರ ಮಧ್ಯಾನ್ಹ ಸಭೆ ಸೇರಿ ಅಂತಿಮ ಪಟ್ಟಿ ಸಿದ್ಧಪಡಿಸಿದ್ದಲ್ಲದೆ, ನಿಗಮ-ಮಂಡಳಿಗಳಿಗೆ ನೇಮಕಾತಿ, ವಿಧಾನಮಂಡಲದ ಉಭಯ ಸದನಗಳ ಪೀಠಾಸೀನಾಧಿಕಾರಿಗಳ ಆಯ್ಕೆ, ಕೆಪಿಸಿಸಿ ಪುನರ್ ರಚನೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಯಿತು.
