Home ಬೆಂಗಳೂರು ಶಿವಾಜಿನಗರ ಹಲ್ಲೆ ಪ್ರಕರಣ: ಆರೋಪಿಗಳ ವಿರುದ್ಧ ಕೊಲೆ ಯತ್ನ ಕೇಸ್, 10 ಜನರ ಬಂಧನ –...

ಶಿವಾಜಿನಗರ ಹಲ್ಲೆ ಪ್ರಕರಣ: ಆರೋಪಿಗಳ ವಿರುದ್ಧ ಕೊಲೆ ಯತ್ನ ಕೇಸ್, 10 ಜನರ ಬಂಧನ – ಅಧಿಕಾರಿಗಳ ಜತೆ ಜಿಬಿಎ ಆಯುಕ್ತರ ಸಭೆ

0

ಬೆಂಗಳೂರು: ಶಿವಾಜಿನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ನಡೆದ ದಾಳಿಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕ ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ನಡೆದಿರುವ ಈ ಭೀಕರ ಹಲ್ಲೆಯನ್ನು ಖಂಡಿಸಿರುವ ಜಿಬಿಎ ಆಯುಕ್ತರು, ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ‘ಕೊಲೆ ಯತ್ನ’ (Attempt to Murder) ಸೇರಿದಂತೆ ತೀವ್ರ ಸ್ವರೂಪದ ಕಾಯ್ದೆಗಳಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆಯುಕ್ತರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 10 ಜನರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ ಎಂದು ತಿಳಿಸಿದರು. ಇನ್ನುಳಿದ ಪ್ರಮುಖ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ. ಈ ಅಮಾನವೀಯ ದಾಳಿಯಲ್ಲಿ ಒಟ್ಟು ಐವರು ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳ ಆರೋಗ್ಯ ಸ್ಥಿತಿಯನ್ನು ಖುದ್ದಾಗಿ ವಿಚಾರಿಸಲು ತಾವು ಆಸ್ಪತ್ರೆಗೆ ತೆರಳುತ್ತಿರುವುದಾಗಿ ಅವರು ಹೇಳಿದರು.

ಆರೋಪಿ ಬಸವರಾಜ್ ಪಡುಕೋಟೆ ಗುಂಪು ಕಟ್ಟಿಕೊಂಡು ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಶಿವಾಜಿನಗರದಲ್ಲಿ ಫುಟ್‌ಪಾತ್‌ ತೆರವು ಕಾರ್ಯಚರಣೆಗೆ ಬಂದಿದ್ದ ಅಧಿಕಾರಿಗಳ ಮೇಲೆ ಪಡುಕೋಟೆ ಗ್ಯಾಂಗ್‌ ಹಲ್ಲೆ ಮಾಡಿದೆ. ಬಸವರಾಜ್‌ ಪಡುಕೋಟೆ ನಮ್ಮ‌ ಕರ್ನಾಟಕ ಸೇನೆ ಎಂಬ ಸಂಘಟನೆ ಕಟ್ಟಿಕೊಂಡಿದ್ದು, ಸದ್ಯ, ಅಧಿಕಾರಿಗಳ ಮೇಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಇಲ್ಲಿಯವರೆಗೂ ಸುಮಾರು 10 ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮುಜಾಹಿದ್ ಅಹ್ಮದ್, ರಂಜಿತ್, ಕೊಟ್ರೇಶ್, ರಘು, ಪ್ರತಭನ್, ಬಸವರಾಜ್, ರಂಗಸ್ವಾಮಿ, ಪರಶುರಾಮ್, ಭರತ್, ಕಿರಣ್ ಎಂದು ಗುರುತಿಸಲಾಗಿದ್ದು, ಸಂಘಟನೆ ಅಧ್ಯಕ್ಷ ಬಸವರಾಜು ನಾಪತ್ತೆಯಾಗಿದ್ದು, ಪೊಲೀಸರು ನಾಪತ್ತೆಯಾಗಿರುವ ಬಸವರಾಜುಗಾಗಿ ಬಲೆ ಬೀಸಿದ್ದಾರೆ.

ಸಚಿವರು, ಚೀಫ್ ಕಮಿಷನರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿಚಾರದಲ್ಲಿ ತಕ್ಷಣವೇ ಸ್ಪಂದಿಸಿದ್ದು, ಡಿಸಿಪಿ ದರ್ಜೆಯ ಅಧಿಕಾರಿಯೇ ನೇರವಾಗಿ ಸ್ಥಳದಲ್ಲಿದ್ದು ಪ್ರಕರಣದ ತನಿಖೆಯನ್ನು ಹ್ಯಾಂಡ್ಲಿಂಗ್ ಮಾಡುತ್ತಿದ್ದಾರೆ. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ದಾಳಿಯನ್ನು ತಡೆಯಲು ವಿಫಲರಾಗಿದ್ದರೆ, ಅವರ ವಿರುದ್ಧ ಇಲಾಖಾ ತನಿಖೆ (Departmental Enquiry) ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಪ್ರತಿಯೊಂದು ವಾರ್ಡ್‌ನಲ್ಲೂ ಸೀಮಿತ ಸಂಖ್ಯೆಯ ಮಾರ್ಷಲ್‌ಗಳಿರುವುದರಿಂದ ಕಾರ್ಯಾಚರಣೆಯ ವೇಳೆ ಅವರು ಕೊಂಚ ಮುಂದೆ ಸಾಗಿದ್ದಾಗ ಹಿಂಬದಿಯಿಂದ ಈ ದಾಳಿ ನಡೆದಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಕಾರ್ಯಾಚರಣೆ ಕೈಗೊಳ್ಳುವ ಮುನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ಪೊಲೀಸ್ ಭದ್ರತೆಯನ್ನು ಖಚಿತಪಡಿಸಿಕೊಳ್ಳಲಾಗುವುದು. ಸಾರ್ವಜನಿಕ ಹಿತಾಸಕ್ತಿಯಿಂದ ನಡೆಯುತ್ತಿರುವ ಫುಟ್‌ಪಾತ್ ಒತ್ತುವರಿ ತೆರವು ಅಭಿಯಾನವನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸುವುದಿಲ್ಲ. ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಯಾರೇ ಕಾನೂನನ್ನು ಕೈಗೆ ತೆಗೆದುಕೊಂಡು ಹಲ್ಲೆ ನಡೆಸಿದರೂ ಖಂಡಿತವಾಗಿಯೂ ಸಹಿಸುವುದಿಲ್ಲ ಮತ್ತು ಅಂತವರ ವಿರುದ್ಧ ಸರ್ಕಾರ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

You cannot copy content of this page

Exit mobile version