Tuesday, October 22, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಗೆ ಕೊನೆಯ ಗಡುವು ನೀಡಿದ ಸಿಪಿ ಯೋಗೇಶ್ವರ್ ; ಕುಮಾರಸ್ವಾಮಿಗಾಗಿ ಯೋಗೇಶ್ವರ್ ಕಳೆದುಕೊಳ್ಳಲಿರುವ ಬಿಜೆಪಿ

ಕೊನೆಯ ಕ್ಷಣದ ವರೆಗೂ ಬಿಜೆಪಿ ಟಿಕೆಟ್ ಗಾಗಿ ಕಾಯುವ ಬಗ್ಗೆ ಮಾತನಾಡಿದ ಸಿಪಿ ಯೋಗೇಶ್ವರ್ ಅಂತಿಮವಾಗಿ ಕಾರ್ಯಕರ್ತರ ನಿರ್ಧಾರವೇ ಅಂತಿಮ ಎಂದು ತನ್ನೆಲ್ಲಾ ನಿರ್ಧಾರವನ್ನು ಕಾರ್ಯಕರ್ತರ ತಲೆಗೆ ಕಟ್ಟಿದ್ದಾರೆ. ಇತ್ತ ಬಿಜೆಪಿ ಮಾತ್ರ ಇಲ್ಲಿಯವರೆಗೂ ಪಕ್ಷಕ್ಕೆ ದುಡಿದ ಸಿಪಿ ಯೋಗೇಶ್ವರ್ ಅವರನ್ನು ಕುಮಾರಸ್ವಾಮಿಗಾಗಿ ದೂರ ಇಟ್ಟು ಅತಂತ್ರ ಸ್ಥಿತಿಗೆ ನೂಕಿದ್ದಾರೆ.

ಇತ್ತ ಕಾಂಗ್ರೆಸ್ ಕೂಡ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಸಿಪಿ ಯೋಗೇಶ್ವರ್ ಮಾತ್ರವಲ್ಲ, ಯಾರೇ ಬಂದರೂ ಸ್ವಾಗತ ಎಂದು ಹೇಳುವ ಮೂಲಕ ಯೋಗೇಶ್ವರ್ ಗೆ ಪರೋಕ್ಷ ಆಹ್ವಾನ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಡಿಕೆ ಸುರೇಶ್ ಅವರ ಆದಿಯಾಗಿ ಪ್ರತಿಯೊಬ್ಬರ ಕಡೆಯಿಂದಲೂ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೆ ಪರೋಕ್ಷ ಆಹ್ವಾನ ಸಿಕ್ಕಿದೆ.

ಸಧ್ಯ ಯೋಗೇಶ್ವರ್ ಅವರ ಆಪ್ತ ವಲಯದಿಂದ ಬಂದ ಮಾಹಿತಿಯಂತೆ ಯೋಗೇಶ್ವರ್ ಕಾಂಗ್ರೆಸ್‌ ಸೇರ್ಪಡೆಗೆ ಪಕ್ಷ ಎಲ್ಲಾ ತಯಾರಿ ಮಾಡಿಕೊಂಡಿದೆ. ಯೋಗೇಶ್ವರ್ ಆಪ್ತರು ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಕೆಲವು ಪ್ರಮುಖ ಷರತ್ತುಗಳು ಮತ್ತು ಸ್ಥಾನಮಾನದ ಬಗ್ಗೆ ಮಾತುಕತೆ ನಡೆದಿರುವ ಹಿನ್ನೆಲೆಯಲ್ಲಿ ಅಂತಿಮ ಆದೇಶ ಒಂದು ಬಾಕಿ ಇದೆ ಎಂಬ ಬಗ್ಗೆ ಯೋಗೇಶ್ವರ್ ಆಪ್ತ ವಲಯ ತಿಳಿಸಿದೆ.

ಈ ಬಗ್ಗೆ ಯೋಗೇಶ್ವರ್ ಕೂಡ ಸಣ್ಣ ಸುಳಿವು ಬಿಟ್ಟಿದ್ದು, ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವರ ಆಡಳಿತ ನಿಲುವುಗಳ ಬಗ್ಗೆ ಮೆಚ್ಚುಗೆ ಮಾತಾಡಿದ್ದಾರೆ. ತಪ್ಪಿಯೂ ಯಾವುದೇ ಕಾಂಗ್ರೆಸ್ ಮುಖಂಡರ ವಿರುದ್ದವಾಗಿ ಮಾತನಾಡದೇ, ಇಂದು ಸಂಜೆಯ ವರೆಗೂ ಕಾದು ನೋಡಿ ಎಂದು ಹೇಳಿದ್ದಾರೆ.

ಈ ಕಡೆ ಬಿಜೆಪಿ ಮಾತ್ರ NDA ನಿಯಮಗಳಿಗೆ ಕಟ್ಟುಬಿದ್ದಿದ್ದು, ಜೆಡಿಎಸ್ ಪಕ್ಷ ಮತ್ತು ಕುಮಾರಸ್ವಾಮಿಗಾಗಿ ಇಡೀ ಕ್ಷೇತ್ರದ ತ್ಯಾಗಕ್ಕೆ ಸಿದ್ದವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಕೂಡ ‘ಇದು ಜೆಡಿಎಸ್ ಕ್ಷೇತ್ರ. ಹೀಗಾಗಿ ಅಭ್ಯರ್ಥಿ ಆಯ್ಕೆ ಕುಮಾರಸ್ವಾಮಿಯವರಿಗೆ ಬಿಟ್ಟಿದ್ದು ನಮ್ಮ ಪಾತ್ರ ಏನಿಲ್ಲ’ ಎಂದು ಹೇಳಿದ್ದಾರೆ. ಯಡಿಯೂರಪ್ಪರಂತಹ ನಾಯಕರೇ ಯೋಗೇಶ್ವರ್ ಬೆನ್ನಿಗೆ ನಿಲ್ಲದ ಹಿನ್ನೆಲೆಯಲ್ಲಿ ಸಹಜವಾಗಿ ಯೋಗೇಶ್ವರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇಷ್ಟಾದರೂ ತನ್ನ ಪರವಾಗಿ ನಿಲ್ಲಲು ಬಿಜೆಪಿ ಪಕ್ಷಕ್ಕೆ ಯೋಗೇಶ್ವರ್ ಕೊನೆಯ ಅವಕಾಶ ನೀಡಿದ್ದಾರೆ. ಆದರೆ ಬೆಳವಣಿಗೆ ನೋಡಿದರೆ ಸಧ್ಯಕ್ಕೆ ಕುಮಾರಸ್ವಾಮಿ ಬಿಟ್ಟು ಯಾವುದೇ ನಿರ್ಧಾರ ತಗೆದುಕೊಳ್ಳಲು ಬಿಜೆಪಿ ಅಸಹಾಯಕತೆ ತೋರಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯೇ ಅಂತಿಮ ಎನ್ನುವಂತಾಗಿದೆ.

ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಜಯಮುತ್ತು ಹೆಸರು ಚಾಲ್ತಿಯಲ್ಲಿದೆ. ಕಾಂಗ್ರೆಸ್ ನಿಂದ ಕೊನೆಯ ಕ್ಷಣದ ಬದಲಾವಣೆ ಹೊರತಾಗಿ ಡಿಕೆ ಸುರೇಶ್, ರಘುನಂದನ್ ರಾಮಣ್ಣ ಹೆಸರು ಮುಂಚೂಣಿಯಲ್ಲಿದೆ. ಅಕಸ್ಮಾತ್ ಯೋಗೇಶ್ವರ್ ಪಕ್ಷ ಸೇರ್ಪಡೆ ಆಗಿದ್ದೇ ಆದರೆ ಕಾಂಗ್ರೆಸ್‌ ಯೋಗೇಶ್ವರ್ ಹೆಸರು ಅಂತಿಮಗೊಳಿಸುವುದು ಮಾತ್ರ ಸ್ಪಷ್ಟ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page