ನವದೆಹಲಿ: ‘ಆಜಾನ್’ ಸಮಯದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಧ್ವನಿಯನ್ನು ನುಡಿಸಿದ ಆರೋಪದ ಮೇಲೆ ಸಂಭಾಲ್‌ನ ಮಸೀದಿಯ ಇಮಾಮ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಮಸೀದಿಯಿಂದ ಧ್ವನಿವರ್ಧಕವನ್ನು ತೆಗೆದು ವಶಪಡಿಸಿಕೊಳ್ಳಲಾಯಿತು. ಸರ್ಕಾರಿ ನೌಕರರು ನೀಡಿದ ಆದೇಶಗಳನ್ನು ಧಿಕ್ಕರಿಸಿ ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡಿದ ಆರೋಪದ ಮೇಲೆ ಸಂಭಾಲ್‌ನ ಚಂದೌಸಿ ಪ್ರದೇಶದ ಮಸೀದಿಯ ಇಮಾಮ್ ಹಫೀಜ್ ಶಕೀಲ್ ಶಮ್ಸಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಮಸೀದಿಯ ಸುತ್ತಮುತ್ತ ವಾಸಿಸುವ ಜನರು ನೀಡಿದ ದೂರಿನ ಆಧಾರದ ಮೇಲೆ ಅಲ್ಲ, ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿರುವುದು ಗಮನಾರ್ಹ. ಗಸ್ತು ತಿರುಗುತ್ತಿದ್ದಾಗ ಮಸೀದಿಯಿಂದ ಅತಿಯಾದ ಶಬ್ದ ಬರುತ್ತಿರುವುದನ್ನು ಗಮನಿಸಿರುವುದಾಗಿ ಕಾನ್‌ಸ್ಟೆಬಲ್ ಜಿತೇಂದ್ರ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಇಮಾಮ್‌ಗಳ ವಿರುದ್ಧ ಇಂತಹ ಆರೋಪಗಳ ಮೇಲೆ ಪ್ರಕರಣಗಳನ್ನು ದಾಖಲಿಸಿರುವುದು ಇದೇ ಮೊದಲಲ್ಲ. ಜನವರಿ 17ರಂದು ಸಹ ಸ್ಪೀಕರಿನಿಂದ ಮಿತಿ ಮೀರಿದ ಶಬ್ದ ಬಂತೆನ್ನುವ ಕಾರಣಕ್ಕಾಗಿ ಇಬ್ಬರು ಇಮಾಮ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.