ಬೆಂಗಳೂರು: ಸರ್ಕಾರಿ/ಸರ್ಕಾರದ ನಿಗಮ/ಮಂಡಳಿ ಇತ್ಯಾದಿಗಳ ಅಧಿಕಾರಿ/ ನೌಕರರು ಬಿಪಿಎಲ್ (BPL) ಪಡಿತರ ಚೀಟಿಯನ್ನು ಪಡೆದು ಬಳಸುತ್ತಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಕೆಲವು ಸರ್ಕಾರಿ/ಸರ್ಕಾರದ ನಿಗಮ/ಮಂಡಳಿ/ಪ್ರಾಧಿಕಾರ/ವಿಶ್ವವಿದ್ಯಾಲಯ/ಸಂಸ್ಥೆಯ ಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತ ಕುಟುಂಬ ವರ್ಗದವರು, ಬಡತನ ರೇಖೆಗಿಂತ ಕೆಳಗಿರುವ ಬಡವರಿಗಾಗಿ ಸರ್ಕಾರವು ವಿತರಿಸುವ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡು, ಸರ್ಕಾರದಿಂದ ವಿತರಿಸುವ ಪಡಿತರ ಹಾಗೂ ಇತರ ಸರ್ಕಾರಿ ಸೇವೆಗಳನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಅಕ್ಷಮ್ಯ ಅಪರಾಧ: ಒಬ್ಬ ಸರ್ಕಾರಿ ನೌಕರನಿಗೆ ಇದು ತರವಲ್ಲದ ವರ್ತನೆಯಾಗಿರುತ್ತದೆ. ಬಿಪಿಎಲ್ ಪಡಿತರ ಚೀಟಿ ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ನೀಡುವ ಸೌಲಭ್ಯವಾಗಿದ್ದು, ಇದನ್ನು ಸರ್ಕಾರಿ ನೌಕರನಾಗಿ ಉಪಯೋಗಿಸಿಕೊಳ್ಳುವುದು ಅಕ್ಷಮ್ಯ ಅಪರಾಧ ಎಂದು ಸರ್ಕಾರ ಪರಿಗಣಿಸಿದೆ.
ಸರ್ಕಾರಿ ಅಧಿಕಾರಿ/ನೌಕರರು ಸರ್ಕಾರದಿಂದ ವೇತನ ಭತ್ಯೆಗಳನ್ನು ಪಡೆಯುತ್ತಿರುವುದರಿಂದ, ಅವರು ಯಾವುದೇ ರೀತಿಯಲ್ಲೂ ಬಡತನ ರೇಖೆಗಿಂತ ಕೆಳಗೆ ಬರುವುದಿಲ್ಲ.
ಒಂದು ವೇಳೆ ಯಾವುದೇ ಸರ್ಕಾರಿ/ಸಂಸ್ಥೆಯ ಅಧಿಕಾರಿ/ನೌಕರ ಅಥವಾ ಆತನ/ಆಕೆಯ ಅವಲಂಬಿತ ಕುಟುಂಬ ಸದಸ್ಯರು ಈಗಾಗಲೇ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ, ಈ ಸುತ್ತೋಲೆ ಹೊರಡಿಸಿದ ಒಂದು ತಿಂಗಳೊಳಗಾಗಿ, ಅದನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಕೂಡಲೇ ಹಿಂತಿರುಗಿಸಿ ಅಮಾನ್ಯ/ರದ್ದು ಪಡಿಸಿಕೊಳ್ಳತಕ್ಕದ್ದು ಎಂದು ಆದೇಶಿಸಲಾಗಿದೆ.
ಒಂದು ತಿಂಗಳ ನಂತರವೂ ಸದರಿ ಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಗ್ಗೆ ಮಾಹಿತಿ/ದೂರುಗಳು ಸ್ವೀಕೃತವಾದರೆ, ಅಂತಹ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.
ಅಲ್ಲದೆ, ಅವರಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ಸೂಚನೆ ನೀಡಲಾಗಿದೆ ಎಂದು ಸೂಚನೆ ಹೇಳಿದೆ.
